ಬೆಂಗಳೂರು :ಶತಮಾನಗಳ ಕೋಟ್ಯಾಂತರ ಜನರ ನಿರೀಕ್ಷೆ ನಿಜವಾಗುತ್ತಿರುವ ಅಮೃತ ಘಳಿಗೆ ಬಂದೇ ಬಿಟ್ಟಿದೆ. ಇಡೀ ದೇಶ ಸಂಭ್ರಮದಲ್ಲಿ ತೇಲಾಡುತ್ತಿದ್ದು, ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯಾಗುವ ಮೂಲಕ 500 ವರ್ಷಗಳ ವನವಾಸ ಅಂತ್ಯವಾಗುತ್ತಿದೆ. ಈ ಸಂಭ್ರಮಕ್ಕೆ ಇಡೀ ದೇಶ ಸಾಕ್ಷಿಯಾಗುತ್ತಿರುವ ಹೊತ್ತಿನಲ್ಲಿ ರಾಜಧಾನಿ ಬೆಂಗಳೂರು ಸಕಲ ರೀತಿಯಲ್ಲಿ ಸಜ್ಜಾಗಿದೆ.
ಶ್ರೀರಾಮೋತ್ಸವದ ಹೆಸರಲ್ಲಿ ಸೋಮವಾರ ದಿನಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯಗಳಲ್ಲಿ ವಿಶೇಷ ಅಭಿಷೇಕ, ಪೂಜೆ, ಹೋಮ-ಹವನ, ರಾಮತಾರಕ ಮಂತ್ರ ಜಪ, ಶ್ರೀರಾಮನ ವೇಷಭೂಷಣ, ರಾಮನ ಭಜನೆ, ಸಂಕೀರ್ತನೆ, ಉತ್ಸವಾದಿಗಳು ನಡೆಯುತ್ತವೆ. ಈಗಾಗಲೇ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಕೇಸರಿ ಬಂಟಿಂಗ್ಸ್‌ಗಳು ರಾರಾಜಿಸುತ್ತಿದ್ದು, ಹಬ್ಬವ ವಾತಾವರಣ ನಿರ್ಮಾಣವಾಗಿದೆ. ವಿವಿಧ ಸಂಘಟನೆಗಳು ರಾಮನ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿ ಸಾರ್ವಜನಿಕರಿಗೆ ಪ್ರಸಾದ, ಪಾನಕ ವಿತರಣೆಗೆ ವ್ಯವಸ್ಥೆ ಮಾಡಿಕೊಂಡಿವೆ.
ಸಂಘ ಪರಿವಾರದಿಂದ ವಿವಿಧ ಕಾರ್ಯಕ್ರಮ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮತ್ತು ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಹಿಂದೆ ಬಹುದೊಡ್ಡ ಶಕ್ತಿಯಾಗಿರುವ ಸಂಘ ಪರಿವಾರದ ಎಲ್ಲ ಶಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮದ ಯಶಸ್ಸಿಗೆ ಸಂಘಟನಾತ್ಮಕವಾಗಿ ತೊಡಗಿಕೊಂಡಿವೆ. ಸಂಘದ ಪರಿಭಾಷೆಯಂತೆ ಎಲ್ಲ ಪ್ರಖಂಡ, ಖಂಡ ಮತ್ತು ಉಪಖಂಡಗಳ ಮಟ್ಟದಲ್ಲಿ ಜನರನ್ನು ಒಗ್ಗೂಡಿಸಲು ಕಳೆದ ಹಲವು ದಿನಗಳಿಂದ ತಳಮಟ್ಟದ ಕೆಲಸ ಮಾಡಲಾಗಿದೆ.
ಬೆಳಗ್ಗೆ 10 ಗಂಟೆಯಿಂದ ತಮ್ಮ ಮನೆಯ ಸಮೀಪ ಇರುವ ದೇವಾಲಯಕ್ಕೆ ಬಂದು, ಪೂಜೆ ಮತ್ತು ಭಜನೆಯಲ್ಲಿ ಪಾಲ್ಗೊಳ್ಳುವುದು. ಮಧ್ಯಾಹ್ನ 12 ಗಂಟೆಯಿಂದ ಎಲ್‌ಇಡಿ ವಾಲ್ ಮೂಲಕ ಅಯೋಧ್ಯೆಯ ಪ್ರಾಣ ಪ್ರತಿಷ್ಠೆಯ ನೇರಪ್ರಸಾರದ ವೀಕ್ಷಣೆ, ನಂತರ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿತರಣೆ. ಸಂಜೆ ಪ್ರತಿ ಮನೆಯಲ್ಲಿ ಕನಿಷ್ಠ 5 ದೀಪಗಳನ್ನು ಬೆಳಗಿಸಿ ಶ್ರೀರಾಮಜ್ಯೋತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು.
ಯಾವುದೇ ಮೆರವಣಿಗೆ, ಘೋಷಣೆ, ಭಾಷಣಗಳಿಗೆ ಸಂಘ ಪರಿವಾರದಿಂದ ಅವಕಾಶವನ್ನು ನೀಡಲಾಗಿಲ್ಲ. ಇದೊಂದು ರಾಜಕೀಯೇತರ ಹಿಂದು ಧರ್ಮದ ಸಂಘಟನಾತ್ಮಕ ಕಾರ್ಯಕ್ರಮವಾಗಿದ್ದು ಪ್ರತಿ ಹಿಂದುಗಳು ಪಾಲ್ಗೊಳ್ಳುವಂತೆ ವಿಹಿಂಪ ಸಂಪರ್ಕ ವಿಭಾಗದ ಪ್ರಾಂತೀಯ ಪ್ರಮುಖ ಮಂಜುನಾಥಸ್ವಾಮಿ ಕರೆ ನೀಡಿದ್ದಾರೆ.
ದೇವಾಲಯಗಳಲ್ಲಿ ವಿಶೇಷ ಪೂಜೆ: ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸೂಚನೆ ನೀಡಲಾಗಿದ್ದು, ಬೆಳಗ್ಗೆಯಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ನಗರದ ಪ್ರತಿಷ್ಠಿತ ಬನಶಂಕರಿ ದೇವಾಲಯದಲ್ಲಿ ಬೆಳಗ್ಗೆ 6 ಗಂಟೆಗೆ ಪರಿವಾರ ಶ್ರೀರಾಮನಿಗೆ ಪಂಚಾಮೃತ ಅಭಿಷೇಕ, 11 ಗಂಟೆಗೆ ರಾಮತಾರಕ ಹೋಮ, 12.30ಕ್ಕೆ ದೇವಾಲಯದ ಆವರಣದಲ್ಲಿ ಉತ್ಸವ ನಡೆಯಲಿದೆ. ಸಂಜೆ 5 ಗಂಟೆಗೆ ಶ್ರೀರಾಮನಿಗೆ ತುಳಸಿ ಅರ್ಚನೆ, ದೀಪೋತ್ಸವ ಹಾಗೂ ಮಹಾಮಂಗಳಾರತಿಯೊಂದಿಗೆ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಲಕ್ಷ್ಮಿ ತಿಳಿಸಿದ್ದಾರೆ.
ಗಿರಿನಗರದ ವಾಸವಿ ದೇವಾಲಯದಲ್ಲಿ ಅಯೋಧ್ಯೆಯ ರಾಮಮಂದಿರದ ಯಥಾವತ್ತು ಪ್ರತಿಕೃತಿಯನ್ನು ನಿರ್ಮಿಸಲಾಗಿದ್ದು, ಅಯೋಧ್ಯೆಗೆ ಹೋಗಲಾಗದವರಿಗೆ ಬೆಂಗಳೂರಿನಲ್ಲಿ ರಾಮಮಂದಿರ ದರ್ಶನ ಮಾಡಲು ದೇವಾಲಯ ಸಮಿತಿ ವ್ಯವಸ್ಥೆ ಮಾಡಿದೆ. ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಈ ಪ್ರತಿಕೃತಿಯನ್ನು ಉದ್ಘಾಟನೆ ಮಾಡಲಿದ್ದು, ಜ.22 ರಿಂದ 30 ರವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ವ್ಯಾಪಾರ ವಹಿವಾಟಿನಲ್ಲೂ ರಾಮನ ಪ್ರಭಾವ: ರಾಮೋತ್ಸವದ ಪ್ರಭಾವ ವ್ಯಾಪರ ವಹಿವಾಟಿನ ಮೇಲೂ ದೊಡ್ಡ ಪ್ರಮಾಣದಲ್ಲಿ ಆಗಿದೆ. ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ವಿವಿಧ ರಿಯಾಯಿತಿ ೋಷಣೆ ಮಾಡಿದ್ದಾರೆ. ಹೊಟೇಲ್‌ಗಳಲ್ಲಿ ಊಟ-ತಿಂಡಿಯ ಜೊತೆಗೆ ಸಿಹಿತಿಂಡಿ ನೀಡಲು ಯೋಜಿಸಲಾಗಿದೆ. ಓರಾಯನ್ ಮತ್ತಿತರ ಮಾಲ್‌ಗಳಲ್ಲಿ ದೊಡ್ಡ ದೊಡ್ಡ ಎಲ್‌ಇಡಿ ವಾಲ್‌ಗಳನ್ನು ಅಳವಡಿಸಲಾಗಿದ್ದು, ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಟ್ಟೆ ಅಂಗಡಿಗಳಲ್ಲಿ ಶ್ರೀರಾಮ, ಹನುಮಂತನ ಚಿತ್ರವುಳ್ಳ ಪಂಚೆ, ಸೀರೆ, ಶಲ್ಯ ಮತ್ತಿತರ ಉಡುಪುಗಳ ವ್ಯಾಪಾರ ಜೋರಾಗಿದೆ.