ಜುಲಾನ್​ ಗೋಸ್ವಾಮಿ ಬಯೋಪಿಕ್​ ಮುಗಿಸಿದ ಅನುಷ್ಕಾ …

Chakda Express 1
Published on

ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿ ಮತ್ತು ಮಾಜಿ ಕ್ಯಾಪ್ಟನ್​ ಜುಲಾನ್​ ಗೋಸ್ವಾಮಿ ಅವರ ಬಯೋಪಿಕ್​ನಲ್ಲಿ ಅನುಷ್ಕಾ ಶರ್ಮ ನಟಿಸಲಿದ್ದಾರೆ ಎಂಬ ಸುದ್ದಿ ಕಳೆದ ವರ್ಷ ಕೇಳಿ ಬಂದಿತ್ತು. ಈಗ ಆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಈ ಸಂದರ್ಭದಲ್ಲಿ ಜುಲಾನ್ ಗೋಸ್ವಾಮಿ ಸಹ ಹಾಜರಿದ್ದರು.

ಜುಲಾನ್​ ಗೋಸ್ವಾಮಿ ಬಗ್ಗೆ ಚಿತ್ರ ಆಗಲಿದೆ ಎಂಬ ಸುದ್ದಿಗೆ ಕೆಲವು ವರ್ಷಗಳೇ ಆಗಿವೆ. ಆದರೆ, ಅನುಷ್ಕಾ ಶರ್ಮ ಮಗುವಿನ ಆರೈಕೆಯಲ್ಲಿ ಇದ್ದ ಕಾರಣ, ಚಿತ್ರ ಸೆಟ್ಟೇರುವುದು ತಡವಾಯಿತು. ಕೊನೆಗೂ ಕಳೆದ ವರ್ಷ ಕೊನೆಯಲ್ಲಿ ಅನುಷ್ಕಾ ಬ್ಯಾಟ್​ ಹಿಡಿದು, ಅಭ್ಯಾಸ ಪ್ರಾರಂಭಿಸಿದರು. ಈ ವರ್ಷದ ಆರಂಭದಲ್ಲಿ 'ಚಕ್ಡಾ ಎಕ್ಸ್​ಪ್ರೆಸ್​' ಕೊನೆಗೂ ಪ್ರಾರಂಭವಾಯಿತು.

ಆರು ನಗರಗಳಲ್ಲಿ, ಸುಮಾರು ಏಳು ಹಂತಗಳಲ್ಲಿ ಈ ಚಿತ್ರಕ್ಕೆ ಒಟ್ಟು 65 ದಿನಗಳ ಚಿತ್ರೀಕರಣವಾಗಿದ್ದು, ಇದೀಗ ಮುಕ್ತಾಯವಾಗಿದೆ. ಇತ್ತೀಚೆಗೆ ಚಿತ್ರತಂಡ ಕೇಕ್​ ಕತ್ತರಿಸಿ ಸಂಭ್ರಮಿಸಿದೆ. ಈ ಸಂದರ್ಭದಲ್ಲಿ ಜುಲಾನ್​ ಗೋಸ್ವಾಮಿ ಸಹ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಅನುಷ್ಕಾ ಶರ್ಮಾ ನಟಿಸಿದ ಕೊನೇ ಸಿನಿಮಾ 2018ರಲ್ಲಿ ಬಂದ 'ಜೀರೋ'. ಅದಾದ ಬಳಿಕ ನಿರ್ಮಾಣದಲ್ಲಿ ತೊಡಗಿಸಿಕೊಂಡರಾದರೂ, ನಟನೆಗೆ ಮರಳಲಿಲ್ಲ. ಅಷ್ಟರಲ್ಲಿಯೇ ಮಗಳು ವಮಿಕಾಳ ಆಗಮನವೂ ಆಯಿತು. ಇನ್ನೇನು ಸಿನಿಮಾರಂಗ ಕೈಬಿಟ್ಟರು ಎನ್ನುವಷ್ಟರಲ್ಲಿಯೇ ಅನುಷ್ಕಾ, 'ಚಕ್ಡಾ ಎಕ್ಸ್​ಪ್ರೆಸ್​' ಚಿತ್ರದ ಮೂಲಕ 2023ರಲ್ಲಿ ವಾಪಸ್ಸಾಗಲಿದ್ದಾರೆ. ಈ ಚಿತ್ರದ ಟೀಸರ್​ ಈಗಾಗಲೇ ಬಿಡುಗಡೆ ಆಗಿದ್ದು, ಚಿತ್ರವು ನೇರವಾಗಿ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್​ ಆಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net