ಕಲಾ ಸಂಸ್ಥೆಯಿಂದ ಊರಿನ ಸಮೃದ್ಧಿ

yaksha
Published on

ಬೈಂದೂರು: ಕಲಾ ಸಂಸ್ಥೆಗಳು ಊರನ್ನು ಸಾಂಸ್ಕೃತಿಕವಾಗಿ ಸಮೃದ್ಧವನ್ನಾಗಿಸುತ್ತದೆ. ಕ್ರೀಡೆ, ಕಲೆ, ಸಾಹಿತ್ಯ ಸದಭಿರುಚಿಯ ಚಟುವಟಿಕೆ ದಿನವೂ ದಣಿಯುವ ದೇಹ ಹಾಗೂ ಮನಸ್ಸಿಗೆ ಮರು ಚೈತನ್ಯ ತುಂಬುವ ಕಾರ್ಯ ಮಾಡುತ್ತದೆ ಎಂದು ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಂಜುನಾಥ ಪಿ.ನಾಯ್ಕ ಹೇಳಿದರು.

ಸುರಭಿ ರಜತಯಾನ ತಿಂಗಳ ತಿರುಳು ಕಾರ್ಯಕ್ರಮದ ಅಂಗವಾಗಿ ಸಮಷ್ಟಿ ಪ್ರತಿಷ್ಠಾನ ಹಾಗೂ ಸ್ನೇಹತರಂಗ ಬೈಂದೂರು ಸಹಯೋಗದೊಂದಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಜ.5ರಿಂದ 7ರ ತನಕ ನಡೆಯುವ ಯಕ್ಷ-ಗೊಂಬೆ ವೈಭವ ಸಮಾರಂಭದ ಆಮಂತ್ರಣ ಪತ್ರಿಕೆ ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಅಧ್ಯಕ್ಷತೆ ವಹಿಸಿ, 5ರಂದು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಅವರಿಂದ ಚೂಡಾಮಣಿ- ಲಂಕಾದಹನ ಗೊಂಬೆಯಾಟ ಹಾಗೂ ಗೊಂಬೆಯಾಟ ಪ್ರಾತ್ಯಕ್ಷಿಕೆ ನಡೆಯಲಿದೆ. 6ರಂದು ಶ್ರೀ ರೇಣುಕಾಮಾತೆ ತೊಗಲುಗೊಂಬೆ ಮೇಳ ಅಂಬಳೆ ಚಿಕ್ಕಮಗಳೂರು ಅವರಿಂದ ತೊಗಲು ಗೊಂಬೆಯಾಟ ಸುಪ್ರಭಾ ವಿಲಾಸ ಜರುಗಲಿದೆ. 7ರಂದು ಯಕ್ಷಗಾನ ಕೇಂದ್ರ ಇಂದ್ರಾಳಿಯವರಿಂದ ಜಟಾಯು ಮೋಕ್ಷ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಯಕ್ಷ ಗೊಂಬೆ ವೈಭವ ಕಾರ್ಯಕ್ರಮ ಬೈಂದೂರಿನ ಶಾರದಾ ವೇದಿಕೆಯಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಡೆಯಲಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ ಕಾರ್ಯಕ್ರಮ ಉದ್ಘಾಟಿಸುವರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸಮಾರೋಪ ಮಾತನಾಡಲಿದ್ದಾರೆ ಎಂದರು. ಸಮಷ್ಟಿ ಪ್ರತಿಷ್ಠಾನ ಮ್ಯಾನೇಜಿಂಗ್ ಟ್ರಸ್ಟಿ ಸುನೀಲ್ ಎಚ್.ಜಿ., ಸುರಭಿ ನಿರ್ದೇಶಕ ಸುಧಾಕರ ಪಿ.ಬೈಂದೂರು, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ, ಉಪಾಧ್ಯಕ್ಷ ಲಕ್ಷ್ಮಣ ಕೊರಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net