

ನವದೆಹಲಿ: ಜಾಗತಿಕವಾಗಿ ಚೀನಾ ವಿರೋಧಿ ರಾಷ್ಟ್ರಗಳು ಒಂದಾಗಬೇಕು ಎಂದು ಅಮೆರಿಕದ ಸಂಸತ್ ಸದಸ್ಯ ಜಾನ್ ಕೆನಡಿ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತ, ಅಮೆರಿಕ ಮತ್ತು ಜಪಾನ್ ಜತೆ ನೌಕಾ ಸಮರಭ್ಯಾಸ ನಡೆಸಲು ಆಸ್ಟ್ರೇಲಿಯಾ ಮುಂದಾಗಿದೆ.
ಮಲಬಾರ್ ನೌಕಾ ಸಮರಭ್ಯಾಸ ಎಂಬ ಹೆಸರಿನ ಈ ಸಮರಭ್ಯಾಸ ಈ ವರ್ಷದ ಕೊನೆಯಲ್ಲಿ ನಡೆಯಲಿದೆ. ಸಾಮಾನ್ಯವಾಗಿ ಭಾರತ, ಅಮೆರಿಕ ಮತ್ತು ಜಪಾನ್ನ ನೌಕಾಪಡೆಗಳು ಮಾತ್ರವೇ ಈ ಸಮರಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದವು. ಆದರೆ, ಈ ಬಾರಿ ಆಸ್ಟ್ರೇಲಿಯಾವನ್ನು ಸೇರಿಸಿಕೊಳ್ಳಲು ಚಿಂತನೆ ನಡೆದಿದೆ.
ಒಂದು ವೇಳೆ ಆಸ್ಟ್ರೇಲಿಯಾವನ್ನು ಈ ಸಮರಭ್ಯಾಸಕ್ಕೆ ಸೇರಿಸಿಕೊಳ್ಳಲು ಭಾರತ ನಿರ್ಧರಿಸಿದರೆ, ಇಂಡೋ-ಪೆಸಿಫಿಕ್ ಮಹಾಸಾಗರದ ವ್ಯಾಪ್ತಿಯಲ್ಲಿ ಚತುಷ್ಕೋನ ಮೈತ್ರಿಕೂಟಕ್ಕೆ ಹೆಚ್ಚಿನ ಬಲ ಬಂದಂತೆ ಆಗಲಿದೆ. ತನ್ಮೂಲಕ ಈ ಪ್ರದೇಶದಲ್ಲಿ ತನ್ನ ಸೇನಾಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಚೀನಾಕ್ಕೆ ಸೆಡ್ಡು ಹೊಡೆಯಲು ಅನುಕೂಲವಾಗುತ್ತದೆ ಎನ್ನಲಾಗಿದೆ.
2017ರಲ್ಲೇ ಓಂಕಾರ: ಇಂಡೋ-ಪೆಸಿಫಿಕ್ ಸಮುದ್ರ ಮಾರ್ಗ ಯಾವುದೇ ಒಂದು ರಾಷ್ಟ್ರದ ಏಕಚಕ್ರಾದಿಪತ್ಯಕ್ಕೆ ಒಳಗಾಗದಂತೆ ಹಾಗೂ ಇಂಥ ಮನೋಭಾವ ಹೊಂದಿರುವ ಚೀನಾವನ್ನು ಕಟ್ಟಿಹಾಕುವ ಉದ್ದೇಶದಿಂದ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ 2017ರ ನವೆಂಬರ್ನಲ್ಲೇ ಚತುಷ್ಕೋನ ಮೈತ್ರಿಕೂಟ ರಚಿಸಿಕೊಂಡಿದ್ದವು. ಆದರೆ ಮಲಬಾರ್ ನೌಕಾ ಸಮರಭ್ಯಾಸದಲ್ಲಿ ಮಾತ್ರ ಆಸ್ಟ್ರೇಲಿಯಾವನ್ನು ಸೇರಿಸಿಕೊಂಡಿರಲಿಲ್ಲ. ಇದೀಗ ಇಲ್ಲಿಯೂ ಕೂಡ ಆಸ್ಟ್ರೇಲಿಯಾವನ್ನು ಸೇರಿಸಿಕೊಂಡು, ಚತುಷ್ಕೋನ ಮೈತ್ರಿಕೂಟವನ್ನು ಅನ್ವರ್ಥಕಗೊಳಿಸಲು ಭಾರತ ಚಿಂತನೆ ನಡೆಸಿದೆ.