

ಮೈಸೂರು: ಯುವಕನೊಬ್ಬನ ಜತೆ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿ, ಹಿಂಸೆ ಕೊಟ್ಟಿರುವ ಪತಿ ಹಾಗೂ ಮೈದುನನ ವಿರುದ್ಧ ಯುವತಿ ದೂರು ನೀಡಿದ್ದಾಳೆ. ಪರಿಣಾಮವಾಗಿ, ಮೈಸೂರಿನ ನಂಜನಗೂಡಿನಲ್ಲಿ ನಡೆದಿದ್ದ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಅಂದು ಪೌರುಷ ಮೆರೆದಿದ್ದವರು ಇಂದು ಪರಾರಿಯಾಗಿ ತಲೆ ಮರೆಸಿಕೊಂಡಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಮ್ಮರಗಾಲದಲ್ಲಿ ನ. 25ರಂದು ಈ ಘಟನೆ ನಡೆದಿದ್ದು, ಅಂದು ಯುವತಿಯೊಬ್ಬಳ ಮನೆಗೆ ಬಂದಿದ್ದ ಪರಿಚಿತ ಯುವಕನನ್ನು ಆಕೆಯ ಸಹಿತ ಹೊರಕ್ಕೆ ಕರೆತಂದು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿ, ಹಿಂಸೆ ನೀಡಲಾಗಿತ್ತು. ಒಂದಿಡೀ ದಿನ ಹೀಗೆ ಕಟ್ಟಿ ಹೊಡೆದು ಹಿಂಸೆ ಕೊಟ್ಟಿದ್ದವರನ್ನು ನಿನ್ನೆ ಬಿಚ್ಚಿ ಬಿಟ್ಟಿದ್ದು, ಯುವತಿ ನಿನ್ನೆ ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಸಂತ್ರಸ್ತ ಯುವತಿ ಕೌವಲಂದೆ ಪೊಲೀಸ್ ಠಾಣೆಯಲ್ಲಿ ಪತಿ ರವಿ ಹಾಗೂ ಮೈದುನ ಚಂದ್ರು ವಿರುದ್ಧ ದೂರು ನೀಡಿದ್ದು, ಇದೀಗ ಪತಿ ಹಾಗೂ ಮೈದುನ ಇಬ್ಬರೂ ಪರಾರಿಯಾಗಿ ತಲೆ ಮರೆಸಿಕೊಂಡಿದ್ದಾರೆ. ಈ ಹಿಂದೆ ನಾನು ಕೊಡಗಿಗೆ ಕಾಫಿತೋಟಕ್ಕೆ ಕೆಲಸಕ್ಕೆ ಹೋಗಿದ್ದಾಗ ಅಲ್ಲಿ ನೇರಳೆ ಗ್ರಾಮದ, ತಮ್ಮದೇ ಜಾತಿಯ ವಿಷ್ಣು ಎಂಬಾತನ ಪರಿಚಯವಾಗಿತ್ತು.
ನ. 25ರಂದು ತಾಯಿ ಮನೆಯಿಂದ ನಾನು ಹಾಲಿನ ಡೇರಿಗೆ ಹೋಗಿ ಹಾಲು ತೆಗೆದುಕೊಂಡು ಬರುವಾಗ ವಿಷ್ಣು ಸಿಕ್ಕಿದ್ದು, ಪರಿಚಯವಿದ್ದ ಕಾರಣ ಮನೆಗೆ ಕರೆದು ಟೀ ಕುಡಿದು ಹೋಗುವಂತೆ ಹೇಳಿದ್ದ. ಹಾಗೆ ವಿಷ್ಣು ಮನೆಗೆ ಬಂದಿದ್ದಾಗ ಪತಿ ರವಿ ಹಾಗೂ ಮೈದುನ ಮನೆಗೆ ನುಗ್ಗಿ ಇಬ್ಬರನ್ನು ಹೊರಕ್ಕೆ ಎಳೆದು ಹೊಡೆದು, ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ಅವರಿಬ್ಬರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸಂತ್ರಸ್ತೆಯ ಪತಿ ಕೆಲವು ವರ್ಷಗಳ ಹಿಂದೆ ಆಕೆಯನ್ನು ತೊರೆದಿದ್ದ ಎನ್ನಲಾಗಿದೆ.