ಉದ್ಯೋಗಕ್ಕಾಗಿ ಫೇಸ್​ಬುಕ್​ ಪೋಸ್ಟ್ ಹಾಕಿದ್ದ ಯುವತಿ ಮೇಲೆ ಗ್ಯಾಂಗ್​ರೇಪ್: ನಾಲ್ವರ ಬಂಧನ

Rape
Published on

ಬೆಂಗಳೂರು: ಉದ್ಯೋಗವಿದ್ದರೆ ತಿಳಿಸಿ ಎಂದು ಫೇಸ್​ಬುಕ್​ನಲ್ಲಿ ಫೋನ್ ನಂಬರ್ ಹಾಕಿದ್ದ ಯುವತಿಗೆ ಕೆಲಸ ಕೊಡುವುದಾಗಿ ಕರೆದು ಸಾಮೂಹಿಕ ಅತ್ಯಾಚಾರ ಎಸಗಿದ್ದ ನಾಲ್ವರನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ 24 ವರ್ಷದ ಯುವತಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಕೃತ್ಯ ಎಸಗಿದ ಆರೋಪಿಗಳಾದ ಉತ್ತರಪ್ರದೇಶ ಮೂಲದ ರಾಜ (38), ಬಲರಾಮ್ (28), ಸೆಬಾಸ್ಟಿನ್ (24) ಮತ್ತು ಜಿತೇಂದ್ರ (26) ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ನಗರದಲ್ಲಿ ಹಲವು ತಿಂಗಳಿಂದ ಕೆಲಸ ಮಾಡಿಕೊಂಡಿದ್ದಳು. ಲಾಕ್​ಡೌನ್ ವೇಳೆ ಕೆಲಸ ಹೋಗಿತ್ತು. ಜೀವನೋಪಾಯಕ್ಕೆ ಸಂಕಷ್ಟ ಎದುರಾಗಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸಿ ಎಲ್ಲಿಯೂ ಸಿಗದ ಹಿನ್ನೆಲೆಯಲ್ಲಿ ತನ್ನ ಫೇಸ್​ಬುಕ್ ಖಾತೆಯಲ್ಲೇ ‘ಕೆಲಸ ಇದ್ದರೆ ತಿಳಿಸುವಂತೆ’ ಬರೆದುಕೊಂಡು, ಫೋನ್ ನಂಬರ್ ಸಹಿತ ಪೋಸ್ಟ್ ಹಾಕಿದ್ದಳು. ಅದನ್ನು ಗಮನಿಸಿದ್ದ ರಾಜ್, ಸೆ.14ರಂದು ಯುವತಿಗೆ ಕರೆ ಮಾಡಿ ಕೆಲಸ ಇದೆ ಭೇಟಿಯಾಗುವಂತೆ ಸೂಚಿಸಿ ವಿಳಾಸ ಕೊಟ್ಟಿದ್ದ. ಆತನ ಮಾತನ್ನು ನಂಬಿದ್ದ ಯುವತಿ, ಗುಣಿ ಅಗ್ರಹಾರದಲ್ಲಿರುವ ಖಾಸಗಿ ಶಾಲೆಯ ಸಮೀಪ ಹೋಗಿದ್ದಳು. ಅಲ್ಲಿಗೆ ಬಂದಿದ್ದ ರಾಜ್, ಆಕೆಯನ್ನು ಶೆಡ್​ಗೆ ಕರೆದೊಯ್ದಿದ್ದ. ಅದೇ ವೇಳೆ ಆತನ ಸ್ನೇಹಿತರಾದ ಬಲರಾಮ್ ಸೆಬಾಸ್ಟಿನ್, ಜಿತೇಂದ್ರ ಅಲ್ಲಿಗೆ ಬಂದು ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ಕೃತ್ಯವನ್ನು ಮೊಬೈಲ್​ನಲ್ಲಿ ಚಿತ್ರಿಸಿಕೊಂಡು, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಫೇಸ್​ಬುಕ್​ನಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಆಕೆಯನ್ನು ಯಲಹಂಕದಲ್ಲಿ ತಂದು ಬಿಟ್ಟು ಹೋಗಿದ್ದರು. ಅಸ್ವಸ್ಥಗೊಂಡಿದ್ದ ಯುವತಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಳು.

ಬಳಿಕ ‘ನಮ್ಮ 100’ಗೆ ಕರೆ ಮಾಡಿ, ದೂರು ಮುಟ್ಟಿಸಿದ್ದಳು. ಸ್ಥಳಕ್ಕೆ ಧಾವಿಸಿದ್ದ ಹೊಯ್ಸಳ ಪೊಲೀಸರು, ಯುವತಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆ ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ

ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಉತ್ತರ ಭಾರತ ಮೂಲದವರಾದ ಆರೋಪಿಗಳು ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net