

Shubman Gill: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆ್ಯಂಡರ್ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯಲ್ಲಿ, ಭಾರತ ಟೆಸ್ಟ್ ತಂಡದ ನೂತನ ನಾಯಕ ಶುಭಮಾನ್ ಗಿಲ್ ದಾಖಲೆಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ. ಪ್ರಸ್ತುತ ಸರಣಿಯಲ್ಲಿ ಗಿಲ್ ಮುಟ್ಟಿದೆಲ್ಲ ಚಿನ್ನವಾಗಿದೆ.
ಐದು ಟೆಸ್ಟ್ ಪಂದ್ಯಗಳಲ್ಲಿ ಗಿಲ್ 75.4೦ ಸರಾಸರಿಯಲ್ಲಿ 754 ರನ್ ಗಳಿಸಿದ್ದು, ಇದರಲ್ಲಿ ನಾಲ್ಕು ಶತಕಗಳು ಸೇರಿವೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಗಿಲ್ ಸಂಪೂಣರ್ವಾಗಿ ಪ್ರಾಬಲ್ಯ ಸಾಧಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ 269 ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 161 ರನ್ ಗಳಿಸುವ ಮೂಲಕ ಒಂದೇ ಪಂದ್ಯದಲ್ಲಿ 430 ರನ್ ಗಳಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ ಏಷ್ಯಾದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾದರು.
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಒತ್ತಡದ ನಡುವೆಯೂ ಗಿಲ್ ಗಳಿಸಿದ ಅಜೇಯ 78 ರನ್‌ಗಳು, ಕೆಎಲ್ ರಾಹುಲ್ ಜೊತೆಗಿನ ನಿರ್ಣಾಯಕ ಪಾಲುದಾರಿಕೆಯ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನೆರವಾಯಿತು.
ಸರಣಿಯುದ್ದಕ್ಕೂ ಗಿಲ್ ಹಲವಾರು ಮೈಲಿಗಲ್ಲುಗಳನ್ನು ನಿರ್ಮಿಸಿದ್ದು, ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾದ ನಂತರ, ನಾಯಕತ್ವದ ಜವಾಬ್ದಾರಿ ತೆಗೆದುಕೊಂಡು ಉತ್ತಮ ಪ್ರದರ್ಶನ ನೀಡಿದರು.
1. ಟೆಸ್ಟ್ ಸರಣಿಯಲ್ಲಿ ಭಾರತೀಯ ನಾಯಕನೊಬ್ಬ ಅತಿ ಹೆಚ್ಚು ರನ್‌ಗಳ ಗಳಿಸಿದ್ದ ಸುನಿಲ್ ಗವಾಸ್ಕರ್ ಅವರ 732 ರನ್‌ಗಳ ದಾಖಲೆಯನ್ನು ಗಿಲ್ ಮುರಿದಿದ್ದಾರೆ.
2. ಟೆಸ್ಟ್ ಸರಣಿಯೊಂದರಲ್ಲಿ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಓರ್ವ ಗಳಿಸಿದ ವೈಯಕ್ತಿಕ ಗರಿಷ್ಠ ರನ್ ದಾಖಲೆಯಲ್ಲಿ ಶುಭಮಾನ್ ಗಿಲ್ 3ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ 2019ರ ಆಶಸ್ ಸರಣಿಯಲ್ಲಿ ಸ್ಟೀವ್ ಸ್ಮಿತ್ 774 ರನ್ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿ ಹಾಗೂ ದಕ್ಷಿಣ ಆಫ್ರಿಕಾದ ಡೆನಿಸ್ ಕಾಂಪ್ಟನ್ (753) ಎರಡನೇ ಸ್ಥಾನದಲ್ಲಿದ್ದಾರೆ.
3. ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕ (5) ಗಳಿಸಿದವರ ಪಟ್ಟಿಯಲ್ಲಿ ಶುಭಮಾನ್ ಗಿಲ್ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಸರಣಿಯಲ್ಲಿ ಐದು ಶತಕಗಳನ್ನು ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಕ್ಲೈಡ್ ವಾಲ್ಕಾಟ್.
4. ಶುಭಮಾನ್ ಗಿಲ್ ಒಂದೇ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ನಾಯಕರಾಗಿ ಅತಿ ಹೆಚ್ಚು ಶತಕಗಳನ್ನು (4) ಗಳಿಸಿದ ದಾಖಲೆ ಹೊಂದಿದ್ದಾರೆ. ಡಾನ್ ಬ್ರಾಡ್ಮನ್ ಮತ್ತು ಸುನಿಲ್ ಗವಾಸ್ಕರ್ ಕೂಡ ನಾಲ್ಕು ಶತಕಗಳನ್ನು ಗಳಿಸಿದ್ದಾರೆ.
5. ಒಂದೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ರನ್‌ಗಳ 430 (269 ಮತ್ತು 161) ದಾಖಲೆಯನ್ನು ಶುಭಮಾನ್ ಗಿಲ್ ತಮ್ಮದಾಗಿಸಿಕೊಂಡರು. 1971 ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸುನಿಲ್ ಗವಾಸ್ಕರ್ ಅವರ 344 (124 ಮತ್ತು 220) ರನ್‌ಗಳನ್ನು ಗಿಲ್ ಹಿಂದಿಕ್ಕಿದರು.
6. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ನಾಯಕನೊಬ್ಬ ಗಳಿಸಿದ ಅತ್ಯಧಿಕ ಸ್ಕೋರ್ ದಾಖಲೆಯನ್ನು ಗಿಲ್ ತಮ್ಮದಾಗಿಸಿಕೊಂಡರು. ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಔಟಾಗದೆ 254 ರನ್ ಗಳಿಸಿದ್ದು ಈ ಹಿಂದಿನ ಗರಿಷ್ಠ ರನ್ ಆಗಿತ್ತು.
7. ಗಿಲ್ ಸೆನಾ ದೇಶಗಳಲ್ಲಿ ಏಷ್ಯಾದ ನಾಯಕನೊಬ್ಬ ಗಳಿಸಿದ ಅತ್ಯಧಿಕ ಸ್ಕೋರ್ (269) ದಾಖಲೆ ಬರೆದಿದ್ದಾರೆ. 2011 ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತಿಲಕರತ್ನೆ ದಿಲ್ಶಾನ್ ಅವರ 193 ರನ್‌ಗಳನ್ನು ಅವರು ಹಿಂದಿಕ್ಕಿದರು.(ಏಜೆನ್ಸೀಸ್)