

ನವದೆಹಲಿ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಿನ್ನೆ ತಮ್ಮ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಶಾರುಖ್ ಖಾನ್, ತಬ್ಬು, ಸಂಗೀತಾ ಬಿಜ್ಲಾನಿ ಮತ್ತು ಕಾರ್ತಿಕ್ ಆರ್ಯನ್ ಸೇರಿದಂತೆ ಹಲವರು ದಿಗ್ಗಜ ನಟರು ಭಾಗವಹಿಸಿದ್ದರು. ಪಾರ್ಟಿಯನ್ನು ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಮತ್ತು ಅವರ ಪತಿ ಆಯುಷ್ ಶರ್ಮಾ ಆಯೋಜಿಸಿದ್ದರು.
ಸಲ್ಮಾನ್ ಖಾನ್ಗೆ ಶುಭ ಕೋರಲು ಅವರ ನಿವಾಸದ ಹೊರಗೆ ಸಾವಿರಾರು ಅಭಿಮಾನಿಗಳು ಸೇರಿದ್ದರು. ಸಲ್ಮಾನ್ಗೆ ಅನೇಕ ಹುಚ್ಚು ಅಭಿಮಾನಿಗಳಿದ್ದಾರೆ ಆದರೆ ಅವರ ಮಹಿಳಾ ಅಭಿಮಾನಿಯೊಬ್ಬರು ನಟನ ಟ್ಯಾಟೂವನ್ನು ಎದೆಯ ಮೇಲೆ ಹಾಕಿಸಿಕೊಂಡು ಸುದ್ದಿಗೆ ಗ್ರಾಸವಾಗಿದ್ದಾರೆ. ತಾವು ಎದೆ ಮೇಲೆ ಹಾಕಿಸಿಕೊಂಡಿದ್ದ ಸಲ್ಮಾನ್ ಖಾನ್ ಹಚ್ಚೆಯನ್ನು ಪ್ರದರ್ಶನ ಮಾಡಿದ್ದ ಮಹಿಳೆ ಭಾರೀ ಟ್ರೋಲ್ಗೆ ಒಳಗಾಗಿದ್ದಾರೆ.
ವೈರಲ್ ಆಗಿರುವ ಭಯಾನಿ ಹೆಸರಿನ ಮಹಿಳೆ ಹಂಚಿಕೊಂಡಿರುವ ವೀಡಿಯೊದಲ್ಲಿ, ತನ್ನನ್ನು 'ಸಲ್ಮಾನ್ ಕಿ ದೀವಾನಿ' ಎಂದು ಹೇಳಿಕೊಂಡಿದ್ದಾರೆ. ಪೋಸ್ಟ್ ಆಗಿರುವ ವಿಡಿಯೋದಲ್ಲಿ ಈ ಮಹಿಳಾ ಅಭಿಮಾನಿ, ಸಲ್ಮಾನ್ ಖಾನ್ ಹಚ್ಚೆಯನ್ನು ತೋರಿಸುವುದನ್ನು ಕಾಣಬಹುದು. ಇದೇ ಸಂದರ್ಭ ಆಕೆ ತನ್ನ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಖಾತೆಗಳಿಗೆ ಭೇಟಿ ನೀಡಿ ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ.
ವೀಡಿಯೊ ವೈರಲ್ ಆದ ತಕ್ಷಣ, ನೆಟ್ಟಿಗರು ಆಕೆಯನ್ನು ಬೇಕಾಬಿಟ್ಟಿ ಟ್ರೋಲ್ ಮಾಡಿದ್ದಾರೆ. ಕೆಲವರು ಈ ಬಗ್ಗೆ ತಮಾಷೆ ಮಾಡಿದ್ದಾರೆ. ಬಳಕೆದಾರರೊಬ್ಬರು, “ಲೈಮ್ಲೈಟ್ ಪೇನ್ ಕಿ ನಿಂಜಾ ಟೆಕ್ನಿಕ್” ಎಂದು ಕಾಮೆಂಟ್ ಮಾಡಿದ್ದಾರೆ. (ಇದರ ಅರ್ಥ ಪ್ರಚಾರ ಮಾಡಲು ಬಳಸುವ ನಿಂಜಾ ತಂತ್ರ)
ಇನ್ನೊಬ್ಬರು "ನಾ ಆಪ್ನೆ ಪತಿ ಕಿ, ನಾ ಅಪ್ನಿ ಮಾ ಕಿ ದುಸ್ರೆ ಕಿ ಫೋಟೋ ಬನಾವಾ ಕರ್ ಕ್ಯಾ ಮಜಾ ಮಿಲಾ ದೀದಿ" ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಅಂದರೆ 'ಗಂಡನ ಅಥವಾ ತನ್ನ ಫೋಟೋವನ್ನು ಹಚ್ಚೆ ಹಾಕಿಸದೇ ಇನ್ನೊಬ್ಬನ ಫೋಟೊ ಹಚ್ಚೆ ಹಾಕಿಸಿ ಏನು ಮಜಾ ಸಿಕ್ಕಿತು ಅಕ್ಕಾ?' ಎಂದು ಕೇಳಿದ್ದಾರೆ.
ಮತ್ತೊಬ್ಬರಂತೂ ಇನ್ನೊಂದು ಹೆಜ್ಜೆ ಮುಂದೆ ಹೋಗಿ “ಕರ್ವಾ ಕೈಸೆ ಕರ್ ಲೇತೆ ಹೈ ಹುಮಾರೆ ಮಾ ಬಾಪ್ ಮಾರ್ ಮಾರ್ ಕೆ ಭುರ್ಜಿ ಬನಾ ದೇಂಗೆ” ಎಂದು ಕಾಮೆಂಟ್ ಮಾಡಿದ್ದಾರೆ. ಅಂದರೆ 'ಇದನ್ನೆಲ್ಲಾ ಹೇಗೆ ಮಾಡ್ತೀರಾ? ನಮ್ಮ ಅಪ್ಪ ಅಮ್ಮ ಹೊಡೆದು ಹೊಡೆದು ಎಣ್ಣೆಗಾಯಿ ನೀರುಗಾಯಿ ಮಾಡುತ್ತಾರೆ' ಎಂದು.