

ಬೆಳಗಾವಿ: ಸಾಲು, ಸಾಲು ದುರಂತ ಕಣ್ಣ ಮುಂದೆ ಇರುವಾಗಲೇ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ವೈದ್ಯರ (Doctors) ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ಮಹಿಳೆಯನ್ನು ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಪೂಜಾ ಅಡಿವೆಪ್ಪ ಖಡಕಬಾವಿ(25) ಎಂದು ಗುರತಿಸಲಾಗಿದ್ದು, ಡಿಸೆಂಬರ್ 24ರಂದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಡಿಸೆಂಬರ್ 25ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಜನ್ಮ ನೀಡಿದ ಬಳಿಕ ಫಿಟ್ಸ್ ಬಂದು ಮೃತಪಟ್ಟಿದ್ದಾಗಿ ವೈದ್ಯರು (Doctors) ಘೋಷಿಸಿದ್ದು, ತರಾತುರಿಯಲ್ಲಿ ಮೃತದೇಹವನ್ನು ಹಸ್ತಾಂತರ ಮಾಡಿರುವುದಾಗಿ ಕುಟುಂಸ್ಥರು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬಿಮ್ಸ್ ಆಸ್ಪತ್ರೆಯ ವೈದ್ಯರಾದ (Dcotor) ವಸಂತ್ ಕಬ್ಬೂರು, ಮೃತ ಪೂಜಾಗೆ ಈಗಾಗಲೇ ಮೂವರು ಮಕ್ಕಳಿದ್ದು, ಒಂದು ಆಪರೇಷನ್ ಕೂಡ ಆಗಿತ್ತು. ಅವರು ಆಸ್ಪತ್ರೆಗೆ ದಾಖಲಾದಾಗಲೇ ಪ್ರಜ್ಞೆ ಇರಲಿಲ್ಲ. ಕೂಡಲೇ ನಾವು ಅವರನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲು ಶುರು ಮಾಡಿದೆವು.
ದೇಹ ಪರಿಶೀಲನೆ ನಡೆಸಿದಾಗ ಮಹಿಳೆಯ ಹಾರ್ಟ್ ವೀಕ್ ಇದೆ ಎಂದು ತಿಳಿದು ಬಂದಿತ್ತು. ಆದರೆ ಹೆರಿಗೆ ಆದ ಮೇಲೆ ಪಂಪಿಂಗ್ ಸರಿಯಾಗಿ ಆಗದೆ ಪೂಜಾ ಮೃತಪಟ್ಟಿದ್ದಾರೆ. ಮಗು 1.6 ಕೆಜಿ ಇದ್ದು ಐಸಿಯುನಲ್ಲಿ ಚಿಕಿತ್ಸೆ ಕೊಡುತ್ತಿದ್ದೇವೆ. ಮಹಿಳೆಯ ಸಾವಿನಲ್ಲಿ ನಾವು ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ ಎಂದು ಬಿಮ್ಸ್ ಆಸ್ಪತ್ರೆಯ ವೈದ್ಯರಾದ ವಸಂತ್ ಕಬ್ಬೂರು ಮಾಧ್ಯಮಗಳಿಗೆ ತಿಳಿಸಿದ್ದಾರೆ.