

ಬಂಟ್ವಾಳ: ಪುದು ಗ್ರಾಮದ ಸುಜೀರು ದೈವಸ್ಥಾನದ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ ಹತ್ತನೇ ಮೈಲು ಸಂಪರ್ಕಿಸುವ ಕಾಲುದಾರಿ ಮುಚ್ಚಿ ಹೋಗಿದ್ದು, ಅದನ್ನು ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಬುಧವಾರ ಪುದು ಗ್ರಾ.ಪಂ. ಪಿಡಿಒಗೆ ಮನವಿ ಸಲ್ಲಿಸಿದರು.
ಈ ಭಾಗದ ಜನರಿಗೆ ಸಂಪರ್ಕ ಕೊಂಡಿಯಾಗಿದ್ದ ಕಾಲುದಾರಿಯಲ್ಲಿ ಕೆಸರು ಮಣ್ಣು ತುಂಬಿ, ಹುಲ್ಲು ಬೆಳೆದು ನಡೆದಾಡಲು ಸಾಧ್ಯವಿಲ್ಲದಂತಾಗಿದೆ. ಈ ಪ್ರದೇಶದಲ್ಲಿ ಸುಮಾರು 300 ಮನೆಗಳಿದ್ದು, ನಗರಕ್ಕೆ ಹೋಗಲು ಹಾಗೂ ಮಕ್ಕಳು ಶಾಲೆಗೆ ಹೋಗಲು ಈ ಕಾಲುದಾರಿಯನ್ನೇ ಅವಲಂಬಿಸಿದ್ದಾರೆ. ಕಳೆದ 7 ವರ್ಷದಿಂದ ಈ ಕಾಲುದಾರಿಯ ಪಕ್ಕದಲ್ಲಿ ಉದ್ಯಮಿಯೊಬ್ಬರು ಖಾಸಗಿ ಜಾಗ ಖರೀದಿಸಿ ಮಣ್ಣು ತುಂಬಿದ್ದು, ಮಳೆಗೆ ಮಣ್ಣೆಲ್ಲಾ ಈ ಕಾಲುದಾರಿಗೆ ಬಿದ್ದು ಮುಚ್ಚಿ ಹೋಗಿದೆ. ಇದರಿಂದಾಗಿ ಕಾಲುದಾರಿಯ ಪಕ್ಕದ ಖಾಸಗಿ ರಸ್ತೆಯಲ್ಲಿ ನಡೆದಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇದೀಗ ಆ ರಸ್ತೆಯೂ ಕೆಸರು ಹಾಗೂ ಕೊಳಚೆ ನೀರು ತುಂಬಿಕೊಂಡು ಅಸ್ತವ್ಯಸ್ತವಾಗಿದೆ. ಈ ಹಿಂದೆ ಪಂಚಾಯತಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿದಾಗ ಆ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದರೂ ಬಳಿಕ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಜಾಗ ಖರೀದಿಸಿ ಮಣ್ಣು ಹಾಕಿರುವ ಉದ್ಯಮಿಗೆ ಪಂಚಾಯಿತಿ ನೋಟಿಸು ನೀಡಿದರೂ ಕ್ಯಾರೇ ಎಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬುಧವಾರ ಮನವಿ ಸಲ್ಲಿಸಿದ ಬಳಿಕ ಪಿಡಿಒ ಹರೀಶ್ ಕೆ.ಎ ಸ್ಥಳ ಪರಿಶೀಲನೆ ನಡೆಸಿದರು. ಕಾಲುದಾರಿ ನಿರ್ಮಾಣಕ್ಕೆ ಗ್ರಾಮಸ್ಥರು ಒಂದು ವಾರದ ಗಡುವು ನೀಡಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿ.ಪಂ. ಕಿರಿಯ ಇಂಜಿನಿಯರ್ ರವಿ ಅವರೊಂದಿಗೆ ಚರ್ಚಿಸಿ ನಾಳೆಯಿಂದಲೇ ಕೆಲಸ ಆರಂಭಿಸುವ ಭರವಸೆ ನೀಡಿದರು.
ಪುದು ಪಂಚಾಯತಿ ಸದಸ್ಯರಾದ ವಿಷು ಕುಮಾರ್, ಮನೋಜ್ ಆಚಾರ್ಯ ನಾಣ್ಯ, ಪದ್ಮನಾಭ ಶೆಟ್ಟಿ ಪುಂಚಮೆ, ಮಾಜಿ ಸದಸ್ಯರಾದ ಗಣೇಶ್ ದತ್ತನಗರ, ಜಾನಕಿ ಸುಜೀರು, ಅಶ್ರಫ್ ಫರಂಗಿಪೇಟೆ ಅಶ್ರಫ್ ಮಾರಿಪಳ್ಳ, ಲತೀಫ್ ಸುಜೀರು, ಪ್ರತಾಪ್ ಆಳ್ವ ಪ್ರವೀಣ್ ಶೆಟ್ಟಿ, ಮುಖೇಶ್, ಪ್ರವೀಣ್ ಪಾಡಿ, ಹರೀಶ್, ಜಗದೀಶ್, ಪ್ರದೀಪ್, ನಿಖಿಲ್ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.