ಹೈದರಾಬಾದ್: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಶೈಖ್ ಜಾನಿ ಬಾಷಾ ಅಲಿಯಾಸ್ ಜಾನಿ ಮಾಸ್ಟರ್ ಅವರನ್ನು ಬಂಧಿಸಿರುವುದು ಗೊತ್ತೇ ಇದೆ. ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಲಾಗಿದೆ ಎಂದು 21 ವರ್ಷದ ಅನಾಮಧೇಯ ಯುವತಿಯೊಬ್ಬಳು ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜಾನಿ ಮಾಸ್ಟರ್ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆ ಕೂಡ ಕೊರಿಯೋಗ್ರಾಫರ್. ಈ ಒಂದು ಪ್ರಕರಣ ಸಿನಿ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ಜಾನಿ ಮಾಸ್ಟರ್ ಪತ್ನಿ ಆಯೇಷಾ ಇದೀಗ ಸಂಚಲನಾತ್ಮಕ ಕಾಮೆಂಟ್ಗಳನ್ನು ಮಾಡಿದ್ದಾರೆ. ನನ್ನ ಪತಿ ಜಾನಿ ಅಂತಹ ವ್ಯಕ್ತಿಯಲ್ಲ ಎಂದಿದ್ದಾರೆ.
ಮಾಧ್ಯಮವೊಂದರ ಜತೆ ಮಾತನಾಡಿರುವ ಆಯೇಷಾ, 16ನೇ ವಯಸ್ಸಿನಲ್ಲಿ ಆ ಹುಡುಗಿಯೇ ಮೇಲೆ ಅತ್ಯಾಚಾರ ನಡೆದಿರುವುದಕ್ಕೆ ಸಾಕ್ಷಿ ಏನು? ಅದಕ್ಕೂ ಮೊದಲು ಅನೇಕ ಕಾರ್ಯಕ್ರಮಗಳನ್ನು ಮಾಡುವಾಗ ಆ ಹುಡುಗಿ ಅನೇಕ ಜನರೊಂದಿಗೆ ಸಂಬಂಧ ಹೊಂದಿದ್ದಳು. ಬೇರೆ ಕೊರಿಯೋಗ್ರಾಫರ್ಸ್ ಜೊತೆ ಅಫೇರ್ ಇಲ್ಲ ಅಂತ ಏನು ಗ್ಯಾರಂಟಿ? ಅವಳು ಅಪ್ರಾಪ್ತಳಾಗಿದ್ದಾಗ ಅತ್ಯಾಚಾರಕ್ಕೊಳಗಾಗಿದ್ದಳು ಎನ್ನುವುದಕ್ಕೆ ಪುರಾವೆಗಳು ಏನಿವೆ? ಆಕೆ ಜೊತೆ ಕೆಲಸ ಮಾಡಿದ ಇತರ ನೃತ್ಯ ನಿರ್ದೇಶಕರ ಪತ್ನಿಯರು ಕೂಡ ಆ ಹುಡುಗಿಗೆ ಎಚ್ಚರಿಕೆ ನೀಡಿದ್ದಾರೆ. ಈ ಅನ್ಯಾಯದ ಬಗ್ಗೆ ಯಾಕೆ ಹೊರಗೆ ಬಂದು ಯಾರು ಮಾತನಾಡುವುದಿಲ್ಲ? ವಿನಾಕಾರಣ ಆರೋಪ ಮಾಡಬಾರದು ಎಂದು ಆಯೇಷಾ ಆಕ್ರೋಶ ಹೊರಹಾಕಿದರು.
ಅಪ್ರಾಪ್ತಳಾಗಿದ್ದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿದ್ದರೆ ಜಾನಿ ಮಾಸ್ಟರ್ ಜತೆ ಕೆಲಸ ಮಾಡಲು ನಾನು ಅದೃಷ್ಟಶಾಲಿ ಎಂದು ನಗು ಮುಖದಿಂದ ಅವಳು ಹೇಗೆ ಹೇಳುತ್ತಾಳೆ? ಅವಕಾಶಗಳನ್ನು ಕಸಿದುಕೊಳ್ಳುವ ಕೆಲಸವನ್ನು ಜಾನಿ ಎಂದಿಗೂ ಮಾಡಲಿಲ್ಲ. ಆ ಯುವತಿಗೆ ಯೂನಿಯನ್ ಕಾರ್ಡ್ ಅನ್ನು ಜಾನಿ ನೀಡಿದರು. ಅಲ್ಲದೆ, ನಾಯಕ ಶರ್ವಾನಂದ್ ಸಿನಿಮಾದಲ್ಲಿ ಕೊರಿಯೋಗ್ರಾಫರ್ ಆಗಿ ಅವಕಾಶ ಕೊಟ್ಟಿದ್ದಾರೆ. ಆ ಹುಡುಗಿ ಉತ್ತರ ಪ್ರದೇಶದಿಂದ ಬಂದಿದ್ದಳು. ಹುಡುಗಿಗೆ ತಂದೆ ಇಲ್ಲ. ಅವರ ತಾಯಿ ಒತ್ತಡದಿಂದ ಉದ್ಯಮಕ್ಕೆ ಬಂದಳು. ಇಂದು ಮಹಿಳಾ ಗುಂಪುಗಳು ಮತ್ತು ಯಾರೇ ಆಗಲಿ ಏನೇನೋ ಮಾತನಾಡಿಕೊಳ್ಳುತ್ತಿದ್ದಾರೆ. ಒಂದು ಕಡೆ ಮಾತ್ರ ಕೇಳುತ್ತೀರಾ? ಸತ್ಯಾಂಶ ತಿಳಿಯದೆ ಅವರು ಹೇಗೆ ನಿರ್ಧರಿಸುತ್ತಾರೆ? ಕೆಲವರು ಇದನ್ನು ಲವ್ ಜಿಹಾದ್ ಎಂದು ಆರೋಪಿಸುತ್ತಿದ್ದಾರೆ ಎಂದು ಕಿಡಿಕಾರಿದ ಆಯೇಷಾ, ಜಾನಿ ಅವರು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ ಎಂದರು.
ಜಾನಿ ಮಾಸ್ಟರ್ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆಯೇಷಾ ಆರೋಪಿಸಿದ್ದಾರೆ. ನಾನು 14 ವರ್ಷಗಳಿಂದ ಅವರೊಂದಿಗೆ ಇದ್ದೇನೆ. ಅವರು ತಪ್ಪು ಮಾಡುತ್ತಿದ್ದರೆ ನಾನು ಸುಮ್ಮನಿರುತ್ತೇನೆಯೇ? ಅತ್ಯಾಚಾರ ನಡೆದಿದೆ ಎಂದು ಈಗ ಏಕೆ ಕೇಸು ಹಾಕುತ್ತಾರೆ? ನೀವು ಇಲ್ಲಿಯವರೆಗೆ ಏಕೆ ಹೊರಗೆ ಬರಲಿಲ್ಲ? ಇದರ ಹಿಂದಿರುವ ಷಡ್ಯಂತ್ರವೇನು? ಎಂದು ಪ್ರಶ್ನೆ ಮಾಡಿರುವ ಆಯೇಷಾ, ಜಾನಿ ಲೈಂಗಿಕ ಕಿರುಕುಳ ನೀಡಿರುವುದಕ್ಕೆ ಆ ಹುಡುಗಿ ಸಾಕ್ಷ್ಯಾಧಾರಗಳನ್ನು ನನಗೆ ತೋರಿಸಿದರೆ, ನಾನು ನನ್ನು ಗಂಡನನ್ನು ಬಿಟ್ಟು ಹೋಗುತ್ತೇನೆ. ನನ್ನ ಗಂಡ ಬೆಳೆಯದಂತೆ ಯಾರೋ ಷಡ್ಯಂತ್ರ ನಡೆಸುತ್ತಿದ್ದಾರೆ. ಮೊನ್ನೆಯಷ್ಟೇ ರೇವ್ ಪಾರ್ಟಿ ಪ್ರಕರಣದಲ್ಲಿ ಜಾನಿ ಹೆಸರು ಕೇಳಿಬಂದಿತ್ತು. ಸುಖಾ ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ಜಾನಿ ಯಾವುದೇ ತಪ್ಪು ಮಾಡಿಲ್ಲ ಎಂದು ಅವರ ಪತ್ನಿ ಆಯೇಷಾ ಸಮರ್ಥನೆ ನೀಡಿದರು. (ಏಜೆನ್ಸೀಸ್)
ಎಲ್ಲಿ ನನ್ನ ಜಾನಿ? ಪೊಲೀಸ್ ಠಾಣೆಯಲ್ಲಿ ಡ್ಯಾನ್ಸ್ ಮಾಸ್ಟರ್ ಪತ್ನಿ ಆಯೇಷಾ ಹೈಡ್ರಾಮಾ!
ತಿರುಪತಿಯ ಲಡ್ಡು ಅಪವಿತ್ರ; ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು ಬಳಕೆ, ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ