ಫಾರಿನ್​ ಹುಡುಗನ ಪ್ರೀತಿಯಲ್ಲಿ ಬಿದ್ರಾ ಅರ್ಜುನ್​ ಸರ್ಜಾರ ದ್ವಿತೀಯ ಪುತ್ರಿ? ಫೋಟೋ ವೈರಲ್​

Anjana Arjun
Published on

ಚೆನ್ನೈ: ಆ್ಯಕ್ಸನ್​ ಕಿಂಗ್​ ಅರ್ಜುನ್​ ಸರ್ಜಾ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಮೂಲತಃ ಕನ್ನಡದವರೇ ಆದ ಅರ್ಜುನ್​ ಹೆಚ್ಚಾಗಿ ಮಿಂಚಿದ್ದು ಮಾತ್ರ ಕಾಲಿವುಡ್​ನಲ್ಲಿ. ಸದ್ಯ ಅರ್ಜುನ್​ ಕುಟುಂಬ ಚೆನ್ನೈನಲ್ಲೇ ನೆಲೆಸಿದೆ. ಹೀಗಿದ್ದರೂ ಅರ್ಜುನ್​ ಅವರಿಗೆ ಕನ್ನಡದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಆಗಾಗ ಕನ್ನಡ ಸಿನಿಮಾಗಳನ್ನು ಸಹ ಮಾಡುತ್ತಿರುತ್ತಾರೆ.

ಅರ್ಜುನ್​ ಸರ್ಜಾರ ಅವರ ಪುತ್ರಿ ಐಶ್ವರ್ಯಾ ಕೂಡ ಓರ್ವ ನಟಿ. ನಟ ವಿಶಾಲ್​ ಅಭಿನಯದ ಪಟ್ಟತ್ತು ಆನೈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ, ಐಶ್ವರ್ಯಾಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಹೀಗಾಗಿ ಅವರ ಸಿನಿ ಜರ್ನಿ ಮೂರೇ ಸಿನಿಮಾಗೆ ಸೀಮಿತವಾಯಿತು. ಪಟ್ಟತ್ತು ಆನೈ ಹೊರತುಪಡಿಸಿ ಸೊಲ್ಲಿವಿಧವ ಎಂಬ ಮತ್ತೊಂದು ತಮಿಳು ಸಿನಿಮಾದಲ್ಲಿ ಐಶ್ವರ್ಯಾ ನಟನೆ ಮಾಡಿದ್ದಾರೆ. ಕನ್ನಡದಲ್ಲಿ ನಟಿಸಿದ್ದು ಒಂದೇ ಸಿನಿಮಾ. ಪ್ರೇಮ ಬರಹ ಸಿನಿಮಾದಲ್ಲಿ ನಟ ಚಂದನ್​ ಜತೆ ನಟಿಸಿದರು. ಈ ಚಿತ್ರವನ್ನು ಸ್ವತಃ ಅರ್ಜುನ್​ ಸರ್ಜಾ ಅವರೇ ನಿರ್ದೇಶನ ಮಾಡಿದರು. ಸದ್ಯ ಐಶ್ವರ್ಯಾ ಅವರು ತಮಿಳಿನ ಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ ಹಾಗೂ ನಟ ಉಮಾಪತಿ ರಾಮಯ್ಯರನ್ನು ಮದುವೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

ಅಂದಹಾಗೆ ಅರ್ಜುನ್​ ಸರ್ಜಾಗೆ ಮತ್ತೊಬ್ಬ ಮಗಳಿರುವುದು ಬಹುತೇಕರಿಗೆ ತಿಳಿದಿಲ್ಲ. ಹೌದು, ಅರ್ಜುನ್​ಗೆ ಅಂಜನಾ ಹೆಸರಿನ ಮತ್ತೊಬ್ಬ ಮಗಳಿದ್ದಾಳೆ. ಈಕೆ ಕುಟುಂಬದ ಕಿರಿಯ ಮಗಳು. ಆದರೆ, ಅಂಜನಾ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಹೀಗಿದ್ದರೂ ತಮ್ಮ ಬೋಲ್ಡ್​ ಲುಕ್​ನಿಂದಲೇ ಅನೇಕರ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅಂಜನಾ ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುತ್ತಾರೆ. ಈ ಮೂಲಕ ನೆಟ್ಟಿಗರ ಗಮನವನ್ನು ಸೆಳೆಯುತ್ತಿರುತ್ತಾರೆ. ತಾಜಾ ಸಂಗತಿ ಏನೆಂದರೆ, ಅಂಜನಾ ಅವರು ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಕುಟುಂಬದೊಂದಿಗೆ ಪೋಸ್​ ನೀಡಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಅಂಜನಾ ಹಲವು ಫೋಟೋಗಳನ್ನು ಹಂಚಿಕೊಂಡಿದ್ದು, ಒಂದು ಫೋಟೋದಲ್ಲಿ ಮಾತ್ರ ಒಬ್ಬ ಹೊಸ ವ್ಯಕ್ತಿ ಇದ್ದಾನೆ. ಆತ ಯಾರೆಂಬುದು ಇದೀಗ ಎಲ್ಲರ ಪ್ರಶ್ನೆಯಾಗಿದೆ. ಆತ ನಿಮ್ಮ ಬಾಯ್​ಫ್ರೆಂಡಾ? ಎಂದು ನೆಟ್ಟಿಗರು ಅಂಜನಾಗೆ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. ಆದರೆ, ಈ ಬಗ್ಗೆ ಅಂಜನಾ ಅವರು ಯಾವುದೇ ಉತ್ತರ ನೀಡಿಲ್ಲ. ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Arjun Sarja Daughter

ಅಂದಹಾಗೆ ಅರ್ಜುನ್​ ಸರ್ಜಾ, ಕನ್ನಡದ ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ಅವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಆದರೆ ತಮಿಳು ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕರಾಗಿ ಹೆಸರು ಗಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net