ಉಷ್ಣ ದೇಹ, ಶೀತ ಶರೀರ ಇರುವುದು ಯಾಕೆ?

Healthy Body
Published on
ನಾವು ವಾಸಿಸುವ ಜಗತ್ತು ಅನೇಕ ವಿಸ್ಮಯಗಳಿಂದ ಕೂಡಿದೆ. ಇಂದಿನ ವಿಜ್ಞಾನವು ಮನುಷ್ಯರ ದೇಹದ ತಾಪಮಾನ 98.6 ಡಿಗ್ರಿ ಫ್ಯಾರನ್​ಹೀಟ್ ಇರುವುದು ಪ್ರಾಕೃತ ಎನ್ನುತ್ತದೆ. ಮನೆಯಲ್ಲಿರುವ ಎಲ್ಲರನ್ನೂ ಥರ್ವಮೀಟರ್ ಮಾಪಕದೊಂದಿಗೆ ಪರೀಕ್ಷಿಸುತ್ತಾ ಹೋದರೆ ಬಹುತೇಕರಲ್ಲಿ ಸರಿಸುಮಾರು ಇದೇ ಉಷ್ಣತೆಯನ್ನು ತೋರಿಸುತ್ತದೆ. ಹಾಗಿದ್ದರೂ ಒಬ್ಬರ ಮೈಯನ್ನು ಹೊರಗಡೆಯಿಂದ ಮುಟ್ಟಿನೋಡಿದಾಗ ದೇಹವು ಕುದಿಯುತ್ತಿದ್ದಂತೆ ಭಾಸವಾಗುತ್ತದೆ. ಹಾಗೆಂದು ಅವರಿಗೇನೂ ಜ್ವರವಿರುವುದಿಲ್ಲ, ಅಳೆದಾಗ ತಾಪಮಾನವೂ ಹೆಚ್ಚಾಗಿರುವುದಿಲ್ಲ! ಸ್ವತಃ ಆ ವ್ಯಕ್ತಿಯೂ ತನ್ನದು ಉಷ್ಣ ಶರೀರ ಎನ್ನುತ್ತಾರೆ! ಸ್ವಲ್ಪ ಉಷ್ಣ ಪದಾರ್ಥ ಸೇವಿಸುವಂತಿಲ್ಲ, ಮೈಗೆ ತಡೆಯಲು ಕಷ್ಟವಾಗುವಷ್ಟು ಉಷ್ಣವಾಗುತ್ತದೆ ಎನ್ನುತ್ತಾರೆ. ಹೊಟ್ಟೆಯಲ್ಲಿ ಪಿತ್ತ ಜಾಸ್ತಿಯಾಗುತ್ತದೆ, ಬಾಯಿಯಲ್ಲಿ, ನಾಲಗೆಯಲ್ಲಿ ಹುಣ್ಣುಗಳಾಗುತ್ತವೆ. ಮಲದ್ವಾರ ಉರಿಯುತ್ತದೆ, ಮೂತ್ರವೂ ಬಿಸಿಯಾಗಿ ಉರಿಯಾಗಿ ಹರಿಯುತ್ತದೆ. ತಲೆಯೂ ಬಿಸಿಯಾಗುತ್ತದೆ. ಕೈಕಾಲುಗಳ ಶಾಖ ಹೆಚ್ಚಾದಂತೆ ಅನುಭವವಾಗುತ್ತದೆ. ಹಸ್ತ ಪಾದಗಳು ಉರಿಯುತ್ತವೆ. ಇಂತಹ ಲಕ್ಷಣಗಳ ಸರಮಾಲೆಯನ್ನೇ ಉಷ್ಣ ದೇಹಿಗಳು ಅರುಹುತ್ತಾರೆ. ಇನ್ನು ಕೆಲವರ ಚರ್ಮ ಮುಟ್ಟಿದರೆ ಮಂಜುಗಡ್ಡೆಯ ಸ್ವರ್ಶವಾದ ಅನುಭವ! ರಕ್ತಸಂಚಾರವೇ ಇಲ್ಲವೇನೋ ಎಂದು ಅನುಮಾನ ಬರುವಷ್ಟು ತಣ್ಣಗೆ ಕೊರೆಯುತ್ತದೆ. ಉಷ್ಣಮಾಪಕದಲ್ಲಿ ನೋಡಿದರೆ ಶರೀರದ ಉಷ್ಣತೆ ಉಳಿದವರಿಗೆ ಇರುವಂತೆ ಸಹಜ ಮಟ್ಟದಲ್ಲೇ ಇರುತ್ತದೆ. ಸ್ವಲ್ಪ ಹಣ್ಣಿನರಸ, ಶೀತಲ ಆಹಾರ ಸೇವಿಸಿದರೆ ಶೀತ ಕೆಮ್ಮು ಆರಂಭವಾಗುತ್ತದೆ. ಹವಾನಿಯಂತ್ರಿತ ತಣ್ಣನೆ ಕೋಣೆಗಳ ಹತ್ತಿರ ಸುಳಿಯಲೂ ಇವರು ಇಷ್ಟಪಡುವುದಿಲ್ಲ ಯಾಕೆ ಹೀಗೆ ಎಂಬುದಕ್ಕೆ ಉತ್ತರ ಸಿಗಬೇಕಾದರೆ ನಾವು ಆಯುರ್ವೆದದ ಮೊರೆ ಹೋಗಬೇಕು.

ವಿಶ್ವವು ಅಸಂಖ್ಯ ನಕ್ಷತ್ರ, ಗ್ರಹ, ಉಪಗ್ರಹಗಳಿಂದ ತುಂಬಿದ್ದರೂ ನಮ್ಮ ಭೂಮಿಯಲ್ಲಿರುವ ಜೀವಿಗಳಿಗೆ ಎರಡೇ ಮುಖ್ಯ. ಒಂದು ಸೂರ್ಯ, ಇನ್ನೊಂದು ಚಂದ್ರ. ಸೂರ್ಯನು ಉಷ್ಣದ ಸಾಕಾರ ರೂಪವಾದರೆ ಚಂದ್ರನು ಶೀತದ ಬಿಂಬ. ಹೀಗೆ ಸೂರ್ಯ ಚಂದ್ರರಿಂದ ಮೊದಲ್ಗೊಂಡು ಭೂಮಿಯಲ್ಲಿರುವ ಸಕಲ ಜೀವಿಗಳು, ಚರಾಚರ ವಸ್ತುಗಳು ಎಲ್ಲವುಗಳಲ್ಲೂ ಉಷ್ಣ, ಶೀತಗಳೆಂಬ ಗುಣ ವಿಭಜನೆಗಳನ್ನು ಕಾಣುತ್ತೇವೆ. ಅದನ್ನೇ ಆಯುರ್ವೆದವು ಉಷ್ಣ, ಶೀತ ವೀರ್ಯಗಳೆಂದು ಹೇಳಿದ್ದು, ಬಹುವಿಧವಾದ ಗುಣಗಳಲ್ಲೂ ಇವೆರಡನ್ನು ಸೇರಿಸಿಕೊಂಡಿದೆ. ಹಗಲು ಉಷ್ಣವಾದರೆ, ರಾತ್ರಿ ಶೀತ. ಶೀತ ಕೆಮ್ಮುಗಳಿದ್ದಾಗ ಬಿಸಿನೀರು, ತಲೆಯು ನಾನಾ ಆಲೋಚನೆಗಳಿಂದ ಬಿಸಿಯಾಗಿದ್ದಾಗ ತಣ್ಣೀರು ಮುದ ನೀಡುತ್ತದೆ. ಬಿಸಿಗೆ ಬೆಂಕಿ, ತಂಪಿಗೆ ನೀರು ಒದಗಿಬರುತ್ತದೆ. ಅವನಿಯಲ್ಲಿರುವ ಪ್ರತಿಯೊಂದು ಖನಿಜ ದ್ರವ್ಯಗಳೂ, ಮುತ್ತು ರತ್ನಗಳೂ, ಸಸ್ಯ ಔಷಧಗಳೂ ಶೀತ, ಉಷ್ಣಗುಣಗಳ ಭೇದದಿಂದ ಎರಡಾಗಿ ಕಾಣುತ್ತವೆ. ಹೆಚ್ಚೇಕೆ, ಅಡುಗೆ ಕೋಣೆಯಲ್ಲಿರುವ ಸಾಂಬಾರ ಪದಾರ್ಥಗಳು ಬಹುತೇಕ ಉಷ್ಣಗುಣವನ್ನೇ ಹೊಂದಿದ್ದರೂ ಸೌಮ್ಯವಾದ ಶೀತಲ ಗುಣದ ದ್ರವ್ಯಗಳೂ ಅವುಗಳಲ್ಲಿ ಸೇರಿಕೊಂಡಿವೆ! ಎಲ್ಲೆಡೆಯೂ ಈ ಎರಡು ವಿರುದ್ಧ ಗುಣ ಲಕ್ಷಣಗಳನ್ನು ಗಮನಿಸುತ್ತಾ ಹೋಗಬಹುದು. ಹಣ್ಣುಗಳಲ್ಲೂ ಶೀತ ವೀರ್ಯ, ಉಷ್ಣ ವೀರ್ಯ ಉಳ್ಳವುಗಳನ್ನು ನಾವೆಲ್ಲ ತಿಳಿದಿರಬೇಕು. ತರಕಾರಿಗಳಲ್ಲೂ ಕೆಲವೊಂದು ಶೀತ ಗುಣ ಹೊಂದಿದ್ದರೆ ಬಹುತೇಕ ತರಕಾರಿಗಳು ಉಷ್ಣ ಕಾರಕಗಳು.

ಕಾಲಗಳಲ್ಲೂ ಶೀತಕಾಲವೋ ಉಷ್ಣಕಾಲವೋ ಎಂಬುದು ಚಿಕಿತ್ಸೆಯನ್ನು ನಿರ್ಧರಿಸಲು, ಔಷಧವನ್ನು ಆಯ್ದುಕೊಳ್ಳಲು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿಯ ದೇಹಪ್ರಕೃತಿಯನ್ನು ಆಳವಾಗಿ ಅಭ್ಯಸಿಸುತ್ತಾ ಹೋದರೆ ಒಬ್ಬರಿಂದೊಬ್ಬರ ದೇಹವು ಉಷ್ಣ ಶೀತಗಳ ವಿಷಯದಲ್ಲಿ ಯಾಕೆ ವಿಭಿನ್ನವಾಗಿ ವರ್ತಿಸುತ್ತದೆ ಎಂಬುದರ ಸ್ಪಷ್ಟ ಅರಿವಾಗುತ್ತದೆ. ಇವನ್ನೆಲ್ಲಾ ತಿಳಿದುಕೊಂಡರೆ ಆಹಾರದ ಅಳವಡಿಕೆ ಹೇಗೆ ಎಂಬುದು ಸವಿವರವಾಗಿ ತಿಳಿಯುತ್ತದೆ, ಜೀವನದ ಮುಂದಿನ ಹಾದಿಯ ತಿಳಿವು ಸ್ಪಷ್ಟವಾಗುತ್ತಾ ಹೋಗುತ್ತದೆ. ಎಲ್ಲರಿಗೂ ಒಂದೇ ಬಗೆಯ ಆಹಾರ ಹಿತವೆನಿಸುವುದು ಸಾಧ್ಯವೇ ಇಲ್ಲ. ಕೆಲವರಂತೂ ಅತಿಸೂಕ್ಷ್ಮ ಸ್ವಭಾವವನ್ನು ಹೊಂದಿದ್ದು ಶೀತ ಉಷ್ಣ ಎರಡಕ್ಕೂ ವಿಪರೀತವಾಗಿ ಸ್ಪಂದಿಸುತ್ತಾರೆ. ಇದರ ಆಧಾರದಲ್ಲೇ ಹುಟ್ಟಿಕೊಂಡ ‘ತೀರ್ಥ ತೆಗೊಂಡ್ರೆ ಶೀತ, ಆರತಿ ತಗೊಂಡ್ರೆ ಉಷ್ಣ!’ ಎಂಬ ಮಾತು ಎಷ್ಟೊಂದು ಅರ್ಥಗರ್ಭಿತವಾಗಿದೆ. ಉಷ್ಣ ಶೀತಗಳ ನಡುವೆ ಸಮತೋಲನ ಸಾಧಿಸಬೇಕಾದರೆ ಇವುಗಳ ವಿರುದ್ಧ ಪ್ರಯೋಗ ನಡೆಯಬೇಕು. ಉಷ್ಣ ದೇಹಿಗಳು ಶೀತದ ಆಸರೆ ಪಡೆದುಕೊಳ್ಳಬೇಕು. ಶೀತ ಶರೀರಿಗಳು ಉಷ್ಣವನ್ನು ಆಶ್ರಯಿಸಬೇಕು. ಇದೇ ಕಾರಣದಿಂದ ಚಳಿಗಾಲದಲ್ಲಿ ಜನರು ಮರುಭೂಮಿಯ ಉಷ್ಣ ಪ್ರದೇಶಗಳಿಗೆ ಪ್ರಯಾಣ ಬೆಳೆಸುತ್ತಾರೆ. ಬೇಸಿಗೆಯಲ್ಲಿ ತಂಪಾದ ಗಿರಿಧಾಮಗಳಿಗೆ ವಿಹಾರ ಹೋಗುತ್ತಾರೆ. ಉಷ್ಣ, ಶೀತಗಳ ಮರ್ಮ ಅರಿತರೆ ಕಾಲಕ್ಕೆ ತಕ್ಕಂತೆ ಶರೀರದ ನಿಯಂತ್ರಣಕ್ಕೆ, ರೋಗದ ನಿರ್ವಹಣೆಗೆ, ಆಹಾರದ ನಿರ್ಧಾರಕ್ಕೆ, ವಿಹಾರದ ನಿರ್ಣಯಕ್ಕೆ ಸೇರಿದಂತೆ ಹಿತವಾದ ಬದುಕಿಗೆ ಅದು ಸೋಪಾನವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net