

ಧಾರವಾಡ: ಆರ್.ಎಸ್.ಎಸ್. ಮೂಲದವರೇ ವಿಶ್ವವಿದ್ಯಾಲಯ(ವಿವಿ)ಗಳ ಸಿಂಡಿಕೇಟ್ ಸದಸ್ಯರಾಗಿದ್ದಾರೆ; ಸಿಂಡಿಕೇಟ್ ಕೆಲಸಗಳಿಗೆ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪದ ಬಗ್ಗೆ ಕರ್ನಾಟಕ ವಿವಿ ಸಿಂಡಿಕೇಟ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಳು ದಿನಗಳಲ್ಲಿ ಎಚ್ಡಿಕೆ ತಮ್ಮ ಆಪಾದನೆಯನ್ನು ಸಾಬೀತುಪಡಿಸಬೇಕು, ಇಲ್ಲದಿದ್ದಲ್ಲಿ ಕ್ಷಮಾಪಣೆ ಕೇಳಬೇಕು ಎಂದಿದ್ದಾರೆ.
ಇಂದು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ವಿವಿಯ ಸಿಂಡಿಕೇಟ್ ಸದಸ್ಯ ಸುಧೀಂದ್ರ ದೇಶಪಾಂಡೆ, ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದು ನಿಜ. ಆರ್.ಎಸ್.ಎಸ್.ನವರನ್ನೇ ಹೆಚ್ಚಾಗಿ ಸಿಂಡಿಕೇಟ್ ಸದಸ್ಯರನ್ನಾಗಿ ಮಾಡಿದ್ದಾರೆ. ನಾವೆಲ್ಲ ಆರ್.ಎಸ್.ಎಸ್. ಕಾರ್ಯಕರ್ತರು ಅಂತ ಹೆಮ್ಮೆಯಿಂದ ಹೇಳುತ್ತೇವೆ. ಕರ್ನಾಟಕ ವಿವಿಯಲ್ಲಿ ಆರು ಜನ ಸಿಂಡಿಕೇಟ್ ಸದಸ್ಯರು ಆರ್.ಎಸ್.ಎಸ್. ಹಿನ್ನೆಲೆಯವರು ಇದ್ದೇವೆ ಎಂದರು.
ಆದರೆ ಎಚ್.ಡಿ.ಕೆ. ಅವರು ಹಣ ತೆಗೆದುಕೊಂಡಿದ್ದೇವೆ ಅಂತ ಆರೋಪಿಸಿದ್ದಾರೆ. ಅವರು ಅದನ್ನು ಸಾಬೀತು ಮಾಡಬೇಕು. ಹಣ ತೆಗೆದುಕೊಂಡವರ ಹೆಸರು ಹೇಳಬೇಕು. ಏಳು ದಿನಗಳಲ್ಲಿ ಹಣ ತೆಗೆದುಕೊಂಡಿದ್ದನ್ನು ಸಾಬೀತು ಮಾಡಬೇಕು. ಏಳು ದಿನದಲ್ಲಿ ಸಾಬೀತು ಆಗದಿದ್ದಲ್ಲಿ ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದಲ್ಲಿ ಅವರ ವಿರುದ್ಧ ಮಾನಹಾನಿ ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರಚಾರದ ಸಲುವಾಗಿ ಕುಮಾರಸ್ವಾಮಿ ಆರ್.ಎಸ್.ಎಸ್. ಬಗ್ಗೆ ಹೇಳುತ್ತಿದ್ದಾರೆ. ಸಂಘ ಪರಿವಾರವನ್ನು ಬೈದರೆ ವೋಟ್ ಬರ್ತಾವೆ. ಆರ್.ಎಸ್.ಎಸ್.ನ ಟಾರ್ಗೆಟ್ ಮಾಡಿದ್ರೆ ಲಾಭ ಅಂತ ತಿಳಿದಿದ್ದಾರೆ ಎಂದು ದೇಶಪಾಂಡೆ ಟೀಕಿಸಿದ್ದಾರೆ.