

| ಎನ್. ಶೈಲಜಾ ಹಾಸನ
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಕಾಣಸಿಗಬಹುದಾದ ಸಂಗತಿಗಳೆಂದರೆ ಹೆಣ್ಣು ಮಕ್ಕಳ ದಾರುಣ ಹತ್ಯೆಗಳು. ಕಾಮಪಶುಗಳಾಗಿ ಎಳೆಕಂದಮ್ಮಗಳನ್ನೂ ಬಿಡದೆ ತೃಷೆ ತೀರಿಸಿಕೊಂಡ ನಂತರ ರಕ್ಕಸರಂತೆ ಕೊಂದು ಬಿಡುವ, ಅಮಾನುಷವಾಗಿ ಹಿಂಸಿಸುವ, ಜತೆಯಲ್ಲಿ ಬಾಳುತ್ತಿದ್ದ ಸಂಗಾತಿಯನ್ನು ಕೊಂದು ತುಂಡುಗಳಾಗಿ ಕತ್ತರಿಸಿ ಎಸೆಯುವ ಪೈಚಾಚಿಕ ಪ್ರವೃತ್ತಿ, ಕುಡಿದು ಕಟ್ಟಿಕೊಂಡ ಹೆಂಡತಿಯನ್ನು ನಿರ್ದಯವಾಗಿ ಕೊಲ್ಲುವ ರಾಕ್ಷಸತ್ವ, ತನ್ನನ್ನು ಮದುವೆಯಾಗಲು ಒಪ್ಪದ ಯುವತಿ ಮೇಲೆ ಆಸಿಡ್ ದಾಳಿ ನಡೆಸುವ ವಿಕೃತಿ , ಅನ್ಯಜಾತಿಯಲ್ಲಿ ಮದುವೆಯಾದಳೆಂದು ಹೆತ್ತ ಮಗಳನ್ನೇ ಕೊಂದು ಬಿಡುವ ಪೋಷಕರ ನಿರ್ದಯತೆ, ಜೀವಕೊಟ್ಟ ತಾಯಿಯನ್ನೇ ಕೊಲ್ಲುವ ಪಾಶವೀಕೃತ್ಯ. ಒಂದೇ, ಎರಡೆ? ಇಂತಹ ಪ್ರಕರಣಗಳು ನೂರು, ಸಾವಿರ, ಲಕ್ಷ ಲೆಕ್ಕದಲ್ಲಿ ಕಾಣಸಿಗುತ್ತಿವೆ. ಪ್ರತಿಬಾರಿ ಇಂತಹ ಹೃದಯ ವಿದ್ರಾವಕ ಘಟನೆಗಳನ್ನು ನೋಡುವಾಗ ಎದೆ ತಲ್ಲಣಿಸುತ್ತದೆ. ಏನೂ ಮಾಡಲಾರದ ಅಸಹಾಯಕ ಸ್ಥಿತಿ ಕಂಗೆಡಿಸುತ್ತದೆ.ಈ ಭೂಮಿ ಮೇಲೆ ಹೆಣ್ಣಾಗಿ ಹುಟ್ಟುವುದೆ ತಪ್ಪು ಎನ್ನುವಂತಹ ಕ್ರೂರ ಪರಿಸ್ಥಿತಿ ನಿರ್ವಣವಾಗಿರುವುದನ್ನು ಕಂಡಾಗ ವೇದನೆಯಿಂದ ಪರಿತಪಿಸುವಂತಾಗುತ್ತದೆ.
ಹೆಣ್ಣು ಮಕ್ಕಳ ಮೇಲೆ ಹಾಗೂ ಮಹಿಳೆಯರ ಮೇಲೆ ಈ ಮೃಗೀಯ ದಾಳಿಗಳು ಮುಂದುವರಿಯಲು ಈ ಪುರುಷ ಪ್ರಧಾನ ಧೋರಣೆ ಹಾಗೂ ಕಾನೂನುಗಳನ್ನು ರೂಪಿಸುವಲ್ಲಿ ಮತ್ತು ಜಾರಿಗೆ ತರುವಲ್ಲಿ ಪುರುಷ ಪೂರ್ವಗ್ರಹಗಳು ಹಾಗೂ ಹಿಂದುಳಿದ ಮೌಲ್ಯ ಪ್ರಜ್ಞೆ ಮತ್ತು ಯುವಜನಾಂಗದ ಅಮಾನವೀಯತೆ ಇವೆಲ್ಲ ಕಾರಣವಾಗಿದೆ. ಶಿಕ್ಷಿತರು ಹೆಚ್ಚಾದಂತೆ ಹೆಣ್ಣಿನ ಮೇಲಿನ ದೌರ್ಜನ್ಯವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಸಮಾಜದಲ್ಲಿ ಮಹಿಳೆಯರು ಭಯದ ವಾತಾವರಣದಲ್ಲಿ ಬದುಕು ಸಾಗಿಸುವಂತಾಗಿದೆ. ಹೆಣ್ಣು ಮಕ್ಕಳ ಮೇಲೆ ದೈಹಿಕ ಹಲ್ಲೆ, ಕೊಲೆ, ಲೈಂಗಿಕ ದೌರ್ಜನ್ಯ, ಕಿರುಕುಳ ಹೆಚ್ಚುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಹಿಂಸೆಯು ಅತ್ಯಂತ ವ್ಯಾಪಕವಾಗಿದೆ. ಇದು ಮಾನವ ಹಕ್ಕು ಉಲ್ಲಂಘನೆಗಳಲ್ಲಿ ಅತ್ಯಂತ ಗಂಭೀರವಾದುದು. ಜಗತ್ತಿನಾದ್ಯಂತ ಮೂವರು ಮಹಿಳೆಯರಲ್ಲಿ ಒಬ್ಬ ಮಹಿಳೆಯು ಹಿಂಸೆಗೆ ಒಳಗಾಗುತ್ತಾಳೆ. ಕಳೆದ ಒಂದು ದಶಕದಲ್ಲಿ ಈ ಪ್ರಮಾಣವು ಬದಲಾಗಿದ್ದೇ ಇಲ್ಲ. ಪ್ರತಿ ಒಂದು ತಾಸಿನಲ್ಲಿ ಐವರು ಮಹಿಳೆಯರು ಅಥವಾ ಹೆಣ್ಣು ಮಕ್ಕಳು ತಮ್ಮ ಕುಟುಂಬದವರಿಂದಲೇ ಕೊಲೆಯಾಗುತ್ತಾರೆ ಎಂಬುದು ತೀರಾ ಇತ್ತೀನ ಅಂದಾಜು ಎಂದು ವಿಶ್ವ ಸಂಸ್ಥೆಯು ಹೇಳಿದೆ. ಹೆತ್ತ ಕುಡಿಯಾಗಿ, ಸಂಗಾತಿಯಾಗಿ, ಮನದರಸಿಯಾಗಿ, ಬಾಳಿಗೆ ಬೆಳಕಾದ ಹೆಣ್ಣನ್ನು ತಮ್ಮ ಸೊತ್ತು ಎಂಬಂತೆ ಭಾವಿಸಿ ಮನಬಂದಂತೆ ವರ್ತಿಸುವ ಈ ಪುರುಷ ಪುಂಗವರಿಗೆ ಹೆಣ್ಣಿನ ಸ್ಥಾನದ ಮಹತ್ವ ತಿಳಿಸಿ, ಅವಳನ್ನು ಗೌರವದಿಂದ ನಡೆಸಿಕೊಳ್ಳುವಂತೆ ಮಾಡುವುದು, ಅಂತಹವರ ರಾಕ್ಷಸ ಪ್ರವೃತ್ತಿಯನ್ನು ಮೂಲದಲ್ಲಿಯೆ ಚಿವುಟಿ ಹಾಕಿ ಸಮಾಜದ ಸ್ವಾಸ್ಥವನ್ನು ಕಾಪಾಡುವಂತಹ ಮಹತ್ವಪೂರ್ಣ ಕಾರ್ಯ ಅವಶ್ಯವಾಗಿ ನಡೆಯಬೇಕಾಗಿದೆ.