

ದಾವಣಗೆರೆ: ವಿಜಯವಾಣಿ ಉಪ ಸಂಪಾದಕ ಪಿ. ಬಸವರಾಜ್ ಅವರ ಮೇಲೆ ಐವರು ದುಷ್ಕರ್ಮಿಗಳು ಗುರುವಾರ ರಾತ್ರಿ ಹಲ್ಲೆ ನಡೆಸಿ ಮೊಬೈಲ್ ಮತ್ತು ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.
ಕಚೇರಿಯಲ್ಲಿ ಎಂದಿನಂತೆ ಕರ್ತವ್ಯ ಮುಗಿಸಿ ಬಸವರಾಜ್ ದೊಡ್ಡಬಾತಿ ಗ್ರಾಮದ ತಮ್ಮ ಮನೆಯ ಕಡೆಗೆ ಹೊರಟಿದ್ದಾಗ ಮಾರ್ಗಮಧ್ಯೆ ಬಾತಿ ಕೆರೆ ಬಳಿ ಬೈಕ್ ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಮತ್ತು ಪರ್ಸ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಮೊಬೈಲ್ ಕೊಡಲು ಪ್ರತಿರೋಧ ತೋರಿದ ಬಸವರಾಜ್ ತಲೆಗೆ ಬಲವಾಗಿ ಹೊಡೆದಿದ್ದರಿಂದ ರಕ್ತಗಾಯಗಳಾಗಿವೆ. ನೆಲಕ್ಕೆ ಬಿದ್ದ ಅವರನ್ನು ತುಳಿದ ಕಾರಣ ಎದೆ, ಹೊಟ್ಟೆ, ಬೆನ್ನಿನ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಆರಂಭದಲ್ಲಿ ಅವರನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಸೂಚನೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಎಸ್‌ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಐವರು ಆರೋಪಿಗಳು ವಶಕ್ಕೆ: ಪ್ರಕರಣ ನಡೆದು 34 ಗಂಟೆಯೊಳಗೆ ಐವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ರಕರ್ತನ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಐವರು ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಿದ್ದರು. ದಾವಣಗೆರೆಯಿಂದ- ದೊಡ್ಡ ಬಾತಿ ಗ್ರಾಮದವರೆಗೆ ವಿವಿಧ ಸಿಸಿ ಟಿವಿ ದೃಶ್ಯಗಳನ್ನು ಪರಿಶಿಲಿಸಿ, ಮೊಬೈಲ್ ಟವರ್ ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಏಕಬೋಟೆ ಮಂಜುನಾಥ್, ಜಿಲ್ಲಾ ವರದಿಗಾರರ ಒಕ್ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಹಿರಿಯ ಪತ್ರಕರ್ತರಾದ ಬಿ.ಎನ್.ಮಲ್ಲೇಶ್, ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ, ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಬಿ.ಎಸ್. ಬಸವರಾಜ, ಇನ್‌ಸ್ಪೆಕ್ಟರ್ ಕಿರಣ್ ಕುಮಾರ್, ಪಿಎಸ್‌ಐ ಜೋವಿತ್‌ರಾಜ್ ಆಸ್ಪತ್ರೆಗೆ ಭೇಟಿ ನೀಡಿ ಬಸವರಾಜ್ ಅವರ ಆರೋಗ್ಯ ವಿಚಾರಿಸಿದ್ದಾರೆ.