ಖರ್ಚಿಗೆ ಹಣ ಕೊಡದ ಅತ್ತೆಗೆ ಅಳಿಯನಿಂದ ಮಚ್ಚಿನೇಟು; ತಲೆಮರೆಸಿಕೊಂಡಿರುವ ಗಂಡನ ವಿರುದ್ಧ ಹೆಂಡತಿಯಿಂದ ದೂರು

crime
Published on

ನೆಲಮಂಗಲ: ಖರ್ಚಿಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಅಳಿಯನೊಬ್ಬ ಮಚ್ಚಿನಿಂದ ಹಲ್ಲೆ ಮಾಡಿರುವ ಪ್ರಕರಣವೊಂದು ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಿಲ್ಲಿನಕೋಟೆ ಗ್ರಾಮದಲ್ಲಿ ಈ ಹಲ್ಲೆ ಪ್ರಕರಣ ನಡೆದಿದೆ.

ಬಿಲ್ಲಿನಕೋಟೆ ಗ್ರಾಮದ ಸರಸ್ವತಮ್ಮ ಎಂಬಾಕೆ ಅಳಿಯನಿಂದ ಹಲ್ಲೆಗೊಳಗಾಗಿರುವ ಅತ್ತೆ. ಚಿಕ್ಕಬಳ್ಳಾಪುರ ಮೂಲದ ಶ್ರೀರಾಮ್​ ಹಲ್ಲೆ ಮಾಡಿರುವವ ವ್ಯಕ್ತಿ. ಶ್ರೀರಾಮ್​ ಖರ್ಚಿಗೆ ಬೇಕು ಎಂದು ಅತ್ತೆ ಬಳಿ ಹತ್ತು ಸಾವಿರ ರೂಪಾಯಿ ಕೇಳಿದ್ದಾನೆ. ಅದಕ್ಕೆ ಅತ್ತೆ ನನ್ನ ಬಳಿ ಹಣವಿಲ್ಲ ಎಂದು ಹೇಳಿದ್ದರು.

ಇದರಿಂದ ಬೇಸರಗೊಂಡ ಶ್ರೀರಾಮ್​, ಪತ್ನಿ ಚೈತ್ರಾ ಬಳಿ ಜಗಳ ತೆಗೆದಿದ್ದ. ಮಗಳೊಂದಿಗೆ ಅಳಿಯ ಗಲಾಟೆ ಮಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಅತ್ತೆ, ಅಳಿಯನನ್ನು ಪ್ರಶ್ನಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಸಿಟ್ಟಾದ ಅಳಿಯ ಅತ್ತೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.

ಮಚ್ಚಿನೇಟಿಗೆ ಸರಸ್ವತಮ್ಮನ ತಲೆಗೆ ಗಂಭೀರ ಗಾಯವಾಗಿದ್ದು, ನಿಮ್ಹಾನ್ಸ್​ಗೆ ದಾಖಲು ಮಾಡಲಾಗಿದೆ. ಹಲ್ಲೆ ಬಳಿಕ ಅಳಿಯ ಪರಾರಿಯಾಗಿ ತಲೆಮರೆಸಿಕೊಂಡಿದ್ದು, ಗಂಡನ ವಿರುದ್ಧ ಹೆಂಡತಿ ಪೊಲೀಸರಿಗೆ ದೂರು ನೀಡಿದ್ದಾಳೆ. ದಾಬಸ್​ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net