

ಬೆಂಗಳೂರು: ನಾಲ್ಕು ತಿಂಗಳ ಗರ್ಭಿಣಿಯ ಮೇಲೆ ಆರು ಜನರ ಗುಂಪೊಂದು ತೀವ್ರವಾಗಿ ಹಲ್ಲೆ ನಡೆಸಿದ ಪರಿಣಾಮ ಆಕೆಗೆ ಗರ್ಭಪಾತವಾಗಿದೆ.
ಈ ಮಹಿಳೆ ಬಾಡಿಗೆತಾಯಿಯಾಗಿದ್ದರು. ನಾಲ್ಕು ತಿಂಗಳ ಗರ್ಭಧರಿಸಿದ್ದ ಅವರು ಬೇಗೂರು ಸಮೀಪದ ಪಿಜಿಯೊಂದರಲ್ಲಿ ಇದ್ದರು.
ಮಾ.11ರಂದು ಹಫ್ತಾ ವಸೂಲಿ ನೆಪದಲ್ಲಿ ಸ್ವಾತಿ ಎಂಬ ಮಹಿಳಾ ಸಂಘಟನೆಯೊಂದರ ಹೆಸರು ಹೇಳಿಕೊಂಡು ಪಿಜಿಗೆ ಹೋದ ಪ್ರಮೀಳಾ, ಪ್ರೇಮಾ, ರೀಟಾ, ಆಶಾ, ಪೂಜಾ ಮತ್ತು ಮಂಜುನಾಥ್ ಎಂಬುವರು ಪಿಜಿ ಮಾಲೀಕರಾದ ಗೀತಾ ಮತ್ತು ಈ ಗರ್ಭಿಣಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಹಫ್ತಾ ವಸೂಲಿಗೆ ಬಂದಿದ್ದ ಅವರಿಗೆ ಹಣ ಕೊಡಲು ನಿರಾಕರಿಸಿದ್ದೇ ಈ ಹಲ್ಲೆಗೆ ಕಾರಣ ಎನ್ನಲಾಗಿದೆ.
ಈಗ ಆಕೆಗೆ ಗರ್ಭಪಾತವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಜಿ ಮಾಲೀಕರಾದ ಗೀತಾ ಪೊಲೀಸರಿಗೆ ದೂರು ನೀಡಿದ್ದಾರೆ. ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.