

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜೈಲು ಸೇರಿರುವ ತಮ್ಮ ಸಹೋದ್ಯೋಗಿ ಮನೀಶ್ ಸಿಸೋಡಿಯಾರನ್ನು ನೆನೆದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾವುಕರಾಗಿದ್ಧಾರೆ.
ದೆಹಲಿಯಲ್ಲಿ ನೂತನವಾಗಿ ನಿರ್ಮಿಸಿರುವ ಶಾಲೆ ಒಂದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುವ ವೇಳೆ ಕೇಜ್ರಿವಾಲ್ ಭಾವುಕರಾಗಿದ್ಧಾರೆ. ದೆಹಲಿ ಸರ್ಕಾರ ಜಾರಿಗೆ ತಂದಿದ್ದ ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಫೆಬ್ರವರಿ ತಿಂಗಳಿನಿಂದ ಜೈಲಿನಲ್ಲಿದ್ದಾರೆ.
ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಕೇಜ್ರಿವಾಲ್ ನಾನು ಇಂದು ಮನೀಶ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರ ಈ ಶಾಲೆಯ ನಿರ್ಮಾಣವನ್ನು ಶುರು ಮಾಡಿದ್ದರು, ಪ್ರತಿಯೊಂದು ಮಗು ಕೂಡ ಉತ್ತಮ ಶಿಕ್ಷಣ ಪಡೆಯಬೇಕು ಎಂಬುದು ಅವರ ಆಸೆಯಾಗಿತ್ತು.
ಅವರು ಉತ್ತಮ ಶಾಲೆಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಜೈಲಿಗೆ ಹಾಕಲಾಗಿದೆ. ಇವರಿಗೆ ದೆಹಲಿಯ ಶಿಕ್ಷಣ ಕ್ರಾಂತಿ ಹಾಳು ಮಾಡುವವರೆಗೂ ನಿದ್ದೆ ಬರುವುದಿಲ್ಲ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ಧಾರೆ.
ಸಿಸೋಡಿಯಾ ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಜೈಲಿಗೆ ಕಳುಹಿಸಿದ್ದಾರೆ. ದೇಶದಲ್ಲಿ ಅನೇಕ ಡಕಾಯಿತರು ಸಮಾಜದಲ್ಲಿ ಆರಾಮಾಗಿ ಒಡಾಡಿಕೊಂಡಿದ್ದಾರೆ, ಅವರನ್ನು ಜೈಲಿಗೆ ಹಾಕುವ ಬದಲು ಇವರನ್ನು ಯಾಕೆ ಹಾಕಿದ್ದೀರಾ. ಒಂದು ವೇಳೆ ಮನೀಶ್ ಸಿಸೋಡಿಯಾ ಉತ್ತಮ ಶಾಲೆಗಳನ್ನು ನಿರ್ಮಿಸಿ, ಒಳ್ಳೆಯ ಶಿಕ್ಷಣವನ್ನು ಕೊಟ್ಟಿರದಿದ್ದರೆ ಆಗ ಅವರನ್ನು ಜೈಲಿಗೆ ಕಳುಹಿಸುತ್ತಿರಲಿಲ್ಲ.
ನಾವು ಮನೀಶ್ ಅವರ ಕನಸುಗಳನ್ನು ನನಸು ಮಾಡಬೇಕು. ಶೀಘ್ರದಲ್ಲೇ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂಬ ನಂಬಿಕೆ ನನಗಿದೆ. ಸತ್ಯವು ಸೋಲಲಾರದು ಅದರ ಹಾದಿಯಲ್ಲಿ ನಡೆಯುವವರಿಗೆ ದೇವರು ಸಹಾಯ ಮಾಡುತ್ತಾನೆ ಎಂದು ಸಹೋದ್ಯೋಗಿಯನ್ನು ನೆನೆದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾವುಕ ನುಡಿಗಳನ್ನು ಆಡಿದ್ದಾರೆ.