ಮೊಬೈಲ್ ಫೋನ್ ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಾಗುವ ದಿನ ದೂರವಿಲ್ಲ : ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ | Ashwini Vaishnaw

Ashwini Vaishnaw
Published on

Ashwini Vaishnaw: ಉತ್ತರಪ್ರದೇಶದ ನೋಯ್ಡಾದಲ್ಲಿ ಆರಂಭವಾಗಿರುವ ಭಾರತದ ಮೊದಲ ಟೆಂಪರ್ಡ್-ಗ್ಲಾಸ್ ಕಾರ್ಖಾನೆಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮೊಬೈಲ್ ಫೋನ್ ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಾಗುವ ದಿನಗಳು ದೂರವಿಲ್ಲ ಎಂದರು.

ಮುಂಬರುವ ದಿನಗಳಲ್ಲಿ ಭಾರತ ಹಂತ ಹಂತವಾಗಿ ಮೊಬೈಲ್ ಫೋನ್‌ನಲ್ಲಿರುವ ಪ್ರತಿಯೊಂದು ಘಟಕವನ್ನು ನಿರ್ಮಿಸಲಿದೆ. ಈ ಮೂಲಕ ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಜಾಗತಿಕವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದ್ದು, ಮೇಡ್ ಇನ್ ಇಂಡಿಯಾ ಚಿಪ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ, ಇದು ದೇಶದ ಸ್ವಾವಲಂಬನೆ ಪ್ರಯಾಣದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ಎಂದರು.

ಭಾರತದ ಆಪ್ಟಿಮಸ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ವಿಶ್ವದ ಅತಿದೊಡ್ಡ ಮೊಬೈಲ್ ಗ್ಲಾಸ್ ತಯಾರಕ ಕಾರ್ನಿಂಗ್ ಇಂಕ್ ಜೊತೆ ಪಾಲುದಾರಿಕೆ ಮಾಡಿಕೊಂಡು ನೋಯ್ಡಾದಲ್ಲಿ ಭಾರತದ ಮೊದಲ ಟೆಂಪರ್ಡ್-ಗ್ಲಾಸ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದು, ಇದರ ಆರಂಭಿಕ ಹೂಡಿಕೆ ಸುಮಾರು 70 ಕೋಟಿ ರೂ ಎನ್ನಲಾಗಿದೆ. ಈ ಘಟಕ ಮೊದಲ ಹಂತದ ಉತ್ಪಾದನೆಯಲ್ಲಿ ವರ್ಷಕ್ಕೆ 25 ಮಿಲಿಯನ್ ಯೂನಿಟ್‌ಗಳ ಒಟ್ಟು ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದ್ದು, 600 ನೇರ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಅಂದಾಜಿಸಲಾಗಿದೆ.

ಈ ಸೌಲಭ್ಯಗಳನ್ನು ಬಳಸಿಕೊಂಡು ಉತ್ಪಾದಿಸಿರುವ ಟೆಂಪರ್ಡ್ ಗ್ಲಾಸ್​​ಗಳನ್ನು ಭಾರತ ಸೇರಿದಂತೆ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಸರಬರಾಜು ಮಾಡಲು ಎಂಜಿನಿಯರ್ಡ್ ಬೈ ಕಾರ್ನಿಂಗ್ ಎಂಬ ಬ್ರಾಂಡ್ ಮಾಡಲಾಗುತ್ತದೆ.

ಆಪ್ಟಿಮಸ್ ಗ್ರೂಪ್ ಅಧ್ಯಕ್ಷ ಅಶೋಕ್ ಕುಮಾರ್ ಗುಪ್ತಾ ಮಾತನಾಡಿ, ಭಾರತ ವಿಶ್ವದ ಅತಿದೊಡ್ಡ ಮೊಬೈಲ್ ಫೋನ್ ಮಾರುಕಟ್ಟೆಗಳಲ್ಲಿ ಒಂದಾಗಿದ್ದರೂ, ಟೆಂಪರ್ಡ್ ಗ್ಲಾಸ್‌ಗಾಗಿ ಬೇರೆ ಕಡೆಗಳಿಂದ ಆಮದನ್ನು ಅವಲಂಬಿಸಿದೆ, ಪ್ರತಿಯೊಬ್ಬ ಭಾರತೀಯ ಮೊಬೈಲ್ ಫೋನ್ ಬಳಕೆದಾರರು ತಮ್ಮ ಮೊಬೈಲ್ ​ಪರದೆಗಳನ್ನು ರಕ್ಷಿಸಲು ಮೇಡ್-ಇನ್-ಇಂಡಿಯಾ ಟೆಂಪರ್ಡ್ ಗ್ಲಾಸ್ ಅನ್ನು ಬಳಸಬೇಕು ಎನ್ನುವುದು ನಮ್ಮ ಆಕಾಂಕ್ಷೆ ಎಂದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net