ಬೆಂಗಳೂರು: ಇದೇ ಸೆಪ್ಟೆಂಬರ್ ತಿಂಗಳಿನಿಂದ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು, ಲಕ್ಷಾಂತರ ರೈತರಿಗೆ ಅವರ ಜಮೀನಿನ ಹಕ್ಕನ್ನು ಅವರಿಗೆ ನೀಡುವ ಮೂಲಕ ನೆಮ್ಮದಿಯ ಬದುಕು ಕಲ್ಪಿಸಲು ನಮ್ಮ ಸರ್ಕಾರ ಸಂಕಲ್ಪ ತೊಟ್ಟಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಪ್ರಕಟಿಸಿದರು.
ವಿಕಾಸಸೌಧದಲ್ಲಿ ಬೆಂಗಳೂರು ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಸೋಮವಾರ ನಡೆಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗುವಳಿ ಮಾಡುವ ರೈತರಿಗೆ ಮಂಜೂರು ಮಾಡಿರುವ ಲಕ್ಷಾಂತರ ಪ್ರಕರಣಗಳಲ್ಲಿ ಹಲವು ವರ್ಷಗಳಿಂದ ಪೋಡಿ ದುರಸ್ಥಿಯಾಗಿಲ್ಲ.
ಈ ಹಿಂದಿನ ಸರ್ಕಾರದ ಅವಧಿಯಲ್ಲೂ ಹತ್ತಾರು ಚರ್ಚೆ, ನಾನಾ ಪ್ರಯತ್ನಗಳಾಗಿದ್ದರೂ ಈ ವಿಚಾರದಲ್ಲಿ ಸರಿಯಾದ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಆದರೆ, ರೈತರಿಗೆ ಅವರ ಜಮೀನಿನ ಹಕ್ಕನ್ನು ಸಂಪೂರ್ಣವಾಗಿ ಅವರಿಗೇ ನೀಡಲು, ಈ ವಿಚಾರದಲ್ಲಿ ಶಾಶ್ವತ ಪರಿಹಾರ ನೀಡಲು ನಮ್ಮ ಸರ್ಕಾರ ಸಂಕಲ್ಪ ತೊಟ್ಟಿದೆ ಎಂದು ಭರವಸೆ ನೀಡಿದರು.
ರೈತರಿಗೆ ಜಮೀನು ಮಂಜೂರಾಗಿದ್ರೂ ಪೋಡಿ ದುರಸ್ಥಿಯಾಗದಿರಲು ಎರಡು ಪ್ರಮುಖ ಕಾರಣಗಳಿವೆ. ದಶಕಗಳ ಹಿಂದಿನಿಂದಲೂ ನಮ್ಮ ಅಧಿಕಾರಿಗಳು 100 ಎಕರೆ ಜಮೀನಿದ್ದರೆ ಅದಕ್ಕಿಂತ ಹೆಚ್ಚು ವಿಸ್ತೀಣ ಮಂಜೂರು ಮಾಡಿದ್ದಾರೆ. ಇದೊಂದು ಕಾರಣವಾದರೆ, ಕೆಲವು ಸಂದರ್ಭದಲ್ಲಿ ಸಾಗುವಳಿ ಮಾಡದಂತವರಿಗೂ ಮಂಜೂರು ಮಾಡಿದ್ದಾರೆ.
ಇನ್ನೂ ಕೆಲವು ಪ್ರಕರಣಗಳಲ್ಲಿ ಆರ್‌ಟಿಸಿಯಲ್ಲಿ ಮಂಜೂರುದಾರರ ಹೆಸರಿದೆ. ಆದರೆ, ಅವರಿಗೆ ಮಂಜೂರು ಆಗಿರುವ ಬಗ್ಗೆ ಯಾವುದೇ ನಿಖರ ದಾಖಲೆಗಳಿಲ್ಲ. ಮತ್ತಷ್ಟು ಪ್ರಕರಣಗಳಲ್ಲಿ ಮಂಜೂರಿಗೆ ಅರ್ಜಿ ಕೊಟ್ಟಿರುವ ದಾಖಲೆ ಇದೆ. ಆದರೆ, ಮಂಜೂರು ಆಗಿರುವ ದಾಖಲೆ ಇಲ್ಲ.
ಈ ಎರಡು ಪ್ರಮುಖ ಕಾರಣಗಳಿಂದ ಜಮೀನು ಮಂಜೂರಾಗಿದ್ರೂ ದುರಸ್ಥಿಯಾಗಿಲ್ಲ. ಹೀಗಾಗಿ ರೈತರು ಅಂತಹ ಜಮೀನಿನಲ್ಲಿ ಕೃಷಿ ಮಾಡಬಹುದೇ ವಿನಃ ಅವರಿಗೆ ಆ ಭೂಮಿಯಿಂದ ಬೇರೆ ಯಾವುದೇ ಪ್ರಯೋಜನ ಇಲ್ಲ.
ಸಿಎಂ, ಸಚಿವರ ಒತ್ತಡ
ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರೂ ಸೇರಿದಂತೆ ಎಲ್ಲಾ ಸಚಿವ ಒತ್ತಡ ಇದೆ. ಅಲ್ಲದೆ, ರೈತರಿಂದಲೂ ಸಾಕಷ್ಟು ಒತ್ತಡವಿದೆ.
ಹೀಗಾಗಿ ಕಳೆದ ಆರೆಂಟು ತಿಂಗಳಿನಿಂದ ಅಧಿಕಾರಿಗಳ ಜೊತೆ ನಿರಂತರ ಚರ್ಚೆ ನಡೆಸಿ ಇದೀಗ ಈ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದ್ದೇವೆ.
ಯಾರಿಗೆ ಪೋಡಿ ಮಾಡಿಕೊಡಲು ಸಾಧ್ಯವೋ ಅವರಿಗೆಲ್ಲಾ ಪೋಡಿ ಮಾಡಿಕೊಡಲೇಬೇಕು ಎಂದು ನಮ್ಮ ಸರ್ಕಾರದ ಸಂಕಲ್ಪ ಮಾಡಿದ್ದು, ಇದಕ್ಕೆಂದು ಪ್ರಾಯೋಗಿಕ ಆ್ಯಪ್ ಸಿದ್ಧಪಡಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ದುರಸ್ಥಿ ಕೆಲಸವನ್ನು ಕಾಗದದಲ್ಲಿ ಕಾರ್ಯಗತಗೊಳಿಸಿದರೆ ನಮಗೂ ಯಾವುದೇ ಲೆಕ್ಕ ಸಿಗುವುದಿಲ್ಲ. ತಳಮಟ್ಟದ ಅಧಿಕಾರಿಗಳ ಇಚ್ಚೆಯಂತೆಯೇ ಕೆಲಸ ನಡೆಯುತ್ತೇ ವಿನಃ ಜನರಿಗೆ ನ್ಯಾಯ ಸಿಗಲ್ಲ. ಇದೇ ಕಾರಣಕ್ಕೆ ಡಿಜಿಟಲ್ ಆ್ಯಪ್ ಮೂಲಕ ದುರಸ್ಥಿ ಕೆಲಸಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ.
ನಮೂನೆ 1 ರಿಂದ 5 ಹಾಗೂ 6 ರಿಂದ 10 ಪೋಡಿ ದುರಸ್ಥಿ ಪ್ರಕರಣ ಬಾಕಿ ಇರುವ ಎಲ್ಲಾ ತಾಲೂಕುಗಲ್ಲೂ ನಾವೇ ಹುಡುಕಿ ದಾಖಲೆ ಕಡತ ಸಿದ್ದಪಡಿಸಬೇಕು ಎಂದು ತೀರ್ಮಾನಿಸಿದ್ದೇವೆ. ಹಾಸನದಲ್ಲಿ ಈಗಾಗಲೇ ಪ್ರಾಯೋಗಿಕ ಯೋಜನೆ ನಡೆಯುತ್ತಿದೆ.
ಇದರ ಆಧಾರದ ಮೇಲೆ ಸೆಪ್ಟೆಂಬರ್ ತಿಂಗಳಿನಿಂದ ಜನರ ಅರ್ಜಿಗೆ ಕಾಯದೆ ನಾವೇ ಸ್ವಯಂ ಪ್ರೇರಣೆಯಿಂದ ಅಭಿಯಾನದ ಮಾದರಿಯಲ್ಲಿ 1 to 5 ಹಾಗೂ 6 to 10 ಪೋಡಿ ದುರಸ್ಥಿ ಮಾಡಲಿದ್ದೇವೆ ಎಲ್ಲಾ ಮಂಜೂರಿದಾರರ ಪರವಾಗಿ ನಾವೇ ಪ್ರಕ್ರಿಯೆ ಆರಂಭಿಸಲಿದ್ದು, ಇದರಿಂದ ಲಕ್ಷಾಂತರ ಜನರಿಗೆ ಅವರ ಜಮೀನಿನ ಹಕ್ಕನ್ನು ಅವರಿಗೆ ನೀಡದಂತಾಗುತ್ತದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ
ಪ್ರಕರಣಗಳ ಇತ್ಯರ್ಥಪಡಿಸಲು ಎಷ್ಟೇ ಕಾನೂನುಗಳನ್ನು ಅಳವಡಿಸಿದರೂ ಅವುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅಧಿಕಾರಿಗಳು ಬಳಸಿಕೊಂಡು ಜನಸಾಮಾನ್ಯರಿಗೆ ಕಿರಿಕಿರಿ ಮಾಡುತ್ತಿದ್ದಾರೆ.
ಕೆಲವೆಡೆ 50 ಎಕರೆ ಪೋಡಿ ಮಾಡಿಕೊಡಿ ಎಂದರೆ 100 ಎಕರೆ ಮಾಡಿಕೊಟ್ಟಿದ್ದಾರೆ, ಬಡ ರೈತನೊಬ್ಬ ತಾನು ಮಾಡುತ್ತಿರುವ ಸಾಗುವಳಿ ಭೂಮಿಗೆ ದಾಖಲೆಗಳನ್ನು ಮಾಡಿಕೊಳ್ಳಲು ಹೊರಟರೆ ಆತನನ್ನು ಅಲೆದಾಡಿಸುತ್ತಿದ್ದಾರೆ.
ಇದಕ್ಕೆಲ್ಲಾ ಇತಿಶ್ರೀ ಹಾಡುವ ಉದ್ದೇಶದಿಂದಲೇ ಪೋಡಿ ಅಭಿಯಾನ ಆರಂಭಿಸಿದ್ದೇವೆ, ಈ ಸಂದರ್ಭದಲ್ಲಿ ಇಲಾಖಾ ನೌಕರರು ಮತ್ತು ಅಧಿಕಾರಿಗಳು ಕಾನೂನಿನ ಚೌಕಟ್ಟನಡಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು, ಇಲ್ಲದಿದ್ದರೆ ನಾವು ನಿಮ್ಮ ಮೇಲೆ ಕಠಿಣ ಕ್ರಮ ಜರುಗಿಸಬೇಕಾದೀತು ಎಂದು ಎಚ್ಚರಿಸಿದ್ದೇನೆ ಎಂದರು.
ಒತ್ತುವರಿ ತೆರವು
ಲ್ಯಾಂಡ್ ಬೀಟ್ ಆ್ಯಪ್ ಆಧರಿಸಿ ಸೆಪ್ಟೆಂಬರ್ ತಿಂಗಳಿನಿಂದ ರಾಜ್ಯಾದ್ಯಂತ ಸರ್ಕಾರ ಭೂ ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕಂದಾಯ, ಅರಣ್ಯ, ಶಿಕ್ಷಣ ಹಾಗೂ ಪಿಡಬ್ಲ್ಯೂಡಿ ಇಲಾಖೆ ಸೇರಿ ರಾಜ್ಯಾದ್ಯಂತ 1.41 ಕೋಟಿ ಎಕರೆ ಸರ್ಕಾರಿ ಜಮೀನು ಇದೆ ಎಂಬುದು ಲ್ಯಾಂಡ್ ಬೀಟ್ ಆ್ಯಪ್ ಮೂಲಕ ತಿಳಿದುಬಂದಿದೆ.
ಕಳೆದ ಎಂಟು ತಿಂಗಳಿನಿಂದ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಅವರ ಸರ್ಕಲ್ ನಲ್ಲಿ ಇರುವ ಸರ್ಕಾರಿ ಜಮೀನು ಎಷ್ಟಿವೆ? ಎಂದು ಲ್ಯಾಂಡ್ ಬೀಟ್ ಆ್ಯಪ್ ನಲ್ಲಿ ಅಪ್ಲೋಡ್ ಮಾಡಲು ಹೇಳಿದ್ದೆವು. ಅದು ಅಪ್ಲೋಡ್ ಆದ ಮೇಲೆ ಈ ಲೆಕ್ಕ ಸಿಕ್ಕಿವೆ. ಈಗ ನಮ್ಮ ಬಳಿ ಜಿಲ್ಲಾವಾರು, ತಾಲೂಕವಾರು ಹಾಗೂ ಗ್ರಾಮವಾರು ಸರ್ವೇ ನಂಬರ್- ಲೊಕೇಷನ್ ಮತ್ತು ವಿಸ್ತೀಣದ ಮಾಹಿತಿ ಲಭ್ಯವಾಗಿದೆ” ಎಂದರು.
ಮೊದಲ ಹಂತದ ಕೆಲಸ ಮುಕ್ತಾಯವಾಗಿದ್ದು, ಎರಡನೇ ಹಂತದಲ್ಲಿ ಮಾರ್ಚ್ ತಿಂಗಳಿನಿಂದ 14 ಲಕ್ಷ ಸರ್ವೇ ನಂಬರ್‌ಗೆ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಖುದ್ದು ಬೀಟ್ ಮಾಡಿಸಿದ್ದೇವೆ. 13,04,885 ಜಾಗಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಹೀಗೆ ಭೇಟಿ ನೀಡಿ ಆ ಜಾಗ ಸರ್ಕಾರದ ವಶದಲ್ಲಿದೆಯೋ ಅಥವಾ ಒತ್ತುವರಿಯಾಗಿದೆಯಾ ಎಂದು ಆ್ಯಪ್ ನಲ್ಲಿ ನಮೂದಿಸಿದ್ದಾರೆ. ಈಗಾಗಲೇ ಶೇ.90 ರಷ್ಟು ಜಾಗ ಸ್ಪಾಟ್ ವಿಸಿಟ್ ಆಗಿದೆ, ಹಲವೆಡೆ ಒತ್ತುವರಿ ಇರುವುದು ಗೊತ್ತಾಗಿದೆ.
ಸೆಪ್ಟೆಂಬರ್ ತಿಂಗಳಿನಿಂದ ರೈತರ ಭೂಮಿ ಬಿಟ್ಟು ಉಳಿದ ಎಲ್ಲಾ ಒತ್ತುವರಿಯನ್ನೂ ತಹಶೀಲ್ದಾರ್ ಮೂಲಕ ತೆರವುಗೊಳಿಸಲಾಗುವುದು. ಮುಖ್ಯವಾಗಿ ಕೆರೆ-ಸ್ಮಶಾನ ಜಾಗವನ್ನು ಸರ್ವೇ ನಡೆಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಆಧಾರ್ ಸಂಖ್ಯೆ ಜೋಡಣೆಗೆ ಗಡುವು
ಈಗಾಗಲೇ 2.68 ಕೋಟಿ ರೈತರ ಆಧಾರ್ ಸೀಡಿಂಗ್ ಕೆಲಸ ಮುಕ್ತಾಯವಾಗಿದ್ದು, ಆಗಸ್ಟ್ ತಿಂಗಳಾಂತ್ಯದೊಳಗಾಗಿ ಆಧಾರ್ ಸೀಡಿಂಗ್ ಕೆಲಸವನ್ನು ಸಂಪೂರ್ಣಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ರಾಜ್ಯಾದ್ಯಂತ 4.8 ಕೋಟಿ ಜಮೀನಿನ ಮಾಲಿಕತ್ವ ಇದೆ. ಈವರೆಗೆ 2.68ಕೋಟಿ ರೈತರನ್ನು ಖುದ್ದು ಭೇಟಿ ಮಾಡಿ ಆಧಾರ್ ಜೊತೆಗೆ ಆರ್‌ಟಿಸಿ ಲಿಂಕ್ ಮಾಡಲಾಗಿದೆ. ಶೇ.65 ರಷ್ಟು ಕೆಲಸ ಸಂಪೂರ್ಣವಾಗಿದ್ದು, ಈ ತಿಂಗಳಾಂತ್ಯದೊಳಗೆ ಕನಿಷ್ಟ ಶೇ.90 ರಷ್ಟು ಕೆಲಸ ಮುಗಿಸುವ ಗುರಿ ಹೊಂದಲಾಗಿದೆ” ಎಂದರು.
ಆಧಾರ್ ಸೀಡಿಂಗ್ ನಿಂದಾಗಿ ಸರ್ಕಾರಕ್ಕೆ ಸಾಕಷ್ಟು ಅಂಕಿಅಂಶಗಳು ಸಿಗುತ್ತಿದೆ. 36.53 ಲಕ್ಷ ಜಮೀನುಗಳಲ್ಲಿ ವ್ಯಕ್ತಿ ತೀರಿ ಹೋಗಿದ್ರೂ ಪಹಣಿಯಲ್ಲಿ ಅವರ ಹೆಸರೇ ಉಲ್ಲೇಖವಾಗಿರುವುದು ಆಧಾರ್ ಸೀಡಿಂಗ್‌ನಿಂದ ತಿಳಿದುಬಂದಿದೆ.
ಎರಡು ತಿಂಗಳ ನಂತರ ಅಧಾಲತ್ ಮೂಲಕ ಫೌತಿಖಾತೆ ಅಭಿಯಾನ ಆರಂಭಿಸುವ ಚಿಂತನೆ ಇದೆ. ಅಲ್ಲದೆ, ಆಧಾರ್ ಸೀಡಿಂಗ್‌ನಿಂದಾಗಿ ನಕಲಿ ವ್ಯಕ್ತಿ ಸೃಷ್ಟಿಸಿ ಅಕ್ರಮವಾಗಿ ಜಮೀನು ಮಾರಾಟವನ್ನು ತಪ್ಪಿಸಬಹುದು, ಬಿಟ್ಟುಹೋದ ಸರ್ಕಾರದ ಜಮೀನುಗಳೂ ಸಹ ಇದೀಗ ಸಿಕ್ಕಿದೆ ಒತ್ತುವರಿಯಾದದ್ದೂ ಗೊತ್ತಾಗಿದೆ.
ಜಮೀನಿಗೆ ಆಧಾರ್ ಲಿಂಕ್ ಮಾಡುವಾಗ 2.20 ಲಕ್ಷ ಜಮೀನು ಸರ್ಕಾರಿ ಭೂಮಿ ಎಂದು ಗುರುತಿಸದ ಭೂಮಿ ಇವೆ ಎಂದು ತಿಳಿದುಬಂದಿದೆ. ಆಧಾರ್ ಸೀಡಿಂಗ್ ಮುಗಿಯುವುದರ ಒಳಗಾಗಿ 3 ರಿಂದ 3.50 ಲಕ್ಷ ಹೆಚ್ಚುವರಿ ಸರ್ಕಾರಿ ಭೂಮಿ ಲೆಕ್ಕಕ್ಕೆ ಬರುವ ಸಾಧ್ಯತೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.