

ಬೆಳ್ತಂಗಡಿ: ಶತಮಾನಗಳಿಂದ ಸಂವಿಧಾನಬದ್ಧ ಸೌಲಭ್ಯಗಳಿಂದ ವಂಚಿತರಾಗಿರುವ ಆದಿವಾಸಿ ಸಮುದಾಯಗಳಿಗೆ ರಸ್ತೆ, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೆಳಗಾವಿಯಲ್ಲಿ ಮನವಿ ಸಲ್ಲಿಸಿದರು.
ಬೆಳ್ತಂಗಡಿ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಶತಮಾನಗಳಿಂದ ರಸ್ತೆ, ವಿದ್ಯುತ್ ಇಲ್ಲದೆ ಆದಿವಾಸಿಗಳು ವಾಸಿಸುತ್ತಿದ್ದಾರೆ. ಇಂದಿಗೂ ಚಿಮಿಣಿ ದೀಪದಲ್ಲಿ ಜೀವಿಸುಂತಾಗಿದೆ. ರಸ್ತೆ ಇಲ್ಲದೆ ಹತ್ತಾರು ಕಿ.ಮೀ.ನಡೆದುಕೊಂಡೇ ನದಿ, ಹಳ್ಳ, ತೊರೆಗಳನ್ನು ದಾಟಿ ಹೋಗಬೇಕಾಗಿದೆ ಎಂದು ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಇತರ ಆದಿವಾಸಿ ಕಾಲನಿಗಳೂ ಮೂಲಸೌಕರ್ಯ ವಂಚಿತವಾಗಿವೆ. ಇದಕ್ಕಾಗಿ ವಿಶೇಷ ಅನುದಾನ ಬೆಳ್ತಂಗಡಿ ತಾಲೂಕಿಗೆ ಬಿಡುಗಡೆ ಮಾಡಲು ವಿನಂತಿಸಿದರು. ಈಗಾಗಲೇ ರಾಜ್ಯದ ಆದಿವಾಸಿ ಸಮುದಾಯದ ಸವಾರ್ಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿರುವ ಬಗ್ಗೆ ಅಭಿನಂದನೆ ಸಲ್ಲಿಸಿದರು.