ಇನ್ನೊಂದು ಹೊಸ ಚಿತ್ರದೊಂದಿಗೆ ಬಂದ ಅನುಷ್ಕಾ ...

Anushka Sharma - Final
Published on

ಅನುಷ್ಕಾ ಶರ್ಮ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಎರಡು ವರ್ಷಗಳಾಗುತ್ತಿವೆ. 2018ರಲ್ಲಿ ಬಿಡುಡೆಯಾದ ಶಾರುಖ್ ಖಾನ್ ಅಭಿನಯದ ‘ಜೀರೋ’ ಸಿನಿಮಾದಲ್ಲಿ ಅವರು ನಟಿಸಿದ್ದು ಬಿಟ್ಟರೆ, ಮಿಕ್ಕಂತೆ ಅನುಷ್ಕಾ ಯಾವೊಂದು ಹೊಸ ಸಿನಿಮಾ ಸಹ ಒಪ್ಪಿಕೊಂಡಿಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ಆಕೆ ಸಿಕ್ಕಾಪಟ್ಟೆ ಬ್ಯುಸಿಯಾಗಿರುವುದಂತೂ ಹೌದು. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ಬಂದರೆ, ಇಲ್ಲಿದೆ ಉತ್ತರ.

ಸುಮಾರು ಐದು ವರ್ಷಗಳ ಹಿಂದೆಯೇ ಅನುಷ್ಕಾ ಶರ್ಮ, ಕ್ಲೀನ್​ ಸ್ಲೇಟ್​ ಪ್ರೊಡಕ್ಷನ್​ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದರು. ಅದರಡಿ ಎನ್​.ಎಚ್​.10, ಪರಿ, ಫಿಲ್ಲೌರಿಯಂತಹ ಚಿತ್ರಗಳನ್ನು ನಿರ್ಮಿಸಿದ್ದರು. ಕಳೆದ ತಿಂಗಳಷ್ಟೇ, ಪಾತಾಳ್​ ಲೋಕ್​ ಎಂಬ ವೆಬ್​ಸರಣಿಯನ್ನು ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆ ಮಾಡಿದ್ದ ಬಾಲಿವುಡ್​ ನಟಿ ಅನುಷ್ಕಾ ಶರ್ಮಾ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಓವರ್ ದಿ ಟಾಪ್​ (ಓಟಿಟಿ) ವೀಕ್ಷಕರಿಗೆ ಮತ್ತೊಂದು ಉಡುಗೊರೆ ಹೊತ್ತು ಬಂದಿದ್ದಾರೆ. ಈ ಬಾರಿ ಅವರು ಓಟಿಟಿಗಾಗಿಯೇ ಬುಲ್​ಬುಲ್​ ಎಂಬ ಚಿತ್ರ ನಿರ್ಮಿಸಿದ್ದು, ಆ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ.

ಈ ಮೊದಲು, ‘ಪಾತಾಳ್ ಲೋಕ್’ ನಿರ್ಮಾಣ ಮಾಡಿ ಅದರ ಮೂಲಕ ಕ್ರೈಮ್ ಲೋಕದ ಕರಾಳತೆ ತೋರಿಸಿದ್ದ ಅವರು, ಈ ಸಲ ‘ಬುಲ್‌ಬುಲ್’ ಮೂಲಕ ಹೆದರಿಸಲು ಆಗಮಿಸುತ್ತಿದ್ದಾರೆ. ಹಾರರ್ ಮಿಸ್ಟರಿ ಶೈಲಿಯ ‘ಬುಲ್‌ಬುಲ್’ ಒರಿಜಿನಲ್ ರೂಪದಲ್ಲಿ ಓಟಿಟಿ ವೇದಿಕೆ ನೆಟ್‌ಪ್ಲಿಕ್ಸ್‌ನಲ್ಲಿ ಜೂನ್ 24ರಂದು ರಿಲೀಸ್ ಆಗಲಿದೆ. ಅದರ ಮೊದಲ ಲುಕ್ ಸೇರಿ ಕಿರು ವಿಡಿಯೋ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಅನುಷ್ಕಾ.

ಪ್ರಸ್ತುತ ಕಾಲಘಟ್ಟದಲ್ಲಿ ಪಶ್ಚಿಮ ಬಂಗಾಲದಲ್ಲಿ ಸಿನಿಮಾ ಸಾಗಲಿದ್ದು, ಕಥಾನಾಯಕಿ ಹೆಸರೇ ಇಲ್ಲಿ ಬುಲ್‌ಬುಲ್. ಆಕೆಯ ಸುತ್ತ ಇಡೀ ಕಥೆ ಪಯಣಿಸಲಿದ್ದು, ಭೂತ ಪ್ರೇತದ ನೆರಳೂ ಸಿನಿಮಾದುದ್ದಕ್ಕೂ ಹೆದರಿಸಲಿದೆಯಂತೆ. ಅನ್ವಿತ್ ದತ್ ನಿರ್ದೇಶನದಲ್ಲಿ ಸಿದ್ಧವಾಗಿರುವ ‘ಬುಲ್‌ಬುಲ್’ನಲ್ಲಿ ತೃಪ್ತಿ ದಿಮ್ರಿ, ಅವಿನಾಶ್ ತಿವಾರಿ, ರಾಹುಲ್ ಬೋಸ್, ಪೊಯೋಲಿ ದಾಮ್, ಪರಂಬ್ರತಾ ಚಟ್ಟೋಪಾಧ್ಯಾಯ ಮುಖ್ಯಭೂಮಿಕೆಯಲ್ಲಿದ್ದಾರೆ.

ಈ ನೆಟ್‌ಪ್ಲಿಕ್ಸ್ ಒರಿಜಿನಲ್ ನಿರ್ಮಾಣದಲ್ಲಿ ಅನುಷ್ಕಾ ಜತೆಗೆ ಸಹೋದರ ಕರ್ಣೇಶ್ ಶರ್ಮಾ ಸಹ ಪಾಲುದಾರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net