

ಚೆನ್ನೈ: ತಮಿಳುನಾಡಿನ ಮಾಜಿ ಆರೋಗ್ಯ ಮಂತ್ರಿ ಹಾಗೂ ಎಐಎಡಿಎಂಕೆ ಶಾಸಕ ಸಿ.ವಿಜಯಭಾಸ್ಕರ್ ಮತ್ತು ಅವರ ಪತ್ನಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ(ಡಿವಿಎಸಿ)ವು ಅಸಮಾನ ಆಸ್ತಿ ಪ್ರಕರಣ ದಾಖಲಿಸಿದೆ. 2016 ರಿಂದ 2021 ರವರೆಗಿನ ವೀರಲಿಮಲೈನ ಶಾಸಕರಾಗಿದ್ದ ಅವಧಿಯಲ್ಲಿ 27 ಕೋಟಿ ರೂಪಾಯಿಗೂ ಮೀರಿದ ಆಸ್ತಿಗಳನ್ನು ವಿಜಯಭಾಸ್ಕರ್ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಚೆನ್ನೈ, ಚೆಂಗಲ್ಪಟ್ಟು, ಕೊಯಮತ್ತೂರು, ತಿರುಚ್ಚಿ, ಪುದುಕೊಟ್ಟೈ ಮತ್ತು ಕಾಂಚೀಪುರಂನಲ್ಲಿರುವ ವಿಜಯಭಾಸ್ಕರ್ ಮತ್ತು ಅವರ ಕುಟುಂಬಕ್ಕೆ ಸೇರಿದ 43 ಸ್ಥಳಗಳಲ್ಲಿ ಇಂದು ಡಿವಿಎಸಿ ಅಧಿಕಾರಿಗಳು ದಾಳಿ ನಡೆಸಿದರು. ದಾಳಿಯ ವೇಳೆ, ಅವರು ತಮ್ಮ ಆದಾಯ ಮೂಲಗಳಿಗೆ ವಿಪರೀತವಾಗಿ ಸುಮಾರು ₹27,22,56,736 ಮೌಲ್ಯದ ಆಸ್ತಿಗಳನ್ನು ಗಳಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಎಐಎಡಿಎಂಕೆಯ ಮಾಜಿ ಸಚಿವರಾದ ಎಂ.ಆರ್.ವಿಜಯಭಾಸ್ಕರ್, ಎಸ್.ಪಿ,ವೇಲುಮಣಿ ಮತ್ತು ಕೆ.ಸಿ.ವೀರಮಣಿ ಅವರ ವಿರುದ್ಧವೂ, ಡಿವಿಎಸಿ, ಈ ಮುನ್ನ ಇದೇ ತೆರನ ದಾಳಿಗಳನ್ನು ನಡೆಸಿ, ಭಷ್ಟಾಚಾರದ ಆರೋಪಗಳನ್ನು ದಾಖಲಿಸಿದೆ. (ಏಜೆನ್ಸೀಸ್)