ಭೋಜಪುರಿ ಹಾಡಿನಲ್ಲಿ ಅವಾಚ್ಯ ಪದಗಳಿಂದ ಸಲ್ಮಾನ್​ಗೆ ನಿಂದನೆ!; ಸಾಂಗ್​ ವೈರಲ್​...

798316-salman-socialmeida
Published on

ಸುಶಾಂತ್​ ಸಿಂಗ್​ ಆತ್ಮಹತ್ಯೆ ಬೆನ್ನಲ್ಲೇ ನೆಪೋಟಿಸಂ ಕುರಿತ ಚರ್ಚೆ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಸ್ವಜನಪಕ್ಷಪಾತವನ್ನು ಪೋಷಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬಾಲಿವುಡ್​ನ ಸಾಕಷ್ಟು ಸ್ಟಾರ್ ಕಲಾವಿದರ ಮತ್ತು ನಿರ್ಮಾಪಕರ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಅದರಲ್ಲೂ ಸಲ್ಮಾನ್​ ಖಾನ್​ ವಿರುದ್ಧ ತಿರುಗಿ ಬಿದ್ದಿರುವ ಜನ, ಅವರ ಸಿನಿಮಾಗಳನ್ನೇ ಬ್ಯಾನ್​ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಇದೆಲ್ಲದರ ನಡುವೆಯೇ ಭೋಜಪುರಿ ಭಾಷೆಯಲ್ಲಿ ಹೊರ ಬಂದ ಹಾಡೊಂದರಲ್ಲಿ ಸಲ್ಮಾನ್​ ಖಾನ್​ಗೆ ಹಿಗ್ಗಾಮುಗ್ಗಾ ಬೈಯಲಾಗಿದೆ!

ಅಜಯ್​ ಕೇಸರಿ ಯಾದವ್​ ಹೆಸರಿನ ವ್ಯಕ್ತಿ ಅವಾಚ್ಯ ಪದಗಳನ್ನು ಬಳಕೆ ಮಾಡಿಕೊಂಡು ಸ್ಟಾರ್ ನಟನ ಮೇಲೆ ಹಾಡಿನ ಮೂಲಕ ದಾಳಿ ಮಾಡಿದ್ದು, ಸದ್ಯ ಈ ಹಾಡು ಎಲ್ಲೆಡೆ ವೈರಲ್​ ಆಗಿದೆ. ಸಲ್ಮಾನ್​ ಸಿನಿಮಾ ಬೇಡವೇ ಬೇಡ ಎಂಬ ಸಾಲುಗಳೂ ಹಾಡಿನಲ್ಲಿದ್ದು, ಇದೆಲ್ಲವನ್ನು ಕಂಡ ಸಲ್ಮಾನ್​ ಅವರ ಒಂದಷ್ಟು ಅಭಿಮಾನಿಗಳು ಯೂಟ್ಯೂಬ್​ಗೆ ದೂರು ನೀಡಿದ್ದಾರೆ. ಅವಾಚ್ಯ ಪದಗಳಿಂದ ಕೂಡಿದ ಈ ಹಾಡನ್ನು ಯೂಟ್ಯೂಬ್​ನಿಂದ ಡಿಲಿಟ್​ ಮಾಡುವಂತೆ ಕೋರಿದ್ದಾರೆ.

ಇನ್ನು ಬಿಹಾರದ ಪಾಟ್ನಾದಲ್ಲಿನ ಬಿಯಿಂಗ್​ ಹ್ಯೂಮನ್​ ಶೋರೂಮ್​ಗಳಿಗೆ ಕೆಲ ವಾರಗಳ ಹಿಂದಷ್ಟೇ ಬೀಗ ಜಡಿಯಲಾಗಿತ್ತು. ಇನ್ನು ಕೆಲವರು ಸಲ್ಮಾನ್​ ಫೋಟೋಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದೀಗ ಹಾಡಿನ ಮೂಲಕ ಸ್ಟಾರ್ ನಟನನ್ನು ನಿಂದಿಸಿದ್ದು, ಈ ಬಗ್ಗೆ ಸಲ್ಮಾನ್​ ಮತ್ತವರ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net