More

    ಆತ್ಮಕಥನಗಳು ಸತ್ಯದ ಪ್ರತಿಬಿಂಬಗಳು; ಸಿರಿಗೆರೆ ಶ್ರೀಗಳ ಅಭಿಮತ

    ಬೆಂಗಳೂರು : ಪುಸ್ತಕಗಳಲ್ಲಿ ಹಲವಾರು ವಿಧಗಳಿದ್ದು, ಅವುಗಳಲ್ಲಿ ಆತ್ಮಕಥನವೂ ಕೂಡಾ ಒಂದು. ಸಾಧಕ ವ್ಯಕ್ತಿಯ ಕುರಿತು ಬೇರೆಯವರು ಬರೆಯುವುದಕ್ಕಿಂತ ಸ್ವತಃ ತಾವೇ ಬರೆಯುವ ಆತ್ಮಕಥನಗಳು ಸತ್ಯದ ದರ್ಶನ ಮಾಡಿಸುವ ಪ್ರತಿಬಿಂಬಗಳು ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಿಸಿದ್ದಾರೆ.

    ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸ್ಪರ್ಶ್ ಫೌಂಡೇಶನ್ ಭಾನುವಾರ ಆಯೋಜಿಸಿದ್ದ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಅವರ ಆತ್ಮಕಥನ ‘ಕಳೆದ ಕಾಲ, ನಡೆದ ದೂರ’ ಕೃತಿ ಲೋಕಾರ್ಪಣೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಶಿವರಾಜ ಪಾಟೀಲರ ಆತ್ಮಕಥನ ಅತ್ಯಂತ ವಿಭಿನ್ನವಾದ ಕೃತಿ. ಅವರದೇ ಮಾತಿನಲ್ಲಿ ಹೇಳುವುದಾದರೆ ಅವರು ಅದೃಷ್ಟ ಎಂಬ ಲ್‌ಟಿ ಹತ್ತಿ ಮೇಲೆ ಬಂದವರಲ್ಲ ಬದಲಾಗಿ ಪರಿಶ್ರಮ ಎಂಬ ಒಂದೊಂದೇ ಮೆಟ್ಟಿಲುಗಳನ್ನು ಹತ್ತಿಕೊಂಡು ಬಂದವರು. ಸಾಮಾನ್ಯ ಹಳ್ಳಿಯೊಂದರಲ್ಲಿ ಹುಟ್ಟಿ ಎತ್ತಿನಗಾಡಿಯಿಂದ ಸರ್ವೋಚ್ಛ ನ್ಯಾಯಾಲಯದ ಪೀಠವನ್ನೇರಿದ ಅವರ ಬದುಕು ಹೊಸ ಪೀಳಿಗೆಗೆ ಸ್ಪೂರ್ತಿಯಾದರೆ, ಇತರರಿಗೆ ಮಾರ್ಗದರ್ಶನವಾಗಿದೆ. ಪುಸ್ತಕದ ಮುಖಪುಟದ ವಿನ್ಯಾಸವು ಪಾಟೀಲರ ಇಡೀ ಜೀವನದ ಸಾರಂಶವನ್ನು ಹೇಳುತ್ತಿದೆ.

    ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನೀಡುವ ಒಂದು ತೀರ್ಪು ಕೇವಲ ಆ ಪ್ರಕರಣಕ್ಕೆ ಸಂಬಂಧಪಟ್ಟಿರುವುದಿಲ್ಲ. ಅದರ ಪ್ರಭಾವ ಇಡೀ ದೇಶದ ಮೇಲಾಗುತ್ತದೆ; ಈ ನೆಲದ ಕಾನೂನಾಗಿ ಮಾರ್ಪಾಡಾಗುವುದರಿಂದ ಬಹಳ ಜವಾಬ್ದಾರಿ ಇರುತ್ತದೆ. ಇದನ್ನು ಗಮನದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸಿದ ಅಪರೂಪದ ನ್ಯಾಯಮೂರ್ತಿಗಳು ಶಿವರಾಜ್ ಪಾಟೀಲರು. ಅವರ ಬದುಕಿನ ಪ್ರತಿಯೊಂದು ಹಂತ ಮತ್ತು ಬೆಳವಣಿಗೆಯು ದಾಖಲಾಗಿರುವ ಅವರ ಆತ್ಮಕಥನ ಸಮಾಜಕ್ಕೆ ಅಗತ್ಯ ಮತ್ತು ಉಪಯುಕ್ತ ಎಂದು ಸಿರಿಗೆರೆ ಶ್ರೀಗಳು ವಿವರಿಸಿದರು.

    ಸಮಾರಂಭದಲ್ಲಿ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಕೃತಿ ಬಿಡುಗಡೆ ಮಾಡಿದರು. ಸ್ಪರ್ಶ್ ಫೌಂಡೇಶನ್ ಚೇರ್ಮನ್ ಡಾ.ಶರಣ ಪಾಟೀಲ್ ಸರ್ವರನ್ನೂ ಸ್ವಾಗತಿಸಿದರು. ಬಸವಪ್ರಭು ಪಾಟೀಲ್ ಗಣ್ಯರ ಪರಿಚಯ ಮಾಡಿದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಚಿವರಾದ ಶರಣಪ್ರಕಾಶ್ ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಲೆ, ಮುಖ್ಯ ನ್ಯಾಯಾಧೀಶರಾಗಿ ಶಿಫಾರಸುಗೊಂಡಿರುವ ನ್ಯಾಯಮೂರ್ತಿ ದಿನೇಶ್ ಕುಮಾರ್ ಸೇರಿದಂತೆ ಸುಪ್ರೀಂ ಕೋರ್ಟ್ ಮತ್ತು ದೇಶದ ವಿವಿಧ ಹೈಕೋರ್ಟ್‌ಗಳ ನೂರಾರು ಹಾಲಿ ಮತ್ತು ಮಾಜಿ ನ್ಯಾಯಾಧೀಶರು, ವಕೀಲರುಗಳು, ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ, ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು.

    ಸಾಧನೆಗೆ ವ್ಯಕ್ತಿ ಮತ್ತು ಸ್ಥಳ ಎರಡೂ ಮುಖ್ಯ: ಯಾವುದೇ ವ್ಯಕ್ತಿ ಸಾಧನೆ ಮಾಡುವುದಕ್ಕೆ ಆತ ಇರುವ ಸ್ಥಳವೂ ಕೂಡಾ ಅಷ್ಟೆ ಮುಖ್ಯವಾಗುತ್ತದೆ ಎಂದು ಜಸ್ಟೀಸ್ ಶಿವರಾಜ ಪಾಟೀಲ್ ತಿಳಿಸಿದರು. ಪ್ರತಿಭೆ ಇರುವ ವ್ಯಕ್ತಿ ಹಳ್ಳಿಯಲ್ಲಿದ್ದರೆ ಆತನ ಪ್ರತಿಭೆಯನ್ನು ಅನಾವರಣ ಮಾಡಲು ಸಾಧ್ಯವಿಲ್ಲ. ಉತ್ತಮ ಪ್ರಾಕ್ಟೀಸ್, ಒಳ್ಳೆಯ ಹೆಸರು ಇದ್ದಾಗ್ಯೂ ಕಲಬುರಗಿಯಿಂದ ಬೆಂಗಳೂರಿಗೆ ಬರುವ ನಿರ್ಣಯ ಮಾಡಿದ್ದು ಜೀವನದ ದೊಡ್ಡ ತಿರುವು. ಅದರಿಂದ ಹೈಕೋರ್ಟ್ ಜಡ್ಜ್ ಆಗಿ ಮುಂದೆ ಸುಪ್ರೀಂ ಕೋರ್ಟ್‌ವರೆಗೆ ಹೋಗಲು ಸಾಧ್ಯವಾಯಿತು. ಪರಿಶ್ರಮ, ಪ್ರಾಮಾಣಿಕತೆ ಇದ್ದಲ್ಲಿ ಭಗವಂತನ ಕೃಪೆಯೂ ಇರುತ್ತದೆ. ವಯಸ್ಸಿದ್ದಾಗ ಉತ್ತಮ ಕೆಲಸ ಮಾಡಿದರೆ ಯಶಸ್ಸು ತಲುಪಲು ಸಾಧ್ಯ. ನಾವು ಮಾಡಿದ ಕೆಲಸಕ್ಕೆ ಶ್ರೀಮಂತರು ಪೇ (ಪೇಮೆಂಟ್) ಮಾಡುತ್ತಾರೆ. ಆದರೆ ಬಡವರು ಬೆಲೆ ಕಟ್ಟಲಾಗದ ಪ್ರೇ (ಪ್ರಾರ್ಥನೆ) ಮಾಡುತ್ತಾರೆ. ನನ್ನ ಯಶಸ್ಸಿಗೆ ಅಂತಹ ಪ್ರಾರ್ಥನೆಗಳೂ ಕಾರಣ ಎಂದು ಪಾಟೀಲರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು.

    “ದೇಶದ ಎಲ್ಲ ಸಮಸ್ಯೆಗಳಿಗೆ ತಾತ್ವಿಕ ಪರಿಹಾರವನ್ನು ಒದಗಿಸುವ ನ್ಯಾಯಾಂಗ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ನ್ಯಾಯಾಧೀಶರು ಪಾಲಿಸಬೇಕಾದ ಹತ್ತು ಅಂಶಗಳನ್ನು ಸ್ವತಃ ಶಿವರಾಜ ಪಾಟೀಲರು ತಮ್ಮ ಆತ್ಮಕಥನದಲ್ಲಿ ನಮೂದಿಸಿದ್ದಾರೆ. ನ್ಯಾಯಾಧೀಶರಾದವರು, ಆಗುವವರು ಅಗತ್ಯವಾಗಿ ಅದರಂತೆ ನಡೆದುಕೊಳ್ಳಬೇಕು. ಆ ಎಲ್ಲ ಹತ್ತು ಅಂಶಗಳಂತೆ ನಡೆದುಕೊಂಡ ಅಪರೂಪದ ವ್ಯಕ್ತಿತ್ವ ಶಿವರಾಜ ಪಾಟೀಲರದ್ದು”

    – ನ್ಯಾಯಮೂರ್ತಿ ಆರ್.ಎಫ್.ನಾರಿಮನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts