ಬಿಜೆಪಿ ಶಾಸಕನ ಜೀಪಿನಲ್ಲಿ ಇವಿಎಂ ಪತ್ತೆ: ಚುನಾವಣೆಯನ್ನೇ ಕದಿಯುವ ಯತ್ನ ಎಂದು ಕಾಂಗ್ರೆಸ್ ವ್ಯಂಗ್ಯ!​

EVM 111
Published on

ದಿಸ್ಪುರ್: ಅಸ್ಸಾಂ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಬಿಜೆಪಿ ಶಾಸಕರದ್ದು ಎನ್ನಲಾದ ಜೀಪಿನಲ್ಲಿ ಎಲೆಕ್ಟ್ರಾನಿಕ್​ ವೋಟಿಂಗ್​ ಮೆಷಿನ್​ (ಇವಿಎಂ) ಸಾಗಿಸುತ್ತಿರುವ ಆರೋಪ ಕೇಳಿಬಂದಿದೆ.

ಪಥರ್​ಕಂಡಿ ಕ್ಷೇತ್ರದ ಬಿಜೆಪಿ ಶಾಸಕ ಕೃಷ್ಣೆಂದು ಪೌಲ್​ ವಿರುದ್ಧ ಆರೋಪ ಕೇಳಿಬಂದಿದೆ. ವಿಡಿಯೋವನ್ನು ಅಸ್ಸಾಂ ಮೂಲದ ಹಿರಿಯ ಪತ್ರಕರ್ತ ಅಟಾನು ಭುಯಾನ್​ ಎಂಬುವರು ಟ್ವೀಟ್​ ಮಾಡಿದ್ದು, ಈ ಘಟನೆಯಿಂದ ಪಥರ್​ಕಂಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.

ವಿಡಿಯೋದಲ್ಲಿ ಎಎಸ್​ 10ಬಿ 0022 ನಂಬರ್​ನ ಬಿಳಿ ಬಣ್ಣದ ಜೀಪ್​ನಲ್ಲಿ ಇವಿಎಂ ಇರುವುದನ್ನು ನೋಡಬಹುದಾಗಿದೆ. ಆ ಜೀಪ್​ ಶಾಸಕ ಕೃಷ್ಣೆಂದು ಪೌಲ್​ ಅವರಿಗೆ ಸಂಬಂಧಿಸಿದ್ದು ಎಂದು ಜನರು ಕೂಗುವುದನ್ನು ವಿಡಿಯೋದಲ್ಲಿ ಕೇಳಬಹುದು.

ಬಿಜೆಪಿ ಕಾಲೆಳೆದ ಕಾಂಗ್ರೆಸ್​

ಚುನಾವಣೆಯನ್ನೇ ಕಳವು ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್​ ವ್ಯಂಗ್ಯವಾಡಿದೆ. ಘಟನೆ ಕುರಿತು ಅನೇಕ ನಾಯಕರು ಟ್ವೀಟ್​ ಮಾಡಿದ್ದು, ಇವಿಎಂ ಪತ್ತೆಯಾಗಿದ್ದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಸೂಕ್ರ ಕ್ರಮ ತೆಗೆದುಕೊಳ್ಳದಿದ್ದರೆ ಚುನಾವಣೆಯನ್ನೇ ಬಹಿಷ್ಕರಿಸುವುದಾಗಿ ಎಚ್ಚರಿಕೆ ಹಾಕಿದ್ದಾರೆ.

ಪ್ರಿಯಾಂಕಾ ವಾದ್ರಾ ವಾಗ್ದಾಳಿ

ಪ್ರತಿ ಬಾರಿ ಚುನಾವಣೆ ನಡೆದಾಗ ಇವಿಎಂ ಸಾಗಿಸುವ ಖಾಸಗಿ ವಾಹನ ಸಿಕ್ಕಿಬೀಳುವ ವಿಡಿಯೋ ವೈರಲ್​ ಆಗುತ್ತದೆ. ಈ ವೇಳೆ ಆಶ್ಚರ್ಯಕರವಲ್ಲದಂತೆ ಈ ಕೆಳಗಿನ ಅಂಶಗಳು ಸಾಮಾನ್ಯವಾಗಿರುತ್ತವೆ ಎಂದು ಮೂರು ಅಂಶಗಳನ್ನು ಪ್ರಿಯಾಂಕಾ ಟ್ವೀಟ್​ ಮಾಡಿದ್ದಾರೆ.

1. ಪತ್ತೆಯಾಗುವ ವಾಹನ ಬಿಜೆಪಿ ಅಭ್ಯರ್ಥಿ ಅಥವಾ ಅವರ ಆಪ್ತರಿಗೆ ಸಂಬಂಧಿಸಿದ್ದಾಗಿರುತ್ತದೆ.

2. ವಿಡಿಯೋವನ್ನು ಒಂದು ಘಟನೆಯನ್ನಾಗಿ ತೆಗೆದುಕೊಂಡು ಇಡೀ ಪ್ರಕರಣವನ್ನೇ ದಾರಿ ತಪ್ಪಿಸಲಾಗುತ್ತದೆ.

3. ಬಿಜೆಪಿ ತನ್ನ ಮಾಧ್ಯಮ ಮೆಷಿನರಿಯನ್ನು ಬಳಸಿಕೊಂಡು ವಿಡಿಯೋವನ್ನು ಬಹಿರಂಗಪಡಿಸಿದವರ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತದೆ.

ಇಂತಹ ಅನೇಕ ಘಟನೆಗಳು ಹೊರಬಂದಿದ್ದರೂ ಯಾವುದೂ ಸಹ ತಾರ್ಕಿತ ಅಂತ್ಯ ಕಂಡಿಲ್ಲ ಎಂದು ಪ್ರಿಯಾಂಕಾ, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ, ಈ ಘಟನೆ ಬಗ್ಗೆ ಬಿಜೆಪಿಯಾಗಲಿ ಅಥವಾ ಚುನಾವಣಾ ಆಯೋಗವಾಗಲಿ ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net