ಕೇಂದ್ರದ್ದು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಬರೀ ಹುಸಿ ಭರವಸೆ, ರಾಜ್ಯಸಭಾ ಸದಸ್ಯ ಹರಿಪ್ರಸಾದ್ ವ್ಯಂಗ್ಯ

22-klr-1
Published on

ಕೋಲಾರ: ಕರೊನಾ ಸಂಕಷ್ಟ ನಿವಾರಣೆಗೆ ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಹುಸಿ ಭರವಸೆ (ಜುಮ್ಲಾ) ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದರು.

ನಗರದಲ್ಲಿ ಶುಕ್ರವಾರ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ರಂಜಾನ್ ಅಂಗವಾಗಿ ಮುಸ್ಲಿಮರಿಗೆ ಕಿಟ್ ವಿತರಿಸುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿಂದಿನ ಬಜೆಟ್‌ನಲ್ಲಿ 14 ಲಕ್ಷ ಕೋಟಿ ರೂ. ಘೋಷಿಸಿದ್ದನ್ನು ಈಗ 20 ಲಕ್ಷ ಕೋಟಿ ರೂ. ಮಾಡಿ ಘೋಷಿಸಿರುವುದು ಹಳೇ ಮದ್ಯವನ್ನು ಹೊಸ ಬಾಟಲಿಯಲ್ಲಿ ನೀಡಿದಂತಾಗಿದೆ ಎಂದು ಟೀಕಿಸಿದರು.

ಕರೊನಾ ಬಗ್ಗೆ ರಾಹುಲ್‌ಗಾಂಧಿ ಜ.30ರಂದೇ ಎಚ್ಚರಿಕೆ ನೀಡಿದ್ದರೂ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಬಂಡವಾಳಕ್ಕಾಗಿ ಮಾ.24ವರೆಗೆ ಲಾಕ್‌ಡೌನ್ ಘೋಷಿಸಲಿಲ್ಲ. ದೇಶದಲ್ಲಿ 2 ಕೋಟಿ ವಲಸೆ ಕಾರ್ಮಿಕರಿಗೆ ಲಾಕ್‌ಡೌನ್ ಘೋಷಣೆ ವೇಳೆ ಸ್ವಗ್ರಾಮಗಳಿಗೆ ತೆರಳಲು ಕ್ರಮ ಕೈಗೊಳ್ಳಲಿಲ್ಲ. ವೈರಸ್ ನಿಯಂತ್ರಣದಲ್ಲಿ ಕೇರಳ ಮಾದರಿ ಅನುಸರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಪಿಎಂ ಕೇರ್ ಕುರಿತು ಸೋನಿಯಾಗಾಂಧಿ ಟ್ವೀಟ್ ಸಂಬಂಧ ಸಾಗರ ತಾಲೂಕಿನ ಬಿಜೆಪಿ ಕಾರ್ಯಕರ್ತ ಎಫ್‌ಐಆರ್ ದಾಖಲಿಸಿರುವುದು ದುರ್ದೈವ. ಅಧಿಕಾರಿಗಳೂ ರಾಜಕೀಯವಾಗಿ ನಡೆದುಕೊಳ್ಳುತ್ತಿದ್ದಾರೆ. 24 ಗಂಟೆಯೊಳಗೆ ದೂರು ವಾಪಸ್ ಪಡೆಯಬೇಕು, ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಬೇಕು. ಗ್ರಾಪಂಗಳಿಗೆ ಆಡಳಿತ ಸಮಿತಿ ನೇಮಕದ ವಿರುದ್ಧ ಕೆಪಿಸಿಸಿ ಬೃಹತ್ ಹೋರಾಟ ನಡೆಸಲಿದೆ ಎಂದರು.

ಶಾಸಕ ಕೆ.ವೈ.ನಂಜೇಗೌಡ, ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಚಿವ ಕೆ.ಎ.ನಿಸಾರ್ ಅಹಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ, ನಗರಸಭೆ ಸದಸ್ಯರಾದ ಬಿ.ಎಂ.ಮುಬಾರಕ್, ಮುಖಂಡರಾದ ಎಸ್.ಮಂಜುನಾಥ್, ಎಲ್.ಎ.ಮಂಜುನಾಥ್, ಊರುಬಾಗಿಲು ಶ್ರೀನಿವಾಸ್, ಕೆ.ಜಯದೇವ್, ಕುಮಾರ್, ವಸಂತ ಕವಿತಾ ಕೆ.ಸಿ.ರೆಡ್ಡಿ ಹಾಜರಿದ್ದರು.

ಅಧಿಕಾರಿಗಳ ಬ್ಲಾಕ್‌ಮೇಲ್: ಜಿಲ್ಲೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹಾಗೂ ಸಂಸದ ಎಸ್.ಮುನಿಸ್ವಾಮಿ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು. ಜಿಲ್ಲೆಯ ಅಧಿಕಾರಿಗಳ ಬಳಿ ಸಚಿವರು, ಸಂಸದರು ಪರ್ಸಂಟೇಜ್ ಫಿಕ್ಸ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಅನಿವಾರ್ಯವಾಗಿ ಅಧಿಕಾರಿಗಳು ಗಾಳಿಗೆ ಬಂದ ಜನಪ್ರತಿನಿಧಿಗಳಿಗೆ ಶರಣಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರೇ ಹೆಚ್ಚಾಗಿದ್ದು, ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿದರೆ ಉತ್ತಮ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ದೇಶದ ಅರ್ಥ ವ್ಯವಸ್ಥೆ ವಾಜಪೇಯಿ, ದೇವೇಗೌಡ, ನರಸಿಂಹರಾವ್, ಮನಮೋಹನ್‌ಸಿಂಗ್ ಅವಧಿಯಲ್ಲೂ ಇಷ್ಟು ಕುಸಿದಿರಲಿಲ್ಲ. ಕರೊನಾ ಸಂಕಷ್ಟದ ನಡುವೆಯೂ ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಜಕಾರಣ ಮಾಡಿ ಬದುಕಲು ಹೊರಟಿವೆ. ಇಂತಹ ಆಟ ಬಹಳ ದಿನ ನಡೆಯುವುದಿಲ್ಲ. ಕೆ.ಎಚ್.ಮುನಿಯಪ್ಪ, ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net