ವಿವೇಕಧಾರೆ: ಪಾಲಕರು, ಶಿಕ್ಷಕರು ಮತ್ತು ಸರ್ಕಾರಗಳ ಕರ್ತವ್ಯ

School Lead
Published on

ಶಿಕ್ಷಕನಾದವನು ವ್ಯವಹಾರಚತುರನಾಗುವುದಕ್ಕಿಂತ, ವಿವೇಕಿ, ಕುಶಾಗ್ರಮತಿ, ಮೌಲ್ಯವಂತನಾಗಿರಬೇಕು. ಅವನು ಇತಿಹಾಸಪಠ್ಯ ಬೋಧಿಸುವುದಕ್ಕಷ್ಟೇ ಸೀಮಿತವಾಗಬೇಕಿಲ್ಲ, ಪ್ರಾಮಾಣಿಕ ಪ್ರಯತ್ನದಿಂದ ಇತಿಹಾಸ ನಿರ್ವಿುಸುವವನೂ ಆಗಬಹುದಾಗಿದೆ. ಶಿಕ್ಷಕನು ಜಗತ್ತಿನಲ್ಲಿ ಇನ್ಯಾವುದೇ ವಿಚಾರಗಳಿಗಿಂತ ಜ್ಞಾನದ ದೃಷ್ಟಿಯಲ್ಲಿ ಗುರ್ತಿಸಲ್ಪಡಬೇಕೆಂಬ ಸತ್ಯ ಶಿಕ್ಷಕನ ಆತ್ಮಸಾಕ್ಷಿಯಾಗಬೇಕು.

ಮಾನವನ ಜೀವನಕ್ಕೆ ಅರ್ಥ ಬರಲು, ಸಾರ್ಥಕ್ಯ ದೊರಕಲು ವಿದ್ಯೆ ಅದೆಷ್ಟು ಅನಿವಾರ್ಯ ಎಂಬುದನ್ನು ಭಾರತೀಯ ಸನಾತನ ಪರಂಪರೆ ಮನೋಜ್ಞವಾಗಿ ವಿವರಿಸುವಲ್ಲಿ ಎಂದೂ ಎಚ್ಚರ ತಪ್ಪಲಿಲ್ಲ. ಗುರುತತ್ತ್ವವನ್ನು ಅವತಾರಪುರುಷರೂ ಗೌರವಿಸಿ ಅದಕ್ಕೆ ವಿಧೇಯರಾಗಿ ನಡೆದುಕೊಂಡ ಸನ್ನಡತೆಗಳೇ ನಮ್ಮ ಸಂಸ್ಕೃತಿಯ ಹಿರಿಮೆ-ಗರಿಮೆ ಮತ್ತು ಅದುವೇ ನಾಗರಿಕತೆಯ ಜೀವಂತ ಮುಂದುವರಿಕೆಗೆ ದ್ಯೋತಕವಾದದ್ದು.

‘ನ ಹಿ ಜ್ಞಾನೇನ ಸದೃಶಂ, ವಿದ್ಯಾ ವಿಹೀನಃ ಪಶುಃ, ವಿದ್ಯಾ ಗುರೂಣಾಂ ಗುರುಃ, ಸಾ ವಿದ್ಯಾ ಯಾ ವಿಮುಕ್ತಯೇತ್...’ ಇವೇ ಮೊದಲಾದ ಆರ್ಷ ನುಡಿಗಳು ನಮ್ಮ ಪರಂಪರೆಯನ್ನು ದಿಟ್ಟತನದಿಂದ ಮುನ್ನಡೆಸಿವೆಯಲ್ಲದೆ ಆದರ್ಶಪೂರ್ಣ ಸಾರ್ಥಕ್ಯವನ್ನು ದೊರಕಿಸಿಕೊಟ್ಟಿವೆ. ‘ಅನ್ನೇನ ಕ್ಷಣಿಕಾ ತೃಪ್ತಿಃ ಯಾವತ್ ಜೀವಂ ಚ ವಿದ್ಯಾಯಾ’ ಅಂದರೆ ‘ಅನ್ನವು ಒಂದು ಹೊತ್ತಿನ ಹಸಿವನ್ನು ಹೋಗಲಾಡಿಸಿದರೆ ವಿದ್ಯೆ ಇಡೀ ಜೀವನದ ಹಸಿವನ್ನೇ ಹೋಗಲಾಡಿಸುತ್ತದೆ’ ಎಂಬ ಸುಭಾಷಿತಕಾರರ ದಿಟ್ಟನುಡಿಯಲ್ಲಿ ಶಿಕ್ಷಣ ಮೌಲ್ಯಾದರ್ಶದ ಗಟ್ಟಿತನ ಕಾಣದೇನು? ಭರ್ತಹರಿಯ ವೈರಾಗ್ಯಶತಕದಲ್ಲಿ, ‘ಸಮಸ್ತ ದುಃಖಗಳನ್ನು ನಾಶ ಮಾಡುವ ಸಾಮರ್ಥ್ಯ ಜ್ಞಾನಕ್ಕೆ ಮಾತ್ರವೇ ಇರುವುದರಿಂದ ಜ್ಞಾನಮಾರ್ಗವನ್ನು ಅನುಸರಿಸು’ ಎಂದಿದ್ದಾನೆ.

ವ್ಯಕ್ತಿಗಳಿಂದ ಕುಟುಂಬ, ಕುಟುಂಬಗಳ ಸಮೂಹವೇ ಸಮಾಜ, ವಿಸõತ ಸಮಾಜವೇ ರಾಜ್ಯ-ರಾಷ್ಟ್ರ ಅಲ್ಲವೇ? ಅಂದರೆ ರಾಷ್ಟ್ರವೆಂದರೆ ಕೇವಲ ಭೌಗೋಳಿಕ ಪರಿಸರವಲ್ಲ, ಜನಸಂದಣಿಯ ಬೀಡು ಅಷ್ಟೇ ಅಲ್ಲ, ಎಂದಾಯಿತಲ್ಲವೇ? ಇಲ್ಲಿ ಜೀವನವನ್ನು ರೂಪಿಸಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯೂ ಪಾಲಕರ ಹಾಗೂ ಶಿಕ್ಷಕರ ಕೃಪಾಪೋಷಿತನೇ ಆಗಿರುತ್ತಾನೆ. ಇವರೀರ್ವರ ಕಾರ್ಯಕ್ರಮಗಳಿಗೆ ಆದರ್ಶದ ಚೌಕಟ್ಟಿನಲ್ಲಿ ಯಶಸ್ಸು ದೊರಕಿಸಿಕೊಡುವ ಕರ್ತವ್ಯ ಸರ್ಕಾರದ್ದೇ ಆಗಿದೆ. ಆದ್ದರಿಂದಲೇ ‘ರಾಜಾ ಪ್ರತ್ಯಕ್ಷ ದೇವತಾ’ ಎಂಬ ನಿಷ್ಠಾಪೂರ್ಣ ಆದರ್ಶ ರಕ್ತಗತವಾಗಿದೆ. ಸಮಾಜದಲ್ಲಿ ಪಾಲಕರು, ಶಿಕ್ಷಕರು ಮತ್ತು ರಕ್ಷಣೆಯ ಜವಾಬ್ದಾರಿ ಹೊತ್ತ ಸರ್ಕಾರ ಅಪೇಕ್ಷಿತ ಕರ್ತವ್ಯಗಳನ್ನು ಬದ್ಧತೆಯಿಂದ ಯೋಗ್ಯ ರೀತಿಯಲ್ಲಿ ನಿರ್ವಹಿಸಿದ್ದೇ ಆದರೆ ಅವರಿಂದ ಅಪಾರ ಹಾಗೂ ಅಪೂರ್ವವಾದ ಸೇವೆ, ಉಪಕಾರಗಳು ದೊರೆತಂತೆ ಆಗುತ್ತದೆ. ಇದನ್ನೂ ಓದಿ: ಆತ್ಮನಿರ್ಭರತೆ ನೀಗಿಸುತ್ತೆ ಸರ್ವಶಕ್ತಿಗಳ ಕೊರತೆ

ವಿಷ್ಣುಪುರಾಣವು, ‘ಮೂರ್ಖರು ಬಾಲ್ಯವನ್ನು ಆಟದಲ್ಲಿಯೂ, ಯೌವನವನ್ನು ವಿಷಯಸುಖಗಳಲ್ಲಿಯೂ ಮತ್ತು ವೃದ್ಧಾಪ್ಯವನ್ನು ನಿಶ್ಶಕ್ಯ ಜೀವನದಿಂದ ಕಳೆಯುತ್ತಾರೆ’ ಎಂದಿದೆ. ಒಟ್ಟಾರೆ ಮಾನವಸಮಾಜದಲ್ಲಿ ಮಾತಾಪಿತೃಗಳ, ಶಿಕ್ಷಕರ ಮತ್ತು ಸರ್ಕಾರಗಳ ಕರ್ತವ್ಯನಿಷ್ಠೆಯ ಬಲದಿಂದ ವ್ಯಕ್ತಿಯ ‘ಉತ್ಥಾನ’ ಹಾಗೂ ಕರ್ತವ್ಯ ನಿರ್ಲಕ್ಷ್ಯದಿಂದ ವ್ಯಕ್ತಿಯ ‘ಪತನ’, ಎರಡೂ ಮುಖಗಳನ್ನು ಪರಾಂಬರಿಸಬಹುದಾಗಿದೆ. ಜೀವನವನ್ನು ರೂಪಿಸದ ವಿದ್ಯಾಭ್ಯಾಸ ಜೀವವನ್ನೇ ತೆಗೆಯುತ್ತದೆ. ವಿದ್ಯಾಭ್ಯಾಸದ ಮುಖ್ಯ ಉದ್ದೇಶ ಸಾಮಾನ್ಯ ಮನುಷ್ಯನನ್ನು ಯೋಗ್ಯ ಮನುಷ್ಯನನ್ನಾಗಿ ರೂಪಿಸುವುದಾಗಿದೆ, ಆಮೇಲೆ ಅವನು ಆಡಳಿತಗಾರನಾಗುತ್ತಾನೋ? ಆಟಗಾರನಾಗುತ್ತಾನೋ? ಚಿಂತೆಯಿಲ್ಲ.

ಮಕ್ಕಳನ್ನು ಯೋಗ್ಯರನ್ನಾಗಿ ರೂಪಿಸುವ ಮಹಾವ್ಯಕ್ತಿತ್ವನಿರ್ವಣದ ಯಜ್ಞದಲ್ಲಿ ಪಾಲಕರ, ಶಿಕ್ಷಕರ ಹಾಗೂ ಸರ್ಕಾರದ ಪಾತ್ರ ಗುರುತರವಾದದ್ದು. ಇವರು ನಿರ್ವಹಿಸಬೇಕಾದ ಜವಾಬ್ದಾರಿ ಕುರಿತಾಗಿ ಚಿಂತನೆ ನಡೆಸೋಣ.

ಪಾಲಕರ ಪಾತ್ರ: ತಾಯಿ-ತಂದೆಯರು ಮಕ್ಕಳ ಪಾಲಿಗೆ ಜೈವಿಕ ಮಾತಾಪಿತೃಗಳಾದರಷ್ಟೇ ಸಾಲದು. ಮಕ್ಕಳನ್ನು ಲಾಲಿಸಿ ಪೋಷಿಸುವ ಇವರು ಮೊದಲು ತಿಳಿಯಬೇಕಾದ ಸತ್ಯವೆಂದರೆ ತಾವು ಮಕ್ಕಳನ್ನು ಹೆತ್ತಿದ್ದೇವೆ, ಈಯಲಿಲ್ಲ! ಯಾವ ಪ್ರಾಣಿ-ಪಕ್ಷಿಗಳೂ ತಮ್ಮ ಸಂತಾನಕ್ಕೆ ಸೋಮಾರಿತನದ ಜೀವನದೀಕ್ಷೆ ನೀಡುವುದಿಲ್ಲ. ಬಲವಂತವಾಗಿಯಾದರೂ ಔಷಧವನ್ನು ನೀಡಿ ರೋಗವನ್ನು ಪರಿಹರಿಸುವಂತೆ ಮಕ್ಕಳು ಇಷ್ಟಪಡದಿದ್ದರೂ ಅವರಿಗೆ ಪ್ರಯತ್ನಪೂರ್ವಕವಾಗಿ ಶಿಕ್ಷಣ ನೀಡಿ, ನಯ-ನೀತಿಗಳನ್ನು ಕಲಿಸಿಕೊಡಬೇಕು. ಯೌವನ ಬರುವುದರೊಳಗೆ ವಿದ್ಯಾಭ್ಯಾಸ ನೀಡಬೇಕು, ಕಾಲ ಮೀರಿದ ಮೇಲೆ ಗದ್ದೆ ಉತ್ತರೆ ಪ್ರಯೋಜನವಿಲ್ಲ. ವಿದ್ಯೆ ಕಲಿಸಲು ಪುಸ್ತಕಜ್ಞಾನವಷ್ಟೇ ಸಾಕು; ಶೀಲವನ್ನು ಕಲಿಸಲು ಶೀಲವಂತರೇ ಬೇಕು!

ಮಕ್ಕಳ ವ್ಯಕ್ತಿತ್ವದಲ್ಲಿ ಸಾಮರ್ಥ್ಯ-ಚಾತುರ್ಯ-ಪ್ರತಿಭೆಗಳೇ ಮೊದಲಾದ ಶಕ್ತಿಗಳು ವಿಕಾಸ ಹೊಂದುತ್ತಿರುವ ಕಾಲದಲ್ಲೇ ಸಮಾನಾಂತರವಾಗಿ ಸೌಜನ್ಯ, ಔದಾರ್ಯ, ಕರುಣೆ, ಸಹನೆ, ಸಂಯಮಗಳಂಥ ಸದ್ಗುಣಗಳೂ ವಿಕಾಸಗೊಂಡರಷ್ಟೇ ವ್ಯಕ್ತಿತ್ವಪ್ರಜ್ಞೆ ಹಾಗೂ ಚಾರಿತ್ರ್ಯಪ್ರಜ್ಞೆಗಳು ಮೂಡುತ್ತವೆ. ಇಲ್ಲದಿದ್ದರೆ ಸ್ವಾರ್ಥ, ಮತ್ಸರ, ಜಂಭ, ದರ್ಪಗಳೆಂಬ ಅನಿಷ್ಟಗಳು ಹುಲುಸಾಗಿ ಬೆಳೆದು ವ್ಯಕ್ತಿತ್ವ ಎಂಬ ಬೆಳೆಗೆ ಕಳೆಯಾಗಿ ಹಾನಿ ಉಂಟುಮಾಡುತ್ತವೆ. ಬೆಳೆ ಉತ್ತಮವಾಗಿ ಮೂಡಲು ಕಾಳಜಿ ವಹಿಸಲೇಬೇಕು, ಆದರೆ ಕಳೆಯು ಸ್ವತಂತ್ರವಾಗಿ ಬೆಳೆಯಬಲ್ಲದು! ಶ್ರೀರಾಮನಿಗೆ ರಾವಣನೆಂಬ ಕಳೆಯನ್ನು ನಾಶಮಾಡುವುದು ಎಷ್ಟು ಮುಖ್ಯವಾಗಿತ್ತೋ ವಿಭೀಷಣನೆಂಬ ಬೆಳೆಗೆ ಹಾನಿ ಆಗದಂತೆ ಸಂರಕ್ಷಿಸಲೇಬೇಕಾದ ಹೊಣೆಗಾರಿಕೆಯೂ ಇತ್ತು! ಶಿಕ್ಷಕರ ತರಬೇತಿ ಸಂಸ್ಥೆಗಳಿರುವಂತೆ ‘ಪಾಲಕರ ತರಬೇತಿ ಸಂಸ್ಥೆ’ಗಳ ಅವಶ್ಯಕತೆಯೂ ಇದೆ. ನವವಿವಾಹಿತರಿಗಾಗಿ ರಾಮಕೃಷ್ಣಾಶ್ರಮಗಳು ಸದ್ಗೃಸ್ಥ ಜೀವನ ನಡೆಸಲು ಬೇಕಾದ ಮಾರ್ಗದರ್ಶನ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವುದು ಗಮನಾರ್ಹ. ಅವರವರ ಭವಿಷ್ಯದ ಶಿಲ್ಪಿಗಳು ಅವರವರೇ ಆದರೂ ಮಕ್ಕಳ ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲಿ ತಂದೆ-ತಾಯಿಗಳ ಪಾತ್ರ ಮಹತ್ವಪೂರ್ಣವಾದದ್ದು. ಸಜ್ಜನರು ಮಕ್ಕಳಿಗೆ ಶಿಕ್ಷಣವನ್ನೀಯುವುದು ಕರ್ತವ್ಯ. ಮಕ್ಕಳು ತಮ್ಮ ಪ್ರಯತ್ನದ ಮೂಲಕ ಸದ್ಗುಣಗಳನ್ನು ಸಂಪಾದಿಸಿಕೊಳ್ಳಬೇಕು. ರೈತ ತನ್ನೆಲ್ಲ ಕೆಲಸಗಳನ್ನು ಶ್ರದ್ಧೆಯಿಂದ ಮಾಡಬಹುದಷ್ಟೆ. ಮೊಳೆಯುವುದು ಬೀಜದ ಕೆಲಸ! ಇದನ್ನೂ ಓದಿ: ಶಿಕ್ಷಕನೇ, ಆಂಜನೇಯತ್ವಕ್ಕೆ ಮರಳು!

ಶಿಕ್ಷಕರ ಹೊಣೆ: ‘ಗುರು’ ಎಂಬುದು ಉದಾತ್ತ ತತ್ತ್ವ, ಅದೊಂದು ಸಂಸ್ಥೆ. ಅಕ್ಷರಸ್ಥರನ್ನು ತಯಾರು ಮಾಡಬಹುದಾದರೂ ಅವರನ್ನು ವಿಚಾರಶೀಲರನ್ನಾಗಿ ಮಾಡದಿದ್ದರೆ ವಿದ್ಯಾಭ್ಯಾಸ ಬಹುಮಟ್ಟಿಗೆ ವ್ಯರ್ಥ. ‘ಶಿಕ್ಷಕನು ವಿದ್ಯಾಭ್ಯಾಸದ ಯಾವುದೇ ಹಂತದ ಬೋಧಕನಾಗಿದ್ದರೂ ಅವನ ಪಾತ್ರವನ್ನು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ ವಿದ್ಯಾರ್ಥಿಯ ವ್ಯಕ್ತಿತ್ವ, ಭವಿಷ್ಯವನ್ನು ರೂಪಿಸುವ ಕಾರ್ಯದಲ್ಲಿ ಇನ್ಯಾವುದೇ ವ್ಯಕ್ತಿಗಿಂತಲೂ ಶಿಕ್ಷಕನದ್ದು ಸಿಂಹಪಾಲು!’ ಎಂದಿದ್ದಾರೆ ಡಾ.ಅಬ್ದುಲ್ ಕಲಾಮ್

ಶಿಕ್ಷಕನು ವಿದ್ಯಾರ್ಥಿಗಳನ್ನು ಎರಡು ದುರಂತಗಳಿಂದ ಪಾರುಮಾಡಲೇಬೇಕು. ಮೊದಲನೆಯದೆಂದರೆ ವಿದ್ಯಾರ್ಥಿ ತನ್ನ ಶಕ್ತಿಯನ್ನು ರೂಪಿಸಿಕೊಳ್ಳಬೇಕು, ವೃದ್ಧಿಸಿಕೊಳ್ಳಬೇಕು. ತನ್ನ ಸಾಮರ್ಥ್ಯದ ಅರಿವು ಅವನಿಗಿರಬೇಕಲ್ಲದೆ ಇತರರ ಸಾಮರ್ಥ್ಯದ ಕನಿಷ್ಠ ಅರಿವಾದರೂ ಇರಬೇಕು. ಈ ಎರಡೂ ವಿಷಯಗಳಲ್ಲಿ ಅಜ್ಞಾನ ಹಾಗೂ ಅವಿವೇಕದಿಂದ ಕೂಡಿ ಜೀವನದಲ್ಲಿ ಗುರಿ ಇಲ್ಲದೆ ಮುನ್ನುಗ್ಗಿದರೆ ಬೆಂಕಿಗೆ ಆಹುತಿಯಾದ ಚಿಟ್ಟೆಯಂತಾಗುತ್ತದೆ ಅವನ ಬದುಕು!

ಎರಡನೆಯದೆಂದರೆ, ವಿದ್ಯಾರ್ಥಿ ತನ್ನ ಕ್ರಿಯಾಸಿದ್ಧಿಯ ರಹಸ್ಯ ವ್ಯಕ್ತಿತ್ವದ ಸತ್ತ್ವದಲ್ಲಿದೆಯೇ ಹೊರತು ಮತ್ಯಾವುದೋ ಸಲಕರಣೆ ಹಾಗೂ ದರ್ಪ ದೌರ್ಜನ್ಯದಲ್ಲಿಲ್ಲ ಎಂಬ ಸತ್ಯ ಅರಿಯಬೇಕು. ಶೌರ್ಯದಿಂದ ಕೀರ್ತಿ; ನಿಷ್ಕ್ರಿಯತೆಯಿಂದ ಕಳಂಕ! ಅಲ್ಲದೆ ದೀನರಲ್ಲಿ ದರ್ಪದೋರುತ್ತ, ಶಕ್ತರ ಮುಂದೆ ಮೆತ್ತಗಿರುತ್ತ, ಅಧಿಕಾರಿಗಳ ಮುಂದೆ ಮುದುಡಿಕೊಂಡಿರುವಂಥವನು ಎಷ್ಟೇ ವಿದ್ಯಾವಂತನಾಗಿದ್ದರೂ ಆತ ಒಬ್ಬ ಆತ್ಮವಿಶ್ವಾಸವುಳ್ಳ ಕೂಲಿಗಿಂತಲೂ ಕಡೆ!

ಶಿಕ್ಷಕನು ವಿದ್ಯಾರ್ಥಿಗೆ ಮಾತು, ಕೃತಿಗಳ ವೈಯಕ್ತಿಕ ಮಹತ್ವ ಹಾಗೂ ಅವೆರಡರ ನಡುವಿನ ಸಂಬಂಧಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಶಿಕ್ಷಕನು ವಿದ್ಯಾರ್ಥಿಗೆ, ‘ಉತ್ತಮ ಮಾತು ಅಮಂಗಲವನ್ನು ಹೋಗಲಾಡಿಸುತ್ತದೆ, ಶತ್ರುತ್ವವನ್ನು ನಿಮೂಲನಗೊಳಿಸುತ್ತದೆ, ಕೀರ್ತಿಯನ್ನು ದೊರಕಿಸಿಕೊಡುತ್ತದೆ, ಶಾಂತ ಸನ್ನಿವೇಶಕ್ಕೆ ಎಡೆಮಾಡಿಕೊಡುತ್ತದೆ. ಅದು ಸದಸದ್ವಿಚಾರಗಳ ತವರು, ಇಷ್ಟಾರ್ಥಗಳನ್ನು ಪೂರೈಸುವ ಖನಿ. ಉತ್ತಮ ಮಾತು ಕಾಮಧೇನು!’ ಎಂಬ ಆದರ್ಶವನ್ನು ತನ್ನ ಮಾತು-ಕೃತಿಗಳಿಂದ ಮನದಟ್ಟಾಗಿಸಬೇಕು. ಇದನ್ನೂ ಓದಿ: ದಾರ್ಶನಿಕ ಪ್ರವಾದಿ ಶ್ರೀಶಂಕರರ ವಿಶ್ವಪ್ರಜ್ಞೆ

ಕಾಯಕ ಕುರಿತಾಗಿ ಶಿಕ್ಷಕನು ಮಕ್ಕಳಲ್ಲಿ, ‘ಕಾಯಕಕ್ಕೆ ಸಮನಾದ ಬಂಧುವಿಲ್ಲ, ಸೋಮಾರಿತನಕ್ಕಿಂತ ದೊಡ್ಡಶತ್ರು ಮತ್ತೊಂದಿಲ್ಲ, ಕಾಯಕನಿಷ್ಠನಿಗೆ ಎಂದಿಗೂ ಕೇಡೆಂಬುದಿಲ್ಲ. ಸ್ವಪ್ರಯತ್ನ ಇಲ್ಲದಿದ್ದಾಗ ಕೇವಲ ಇತರರ ಸಹಾಯಹಸ್ತ ಎಂಬುದು ನಮ್ಮನ್ನು ಬಹುದೂರ ಕೈಹಿಡಿದು ಕೊಂಡೊಯ್ಯದು. ಅಲ್ಲದೆ ಸ್ವಪ್ರಯತ್ನಕ್ಕೆ ಅಡ್ಡಬರುವ ಸಹಾಯಹಸ್ತವು ನಮ್ಮನ್ನು ಸೋಮಾರಿಗಳನ್ನಾಗಿ, ನಿಷ್ಕ್ರಿಯರನ್ನಾಗಿ ರೂಪಿಸಿ ಗುಲಾಮಗಿರಿಯ ಪಾಪಕೂಪಕ್ಕೆ ತಳ್ಳುವುದು ದಿಟ! ಪರಾವಲಂಬನೆಯನ್ನೇ ಸೌಭಾಗ್ಯವೆಂಬಂತೆ ಭಾವಿಸುವುದು ರೋಗಗ್ರಸ್ತ ಮನಸ್ಸಿನ ಸ್ಪಷ್ಟಲಕ್ಷಣ. ತನ್ನನ್ನು ತಾನೇ ರಕ್ಷಿಸಿಕೊಳ್ಳದಿದ್ದರೆ ಬೇರಾವ ರಕ್ಷಣೆಯೂ ಸಿದ್ಧಿಸುವುದಿಲ್ಲ... ಆಸೆಬುರುಕರು ಲೋಕಕ್ಕೇ ದಾಸರು; ಆಸೆಯನ್ನು ದಾಸಿಯಾಗಿಸಿಕೊಂಡವರ ವಿಷಯದಲ್ಲಿ ಲೋಕವೇ ಅವರಿಗೆ ದಾಸಿಯಾಗುತ್ತದೆ...’ ಮೊದಲಾದ ವಿಚಾರಗಳ ಬಗ್ಗೆ ಸ್ಪಷ್ಟತೆ ಮೂಡಿಸಬೇಕು.

ಶ್ರೀ ಗೌಡಾಪಾದಾಚಾರ್ಯರು,

‘ಉತ್ಸೇಕ ಉದಧೇರ್ಯದ್ವತ್ ಕುಶಾಗ್ರೇನೈತಬಿಂದುನಾ|

ಮನಸೋ ನಿಗ್ರಹಸ್ತದ್ವದ್ಭವೇದಪರಿಖೇದತಃ||

ಅಂದರೆ ಸಮುದ್ರವನ್ನು ದರ್ಬೆಯ ತುದಿಯಿಂದ ಒಂದೊಂದು ಹನಿಯಾಗಿ ಖಾಲಿ ಮಾಡುವುದು ಹೇಗೋ ಹಾಗೆಯೇ ಮನೋನಿಗ್ರಹವು ತಾಳ್ಮೆಗೆಡದೆ ನಡೆಯಬೇಕು’ ಎಂದಿದ್ದಾರೆ.

ಶ್ರೀಶಂಕರಾಚಾರ್ಯರು ಹೇಳುತ್ತಾರೆ: ‘ತಂದೆ ಮಾಡಿದ ಸಾಲವನ್ನು ಅವನ ಮಕ್ಕಳು ಮುಂತಾದವರು ತೀರಿಸಬಹುದು. ಆದರೆ ತನ್ನ ಬಂಧನದಿಂದ ಬಿಡುಗಡೆ ಅವನಿಂದಲೇ ಆಗಬೇಕೇ ಹೊರತು ಅನ್ಯರಿಂದಾಗದು. ತಲೆ ಮೇಲಿನ ಭಾರವನ್ನು ಬೇರೆಯವರು ನಿವಾರಿಸಬಹುದು, ಆದರೆ ಹಸಿವಿನ ದುಃಖ ಬೇರೆಯವರು ಉಣ್ಣುವುದರಿಂದ ನಿವಾರಣೆಯಾಗದು. ಪಥ್ಯ ಮತ್ತು ಔಷಧಸೇವನೆಯಿಂದಷ್ಟೇ ರೋಗಿಯ ಆರೋಗ್ಯ ಸುಧಾರಿಸುತ್ತದೆಯೇ ಹೊರತು ಇತರರು ಮಾಡುವ ಕ್ರಿಯೆಗಳಿಂದಲ್ಲ’ ಎಂಬ ಮಾತುಗಳನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಮನದಟ್ಟಾಗಿಸಬೇಕಲ್ಲವೇ?  

‘ಶಿಕ್ಷಕರೇ ನೆನಪಿಡಿ, ವಿಜ್ಞಾನಿಯ ಆಂತರ್ಯದಲ್ಲಿ ಸತ್ತ್ವ ಇದ್ದಿರಬಹುದು, ಸಂತನೊಬ್ಬನ ಅಂತರಂಗದಲ್ಲಿ ಸಾತ್ವಿಕ ಸಂಸ್ಕಾರಗಳಿರಬಹುದು, ಕಲಾವಿದನ ವ್ಯಕ್ತಿತ್ವದಲ್ಲಿ ಪ್ರತಿಭೆ ಹುದುಗಿದ್ದಿರಬಹುದು. ಆದರೆ, ಅವರೆಲ್ಲರ ಯಶಸ್ಸಿನ ಹಿನ್ನೆಲೆಯಲ್ಲಿ ಸಮರ್ಥ ಶಿಕ್ಷಕನೊಬ್ಬ ಇದ್ದಿರಲೇಬೇಕಲ್ಲವೇ’ ಎಂದಿದ್ದಾರೆ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರು.

ಶಿಕ್ಷಕನಾದವನು ವ್ಯವಹಾರಚತುರನಾಗುವುದಕ್ಕಿಂತ, ವಿವೇಕಿ, ಕುಶಾಗ್ರಮತಿ, ಮೌಲ್ಯವಂತನಾಗಿರಬೇಕು. ಅವನು ಇತಿಹಾಸಪಠ್ಯ ಬೋಧಿಸುವುದಕ್ಕಷ್ಟೇ ಸೀಮಿತವಾಗಬೇಕಿಲ್ಲ, ಪ್ರಾಮಾಣಿಕ ಪ್ರಯತ್ನದಿಂದ ಇತಿಹಾಸ ನಿರ್ವಿುಸುವವನೂ ಆಗಬಹುದಾಗಿದೆ. ಶಿಕ್ಷಕನು ಜಗತ್ತಿನಲ್ಲಿ ಇನ್ಯಾವುದೇ ವಿಚಾರಗಳಿಗಿಂತ ಜ್ಞಾನದ ದೃಷ್ಟಿಯಲ್ಲಿ ಗುರ್ತಿಸಲ್ಪಡಬೇಕೆಂಬ ಸತ್ಯವು ಶಿಕ್ಷಕನ ಆತ್ಮಸಾಕ್ಷಿಯಾಗಬೇಕು. ಇದನ್ನೂ ಓದಿ: ಪುಸ್ತಕ ಮಂಥನದ ಅಮೃತ ಸಿಂಚನ

ಸರ್ಕಾರದ ಪಾತ್ರ: ಆಡಳಿತಗಾರರು ತಮ್ಮ ಅವಧಿ ಐದು ವರ್ಷಗಳ ಗುತ್ತಿಗೆ ಎಂದು ತಿಳಿಯಬಾರದು. ಅವರುಗಳು ಸಮಾಜದಲ್ಲಿನ ಕಾನೂನು ಪಾಲಿಸದವರ, ಸರ್ಕಾರಿ ಆದೇಶ ಧಿಕ್ಕರಿಸುವ ಮತ್ತು ಮಾನವೀಯತೆಯ ಶತ್ರುಗಳಂತೆ ವ್ಯವಹರಿಸುವವರನ್ನು ಗಂಭೀರವಾಗಿ ಪರಿಗಣಿಸಲೇಬೇಕು. ಆಳುವವರೇ ಕಾನೂನಿಗೆ ಅವಿಧೇಯರಾದಾಗ ಅವರಿಗೆ ಜನರು ವಿಧೇಯರಾಗಿರಲು ಸಾಧ್ಯವಿಲ್ಲ. ಗೊಲ್ಲನಿಲ್ಲದಿದ್ದರೆ ಗೋವುಗಳು ಚದುರಿಹೋಗುವಂತೆ ಯೋಗ್ಯ ರಾಜನಿಲ್ಲದಿದ್ದರೆ ರಕ್ಷಣೆ ಇಲ್ಲದೆ ಪ್ರಜೆಗಳು ನಾಶವಾಗುತ್ತಾರೆ! ಇಂದು ಬಹುತೇಕ ಆಡಳಿತಗಾರರು, ‘ನಿಮ್ಮ ಕೈ ಕೆಸರಾದರೆ ನಮ್ಮ ಬಾಯಿ ಮೊಸರು’ ಎಂಬ ಸಂದೇಶವನ್ನು ಪ್ರಜೆಗಳಿಗೆ ರವಾನಿಸುತ್ತಿದ್ದಾರೆಯೋ ಎಂಬಂತಿದೆ. ಆಡಳಿತಗಾರರು ವಿವೇಕಿಗಳ, ಪ್ರಾಜ್ಞರ ಸಕಾಲಿಕ ಸಲಹೆಗಳಿಗೆ ಓಗೊಡುತ್ತಿಲ್ಲ, ಅವರ ನಡೆನುಡಿಗಳಲ್ಲಿ ರಾಷ್ಟ್ರಭಕ್ತಿಯೆಂಬುದು ನಿರ್ಲಕ್ಷಿತವಾಗಿರುವುದು ದುರಂತವೇ ಸರಿ! ಇತರರನ್ನು ವಿನಾಕಾರಣ ವಿರೋಧಿಸುವ, ಗುಣಶಾಲಿಗಳನ್ನು ದ್ವೇಷಿಸುವ, ದೇವರಿಲ್ಲ-ಧರ್ಮ ಬೇಕಿಲ್ಲ ಎಂಬ ಉಡಾಫೆಯ ಮಾತುಗಳೇ ಆಡಳಿತಗಾರರ ಬಂಡವಾಳವಾಗಿ ರಾರಾಜಿಸುತ್ತಿದೆ. ‘ಮಾತಿನಲ್ಲಿ ಅರ್ಥ ಅಡಗಿದೆ, ಮಾತೇ ಅರ್ಥಕ್ಕೆ ಮೂಲ, ಮಾತಿನೊಂದಿಗೆ ಅರ್ಥವು ಬೆರೆತಿದೆ, ಮಾತನ್ನು ಸುಳ್ಳಾಗಿ, ತಪ್ಪಾಗಿ ಅರ್ಥೈಸುವುದು ಎಲ್ಲ ಅಪರಾಧಗಳನ್ನು ಮಾಡಿದಂತೆ’ ಎಂಬ ಕಟುಸತ್ಯವನ್ನು ಅರಿಯಲು ಅವರಿನ್ನೂ ಬಹುದೂರ ಸಾಗಬೇಕಿದೆ.

‘ಮಾತೃದೇವೋ ಭವ, ಪಿತೃದೇವೋಭವ, ಆಚಾರ್ಯದೇವೋಭವ, ರಾಜಾ ಪ್ರತ್ಯಕ್ಷ ದೇವತಾ’ ಮೊದಲಾದ ಸನಾತನ ಆದರ್ಶಗಳು ಫಲಪ್ರದವಾಗಲು ಪಾಲಕರು, ಶಿಕ್ಷಕರು ಮತ್ತು ಸರ್ಕಾರಗಳು ಉಪಕರಿಸಬೇಕು. ಆಗ ಮಾತ್ರವೇ ಮನುಷ್ಯ ಮಹಾತ್ಮರ ಸಮಾಜನಿರ್ವಣ ಸಾಧ್ಯ. ಇಲ್ಲದಿದ್ದರೆ ಮನುಷ್ಯರೂಪದ ಮೃಗಗಳೊಂದಿಗೆ ಹೋರಾಡಿ, ಹೊಡೆದಾಡಿ, ಹೆಣಗಾಡಬೇಕಾಗುತ್ತದೆ. ಮನುಷ್ಯನು ಅಮೃತೋಪಮವಾದ ನರಜನ್ಮವನ್ನು ವಿಷಮಯವಾಗಿಸಿಕೊಳ್ಳುತ್ತಿದ್ದಾನಲ್ಲಾ...?

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net