

ಆನೇಕಲ್: ಜಿಲ್ಲಾಡಳಿತ ಎಷ್ಟೇ ಎಚ್ಚರಿಕೆ ವಹಿಸಿದ್ದರೂ ತಮಿಳುನಾಡಿನಿಂದ ಜನರು ಕಳ್ಳ ದಾರಿ ಮೂಲಕ ರಾಜ್ಯ ಪ್ರವೇಶಿಸುತ್ತಿದ್ದು, ಗಡಿಭಾಗದ ಜನರಲ್ಲಿ ಕರೊನಾ ಸೋಂಕಿನ ಆತಂಕ ಉಂಟು ಮಾಡಿದೆ.
ಆನೇಕಲ್ ತಾಲೂಕಿನ ಬಳ್ಳೂರು, ಸೋಲೂರು ಸೇರಿ ಹಲವು ಕಡೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ರಾಜ್ಯಕ್ಕೆ ನುಸುಳುತ್ತಿದ್ದಾರೆ. ಗಡಿಯಲ್ಲಿ ಭದ್ರತೆ ಮತ್ತು ಚೆಕ್ಪೋಸ್ಟ್ ಹೆಚ್ಚಾಗುತ್ತಿದ್ದಂತೆ ಅಡ್ಡದಾರಿ ಹಿಡಿದಿದ್ದಾರೆೆ. ತಮಿಳುನಾಡು ಮತ್ತು ಕರ್ನಾಟಕ ಗಡಿ ಪ್ರದೇಶ ಬಳ್ಳೂರು ಗ್ರಾಮದಲ್ಲಿ ಈಗಾಗಲೇ ಅಡ್ಡ ದಾರಿಗಳನ್ನು ಜೆಸಿಬಿ ಮೂಲಕ ಹಳ್ಳ ತೆಗೆದು ಮುಚ್ಚಲಾಗಿದೆ. ಮರಗಳನ್ನು ಅಡ್ಡ ಹಾಕಿದರೂ ಬೇರೊಂದು ಅಡ್ಡ ದಾರಿ ಮೂಲಕ ಬರುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
ಎಸ್ಪಿ ಭೇಟಿ: ಬಳ್ಳೂರು ಗ್ರಾಮದಲ್ಲಿ ನುಸುಳುಕೋರರ ಕಾಟ ಹೆಚ್ಚಾದ ಮಾಹಿತಿ ಮೇರೆಗೆ ಶುಕ್ರವಾರ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣನವರ್ ಪರಿಶೀಲಿಸಿದರು. ಇದೇ ವೇಳೆ ಅತ್ತಿಬೆಲೆ ಪೊಲೀಸರ ಮಾಹಿತಿ ಮೇರೆಗೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಎಸ್ಪಿ ಗಂಗಾಧರ ಅವರು ಭೇಟಿ ನೀಡಿ ಜನರ ಅಕ್ರಮ ಸಂಚಾರ ನಿಯಂತ್ರಣದ ಬಗ್ಗೆ ಚರ್ಚೆ ನಡೆಸಿದರು.
ತಮಿಳುನಾಡಿನಿಂದ ಪ್ರತಿದಿನ ಕೆಲಸಕ್ಕೆ ಕರ್ನಾಟಕ ಬರುವವರು ಹಾಗೂ ರಾಜ್ಯದಿಂದ ತಮಿಳುನಾಡಿಗೆ ಹೋಗುವವರಿಗೆ ಆಯಾ ಕಂಪನಿಗಳು ಪಾಸ್ ನೀಡಬೇಕು. ಕೆಲಸಕ್ಕೆ ಹೋಗುವವರು ಹಾಗೂ ದಿನಬಳಕೆ ವಸ್ತುಗಳನ್ನು ಸರಬರಾಜು ಮಾಡುವವರಿಗೆ ತೊಂದರೆ ಇಲ್ಲದಂತೆ ಸಂಚಾರ ಮಾಡಲು ಸ್ಥಳೀಯ ಪೊಲೀಸರು ಸಹಕರಿಸುತ್ತಾರೆ ಎಂದು ರವಿ ಡಿ. ಚನ್ನಣ್ಣನವರ್ ತಿಳಿಸಿದರು.
ಮದ್ಯ ಖರೀದಿ ಮಾಡಲು ಬರುವವರು ಮೇಲೆ ಕಟ್ಟೆಚ್ಚರವಹಿಸಿ, ಅಂತಹವರ ವಿರುದ್ಧ ದೂರು ದಾಖಲಿಸಲಾಗುವುದು ಎಂದರು.
ನೀಲಗಿರಿ ತೋಪುಗಳಲ್ಲಿ ಜನ: ತಮಿಳುನಾಡಿನಲ್ಲಿ ಮದ್ಯ ದರ ಹೆಚ್ಚಿರುವ ಹಿನ್ನೆಲೆಯಲ್ಲಿ ಬಳ್ಳೂರು ಸುತ್ತಮುತ್ತ ಮದ್ಯದಂಗಡಿಗಳಿಗೆ ಆಗಮಿಸುವವರ ಸಂಖ್ಯೆ ಹೆಚ್ಚಿದ್ದು, ಬಹುತೇಕರು ನೀಲಗಿರಿ ತೋಪುಗಳಲ್ಲೇ ಗುಂಪುಗುಂಪಾಗಿ ಬರುತ್ತಿದ್ದ ದೃಶ್ಯ ಕಂಡುಬಂತು.
ಆನೇಕಲ್ ತಾಲೂಕಿನಾದ್ಯಂತ ಕಾರ್ಖಾನೆಗಳು ಆರಂಭವಾಗಿರುವುದು ಒಂದೆಡೆಯಾದರೆ, ತಮಿಳುನಾಡಿನಲ್ಲಿ ಮದ್ಯದ ದರ ಹೆಚ್ಚಿರುವುದು ಅಡ್ಡದಾರಿಗಳ ಮೂಲಕ ಗುಂಪು ಗುಂಪಾಗಿ ಪ್ರವೇಶ ಮಾಡಲು ಕಾರಣವಾಗಿದೆ. ಇದರಿಂದ ಕರೊನಾ ಆತಂಕವಿದ್ದು, ನುಸುಳುಕೋರರ ವಿರುದ್ಧ ಕ್ರಮ ಜರುಗಿಸಬೇಕು. ವಸಂತ್ರೆಡ್ಡಿ, ಸ್ಥಳೀಯ