

ಪುತ್ತೂರು ಗ್ರಾಮಾಂತರ: ಸಾರ್ವಜನಿಕ ಹಿತದೃಷ್ಟಿಯಿಂದ ಚೆಲ್ಯಡ್ಕದ ಮುಳುಗು ಸೇತುವೆಯಲ್ಲಿ ಕೂಡಲೇ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಅಜ್ಜಿಕಲ್ಲು ಸಾರ್ವಜನಿಕ ಹಿತರಕ್ಷಣಾ ಸಮಿತಿಯ ವತಿಯಿಂದ ಬುಧವಾರ ಪುತ್ತೂರು ಉಪವಿಭಾಗಾಧಿಕಾರಿ ಕಚೇರಿ ಮೂಲಕ ದ.ಕ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪುತ್ತೂರು ತಾಲೂಕಿನ ಆರ್ಯಾಪು, ಒಳಮೊಗ್ರು ಮತ್ತು ಬೆಟ್ಟಂಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಹಾದು ಹೋಗುವ ದೇವಸ್ಯ-ಪಾಣಾಜೆ ರಸ್ತೆಯ ಬಸ್ ಸಂಚಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಆ ಭಾಗದ ಗ್ರಾಮಸ್ಥರಿಗೆ ತೀರಾ ಸಮಸ್ಯೆಯಾಗುತ್ತಿದೆ.
ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ, ಅಜ್ಜಿಕಲ್ಲು ವೀರಕೇಸರಿ ಸ್ಪೋರ್ಟ್ಸ್ ಆಂಡ್ ಗೇಮ್ಸ್ ಕ್ಲಬ್ ಅಧ್ಯಕ್ಷ ಸಂದೀಪ್ ರೈ ಚಿಲ್ಮೆತ್ತಾರು, ಪ್ರಧಾನ ಕಾರ್ಯದರ್ಶಿ ಸೂರಜ್ ಶೆಟ್ಟಿ ನಾಯಿಲ, ಸ್ತ್ರೀ ಶಕ್ತಿ ಜಠಾಧಾರಿ ಭಜನಾ ಮಂದಿರದ ಅಧ್ಯಕ್ಷ ಅಜಿತ್ ಹೊಸಮನೆ, ಅಜ್ಜಿಕಲ್ಲು ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಪ್ರಮುಖರಾದ ಸಂದೀಪ್ ಹೊಸಮನೆ, ಧನರಾಜ್ ಕಾಫಿಕಾಡು ನಿಯೋಗದಲ್ಲಿ ತೆರಳಿ, 80ಕ್ಕೂ ಅಧಿಕ ಮಂದಿ ಗ್ರಾಮಸ್ಥರ ಸಹಿಯಿರುವ ಮನವಿ ಸಲ್ಲಿಸಿದ್ದಾರೆ. ಡಿ.5ರೊಳಗೆ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಸಾರ್ವಜನಿಕರೊಂದಿಗೆ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಒಳಮೊಗ್ರು ಗ್ರಾ.ಪಂ. ಸದಸ್ಯ ಮಹೇಶ್ ಕೇರಿ ತಿಳಿಸಿದ್ದಾರೆ.