

ತೆಲಂಗಾಣ: ಇದು ಮುಗಿಯದ ಕಥೆ! ಕಳೆದ ಒಂದು ತಿಂಗಳಿನಿಂದ ಟಾಲಿವುಡ್ ಅಂಗಳದಲ್ಲಿ ಸಿನಿಮಾ ಸುದ್ದಿಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವುದು ಯುವ ನಟ ರಾಜ್ ತರುಣ್ ಮತ್ತು ಲಾವಣ್ಯ ಪ್ರೇಮ ವಿವಾದ. 11 ವರ್ಷಗಳ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಪ್ರೇಯಸಿ ಲಾವಣ್ಯ, ರಾಜ್ನಿಂದ ನನಗೆ ಅನ್ಯಾಯವಾಗಿದೆ. ಆತ ತನ್ನ ಸಹ ನಟಿಯಾದ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ, ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವಿಷಯದಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ಟ್ವಿಸ್ಟ್ ಎದುರಾಗುತ್ತಿದ್ದೆಯೇ ವಿನಃ ಪ್ರಕರಣ ಮಾತ್ರ ಅಂತ್ಯಗೊಳ್ಳುತ್ತಿಲ್ಲ. ಸದ್ಯ ಕೋರ್ಟ್ ರಾಜ್ ತರುಣ್ಗೆ ನಿರೀಕ್ಷಣಾ ಜಾಮೀನು ಕೊಡುವ ಮೂಲಕ ಬಿಗ್ ರಿಲೀಫ್ ನೀಡಿದ್ದೇ ಆದರೂ ಇವರಿಬ್ಬರ ಜಟಾಪಟಿ ಎಂದಿನಂತೆ ಮುಂದುವರೆದಿದೆ. ಆದ್ರೆ, ಇದೀಗ ಈ ಪ್ರಕರಣಕ್ಕೆ ಮತ್ತೊಂದು ಶಾಕಿಂಗ್ ಟ್ವಿಸ್ಟ್ ಎದುರಾಗಿದ್ದು, ಪ್ರತಿಬಾರಿ ರಾಜ್ ತನಗೆ ವಂಚನೆ ಮಾಡಿದ್ದಾನೆ ಎಂದು ದೂರುತ್ತಿದ್ದ ಲಾವಣ್ಯಳ ಮಾಜಿ ಪ್ರಿಯಕರ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ವರದಿಯಲ್ಲಿ ಉಲ್ಲೇಖಿಸಿರುವಂತೆ ಬಂಧಿತ ಮಸ್ತನ್ ಸಾಯಿ ಲಾವಣ್ಯಳ ಮಾಜಿ ಪ್ರಿಯಕರ. ರಾಜ್ ತರುಣ್ ಮತ್ತು ಲಾವಣ್ಯ ಪ್ರೇಮ ವಿವಾದದ ಕೇಂದ್ರಬಿಂದುವಾಗಿರುವ ಮಸ್ತಾನ್, ಇದೀಗ ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಹಲವು ದಿನಗಳಿಂದ ಪೊಲೀಸ್ ಅಧಿಕಾರಿಗಳ ಕಣ್ತಪ್ಪಿಸಿ, ಓಡಾಡುತ್ತಿದ್ದ ಆರೋಪಿಯನ್ನು ಕಡೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನ ದರ್ಗಾದಲ್ಲಿ ಅಡಗಿದ್ದ ಮಸ್ತಾನ್‌ನನ್ನು ಆಂಧ್ರಪ್ರದೇಶದ ಜಾರಿ ವಿಭಾಗವು ಸೆರೆಹಿಡಿದಿದೆ.
ಟಾಲಿವುಡ್ ನಟ ರಾಜ್ ತರುಣ್ ಮತ್ತು ಲಾವಣ್ಯ ನಡುವಿನ ಪ್ರೀತಿ ವಂಚನೆ ವಿವಾದಲ್ಲಿ ಆಗಾಗ್ಗೆ ಮಸ್ತನ್ ಹೆಸರು ಮುನ್ನೆಲೆಗೆ ಬರುತ್ತಿತ್ತು. ಆದರೆ, ಆರೋಪಿ ಯಾರ ಕಣ್ಣಿಗೆ ಬಿದ್ದಿರಲಿಲ್ಲ. ಲಾವಣ್ಯ ಹಾಗೂ ಮಸ್ತಾನ್ ನಡುವೆ ಸಂಬಂಧ ಇದ್ದ ಕಾರಣ ರಾಜ್ ತರುಣ್ ಆಕೆಯಿಂದ ದೂರ ಸರಿಯಲು ಮುಂದಾಗಿದ್ದರು ಎಂದು ಒಂದಷ್ಟು ವರದಿಗಳು ಮಾಹಿತಿ ಹಂಚಿಕೊಂಡಿವೆ. ಆದ್ರೆ, ಅಸಲಿ ಕಾರಣವೇನು ಎಂಬುದು ಇನ್ನು ಸ್ಪಷ್ಟವಾಗಬೇಕಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ ಸ್ನೇಹಿತ ಶೇಖರ್ ಬಾಷಾ, ಮಸ್ತಾನ್ ಮತ್ತು ಲಾವಣ್ಯ ಕೇವಲ ಅನೈತಿಕ ಸಂಬಂಧ ಮಾತ್ರ ಹೊಂದಿಲ್ಲ. ಬದಲಿಗೆ ಡ್ರಗ್ ಚಟುವಟಿಕೆಗಳಲ್ಲಿಯೂ ಅವರಿಬ್ಬರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಈ ಲವ್ ತ್ರಿಕೋನದಲ್ಲಿ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಇವರ ವಿವಾದ ಯಾವ ಹಂತವನ್ನು ತಲುಪಲಿದೆ ಎಂಬುದನ್ನು ಸದ್ಯ ಕಾದುನೋಡಬೇಕಿದೆ.