ಅತ್ಯಂತ ವೇಗವಾಗಿ ಕಾರು ಓಡಿಸುತ್ತಿದ್ದವನ ತಡೆದ ಪೊಲೀಸ್​; ಆತ ಹೇಳಿದ ಹಾವಿನ ವಿಷಯ ಕೇಳಿ ಬೆಚ್ಚಿಬಿದ್ದರು

Car
Published on

27 ವರ್ಷದ ಯುವಕ ಆಸ್ಟ್ರೇಲಿಯಾದ ಹೆದ್ದಾರಿಯಲ್ಲಿ ಕಾರು ಡ್ರೈವ್​ ಮಾಡಿಕೊಂಡು ಹೋಗುತ್ತಿದ್ದ. ಆತನ ಕಾರಿನ ವೇಗ ಗಂಟೆಗೆ 100 ಕಿ.ಮೀ.ಗಿಂತ ಹೆಚ್ಚಿತ್ತು. ಆ ವೇಗವನ್ನು ನೋಡಿದ ಪೊಲೀಸ್​ ಅಧಿಕಾರಿಯೋರ್ವರು ಹೆದ್ದಾರಿ ಟ್ರಾಫಿಕ್​ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಯುವಕ ಇದ್ಯಾವುದರ ಪರಿವೇ ಇಲ್ಲದೆ ಅದೇ ವೇಗದಲ್ಲಿ ಸಾಗುತ್ತಿದ್ದ. ಹೀಗೆ ಹೋಗುತ್ತಿರುವಾಗ ಒಂದು ಕಡೆ ಪೊಲೀಸರು ಅಡ್ಡಗಟ್ಟಿದರು. ಆಗ ಆ ಯುವಕ ಅದ್ಯಾಕೆ ಅಷ್ಟು ವೇಗದಿಂದ ಕಾರು ಡ್ರೈವ್​ ಮಾಡುತ್ತಿದ್ದ ಎಂಬ ವಿಚಾರ ಕೇಳಿ ನಿಜಕ್ಕೂ ಹೌಹಾರಿದರು.

ಯುವಕ ತನ್ನ ಹೆಸರು ಜಿಮ್ಮಿ ಎಂದು ಹೇಳಿಕೊಂಡಿದ್ದಾರೆ. ಕ್ವೀನ್ಸ್​ಲ್ಯಾಂಡ್​​ನ ಡಾಸನ್​ ಹೆದ್ದಾರಿಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಅವನಿಗೆ ಹಾವೊಂದು ಕಚ್ಚಿತ್ತು. ಕಾರಿನೊಳಗೆ ಸೇರಿಕೊಂಡಿದ್ದ ಆ ಹಾವು ಜಗತ್ತಿನಲ್ಲಿಯೇ ಅತ್ಯಂತ ಡೆಡ್ಲಿ ಹಾವು ಎಂದು ಕರೆಸಿಕೊಳ್ಳುವ ಬ್ರೌಬ್​ ಸ್ನೇಕ್​. ಆಸ್ಟ್ರೇಲಿಯಾದಲ್ಲಿ ಈ ಹಾವು ಕಡಿತದಿಂದ ಅದೆಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಅಂಥ ಭಯಾನಕ ಹಾವು ಜಿಮ್ಮಿಗೆ ಗೊತ್ತಿಲ್ಲದಂತೆ ಕಾರಿನೊಳಗೆ ಸೇರಿಕೊಂಡಿತ್ತು. ಆತ ಕುಳಿತುಕೊಳ್ಳುವ ಸೀಟ್​ ಅಡಿಯಲ್ಲಿ ಇದ್ದ ಅದು ಕ್ರಮೇಣ ಜಿಮ್ಮಿಯ ಕಾಲನ್ನು ಸುತ್ತಲು ಪ್ರಾರಂಭಿಸಿತ್ತು. ಆವಾಗಲೇ ಹಾವಿನ ಇರುವಿಕೆ ಅವನ ಗಮನಕ್ಕೆ ಬಂದಿದ್ದು. ಜಿಮ್ಮಿ ತಡಮಾಡದೆ, ಸೀಟ್​ ಬೆಲ್ಟ್​ ಮತ್ತು ಅಲ್ಲಿಯೇ ಇದ್ದ ಚಾಕುವಿನ ಮೂಲಕ ಹಾವಿನ ವಿರುದ್ಧ ಹೋರಾಡಲು ಪ್ರಾರಂಭಿಸಿದ. ಆದರೆ ಅಷ್ಟರಲ್ಲಾಗಲೇ ಹಾವು ಅವನಿಗೆ ಕಚ್ಚಿತ್ತು. ಇದನ್ನೂ ಓದಿ: ಬಿಎಸ್​ಎಫ್​​ ಯೋಧರಿಗೆ ಕಾಡುತ್ತಿರುವ ಕೊವಿಡ್​-19; 1,454 ಸೈನಿಕರಲ್ಲಿ ಸೋಂಕು

ಜಿಮ್ಮಿ ಹಾವನ್ನು ಕೊಂದು, ಅದನ್ನು ರಸ್ತೆ ಮಧ್ಯೆಯೇ ಬಿಸಾಕಿ, ತನ್ನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅತ್ಯಂತ ವೇಗದಲ್ಲಿ ಕಾರು ಓಡಿಸುತ್ತಿದ್ದ.

ಪೊಲೀಸರು ತಡೆದು ನಿಲ್ಲಿಸುತ್ತಿದ್ದಂತೆ ಇದನ್ನೆಲ್ಲ ಆತ ಹೇಳಿದ. ಇನ್ನು ಪೊಲೀಸರೂ ಕೂಡ ಜಿಮ್ಮಿಯ ವಿಡಿಯೋವೊಂದನ್ನು ಶೇರ್​ ಮಾಡಿದ್ದಾರೆ. ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net