

ಚೆನ್ನೈ: ಹಿರಿಯ ನಟ ಮಾತ್ರವಲ್ಲದೆ ವಿವಾದಾತ್ಮಕ ಹೇಳಿಕೆಗಳಿಂದ ಹೆಸರುವಾಸಿ ಆಗಿರುವ ಬಿಜೆಪಿ ನಾಯಕ ರಾಧಾ ರವಿ ಮತ್ತೊಮ್ಮೆ ನಟಿ ನಯನತಾರಾ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಾಗಿರುವ ರಾಧಾ ರವಿ ಡಿಎಂಕೆ ಪಾರ್ಟಿ ವಿರುದ್ಧ ಹರಿಹಾಯ್ದಿದ್ದಾರೆ. ನಯನಾತಾರಾಗೂ ಮತ್ತು ಡಿಎಂಕೆ ಪಕ್ಷದ ನಾಯಕ ಹಾಗೂ ನಟ ಉದಯನಿಧಿ ಸ್ಟಾಲಿನ್ಗೂ ವಿವಾಹೇತರ ಸಂಬಂಧವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಧಾ ರವಿ ಈ ಮೊದಲು ಡಿಎಂಕೆ ಪಕ್ಷದಲ್ಲಿದ್ದರು. ಎರಡು ವರ್ಷಗಳ ಹಿಂದೆ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ನಯನತಾರಾ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಕ್ಕೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಇದಾದ ಬಳಿಕ ರಾಧಾ ರವಿ ಅಣ್ಣಾಡಿಎಂಕೆ ಪಕ್ಷ ಸೇರಿದ್ದರು. ಬಳಿಕ ವರ್ಷದ ಹಿಂದೆ ಬಿಜೆಪಿ ಸೇರಿಕೊಂಡಿದ್ದಾರೆ.
ನಯನತಾರಾ ಹಾಗೂ ಉದಯನಿಧಿ ಸ್ಟಾಲಿನ್ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಕ್ಕೆ ನನ್ನನ್ನು ಪಾರ್ಟಿಯಿಂದ ಹೊರಹಾಕಿದರು. ಇಬ್ಬರು ಸಹಬಾಳ್ವೆ ನಡೆಸಿದರೆ ನನಗೇನು ಆಗಬೇಕಿಲ್ಲ. ನಾನು ಅದರ ಬಗ್ಗೆ ಯೋಚನೆಯು ಮಾಡುವುದಿಲ್ಲ. ಆದರೆ ರಾಜಾ ಅವರು ಕೆಟ್ಟದಾಗಿ ಮಾತನಾಡಿದ್ದಕ್ಕೆ ಅವರ ವಿರುದ್ಧ ಕ್ರಮ ಏಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.
ಇದೇ ವೇಳೆ ಎಂಎನ್ಎಂ ಪಕ್ಷದ ಸಂಸ್ಥಾಪಕ ನಟ ಕಮಲ್ ಹಾಸನ್ ವಿರುದ್ಧ ಮಾತನಾಡಿದ ರಾಧಾ ರವಿ, ಕಮಲ್ಗಿಂತ ಮೊದಿ ತುಂಬಾ ವಿಭಿನ್ನರು. ಮೋದಿ ದೇಶವನ್ನು ರಕ್ಷಿಸಿದರೆ, ಕಮಲ್ ತನ್ನ ಪತ್ನಿಯರನ್ನೇ ರಕ್ಷಿಸಿಕೊಳ್ಳುವುದಿಲ್ಲ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಇನ್ನು ನಯನತಾರಾ ಅವರು ಈಗಾಗಲೇ ತಮ್ಮ ಬಾಯ್ಫ್ರೆಂಡ್ ವಿಘ್ನೇಶ್ ಶಿವನ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಈ ಸಮಯದಲ್ಲಿ ರಾಧಾ ರವಿ ನೀಡಿರುವ ಹೇಳಿಕೆಗೆ ನಯನತಾರಾ ಹೇಗೆ ಪ್ರತಿಕ್ರಿಯಿಸುತ್ತಾರೆಂದು ಕಾದು ನೋಡಬೇಕಿದೆ. (ಏಜೆನ್ಸೀಸ್)