ರಾಜಕೀಯಕ್ಕೆ ದರ್ಶನ್​ ಎಂಟ್ರಿ ಖಚಿತ​? ಮತ್ತೆ ಸಿನಿಮಾದಲ್ಲಿ ನಟಿಸ್ತಾರಾ? ಸ್ಫೋಟಕ ಭವಿಷ್ಯ ನುಡಿದ ಖ್ಯಾತ ಗುರೂಜಿ | Actor Darshan

Actor Darshan
Published on

Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್​ಗೆ ಹೈಕೋರ್ಟ್​ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ನಿನ್ನೆಯಷ್ಟೇ (ಅ. 30) ಬಳ್ಳಾರಿ ಕೇಂದ್ರ ಕಾರಾಗೃಹದಿಂದ ದರ್ಶನ್​ ಹೊರಬಂದಿದ್ದು, ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದರ ನಡುವೆಯೇ ದರ್ಶನ್​ ಕುರಿತು ಅರ್ಜುನ್​ ಅವಧೂತ ಗುರೂಜಿ ಅವರು ಸ್ಫೋಟಕ ಭವಿಷ್ಯವನ್ನು ನುಡಿದಿದ್ದಾರೆ.

ದರ್ಶನ್​ಗೆ ಅ.20ರ ನಂತರ ಒಳ್ಳೆಯದಾಗಲಿದೆ ಎಂದು ಈ ಹಿಂದೆಯೇ ಅರ್ಜುನ್​ ಅವಧೂತ ಗುರೂಜಿ ಭವಿಷ್ಯ ನುಡಿದಿದ್ದರು. ಅದರಂತೆಯೇ ದರ್ಶನ್​ಗೆ ನಿನ್ನೆ ಮಧ್ಯಂತರ ಜಾಮೀನು ಸಿಕ್ಕಿದೆ. ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಯ ಜತೆ ಮಾತನಾಡಿದ ಗುರೂಜಿ, ಇದೆಲ್ಲ ವೆಂಕಟಾಚಲ ಅವಧೂತರ ಪ್ರೇರಣೆ ಎಂದರು. ಯಾವುದೇ ಒಂದು ಭವಿಷ್ಯವನ್ನು ಸುಮ್ಮನೇ ಕೊಡಲಾಗದು. ಪ್ರೇರಣೆಯಿಂದ ಮಾತ್ರ ಸಾಧ್ಯ. ಆ ಪ್ರೇರಣೆ ಪ್ರಕಾರವಾಗಿಯೇ ನಾನು ಅಂದು ಭವಿಷ್ಯ ನುಡಿದೆ. ಅ. 20ನೇ ತಾರೀಖು ಕಳೆದ ನಂತರ ದರ್ಶನ್​ಗೆ ಒಳ್ಳೆಯ ದಿನಗಳು ಶುರುವಾಗುತ್ತದೆ ಎಂದು ಹೇಳಿದ್ದೆ. ಅವರ ಹೈಕೋರ್ಟ್​ ವಿಚಾರಣೆ ಕೂಡ 20ನೇ ತಾರೀಖಿಗೆ ಬಿತ್ತು. ಇದಾದ ಬಳಿಕ ವಿಚಾರಣೆ 28ನೇ ತಾರೀಖಿಗೆ ಹೋಯಿತು ಮತ್ತು ಅಂತಿಮವಾಗಿ ಅ.30ಕ್ಕೆ ಮಧ್ಯಂತರ ಜಾಮೀನು ಸಿಕ್ಕಿತು. ಅವಧೂತರು ಏನು ಪ್ರೇರಣೆ ಕೊಟ್ಟಿದ್ದರೋ ಅದರ ಪ್ರಕಾರ ನಾನು ಭವಿಷ್ಯ ನುಡಿದಿದ್ದೆ. ಅದೇ ರೀತಿ ನಡೆದಿದೆ ಎಂದರು.

ಮಾತು ಮುಂದುವರಿಸಿದ ಅರ್ಜುನ್​ ಗುರೂಜಿ, 2025ಕ್ಕೆ ದರ್ಶನ್​ಗೆ ಒಳ್ಳೆಯ ದಿನಗಳು ಬರಲಿವೆ. ಸಿನಿಮಾಗಳಲ್ಲೂ ಅಭಿನಯಿಸುತ್ತಾರೆ. ಇಂದು ದರ್ಶನ್​ ಬಿಡುಗಡೆಯಾಗಿದ್ದಾರೆ ಅಂದರೆ ಅದಕ್ಕೆ ಕಾರಣ ಅವರ ಪತ್ನಿ ವಿಜಯಲಕ್ಷ್ಮೀ ಮತ್ತು ಅಭಿಮಾನಿಗಳ ಪ್ರಾರ್ಥನೆ ಕಾರಣ ಎಂದರು. ಅಲ್ಲದೇ, ಇದೇ ಸಂದರ್ಭದಲ್ಲಿ ಸ್ಫೋಟಕ ಭವಿಷ್ಯ ನುಡಿದ ಗುರೂಜಿ, ನಟ ದರ್ಶನ್​ ರಾಜಕೀಯಕ್ಕೂ ಬರುತ್ತಾರೆ ಎಂದರು. ದರ್ಶನ್​ ಅವರು ಯಾವುದೇ ಪಕ್ಷದ ಬಾಗಿಲನ್ನು ತಟ್ಟುವಂತಹ ಪರಿಸ್ಥಿತಿ ಬರುವುದಿಲ್ಲ, ರಾಜಕೀಯ ಪಕ್ಷಗಳೇ ದರ್ಶನ್​ ಬಳಿ ಹೋಗುತ್ತವೆ. ರಾಜಕೀಯದಲ್ಲಿ ದರ್ಶನ್​ಗೆ ಉತ್ತಮ ಭವಿಷ್ಯವಿದೆ. 2025ರ ನಂತರ ದರ್ಶನ್​ಗೆ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದರು. ಗುರೂಜಿ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಸುಪ್ರೀಂಕೋರ್ಟ್​ ಮೆಟ್ಟಿಲೇರಲು ತೀರ್ಮಾನ

ದರ್ಶನ್​ಗೆ ಮಧ್ಯಂತರ ಜಾಮೀನು ನೀಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ಸುಪ್ರೀಂಕೊರ್ಟ್​ ಮೆಟ್ಟಿಲೇರಲು ಪ್ರಕರಣದ ತನಿಖಾಧಿಕಾರಿಗಳು ನಿರ್ಧಾರ ಮಾಡಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ಬೆಂಗಳೂರು ಪೊಲೀಸರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹೈಕೋರ್ಟ್​ ಆದೇಶದ ಪೂರ್ಣ ಪ್ರತಿಗೆ ಬೆಂಗಳೂರು ಪೊಲೀಸರು ಕಾಯುತ್ತಿದ್ದಾರೆ. ದೀಪಾವಳಿ ರಜೆ ಹಿನ್ನೆಲೆಯಲ್ಲಿ ಆದೇಶದ ಪೂರ್ಣ ಪ್ರತಿ ಇನ್ನೂ ಸಿಕ್ಕಿಲ್ಲ. ಸೋಮವಾರ ಆದೇಶ ಪ್ರತಿ ಸಿಗುತ್ತಿದ್ದಂತೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿ, ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದು ಸುಪ್ರೀಂಕೋರ್ಟ್​ ಮೆಟ್ಟಿಲೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸುಪ್ರೀಂಕೋರ್ಟ್​ ಮೆಟ್ಟಿಲೇರಿದರೆ, ಬಿಡುಗಡೆಯಾದ ಸಂತೋಷದಲ್ಲಿರುವ ನಟ ದರ್ಶನ್​ಗೆ ಮತ್ತೊಂದು ತಲೆನೋವು ಕಾಡಲಿದೆ.

6 ವಾರಗಳ ಕಾಲ ಮಧ್ಯಂತರ ಜಾಮೀನು

ಅನಾರೋಗ್ಯದ ಆಧಾರದ ಮೇಲೆ ನಟ ದರ್ಶನ್​ ಅವರಿಗೆ ಹೈಕೋರ್ಟ್​ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. 131 ದಿನಗಳ ಬಳಿಕ ದರ್ಶನ್​ ಜೈಲಿನಿಂದ ಹೊರಬಂದಿದ್ದಾರೆ. ನಾನು ತೀವ್ರ ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಈ ಹಿನ್ನೆಲೆ ಮಧ್ಯಂತರ ಜಾಮೀನು ನೀಡಿ ಎಂದು ನಟ ದರ್ಶನ್ ಅರ್ಜಿ ಸಲ್ಲಿಸಿದ್ದರು. ಅ.29ರಂದು ನಟ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್​ ಅವರು ಮಂಡಿಸಿದ್ದರು. ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿಯವರ ಏಕಸದಸ್ಯ ಪೀಠ ನಿನ್ನೆ (ಅ.30) ತೀರ್ಪು ಪ್ರಕಟಿಸಿತು. ಈ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದು, ನಟ ದರ್ಶನ್​ ತಮಗಿರುವ ಆರೋಗ್ಯ ಸಮಸ್ಯೆಗೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಲಿದ್ದಾರೆ. ಅಲ್ಲದೆ, ಒಂದು ವಾರದಲ್ಲಿ ದರ್ಶನ್​ ಚಿಕಿತ್ಸೆಯ ವಿವರವನ್ನು ಸಹ ಕೋರ್ಟ್​ ಸಲ್ಲಿಸಬೇಕಿದೆ. ಇನ್ನು ದರ್ಶನ್​ ಪಾಸ್​ಪೋರ್ಟ್​ ಅನ್ನು ಕೂಡ ಕೋರ್ಟ್​ ವಶಕ್ಕೆ ನೀಡಬೇಕಿದೆ. ಪಾಸ್​ಪೋರ್ಟ್​ ವಶಕ್ಕೆ ನೀಡಲು ಸರ್ಕಾರ ಪರ ವಕೀಲ ಪ್ರಸನ್ನ ಕುಮಾರ್​ ಆಗ್ರಹಿಸಿದ್ದರು. ಇನ್ನು ದರ್ಶನ್​ ಬಯಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

ದರ್ಶನ್​ ಪರ ಸಿ.ವಿ ನಾಗೇಶ್​ ಮಂಡಿಸಿದ ವಾದ

ಅರ್ಜಿದಾರರ ದೇಹದಲ್ಲಿ ಸಮರ್ಪಕವಾಗಿ ರಕ್ತಪರಿಚಲನೆ ಆಗುತ್ತಿಲ್ಲ, ಪಾದಗಳಲ್ಲಿ ನಂಬ್ ನೆಸ್ (ಮರಗಟ್ಟುವಿಕೆ) ಇದೆ. ಡಿಸ್ಕ್ ಸಮಸ್ಯೆ ಇದೆ. ಕಾಲಿನಲ್ಲಿ ನರದ ತೊಂದರೆ ಉಂಟಾಗಿದ್ದು, ಈಗಾಗಲೇ ಸ್ವಲ್ಪ ಮಟ್ಟಿಗೆ ಪಾದ ಸ್ಪರ್ಶ ಕಳೆದುಕೊಂಡಿದ್ದಾರೆ. ಹೀಗಿರುವಾಗ ಸೂಕ್ತ ಚಿಕಿತ್ಸೆ ‌ನೀಡುವಲ್ಲಿ ವಿಫಲವಾದರೆ, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ಎಡಮಾಡಿಕೊಡಬಹುದು. ವೈದ್ಯಕೀಯ ವರದಿಯಲ್ಲಿಯೂ ದರ್ಶನ್​ ಅವರು ಪಾರ್ಶ್ವವಾಯು ತುತ್ತಾಗುವ ಸಾಧ್ಯತೆ ಅಧಿಕವಾಗಿದ್ದು, ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು ಎಂದಿದೆ. ಇವೆಲ್ಲವನ್ನೂ ಗಮನಿಸಿ ಮಧ್ಯಂತರ ಜಾಮೀ‌ನು‌ ನೀಡಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಪರ ವಕೀಲ ಪ್ರಸನ್ನ ಕುಮಾರ್ ವಾದ

ವೈದ್ಯಕೀಯ ವರದಿಯಲ್ಲಿ ಪಾರ್ಶ್ವವಾಯು ತುತ್ತಾಗುತ್ತಾರೆ ಎಂದಿಲ್ಲ, ತುತ್ತಾಗಬಹುದು ಎಂದು ವೈದ್ಯರು ಅಂದಾಜಿಸಿದ್ದಾರಷ್ಟೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ ನಿಮ್ಮ ಮಾತಿನ ಅರ್ಥವೇನು? ಅರ್ಜಿದಾರರು ಅನಾರೋಗ್ಯದ ಅಂತಿಮ‌ ಹಂತಕ್ಕೆ ತಲುಪುವರೆಗೆ ಕಾಯಬೇಕು ಎನ್ನುವುದೇ ಎಂದು ಪ್ರಶ್ನಿಸಿತು. ತದನಂತರ ಸರ್ಕಾರಿ ಪರ ವಕೀಲರನ್ನು ಉದ್ದೇಶಿಸಿ ನೋಡಿ ಆರೋಗ್ಯ ಎಂಬುವುದು ಮಾನವನ ಮೂಲಭೂತ ಹಕ್ಕು‌‌. ವ್ಯಕ್ತಿ ಆರೋಪಿಯಾಗಿರಲಿ, ಅಪರಾಧಿಯಾಗಿರಲಿ ಆರೋಗ್ಯ ಎಂಬುದು ಮುಖ್ಯವಾಗಿರುತ್ತದೆ. ಈ ರೀತಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ, ಇದನ್ನು ಸುಪ್ರೀಂಕೋರ್ಟ್ ಸಹ ಹಲವು ವೇಳೆ‌ ಪುನುರುಚ್ಚರಿಸಿದೆ ಎಂದಿತು.

ವಾದ-‌ಪತ್ರಿವಾದ ಆಲಿಸಿದ ನ್ಯಾಯಪೀಠ ಅರ್ಜಿಯ ತೀರ್ಪನ್ನು ಇಂದಿಗೆ ಪ್ರಕಟಿಸುವುದಾಗಿ ಹೇಳಿತ್ತು. ನಿನ್ನೆ ಬೆಳಗ್ಗೆ ತೀರ್ಪು ಪ್ರಕಟಿಸಿದ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net