

Thrashed: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸೇನಾ ಅಧಿಕಾರಿಯೊಬ್ಬ ಕ್ಯಾಬಿನ್ ಲಗೇಜ್‌ಗೆ ಹೆಚ್ಚುವರಿ ಶುಲ್ಕ ವಿಧಿಸಿದ್ದಕ್ಕೆ ನಾಲ್ವರು ಸ್ಪೈಸ್ ಜೆಟ್ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದ್ದು, ಆರೋಪಿ ಸೇನಾ ಅಧಿಕಾರಿ ವಿರುದ್ಧ ಕೊಲೆ ಕೇಸ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
2025 ಜುಲೈ 26ರಂದು ಶ್ರೀನಗರದಿಂದ ದೆಹಲಿಯಿಂದ ಹೊರಟಿದ್ದ ಎಸ್‌ಜಿ-386 ವಿಮಾನದ ಬೋರ್ಡಿಂಗ್ ಗೇಟ್ನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ನಾಲ್ವರು ಸ್ಪೈಸ್ ಜೆಟ್ ಸಿಬ್ಬಂದಿಗಳಿಗೆ ಬೆನ್ನುಮೂಳೆ ಮುರಿತ ಸೇರಿ ಅನೇಕ ಗಂಭೀರ ಗಾಯಗಳಾಗಿವೆ. ಘಟನೆ ಕುರಿತು ವಿಮಾನಯಾನ ಸಂಸ್ಥೆ ಎಫ್ಐಆರ್ ದಾಖಲಿಸಿದ್ದು ಸೇನೆಗೆ ಮಾಹಿತಿ ನೀಡಿದೆ ಎನ್ನಲಾಗಿದೆ.
ಈ ಕುರಿತು ಎಕ್ಸ್ನಲ್ಲಿ ಮಾಹಿತಿ ನೀಡಿರುವ ಎಂದು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ, "ಅಧಿಕಾರಿ 16 ಕೆಜಿ ತೂಕದ ಎರಡು ಕ್ಯಾಬಿನ್ ಲಗೇಜ್‌ಗಳನ್ನು ತಂದಿದ್ದರು. ಇದು ಅನುಮತಿಸಲಾದ 7 ಕೆಜಿ ಮಿತಿಗಿಂತ ಎರಡು ಪಟ್ಟು ಹೆಚ್ಚಿತ್ತು. ಆದ್ದರಿಂದ ಹೆಚ್ಚುವರಿ ಲಗೇಜ್‌ಗೆ ಹಣ ಪಾವತಿಸುವಂತೆ ಸಿಬ್ಬಂದಿ ತಿಳಿಸಿದಾಗ ಆಫೀಸರ್ ನಿರಾಕರಿಸಿದ್ದು, ಭದ್ರತಾ ಶಿಷ್ಟಾಚಾರ ಉಲ್ಲಂಘಿಸಿ ಬೋರ್ಡಿಂಗ್ ಪ್ರಕ್ರಿಯೆ ಪೂರ್ಣಗೊಳಿಸದೆ ಬಲವಂತವಾಗಿ ಏರೋಬ್ರಿಡ್ಜ್‌ಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಸಿಐಎಸ್ಎಫ್ ಅಧಿಕಾರಿಯೊಬ್ಬರು ಅವರನ್ನು ವಾಪಸ್ ಕಳುಹಿಸಿದ್ದಾರೆ. ಇದರಿಂದ ಸಿಟ್ಟಾಗಿ ನಾಲ್ವರು ಸ್ಪೈಸ್‌ಜೆಟ್ ಸಿಬ್ಬಂದಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ" ಎಂದು ತಿಳಿಸಿದೆ.
"ಸಿಬ್ಬಂದಿಯೊಬ್ಬರು ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದರು, ಆ ಸಿಬ್ಬಂದಿಯನ್ನು ಅಧಿಕಾರಿ ಹೊಡೆಯುತ್ತಲೇ ಇದ್ದ. ಗಾಯಾಳು ಸಿಬ್ಬಂದಿಗೆ ಸಹಾಯ ಮಾಡಲು ಬಂದ ಇತರೆ ಸಿಬ್ಬಂದಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಗಾಯಾಳು ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅಧಿಕಾರಿ ವಿರುದದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಹಲ್ಲೆಗೈದ ಅಧಿಕಾರಿಯನ್ನು ನಿಷೇಧಿತ ಪ್ರಯಾಣಿಕರ ಪಟ್ಟಿಗೆ ಸೇರಿಸಲಾಗುತ್ತದೆ, ವಿಮಾನಯಾನ ಸಚಿವಾಲಯಕ್ಕೂ ಮಾಹಿತಿ ನೀಡಿದ್ದು ಕ್ರಮಕೈಗೊಳ್ಳುವಂತೆ ಮನವಿ ಮಾಡಿದೆ. ಈ ಘಟನೆಯನ್ನು ಖಂಡಿಸಿದ್ದು ತನ್ನ ಉದ್ಯೋಗಿಗಳ ಪರ ಕಾನೂನು ಹೋರಾಟ ಮಾಡುವುದಾಗಿ" ಎಂದು ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.
ಸೇನಾ ಅಧಿಕಾರಿಯ ಹಲ್ಲೆ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಸಿಐಎಸ್ಎಫ್, "ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಸ್ಪೈಸ್‌ಜೆಟ್ ವಿಮಾನ ಎಸ್‌ಜಿ -386 ಹತ್ತುವಾಗ ಲಗೇಜ್‌ಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಈ ಘಟನೆ ಸಂಭವಿಸಿದೆ. ಸಿಐಎಸ್‌ಎಫ್ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ನಿರ್ವಹಿಸಿದರು ಮತ್ತು ವಿಮಾನ ಕಾರ್ಯಾಚರಣೆಗಳಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಂಡರು. ಇದಲ್ಲದೆ, ಅಗತ್ಯ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದೆ. (ಏಜೆನ್ಸೀಸ್)