ಖ್ಯಾತ ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಅಧಿಕಾರಿಗಳು ಗರಂ

Anushree
Published on

ಮಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಹಾಜರಾಗುವುದಾಗಿ ಹೇಳಿ, ಗೈರಾಗಿರುವ ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಅಧಿಕಾರಿಗಳು ಗರಂ ಆಗಿದ್ದಾರೆ.

ನನಗೂ ಮತ್ತು ಡ್ರಗ್ಸ್​ ಪಾರ್ಟಿಗಳಿಗೂ ಸಂಬಂಧವಿಲ್ಲ ಎಂದು ಹೇಳಿ ಇದೀಗ ವಿಚಾರಣೆ ಹಾಜರಾಗದಿರುವುದು ಸಿಸಿಬಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಇಂದು ತಪ್ಪದೇ ವಿಚಾರಣೆ ಹಾಜರಾಗುವಂತೆ ಕಡೆಯ ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.

ಅನುಶ್ರೀ ಈಗಾಗಲೇ ಮಂಗಳೂರಿಗೆ ಆಗಮಿಸಿದ್ದು ಶನಿವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ನಗರ ಸಿಸಿಬಿ ಮತ್ತು ನಾರ್ಕೆಟಿಕ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಎಂಡಿಎಂಎ ಸೇವನೆ ಹಾಗೂ ಮಾರಾಟ ಆರೋಪದಲ್ಲಿ ಡಾನ್ಸರ್ ಕಿಶೋರ್ ಅಮನ್ ಶೆಟ್ಟಿ (30) ಹಾಗೂ ಅಕೀಲ್ ನೌಶೀಲ್(28) ಎಂಬುವರನ್ನು ಸೆ.19ರಂದು ಬಂಧಿಸಿದ್ದರು.

ವಿಚಾರಣೆ ವೇಳೆ ಅನುಶ್ರೀ ಜತೆ ನಂಟು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಅನುಶ್ರೀಗೆ ಗುರುವಾರ ನೋಟಿಸ್ ನೀಡಲಾಗಿತ್ತು. ಅನುಶ್ರೀ ಶುಕ್ರವಾರ ಮಂಗಳೂರಿಗೆ ಬಂದು ವಿಚಾರಣೆಗೆ ಹಾಜರಾಗುವುದಾಗಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು.

ತನಿಖೆಗೆ ಸಹಕಾರ: ಪ್ರಸ್ತುತ ಚರ್ಚೆಯಾಗುತ್ತಿರುವ ಪ್ರಕರಣದಲ್ಲಿ ತನ್ನ ಪಾತ್ರವೇನೂ ಇಲ್ಲ. ವಿಚಾರಣೆಗೆ ಕರೆದ ಕೂಡಲೇ ಅಪರಾಧಿಯಾಗುವುದಿಲ್ಲ. ಕೆಲವೊಂದು ಮಾಧ್ಯಮಗಳಲ್ಲಿ ಈ ರೀತಿಯಲ್ಲಿ ಬಿಂಬಿಸಲ್ಪಟ್ಟಿರುವುದು ತನಗೆ ಹಾಗೂ ಕುಟುಂಬಕ್ಕೆ ನೋವುಂಟಾಗಿದೆ. ಪೊಲೀಸರ ತನಿಖೆಗೆ ಪೂರ್ಣ ಸಹಕಾರ ನೀಡುತ್ತೇನೆ ಎಂದು ಅನುಶ್ರೀ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಇಬ್ಬರ ಬಂಧನ

ಪೊಲೀಸ್ ಕಸ್ಟಡಿಯಲ್ಲಿರುವ ಡಾನ್ಸರ್ ಕಿಶೋರ್ ಅಮನ್ ಹಾಗೂ ಅಕೀಲ್ ನೌಶೀಲ್​ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅ.9ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ಅವರನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಕೋರ್ಟ್​ಗೆ ಹಾಜರುಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net