ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಭಾರತದ ಟೆಸ್ಟ್ ಸರಣಿಯನ್ನು ಅನೇಕ ಕ್ರೀಡಾಭಿಮಾನಿಗಳು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಏಕೆಂದರೆ, ರೋಹಿತ್ ಶರ್ಮ ಪಡೆಯ ಮುಂದೆ ಬಾಂಗ್ಲಾ ಆಟ ನಡೆಯುವುದಿಲ್ಲ ಅಂದುಕೊಂಡಿದ್ದರು. ಇತ್ತ ಇತ್ತೀಚೆಗಷ್ಟೇ ಪಾಕಿಸ್ತಾನವನ್ನು ಅವರದೇ ನೆಲದಲ್ಲಿ ವೈಟ್ ವಾಶ್ ಮಾಡಿರುವ ಬಾಂಗ್ಲಾ ಕೂಡ ಭಾರಿ ಹುಮ್ಮಸ್ಸಿನಲ್ಲಿದ್ದು, ಭಾರತವನ್ನು ಸುಲಭವಾಗಿ ಸೋಲಿಸುತ್ತೇವೆ ಅಂದುಕೊಂಡಿದ್ದರು. ಆದರೆ, ಎರಡೂ ತಂಡಕ್ಕೂ ಒಂದು ಟ್ವಿಸ್ಟ್ ಕಾದಿತ್ತು. ಅದೇನು ಅಂತಾ ನಾವೀಗ ನೋಡೋಣ.
ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಅವರಂತಹ ಅಗ್ರ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವುದು ಸುಲಭವಲ್ಲ ಎಂದು ಕ್ರೀಡಾಭಿಮಾನಿಗಳು ಭಾವಿಸಿದ್ದರು. ಆದರೆ, ಎಲ್ಲವೂ ಉಲ್ಟಾ ಆಯಿತು. ನಿನ್ನೆ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಮೊಲದ ಇನ್ನಿಂಗ್ಸ್ ಆಡಿದ ಭಾರತ 34 ರನ್ಗೆ ಮೂರು ವಿಕೆಟ್ ಕಳೆದುಕೊಂಡಿತು. ರೋಹಿತ್, ಗಿಲ್ ಮತ್ತು ಕೊಹ್ಲಿ ಪೆವಿಲಿಯನ್ಗೆ ಹೋಗಿ ಕುಳಿತರು. ಕೆಲಹೊತ್ತು ಹೋರಾಟ ನಡೆಸಿದ ಪಂತ್ ಹಾಗೂ ಜೈಸ್ವಾಲ್ ಪ್ರತಿಸ್ಪರ್ಧಿ ವೇಗಿಗಳ ಒತ್ತಡಕ್ಕೆ ಮಣಿದರು. ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಭಾರೀ ಹಿನ್ನಡೆ ಅನುಭವಿಸುತ್ತದೆ ಎಂದೇ ಎಲ್ಲರು ಭಾವಿಸಿದ್ದರು. ಆದರೆ, ನಂತರ ಮ್ಯಾಜಿಕ್ ಪ್ರಾರಂಭವಾಯಿತು. ಅದೇನೆಂದರೆ, ರವಿಚಂದ್ರನ್ ಅಶ್ವಿನ್ ಅವರು ಆಪತ್ಕಾಲದಲ್ಲಿ ಅದ್ಭುತ ಆಟ ಪ್ರದರ್ಶನ ಮಾಡಿದರು. ರವೀಂದ್ರ ಜಡೇಜಾ ಜೊತೆಗೂಡಿ ತಂಡವನ್ನು ಉತ್ತಮ ಸ್ಥಾನದಲ್ಲಿರಿಸಿದರು.
ಅಶ್ವಿನ್ ಅಕ್ಷರಶಃ ಮತ್ತೊಮ್ಮೆ ತನ್ನಲ್ಲಿರುವ ಬ್ಯಾಟರ್ ಅನ್ನು ಜಾಗೃತಗೊಳಿಸಿದರು. ನಿನ್ನೆ ಮತ್ತೊಮ್ಮೆ ತಮ್ಮ ಗುಪ್ತ ಪ್ರತಿಭೆಯನ್ನು ಬಹಿರಂಗಪಡಿಸಿದರು. ಅಬ್ಬರದ ಆಟದೊಂದಿಗೆ ಬಾಂಗ್ಲಾ ಬೌಲರ್ಗಳನ್ನು ಪುಡಿಗಟ್ಟಿದರು. ಬೃಹತ್ ಶತಕದೊಂದಿಗೆ ವಿಜೃಂಭಿಸಿದರು. ಅವರು 112 ಎಸೆತಗಳಲ್ಲಿ 102 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರಲ್ಲಿ 10 ಬೌಂಡರಿಗಳ ಜೊತೆಗೆ 2 ಬೃಹತ್ ಸಿಕ್ಸರ್‌ಗಳಿವೆ. ಅಶ್ವಿನ್ ಅವರು ಆಲ್ ರೌಂಡರ್ ಜಡೇಜಾ (117 ಎಸೆತಗಳಲ್ಲಿ 86 ರನ್) ಜೊತೆಗೂಡಿ ಏಳನೇ ವಿಕೆಟ್ಗೆ ಅಜೇಯ 195 ರನ್ ಜತೆಯಾಟವಾಡಿದರು. 200 ರನ್‌ಗಳ ಒಳಗೆ ಭಾರತ ಆಲೌಟ್ ಆಗುತ್ತದೆ ಭಾವಿಸಲಾಗಿತ್ತು. ಆದರೆ, ಅಶ್ವಿನ್ ಮತ್ತು ಜಡೇಜಾ ಜೋಡಿ ಭಾರತದ ಗೌರವವನ್ನು ಉಳಿಸಿತು.
ಅಶ್ವಿನ್-ಜಡ್ಡು ಅವರ ಬ್ಯಾಟಿಂಗ್ ಬಲದಿಂದ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 339 ರನ್ ಗಳಿಸಿ ಬಲಿಷ್ಠ ಸ್ಥಿತಿ ತಲುಪಿದೆ. ಕೊಹ್ಲಿ, ರೋಹಿತ್, ರಾಹುಲ್, ಗಿಲ್ ಮತ್ತು ಪಂತ್‌ರಂತಹ ಸ್ಟಾರ್ ಬ್ಯಾಟ್ಸ್‌ಮನ್‌ಗಳು ವಿಫಲರಾದ ಕಡೆ ಅಶ್ವಿನ್ ಅವರ ಅದ್ಭುತ ರನ್ ಮತ್ತು ಶತಕ ಸಿಡಿಸಿದ್ದು ಹೈಲೈಟ್ ಆಯಿತು. ಆದರೆ, ಈ ಅಪ್ರತಿಮ ಆಟಗಾರನ ಯಶಸ್ಸಿಗೆ ಹಲವು ಕಾರಣಗಳಿವೆ. ಅದನ್ನು ಈಗ ನೋಡೋಣ.
ತವರು ನೆಲ ಚೆನ್ನೈನಲ್ಲಿ ಪಂದ್ಯ ನಡೆಯುತ್ತಿರುವುದು ಅಶ್ವಿನ್‌ಗೆ ಮೊದಲ ಪ್ಲಸ್ ಪಾಯಿಂಟ್. ಕ್ರೀಸ್‌ನಲ್ಲಿ ಕೆಲಕಾಲ ನಿಂತರೆ ರನ್‌ಗಳು ಬರುತ್ತವೆ ಎಂಬುದನ್ನು ಅರಿತುಕೊಂಡ ಅಶ್ವಿನ್, ಬೇರೆ ಆಟಗಾರರಂತೆ ತಪ್ಪು ಹೊಡೆತಗಳಿಗೆ ಅವಕಾಶ ನೀಡಲಿಲ್ಲ. ಬದಲಾಗಿ ಸ್ಟ್ರೈಕ್ ರೊಟೇಶನ್ಗೆ ಪ್ರಾಮುಖ್ಯತೆ ನೀಡಿದರು. ಕ್ರೀಸ್‌ನಲ್ಲಿ ನೆಲೆಯೂರಿದ ನಂತರವೂ ಸಮಯಕ್ಕೆ ತಕ್ಕಂತೆ ಹೊಡೆತಗಳನ್ನು ಆಡಿದರು. ತಮ್ಮ ರಕ್ಷಣಾತ್ಮಕ ತಂತ್ರದಲ್ಲಿ ಅಶ್ವಿನ್ ಅವರ ಸುಧಾರಣೆಯು ದೀರ್ಘ ಇನ್ನಿಂಗ್ಸ್ ಆಡಲು ಅವರಿಗೆ ಸಹಾಯ ಮಾಡಿತು. ಇದರ ಜೊತೆಗೆ ಇತ್ತೀಚಿನ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಬ್ಯಾಟ್‌ನಿಂದ ಮಿಂಚಿದ್ದು, ಅಶ್ವಿನ್ ಅವರ ಆತ್ಮವಿಶ್ವಾಸ ಮತ್ತು ಕೈ-ಕಣ್ಣಿನ ಸಮನ್ವಯವನ್ನು ಹೆಚ್ಚಿಸಿದೆ. ಅಶ್ವಿನ್ ಅವರ ಯಶಸ್ಸಿಗೆ ಬೇರೆ ಕಾರಣಗಳಿವೆ ಎಂದು ನೀವು ಭಾವಿಸಿದರೆ ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)
ನೀವದನ್ನು ಕೊಟ್ರೆ ನಾನು ನನ್ನ ಗಂಡನನ್ನೇ ಬಿಟ್ಟು ಹೋಗ್ತೀನಿ… ಜಾನಿ ಪತ್ನಿಯ ಆಕ್ರೋಶಭರಿತ ಅಚ್ಚರಿ ಹೇಳಿಕೆ
ಶಾರುಖ್ ಮಾರ್ಕ್ಸ್ ಕಾರ್ಡ್ ವೈರಲ್! ಪಿಯುಸಿಯಲ್ಲಿ ಕಿಂಗ್ ಖಾನ್ ಪಡೆದ ಅಂಕ ಎಷ್ಟು? ಇಂಗ್ಲಿಷ್ನಲ್ಲಿ ಇಷ್ಟೇನಾ?