

ಬೆಂಗಳೂರು: 'ಸೂತ್ರಧಾರಿ' ಚಿತ್ರದ ಒಂದು ಹಾಡಿಗೆ ಚಂದನ್ ಶೆಟ್ಟಿ ಮತ್ತು ಸಂಜನಾ ಆನಂದ್ ಹೆಜ್ಜೆ ಹಾಕಿದ್ದಾರೆ, ಆ ಹಾಡಿನ ಚಿತ್ರೀಕರಣ ಇತ್ತೀಚೆಗೆ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆದಿದೆ ಎಂಬ ಸುದ್ದಿ ಬಂದಿತ್ತು. ಹೊಸ ವರ್ಷದ ಸಂಭ್ರಮಾಚರಣೆಗೆ ಈ ಹಾಡು ಹೇಳಿ ಮಾಡಿಸಿದಂತಿದೆ ಎಂದು ಚಿತ್ರತಂಡ, ಇತ್ತೀಚೆಗೆ ಈ ಹಾಡನ್ನು ಬಿಡುಗಡೆ ಮಾಡಿದೆ.
ಅಂದಹಾಗೆ, ಈ ಹಾಡಿನ ಹೆಸರು 'ಡ್ಯಾಶ್'. ಇದಕ್ಕೆ ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಚಂದನ್ ಶೆಟ್ಟಿ ಅವರದ್ದೇ. ಎ2 ಮ್ಯೂಸಿಕ್ ಚಾನಲ್ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಈಗಾಗಲೇ ಒಂದೂವರೆ ಮಿಲಿಯನ್ ವೀಕ್ಷಣೆಯನ್ನು ದಾಖಲಿಸಿದೆ.
ಈ ಹಾಡು ಹೊಸವರ್ಷಕ್ಕೆ 'ಸೂತ್ರಧಾರಿ' ಚಿತ್ರತಂಡದಿಂದ ಒಂದು ಉಡುಗೊರೆ ಎನ್ನುವ ಚಂದನ್ ಶೆಟ್ಟಿ, ''ಡ್ಯಾಶ್' ಎಂದರೆ ಏನು ಎಂದು ಎಲ್ಲರೂ ಕೇಳುತ್ತಿದ್ದಾರೆ. ಡ್ಯಾಶ್ ಎಂದರೆ ಖಾಲಿ ಜಾಗ. ಅಲ್ಲಿ ನೀವು ಏನು ಬೇಕಾದರೂ ಬರೆದುಕೊಳ್ಳಬಹುದು. ಈ ಹಾಡಿಗೆ 'ಭಜರಂಗಿ ಮೋಹನ್' ನೃತ್ಯ ನಿರ್ದೇಶನ ಮಾಡಿದ್ದಾರೆ. ಸಂಜನಾ ಆನಂದ್ ಈ ಹಾಡಿಗೆ ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ' ಎಂದು ಮಾಹಿತಿ ಕೊಡುತ್ತಾರೆ.
ಸಂಜನಾ ಆನಂದ್ಗೆ ಇದು ಮೊದಲ ಸ್ಪೆಷಲ್ ಹಾಡಂತೆ. 'ನಾನು ಮೊದಲ ಬಾರಿಗೆ ಸ್ಪೆಷಲ್ ಸಾಂಗ್ ಒಂದರಲ್ಲಿ ನಟಿಸಿದ್ದೇನೆ. ಚಂದನ್ ಶೆಟ್ಟಿ ಅವರ ಜೊತೆ ಡ್ಯಾನ್ಸ್ ಮಾಡಿರುವುದು ಖುಷಿಯಾಗಿದೆ. ಹಾಡು ಅದ್ಭುತವಾಗಿದೆ' ಎನ್ನುತ್ತಾರೆ ಅವರು.
'ಸೂತ್ರಧಾರಿ' ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸಿದ್ದು, ನವರಸನ್ ನಿರ್ಮಾಣ ಮಾಡಿದ್ದಾರೆ. ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಚಂದನ್ ಶೆಟ್ಟಿಗೆ ನಾಯಕಿಯಾಗಿ ಅಪೂರ್ವ ನಟಿಸಿದ್ದಾರೆ.