ಬೈಂದೂರು: ಪ್ರತಿಯೊಂದು ಸರ್ಕಾರಿ ಶಾಲೆ ಉನ್ನತ ಮಟ್ಟಕ್ಕೇರಬೇಕಾದರೆ ಹಳೇ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗೆಯೇ ಈ ಶಾಲೆಯಲ್ಲಿಯೂ ಹಳೇ ವಿದ್ಯಾರ್ಥಿಗಳು, ದಾನಿಗಳ ಸಹಕಾರದಿಂದ ಸುಮಾರು 15 ಲಕ್ಷ ರೂ.ವೆಚ್ಚದಲ್ಲಿ ಸಭಾಭವನ ನಿರ್ಮಿಸಿ ಮಾದರಿಯಾಗಿದ್ದೀರಿ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ರಾಗಿಹಕ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ಸಭಾಂಗಣ ಉದ್ಘಾಟಿಸಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ರವಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ದಾನಿಗಳಿಗೆ ಮತ್ತು ಹಿಂದೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನುಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ರವೀಂದ್ರ ಪೂಜಾರಿ ಮತ್ತು ತಂಡದವರು ಪ್ರೋತ್ಸಾಹಧನ ನೀಡಿ ಗೌರವಿಸಿದರು. ವಿದ್ಯಾರ್ಥಿಗಳಿಗೆ ಮತ್ತು ಹಳೇ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ, ಸದಸ್ಯ ಸುರೇಶ್ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಅಧ್ಯಕ್ಷ ಶೇಖರ ಪೂಜಾರಿ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ರಮೇಶ ಪೂಜಾರಿ, ಮುಖ್ಯಶಿಕ್ಷಕ ಸಂಜು ಗೌಡ ಕೆ., ಪ್ರಮುಖರಾದ ಪ್ರದೀಪ್ ಶೆಟ್ಟಿ, ನಾಗರಾಜ್ ಬಿಡುವಾಳ್, ಶರತ್ ಗಾಣಿಗ, ವಿದ್ಯಾರ್ಥಿ ನಾಯಕಿ ನಾಗಶ್ರೀ ಉಪಸ್ಥಿತರಿದ್ದರು. ಅಧ್ಯಾಪಕ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.