ಕುಳಿತಲ್ಲೇ ಓದಿ ಇಷ್ಟದ ಸ್ಟೋರಿ: ಕತೆಗಳೆಲ್ಲ ಆನ್​ಲೈನ್​ನಲ್ಲೇ ಲಭ್ಯ..

Putani
Published on
ಶಾಲೆಗೆ ಹೋಗೋ ಹಾಗಿಲ್ಲ. ಮನೆಗೇ ಶಾಲೆ ಬಂದುಬಿಟ್ಟಿದೆ. ಓದು-ಬರಹ ಎಲ್ಲವೂ ಈಗ ಆನ್​ಲೈನ್. ಹಾಗಿರುವಾಗ ನಿಮಗಿಷ್ಟದ, ಪ್ರಪಂಚದ ಬೇರೆ ಬೇರೆ ಕಡೆಗಳ ಕತೆ ಪುಸ್ತಕಗಳೂ ಆನ್​ಲೈನ್​ನಲ್ಲಿಯೇ ಸಿಕ್ಕುಬಿಟ್ಟರೆ? ಆಹಾ ಎಷ್ಟು ಒಳ್ಳೆಯದಲ್ವಾ? ಯೂಟ್ಯೂಬ್ ನೋಡುತ್ತಲೋ ವೀಡಿಯೊ ಗೇಮ್ ಆಡುತ್ತಲೋ ಕಾಲಹರಣ ಮಾಡುವ ಬದಲು ಪುಸ್ತಕಗಳನ್ನು ಓದಿ ನೋಡಿ... ಎಲ್ಲಾ ಪುಸ್ತಕ ಒಂದೇ ಕಡೆ ಎಲ್ಲಿ ಸಿಗುತ್ತೆ ಅಂತ ಡೌಟಾ? ಇಲ್ಲಿದೆ ನೋಡಿ ವಿವರ...

| ಆದಿತ್ಯ

ಪುಸ್ತಕ ಎನ್ನುವುದು ಪದೇಪದೇ ತೆರೆಯಬಹುದಾದ ಉಡುಗೊರೆ ಇದ್ದಹಾಗೆ. ಪುಸ್ತಕಗಳದ್ದು ನಿಜಕ್ಕೂ ಒಂದು ಮಾಯಾ ಪ್ರಪಂಚ. ಶಾಲೆಯ ಪುಸ್ತಕಗಳು ಪಾಠಕ್ಕೆ ಸಂಬಂಧಿಸಿದ ವಿಷಯಗಳನ್ನು ಹೇಳಿಕೊಡುತ್ತವೆ. ಕತೆ ಪುಸ್ತಕಗಳು ನಮ್ಮನ್ನು ಕಲ್ಪನೆಯ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಬೇರೆಬೇರೆ ವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳು ನಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುತ್ತವೆ, ಹೊಸ ಬಗೆಯ ಯೋಚನೆಗಳನ್ನು ಬೆಳೆಸುತ್ತವೆ.

ಆದರೆ ಇಲ್ಲೊಂದು ಸಮಸ್ಯೆ ಇದೆ. ಎಲ್ಲ ಪುಸ್ತಕಗಳು ಎಲ್ಲ ಕಡೆಯಲ್ಲೂ ಸಿಗುವುದಿಲ್ಲ. ಹಾಗೊಮ್ಮೆ ಸಿಕ್ಕರೂ ಅವನ್ನು ಕೊಂಡುಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇನ್ನು, ಹೋದ ವರ್ಷದಿಂದ ನಾವೆಲ್ಲ ಇರುವ ಪರಿಸ್ಥಿತಿಯಲ್ಲಿ ಹೊಸ ಪುಸ್ತಕಗಳನ್ನು ಕೊಳ್ಳುವುದಿರಲಿ, ನೋಡುವುದೂ ಅಪರೂಪವಾಗಿಬಿಟ್ಟಿದೆ. ಕರೊನಾದ ಈ ಟೈಂನಲ್ಲಿ ಎಲ್ಲವೂ ಆನ್​ಲೈನ್ ಆಗಿರುವಾಗ ಇಷ್ಟದ ಕತೆ ಪುಸ್ತಕಗಳೆಲ್ಲವೂ ಆನ್​ಲೈನ್​ನಲ್ಲಿಯೇ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಮಕ್ಕಳು ತಮಗೆ ಬೇಕಾದಾಗಲೆಲ್ಲ ಪುಸ್ತಕಗಳನ್ನು ಓದುವಂತಿರಬೇಕು ಎನ್ನುವ ಉದ್ದೇಶದಿಂದ ಅನೇಕ ಸಂಸ್ಥೆಗಳು ಕೆಲಸಮಾಡುತ್ತಿವೆ. ಮಕ್ಕಳಿಗೆ ಸೂಕ್ತವಾದ ಪುಸ್ತಕಗಳನ್ನು ಪ್ರಕಟಿಸುವುದು ಮಾತ್ರವೇ ಅಲ್ಲದೆ, ಆ ಪುಸ್ತಕಗಳು ಸುಲಭವಾಗಿ - ಉಚಿತವಾಗಿ ಸಿಗುವಂತೆಯೂ ಈ ಸಂಸ್ಥೆಗಳು ನೋಡಿಕೊಳ್ಳುತ್ತಿವೆ.

ಕತೆ ಹೆಣೆಯುವ ಸ್ಟೋರಿ ವೀವರ್

ಬೆಂಗಳೂರಿನದೇ ಸಂಸ್ಥೆಯಾದ ಪ್ರಥಮ್ ಬುಕ್ಸ್ ರೂಪಿಸಿರುವ ‘ಸ್ಟೋರಿವೀವರ್’ ಎಂಬ ಜಾಲತಾಣದಲ್ಲಿ ಪ್ರಪಂಚದೆಲ್ಲೆಡೆಯ 300 ಭಾಷೆಗಳಲ್ಲಿ 36 ಸಾವಿರಕ್ಕೂ ಹೆಚ್ಚು ಕತೆಗಳನ್ನು ಉಚಿತವಾಗಿ ಓದಬಹುದು. ಕತೆಗಳನ್ನು ನಮ್ಮ ಭಾಷೆಗೆ ಅನುವಾದಿಸಬಹುದು, ಹೊಸ ಕತೆಗಳನ್ನೂ ಬರೆದು ಪ್ರಕಟಿಸಬಹುದು. ನಮ್ಮ ಕತೆಗಳ ಜತೆ ಬಳಸಲು ಅಲ್ಲಿ ಬೇಕಾದಷ್ಟು ಚಿತ್ರಗಳಿವೆ, ನಾವೇ ಬರೆದ ಚಿತ್ರಗಳನ್ನು ಸೇರಿಸುವ ಅವಕಾಶವೂ ಇದೆ! ಇದರಿಂದಾಗಿ ನಾವು ಬೇರೆಬೇರೆ ಭಾಷೆಗಳನ್ನು ಕಲಿಯಲು ಸಹಾಯವಾಗುತ್ತದೆ. ಇನ್ನು ನಮ್ಮದೇ ಕತೆಗಳನ್ನು ಬರೆದು ಪ್ರಕಟಿಸುವ ಸಾಧ್ಯತೆಯಂತೂ ಮಕ್ಕಳಿಗಷ್ಟೇ ಅಲ್ಲ, ಶಿಕ್ಷಕರಿಗೂ ಸಹಕಾರಿ. ಅವರು ಅದನ್ನು ಬೋಧನೆಯ ಹೊಸ ವಿಧಾನವಾಗಿ ಬಳಸಿಕೊಳ್ಳಬಹುದು. ಮಕ್ಕಳಿಗೆ ಆಸಕ್ತಿ ಹುಟ್ಟಿಸುವ ವಿವಿಧ ವಿಷಯಗಳನ್ನು ಕತೆಯ ರೂಪದಲ್ಲಿ ಹೇಳುವುದು ಸ್ಟೋರಿವೀವರ್​ನ ಇನ್ನೊಂದು ವೈಶಿಷ್ಟ್ಯ. ಕೋವಿಡ್ ಜಾಗತಿಕ ಸೋಂಕು ಮೊದಲಿಗೆ ಕಾಸಿಕೊಂಡಾಗ ಮಕ್ಕಳಿಗೆ ಬೇಕಾದ ಮಾಹಿತಿಯನ್ನು ತಿಳಿಸುವ ಕತೆಪುಸ್ತಕ ಕೂಡ ಇಲ್ಲಿ ಪ್ರಕಟವಾಗಿತ್ತು. ಡಿಜಿಟಲ್ ರೂಪದ ಜತೆಗೆ ಇಲ್ಲಿರುವ ಹಲವು ಪುಸ್ತಕಗಳ ಮುದ್ರಿತ ಆವೃತ್ತಿ ಕೂಡ ಸಿಗುತ್ತದೆ. ಕೈಗೆಟುಕುವ ಬೆಲೆಯ ಈ ಪುಸ್ತಕಗಳನ್ನು ದಾನಿಗಳ ನೆರವಿನಿಂದ ಉಚಿತವಾಗಿ ಹಂಚಲಾಗುತ್ತಿದೆ.

ಕತೆಪುಸ್ತಕ ಮಾತ್ರವೇ ಅಲ್ಲ!

ಡಿಜಿಟಲ್ ಜಗತ್ತಿನಲ್ಲಿ ಮುಕ್ತವಾಗಿ ದೊರಕುತ್ತಿರುವುದು ಕೇವಲ ಕತೆಪುಸ್ತಕಗಳು ಮಾತ್ರವೇ ಅಲ್ಲ. ಕನ್ನಡ ಭಾಷೆಯಲ್ಲಿ ಮಾಹಿತಿ ತಂತ್ರಜ್ಞಾನದ ಪ್ರಾಥಮಿಕ ಪರಿಚಯ ಮಾಡಿಕೊಡುವ ’ಕಂಪ್ಯೂಟರ್ ಮತ್ತು ಕನ್ನಡ’ ಎನ್ನುವ ಮುಕ್ತ ಪುಸ್ತಕ ಮಿತ್ರಮಾಧ್ಯಮ ಹಾಗೂ ಸುರಾನಾ ಕಾಲೇಜಿನ ಸಹಯೋಗದಲ್ಲಿ 2014ರಲ್ಲೇ ಪ್ರಕಟವಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೂರಕ್ಕೂ ಹೆಚ್ಚು ಪುಸ್ತಕಗಳನ್ನು, ಲೇಖಕ ನಿರಂಜನರ ಕೃತಿಗಳನ್ನು ವಿಕಿಸೋರ್ಸ್ http://kn.wikisource.org ಮೂಲಕ ಲಭ್ಯವಾಗಿಸುವ ಯೋಜನೆಗೂ ಅದೇ ವರ್ಷ ಚಾಲನೆ ದೊರೆತಿತ್ತು. ‘ಇಂಟರ್​ನೆಟ್ ಆರ್ಕೆವ್’ನಲ್ಲೂ ಕಳೆದ ಕೆಲ ವರ್ಷಗಳಿಂದ ಕನ್ನಡದ ಹಲವು ಪುಸ್ತಕ-ಪತ್ರಿಕೆಗಳನ್ನು ಮುಕ್ತ ಪರವಾನಗಿಯಡಿ ಪ್ರಕಟಿಸಲಾಗುತ್ತಿದೆ. 2017ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇಜ್ಞಾನ ಟ್ರಸ್ಟ್ ಸಹಯೋಗದಲ್ಲಿ ಹೊರತಂದ ‘ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ’ ಕೂಡ ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಡಿ ಪ್ರಕಟವಾಗಿದ್ದು http://epada.in ತಾಣದಲ್ಲಿ ಲಭ್ಯವಿದೆ. ವೈದ್ಯ-ಲೇಖಕ ಡಾ. ವಿ. ಎಸ್. ಕಿರಣ್ ಅವರ ‘ಸೆರೆಂಡಿಪಿಟಿ’ ಹಾಗೂ ‘ನಿರಾಮಯ’, ಟಿ. ಜಿ. ಶ್ರೀನಿಧಿ ಬರೆದ ‘ಸ್ವಿಚ್ ಆಫ್’ ಕೃತಿಗಳೂ ಇತ್ತೀಚೆಗೆ ಈ ಪರವಾನಗಿಯಡಿ ಪ್ರಕಟವಾಗಿದ್ದು ’ಗೂಗಲ್ ಪ್ಲೇ ಬುಕ್ಸ್’ ಮೂಲಕ ದೊರಕುತ್ತಿವೆ. ಕ್ರಿಯೇಟಿವ್ ಕಾಮನ್ಸ್ ಪರಿಚಯಿಸುವ ‘ಕ್ರಿಯೇಟಿವ್ ಕಾಮನ್ಸ್ ಕನ್ನಡ 101’ ಕೃತಿ (ಲೇ: ಓಂ ಶಿವಪ್ರಕಾಶ್) ಕೂಡ ಲಭ್ಯವಿದೆ.

ಡಿಜಿಟಲ್ ಜಗತ್ತಿನ ಸಾಧ್ಯತೆಗಳು

ಡಿಜಿಟಲ್ ಮಾಧ್ಯಮದ ಮೂಲಕ ಪುಸ್ತಕ ಓದುವ ಅಭ್ಯಾಸವಿಲ್ಲದವರನ್ನೂ ಪುಸ್ತಕಲೋಕದ ಕಡೆಗೆ ಕರೆತರುವುದು ಸಾಧ್ಯವಾಗುತ್ತದೆ. ಧ್ವನಿ, ವೀಡಿಯೊ ಮುಂತಾದ ಹೊಸ ಮಾಧ್ಯಮಗಳ ಮೂಲಕ ಅವರಿಗೆ ಪುಸ್ತಕಗಳ ರುಚಿ ಹತ್ತಿಸಿದರೆ ಮುಂದಕ್ಕೆ ಅವರೇ ಪುಸ್ತಕಗಳನ್ನು ಓದುವಂತೆ ಆಗಬಹುದು, ಅಲ್ಲವೇ? ಸ್ಟೋರಿವೀವರ್ ತಾಣದಲ್ಲೇ ಪಠ್ಯ-ಚಿತ್ರ ಮಾತ್ರವಲ್ಲದೆ ಅನಿಮೇಶನ್ ಚಿತ್ರಗಳನ್ನು, ಕತೆಯ ಧ್ವನಿರೂಪವನ್ನು ಬಳಸಿಕೊಂಡ ಕತೆಗಳಿವೆ. ಇಜ್ಞಾನ ಟ್ರಸ್ಟ್ ಸಂಸ್ಥೆ ‘ಪುಟ್ಟ ಪುಟ್ಟಿಯ ಪರಿಸರ ಪಾಠಗಳು’ ಕೃತಿಯ ಧ್ವನಿರೂಪಕ್ಕೆ ಚಿತ್ರಗಳನ್ನು ಸೇರಿಸಿದ ವೀಡಿಯೊಬುಕ್ ಆವೃತ್ತಿಯನ್ನು ಯೂಟ್ಯೂಬ್​ನಲ್ಲಿ (http://tinyurl.com/PuttaPutti) ಪ್ರಕಟಿಸಿದೆ.

ಕ್ರಿಯೇಟಿವ್ ಕಾಮನ್ಸ್

ಸ್ಟೋರಿವೀವರ್​ನಲ್ಲಿರುವ ಎಲ್ಲ ಕತೆಗಳೂ ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಡಿ ಪ್ರಕಟವಾಗುತ್ತಿರುವುದು ವಿಶೇಷ. ಈ ಮುಕ್ತ ಪರವಾನಗಿಯಡಿ ಪ್ರಕಟಿಸುವ ಮೂಲಕ ಕತೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು, ಅನುವಾದಿಸುವುದು ಎಲ್ಲವೂ ಸಾಧ್ಯವಾಗುತ್ತದೆ. ಲಾಭಾಪೇಕ್ಷೆಯಿಲ್ಲದ ಇಂತಹವೇ ಇನ್ನು ಕೆಲ ಸಂಸ್ಥೆಗಳೂ ತಮ್ಮ ಪ್ರಕಟಣೆಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಡಿ ಪ್ರಕಟಿಸುತ್ತಿವೆ. ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ಕಳೆದ ವರ್ಷ ಪ್ರಕಟಿಸಿದ ‘ಪುಟ್ಟ ಪುಟ್ಟಿಯ ಪರಿಸರ ಪಾಠಗಳು’ ಕೃತಿ ಇಂತಹ ಪುಸ್ತಕಗಳಿಗೊಂದು ಉದಾಹರಣೆ. ಈ ಪುಸ್ತಕದ ನೂರಾರು ಮುದ್ರಿತ ಪ್ರತಿಗಳನ್ನು ಈವರೆಗೆ ರಾಜ್ಯದ ಹಲವೆಡೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗಿದೆ. ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಯಬೇಕೆಂದರೆ ಮೊದಲಿಗೆ ಹೆಚ್ಚುಹೆಚ್ಚು ಪುಸ್ತಕಗಳು ಅವರ ಕೈಗೆ ಸಿಗುವಂತಾಗಬೇಕು. ನಮ್ಮ ಸಂಸ್ಥೆಯ ‘ಕಲಿಕೆಗೆ ಕೊಡುಗೆ’ ಕಾರ್ಯಕ್ರಮವನ್ನು ಇದೇ ಉದ್ದೇಶದಿಂದ ರೂಪಿಸಿದ್ದೇವೆ. ಆ ಮೂಲಕ ಈವರೆಗೆ ಸಾವಿರಾರು ಪುಸ್ತಕಗಳನ್ನು ಶಾಲೆಗಳಿಗೆ - ವಿದ್ಯಾರ್ಥಿಗಳಿಗೆ ತಲುಪಿಸಿದ್ದೇವೆ, ಎಂದು ಇಜ್ಞಾನ ಟ್ರಸ್ಟ್​ನ ಟಿ. ಎಸ್. ಗೋಪಾಲ್ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net