ಹೈಕೋರ್ಟ್​ ಹೊರಗೆ ತರಕಾರಿ ಮಾರುತ್ತಿರುವ ವಕೀಲ; ಇದಕ್ಕಿದೆ ಎರಡು ಕಾರಣ

Layer
Published on

ಕಟಕ್: ಲಾಕ್​ಡೌನ್​​ನಿಂದ ಅದೆಷ್ಟೋ ಜನರ ಬದುಕು ಸಂಕಷ್ಟಕ್ಕೀಡಾಗಿದೆ. ಹಲವು ಅತಿಥಿ ಶಿಕ್ಷಕರಂತೂ ತರಕಾರಿ, ಹಣ್ಣು ಮಾರಾಟ ಮಾಡುತ್ತಿದ್ದಾರೆ. ಕೃಷಿಯಲ್ಲಿ ತೊಡಗಿಕೊಂಡವರೂ ಇದ್ದಾರೆ.

ಇದೀಗ ವಕೀಲರೋರ್ವರು ತಮ್ಮ ಜೀವನ ನಡೆಸಲು ಅದೇ ಮಾರ್ಗ ಕಂಡುಕೊಂಡಿದ್ದಾರೆ. ಕರೊನಾ ವೈರಸ್​ ಸಾಂಕ್ರಾಮಿಕದಿಂದ ಕೆಲಸವಿಲ್ಲದೆ, ಕೈಯಲ್ಲಿ ದುಡ್ಡಿಲ್ಲದೆ ಈಗ ತರಕಾರಿ ಮಾರಾಟ ಮಾಡುತ್ತಿದ್ದಾರೆ.

ಆರ್ಥಿಕ ಸಂಕಷ್ಟಕ್ಕೀಡಾದಾಗ ವಕೀಲ ಸಪನ್​ ಕುಮಾರ್​ ಪಾಲ್​ ಅವರು ಒಡಿಶಾ ಸ್ಟೇಟ್​ ಬಾರ್​ ಕೌನ್ಸಿಲ್​ ಬಳಿ ತೆರಳಿ ತನಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಯಾರೂ ಅವರ ಮನವಿಯನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಹಣ್ಣು, ತರಕಾರಿ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ.

ಸಪನ್​ ಕುಮಾರ್​ ಅವರು 2012ರಿಂದಲೂ ಒಡಿಶಾ ಹೈಕೋರ್ಟ್​ನಲ್ಲಿ ಪ್ರಾಕ್ಟೀಸ್​ ಮಾಡುತ್ತಿದ್ದರು. ಒಡಿಶಾ ಸ್ಟೇಟ್​ ಬಾರ್​ ಕೌನ್ಸಿಲ್​ ಬಳಿ ಸಹಾಯ ಕೇಳಲು ಹೋದಾಗ, ನಾವು ಇಲ್ಲಿ 10 ವರ್ಷದಿಂದ ಅಭ್ಯಾಸ ಮಾಡುತ್ತಿರುವವರಿಗೆ ಮಾತ್ರ ಆರ್ಥಿಕ ನೆರವು ನೀಡುತ್ತೇವೆ. ನೀವು ಬಂದು ಎಂಟು ವರ್ಷವಷ್ಟೇ ಆಗಿದೆ ಎಂದು ನುಣುಚಿಕೊಂಡಿದ್ದಾರೆ ಎಂದು ಸಪನ್​ ಕುಮಾರ್​ ತಿಳಿಸಿದ್ದಾರೆ.

ಲಾಕ್​ಡೌನ್​ ಸಮಯದಲ್ಲಿ ಹಣ ಇಲ್ಲದೆ ತುಂಬ ಕಷ್ಟಪಡುವಂತಾಯಿತು. ನಂತರ ಸ್ನೇಹಿತನ ಬಳಿ 1000 ರೂಪಾಯಿ ಸಾಲ ಪಡೆದು ತರಕಾರಿ ಮಾರಾಟಕ್ಕೆ ಬೇಕಾದ ವಸ್ತುಗಳನ್ನೆಲ್ಲ ಹೊಂದಿಸಿಕೊಂಡೆ. ಇದೀಗ ಹೈಕೋರ್ಟ್​ ಎದುರೇ ತರಕಾರಿ ಮಾರುತ್ತಿದ್ದೇನೆ. ಹೀಗಾದರೂ ನಮ್ಮ ಕಷ್ಟ ಒಡಿಶಾ ಸ್ಟೇಟ್​ ಬಾರ್​ ಕೌನ್ಸಿಲ್​ ಗೆ ಗೊತ್ತಾಗಬೇಕು ಎಂದು ಹೇಳಿದ್ದಾರೆ. ನನ್ನ ಹೊಟ್ಟೆಪಾಡಿಗೂ ಆಯ್ತು...ಈ ಮೂಲಕ ಪ್ರತಿಭಟನೆಯೂ ಆಯ್ತು ಎಂಬ ಕಾರಣಕ್ಕೆ ಹೀಗೆ ಇಲ್ಲಿ ತರಕಾರಿ ಮಾರುತ್ತಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net