ಲೈನ್‌ಮನ್‌ಗಳಿಂದ ಹಣಕ್ಕೆ ಬೇಡಿಕೆ : ಬಿಳಿನೆಲೆ ಗ್ರಾಮಸಭೆಯಲ್ಲಿ ಆರೋಪ : ಶಿಕ್ಷಣ ಇಲಾಖೆಗೆ ತರಾಟೆ

bilinele
ಬಿಳಿನೆಲೆ ಗ್ರಾಮ ಸಭೆ ನಡೆಯಿತು. ಅಧ್ಯಕ್ಷೆ ಶಾರದ ದಿನೇಶ್, ಜಿ.ಪಂ.ಇಂಜಿನಿಯರ್ ಭರತ್, ಗ್ರಾ.ಪಂ. ಸದಸ್ಯರಾದ ಸತೀಶ್ ಕಳಿಗೆ, ಬೇಬಿ ಉಮೇಶ್, ಚಂದ್ರಾವತಿ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಕಡಬ

ಬಿಳಿನೆಲೆ ಗ್ರಾಮದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡರೂ ಗ್ರಾಮಸ್ಥರು ಯಾರೂ ಕೂಡ ಲೈನ್‌ಮನ್‌ಗಳಿಗೆ ಕರೆ ಮಾಡುವುದಿಲ್ಲ. ಯಾಕೆಂದರೆ ದುರಸ್ತಿ ಮಾಡಲು ಬರುವ ಲೈನ್‌ಮನ್‌ಗೆ ದುಡ್ಡು ಕೊಡಬೇಕಾದ ಪರಿಸ್ಥಿತಿಯಿದೆ ಎಂದು ಬಿಳಿನೆಲೆ ಗ್ರಾಮಸಭೆಯಲ್ಲಿ ಆರೋಪ ವ್ಯಕ್ತವಾಗಿದೆ.

ಗ್ರಾ.ಪಂ ಅಧ್ಯಕ್ಷೆ ಶಾರದಾ ದಿನೇಶ್ ಅಧ್ಯಕ್ಷತೆಯಲ್ಲಿ ಬಿಳಿನೆಲೆ ಗ್ರಾ.ಪಂ ಸಭಾಂಗಣದಲ್ಲಿ ಸಭೆ ನಡೆಯಿತು. ಜಿ.ಪಂ.ಇಂಜಿನಿಯರ್ ಭರತ್ ನೋಡೆಲ್ ಅಧಿಕಾರಿಯಾಗಿದ್ದರು. ಮೆಸ್ಕಾಂ ಇಲಾಖೆಯ ಮಾಹಿತಿಯನ್ನು ಜೂನಿಯರ್ ಇಂಜಿನಿಯರ್ ವಸಂತ ನೀಡುತ್ತಿದ್ದ ವೇಳೆ ಸತೀಶ್ ಎರ್ಕ ಮತ್ತು ರಮೇಶ್ ವಾಲ್ತಾಜೆ ಮಾತನಾಡಿ, ಲೈನ್‌ಮನ್‌ಗಳು ಕೆಟ್ಟುಹೋದ ಸಂಪರ್ಕ ಸರಿಪಡಿಸಲು ಲಂಚಕ್ಕೆ ಬೇಡಿಕೆಯಿಡುತ್ತಾರೆ ಎಂದು ಆರೋಪಿಸಿದರು. ಈ ವೇಳೆ ಗ್ರಾ.ಪಂ ಅಧ್ಯಕ್ಷೆ ಶಾರದಾ ಮಧ್ಯಪ್ರವೇಶಿಸಿ, ಈ ರೀತಿಯ ದೂರುಗಳು ಮೂರು ವಾರ್ಡ್‌ಗಳಿಂದ ಕೇಳಿ ಬರುತ್ತಿವೆ. ಈಗ ಗ್ರಾಮಸ್ಥರು ವಿದ್ಯುತ್ ಸಮಸ್ಯೆ ಬಂದಾಗ ನನಗೆ ಕರೆ ಮಾಡುತ್ತಾರೆ, ನಾವು ಏನು ಮಾಡಬೇಕು? ಈ ರೀತಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರೂ ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಈ ವೇಳೆ ಬಹುತೇಕ ಗ್ರಾಮಸ್ಥರು ಲೈನ್‌ಮನ್‌ಗಳ ವಿರುದ್ಧ ದೂರು ಹೇಳಿದರು.

ಇದಕ್ಕೆ ಉತ್ತರಿಸಿದ ಜೆ.ಇ ಸಿಬ್ಬಂದಿ ಕೊರತೆ ಇದೆ, ದುಡ್ಡು ಕೇಳುವ ಬಗ್ಗೆ ಅಲ್ಲಲ್ಲಿ ದೂರು ಕೇಳಿ ಬರುತ್ತಿತ್ತು, ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಗ್ರಾ.ಪಂ. ಸದಸ್ಯರಾದ ಸತೀಶ್ ಕಳಿಗೆ, ಬೇಬಿ ಉಮೇಶ್, ಚಂದ್ರಾವತಿ, ಮುರಳೀಧರ ಕೈಕಂಬ, ಶಾರದಾ ಬಿಳಿನೆಲೆ, ಭವ್ಯಶ್ರೀ ಕೈಕಂಬ ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಮಾಹಿತಿ ನೀಡಿದರು.

ಶಾಲೆ ಮುಚ್ಚುವ ಹಂತಕ್ಕೆ

ಬಿಳಿನೆಲೆ ಗ್ರಾಮದ ಚೇರು ಶಾಲೆ ಮುಚ್ಚುವ ಹಂತಕ್ಕೆ ತಲುಪಲು ಶಿಕ್ಷಣ ಇಲಾಖೆಯೇ ಕಾರಣ ಎಂದು ವಿನೀಶ್ ಬಿಳಿನೆಲೆ ಆರೋಪಿಸಿದರು. ಗ್ರಾಮಸಭೆ ಪ್ರಾರಂಭವಾದ ಕೂಡಲೇ ಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಬರಬೇಕು ಆಗ್ರಹಿಸಿದರು. ಆದರೆ ಸಭೆಗೆ ಕ್ಲಸ್ಟರ್ ಸಿಆರ್‌ಪಿ ಕುಮಾರ್ ಬಂದಿದ್ದರು, ಕ್ಷೇತ್ರ ಶಿಕ್ಷಣಾಧಿಕಾರಿ ಬಾರದೆ ಸಭೆಯಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಬಳಿಕ ಗ್ರಾ.ಪಂ.ಅಧ್ಯಕ್ಷರು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ದೂರವಾಣಿ ಕರೆ ಮಾಡಿ ಬರುವಂತೆ ಹೇಳಿದರು. ಸಭೆಯಲ್ಲಿ ಇಲಾಖಾ ಮಾಹಿತಿ ಮುಗಿದ ಬಳಿಕ ಆಗಮಿಸಿದ ಶಿಕ್ಷಣಾಧಿಕಾರಿ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ವಿನೀಶ್ ಚೇರು ಶಾಲೆ ಮುಚ್ಚುವ ಪರಿಸ್ಥಿತಿಗೆ ಬರಲು ಶಿಕ್ಷಣಾ ಇಲಾಖೆಯವರೇ ಕಾರಣ ಎಂದು ಆರೋಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ನಿಮ್ಮ ಕಾಳಜಿ ಎಲ್ಲ ಅರ್ಥ ಆಗ್ತದೆ, ಆದರೆ ಉದ್ವೇಗಕ್ಕೆ ಒಳಗಾಗಿ ಮಾತನಾಡಿದರೆ ಪ್ರಯೋಜನವಿಲ್ಲ. ವಿಷಯವನ್ನು ಮಂಡಿಸಿ ನಿರ್ಣಯ ಮಾಡಿ ಕಳಿಸಬೇಕು ಎಂದು ಹೇಳಿದರು. ಕೊನೆಗೆ ಸಭೆ ಮುಗಿದ ಬಳಿಕ ಪ್ರತ್ಯೇಕವಾಗಿ ಮಾತನಾಡಿ ಚೇರು ಶಾಲೆಯ ಸಮಸ್ಯೆ ಪರಿಹಾರ ಮಾಡುವುದಾಗಿ ಎಂದು ಬಿಇಒ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net