

ಅಂಟಾರ್ಕ್ಟಿಕಾ: ಪ್ರಕೃತಿ ಯಾವತ್ತೂ ತನ್ನ ಗುಟ್ಟನ್ನು ಮನುಷ್ಯನಿಗೆ ಬಿಟ್ಟುಕೊಟ್ಟಿಲ್ಲ. ಅದರಾಳದಲ್ಲಿ ಅದೆಷ್ಟೋ ವೈಶಿಷ್ಟ್ಯಗಳು, ಅಚ್ಚರಿಯ ವಿಚಾರಗಳು ಅಡಗಿವೆ ಎಂಬುದಕ್ಕೆ ಈಗಾಗಲೇ ಹಲವು ಪುರಾವೆಗಳು ಸಿಕ್ಕಿವೆ.
ಸದ್ಯ ಅಂಟಾರ್ಕ್ಟಿಕಾ ಪ್ರಕೃತಿಯ ವೈಚಿತ್ರ್ಯಗಳಿಗೆ ಕಾರಣ ಆಗುತ್ತಿದೆ. 'ಇದೇನು ದಿನಕ್ಕೊಂದು ಬಣ್ಣ ..!' ಎಂದು ಅಚ್ಚರಿ ಮೂಡುವಂತೆ ಮಾಡುತ್ತಿದೆ.
ಹಿಮ ಎಂದ ತಕ್ಷಣ ಅದು ಬಿಳಿಬಣ್ಣದಲ್ಲಿರುತ್ತದೆ ಎಂಬುದನ್ನು ಯಾರಾದರೂ ಹೇಳುತ್ತಾರೆ. ಆದರೆ ಅಂಟಾರ್ಕ್ಟಿಕಾ ಖಂಡದ ಹಲವು ಕರಾವಳಿ ತೀರದಲ್ಲಿ ಭೂಮಿಗೆ ಬಿದ್ದ ಹಿಮ ಹಸಿರು ಬಣ್ಣಕ್ಕೆ ತಿರುಗುತ್ತಿದೆ.
ಸ್ವಲ್ಪ ದಿನಗಳ ಹಿಂದೆ ಮಂಜುಗಡ್ಡೆ ರಕ್ತಕೆಂಪು ಬಣ್ಣಕ್ಕೆ ತಿರುಗಿ, ಆ ಭಾಗದ ಭೂಮಿಯೆಲ್ಲ ಕಡುಗೆಂಪಾಗಿತ್ತು. ಆದರೆ ಇದೀಗ ಹಸಿರು ಬಣ್ಣಕ್ಕೆ ತಿರುಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಅಂಟಾರ್ಕ್ಟಿಕಾದಲ್ಲಿ ಪಾಚಿ ಹೂವುಗಳು ಅರಳಿ ಇನ್ನೂ ಹೊಳಪು ಪಡೆಯುತ್ತಿರುವುದೇ ಹೀಗೆ ಮಂಜುಗಡ್ಡೆಗಳು ಹಸಿರು ಬಣ್ಣಕ್ಕೆ ತಿರುಗಲು ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.
ಪಾಚಿ ಹೂವುಗಳಿಂದಾಗಿ ಮಂಜುಗಡ್ಡೆ ಹಸಿರು ಬಣ್ಣಕ್ಕೆ ತಿರುಗಿದ ಪ್ರದೇಶಗಳ ನಕ್ಷೆಯನ್ನು ತಯಾರಿಸುವ ಸಲುವಾಗಿ ಯುಕೆಯ ಕ್ಯಾಂಬ್ರಿಜ್ ಯೂನಿವರ್ಸಿಟಿಯ ಸಂಶೋಧಕರ ತಂಡ ಹಾಗೂ ಬ್ರಿಟಿಷ್ ಅಂಟಾರ್ಕ್ಟಿಕ್ ಸಮೀಕ್ಷಾ ತಂಡ ಸ್ಯಾಟಲೈಟ್ ಮೂಲಕ ಸರ್ವೇ ನಡೆಸಿ, ಕ್ಷೇತ್ರ ವೀಕ್ಷಣೆಯನ್ನು ಮಾಡಿದೆ.
ಅಂಟಾರ್ಕ್ಟಿಕಾದ ಕರಾವಳಿ ತೀರಗಳಲ್ಲಿ ಹಿಮ ಹಸಿರುಬಣ್ಣಕ್ಕೆ ತಿರುಗಿದೆ. ಅದರಲ್ಲೂ ಹೆಚ್ಚಾಗಿ ಬೆಚ್ಚಗಿನ ಪ್ರದೇಶದಲ್ಲೇ ಹೀಗಾಗುತ್ತಿದೆ. ಮಂಜುಗಡ್ಡೆಗಳ ಬಣ್ಣ ಬದಲಾಗಲು ಹವಾಮಾನ ವೈಪರೀತ್ಯವೇ ಕಾರಣ. ಈ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಲಾಗುವುದು ಎಂದು ಕ್ಯಾಂಬ್ರಿಜ್ ವಿಶ್ವವಿದ್ಯಾನಿಲಯ ತಿಳಿಸಿದೆ. (ಏಜೆನ್ಸೀಸ್)