ನವದೆಹಲಿ: ಕೆಲವು ಯಶಸ್ಸಿನ ಕಥೆಗಳು ಅದ್ಭುತ ಮತ್ತು ಎಲ್ಲರಿಗೂ ಸ್ಫೂರ್ತಿ ನೀಡುತ್ತವೆ. ಬಿ.ಟೆಕ್ ಓದಿದ ನಂತರ ಉತ್ತಮ ಸಂಬಳದ ಪ್ಯಾಕೇಜ್‌ನೊಂದಿಗೆ ಉದ್ಯೋಗ ಪಡೆಯಬೇಕು ಎಂಬುದು ಬಹುತೇಕರ ಕನಸಾಗಿರುತ್ತದೆ. ಆ ಕನಸೇನಾದರೂ ನನಸಾದರೆ ಅವರ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಸದ್ಯ ತೆಲಂಗಾಣದ ಕರೀಂನಗರದ ಆಶ್ರಿತಾ ಅವರ ಯಶೋಗಾಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಾಫ್ಟ್‌ವೇರ್ ಉದ್ಯೋಗದಿಂದ ಮಾತ್ರ ಉತ್ತಮ ಪ್ಯಾಕೇಜ್ ಸಿಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಸಾಫ್ಟ್‌ವೇರ್ ಉದ್ಯೋಗಗಳತ್ತ ಆಕರ್ಷಿತರಾದ ಅವರ ಅನೇಕ ಗೆಳೆಯರಿಗಿಂತ ಆಶ್ರಿತಾ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದರು. ಹಾರ್ಡ್ವೇರ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ನಿರ್ಧರಿಸಿದ್ದರು. ಅದರಂತೆ ಹಾರ್ಡ್ವೇರ್ ಕ್ಷೇತ್ರದಲ್ಲೂ ಸಾಧನೆ ಮಾಡಬಲ್ಲೆ ಎಂಬುದನ್ನು ಸಾಬೀತು ಪಡಿಸಿದ್ದಾಳೆ ರೈತನ ಮಗಳು ಆಶ್ರಿತಾ. ತಂದೆ-ತಾಯಿಗೆ ಅವಿದ್ಯಾವಂತರಾಗಿದ್ದರೂ ತನ್ನ ಸ್ವಪ್ರಯತ್ನದಿಂದ ಗುರಿ ಸಾಧಿಸಿದ ಆಶ್ರಿತಾಳನ್ನು ನಾವೆಲ್ಲರೂ ಮೆಚ್ಚಲೇಬೇಕು.
ಪ್ರತಿಷ್ಠಿತ ಐಐಟಿಯಲ್ಲಿ ಎಂ.ಟೆಕ್ ಸೀಟು ಪಡೆಯಲು ಆಶ್ರಿತಾ ಗೇಟ್ ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದ್ದರು. ಆದರೆ, ಅವಳ ಪಯಣ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಮೊದಲ ಪ್ರಯತ್ನದಲ್ಲಿ, ಸುಮಾರು 3,000 ರ್ಯಾಂಕ್ ಪಡೆದರು. ಆದರೆ, ಈ ರ್ಯಾಂಕ್ ಸಾಕಾಗಲಿಲ್ಲ. ಆದರು ತನ್ನ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನವನ್ನು ಆಶ್ರಿತಾ ಬಿಡಲಿಲ್ಲ. ಕರೀಂನಗರದಲ್ಲಿರುವ ರಿಗಾ ಅಕಾಡೆಮಿಯ ಮೂಲಕ ಉಚಿತ ಗೇಟ್ ತರಬೇತಿ ನೀಡುವ ಚಿಂತಲ ರಮೇಶ್ ಅವರು ಬಗ್ಗೆ ಆಶ್ರಿತಾ ತಿಳಿದುಕೊಂಡರು. ಹೊಸ ಭರವಸೆ, ಉತ್ಸಾಹ ಮತ್ತು ಸಮರ್ಪಣಾ ಮನೋಭಾವದೊಂದಿಗೆ 2020ರಲ್ಲಿ ಆಶ್ರಿತಾ ರಿಗಾ ಅಕಾಡೆಮಿಗೆ ಸೇರಿಕೊಂಡರು.
ಸುಮಾರು ಒಂದು ವರ್ಷದ ಕಠಿಣ ತಯಾರಿಯ ನಂತರ, ಆಶ್ರಿತಾ ಮತ್ತೆ 2022ರಲ್ಲಿ ಗೇಟ್ ಪರೀಕ್ಷೆಗೆ ಹಾಜರಾದರು. ಈ ಬಾರಿ ಆಕೆಯ ಶ್ರಮ ಫಲಿಸಿತು. ಅಖಿಲ ಭಾರತ 36ನೇ ರ್ಯಾಂಕ್ ಪಡೆದರು. ಈ ಒಳ್ಳೆಯ ರ್ಯಾಂಕ್ನೊಂದಿಗೆ ಇಸ್ರೋ, ಡಿಆರ್ಡಿಇಒ, ಬಾರ್ಕ್ ಮತ್ತು ಎನ್ಪಿಸಿಐಎಲ್ನಂತಹ ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗಾವಕಾಶಗಳು ಅವಳ ಮನೆ ಬಾಗಿಲಿಗೆ ಅರಸಿ ಬಂದವು. ಆದರೆ, ಇಂತಹ ದೊಡ್ಡ ದೊಡ್ಡ ಆಫರ್ಗಳ ಹೊರತಾಗಿಯೂ ಆಶ್ರಿತಾ ಐಐಟಿ ಬೆಂಗಳೂರಿನಲ್ಲಿ ವಿಎಲ್ಎಸ್ಐನಲ್ಲಿ ಎಂ.ಟೆಕ್ ಮುಂದುವರಿಸಲು ಆಯ್ಕೆ ಮಾಡಿಕೊಂಡರು, ಹಾರ್ಡ್‌ವೇರ್‌ನಲ್ಲಿ ತನ್ನ ಪರಿಣತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದರು.
ಕೊನೆಗೂ ಆಶ್ರಿತಾ ಅವರ ಆಯ್ಕೆ ಫಲಪ್ರದವಾಗಿದೆ. ತನ್ನ ಎಂ.ಟೆಕ್ ಪೂರ್ಣಗೊಳಿಸಿದ ನಂತರ, ಆಕೆಗೆ ಬಹುರಾಷ್ಟ್ರೀಯ ಕಂಪನಿ ಎನ್ವಿಡಿಯಾದಿಂದ ಭರ್ಜರಿ ಆಫರ್ ಬಂದಿದೆ. ವರ್ಷಕ್ಕೆ 52 ಲಕ್ಷ ರೂಪಾಯಿ ಸಂಬಳ. ತನ್ನ ಸಾಧನೆಯಿಂದಲೇ ಆಶ್ರಿತಾ ಯುವ ಪೀಳಿಗೆಯಲ್ಲಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಜುಲೈ 29ರಂದು ಆಶ್ರಿತಾ ಕೆಲಸಕ್ಕೆ ಹಾಜರಾಗಲಿದ್ದಾರೆ. (ಏಜೆನ್ಸೀಸ್)
ಎಲ್ಲರನ್ನು ಹೊರಗೆ ಕಳುಹಿಸಿ ಆ ದೃಶ್ಯವನ್ನು ಶೂಟ್ ಮಾಡುತ್ತೇವೆ! ನಟಿ ಅಂಜಲಿ ಓಪನ್ ಟಾಕ್
ಟಿ20 ವಿಶ್ವಕಪ್ನಲ್ಲಿ ಭಾರಿ ಹಗರಣ! ಮಹಾ ಮೋಸ ಬಯಲಿಗೆಳೆಯಲು ತನಿಖೆಗೆ ಆದೇಶಿಸಿದ ಐಸಿಸಿ