More

    ದಾರ್ಶನಿಕ ಪ್ರವಾದಿ ಶ್ರೀಶಂಕರರ ವಿಶ್ವಪ್ರಜ್ಞೆ

    ವೈದಿಕಧರ್ಮದ ಅಭ್ಯುದಯ, ಅಭ್ಯುತ್ಥಾನ ಮತ್ತು ಮಂಗಳಸಾಧನ ಕಾರ್ಯಗಳಿಗೆ ಅಧ್ಯಯನ ದೀಕ್ಷೆತೊಟ್ಟ, ಉಪಾಸನೆ ಮತ್ತು ನಿವೃತ್ತಿ ಮಾರ್ಗದ ಜೀವನಕ್ಕೆ ಅನುರಕ್ತರಾದ ವಿರಕ್ತರನ್ನು ಶಂಕರರು ಅವರುಗಳ ಮೂಲಕ ಅವಿಚ್ಛಿನ್ನವಾಗಿ, ಲೋಕಕಲ್ಯಾಣಕ್ಕೆ ಅತ್ಯವಶ್ಯಕವಾದ, ಧರ್ಮಪ್ರಚಾರಕಾರ್ಯಕ್ಕೆ ಅವಶ್ಯಕವಾದ ಸಂನ್ಯಾಸಿಗಳ ಬದುಕನ್ನು ಸಂಘಬದ್ಧವಾಗಿಸಿದರು.

    ಮಾನವನ ಇತಿಹಾಸದುದ್ದಕ್ಕೂ ಮಾರ್ಗದರ್ಶನವಿತ್ತು ಜಗತ್ತನ್ನು ಮುನ್ನಡೆಸುತ್ತ ಬಂದಿರುವ ಗುರುಪರಂಪರೆ ಪ್ರಾತಃಸ್ಮರಣೀಯವೆಂದೆನಿಸಿದೆ. ಸಚ್ಚಿದಾನಂದನೇ ಗುರುರೂಪದಲ್ಲಿ ಅವತರಿಸಿ ಅವತಾರಪುರುಷರನ್ನು ಮೊದಲ್ಗೊಂಡು ಜನಸಾಮಾನ್ಯರವರೆಗೆ ಸರ್ವರನ್ನೂ ಮಾರ್ಗದರ್ಶನವಿತ್ತು ಸಲಹುವ ಭಗವಂತನ ಈ ಅವಿಚ್ಛಿನ್ನ ವ್ಯವಸ್ಥೆಯ ಮಹಿಮೆ ಮಹತ್ವಗಳನ್ನು ನಾವು ಅರಿಯಲೇಬೇಕಿದೆ.

    ದಾರ್ಶನಿಕ ಪ್ರವಾದಿ ಶ್ರೀಶಂಕರರ ವಿಶ್ವಪ್ರಜ್ಞೆಯುಗಯುಗಗಳೂ ಯೋಗ್ಯರೀತಿಯಲ್ಲಿ ಚಲನಶೀಲಗೊಂಡು ಕಾಲಚಕ್ರದ ಮುಂದುವರಿಕೆಗೆ ಶ್ರಮಿಸಿದ ಅಸಂಖ್ಯಾತ ಗುರುಗಳ ಪರಂಪರೆ ನಮ್ಮದು. ಆದ್ದರಿಂದಲೇ ದೈವವನ್ನು ತೋರುವ ಶ್ರೀಗುರುವು ನಮ್ಮ ಪಾಲಿಗೆ ದೈವವೇ ಹೌದು, ದೈವಕ್ಕಿಂತ ಅಧಿಕ ಎನಿಸಿದರೂ ಉತ್ಪ್ರೇಕ್ಷೆಯಲ್ಲ. ಈ ಹಿನ್ನೆಲೆಯಲ್ಲೇ ‘ಗುರುವೇ ದೇವರು; ದೇವರೇ ಗುರು’ ಎಂಬ ಮಾತು ಲೋಕಾರೂಢಿ.

    ಭಾರತೀಯ ಸನಾತನ ಪರಂಪರೆ ಗೌರವಿಸಿದ ಶ್ರೇಷ್ಠ ಗುರುಗಳ ಪಂಕ್ತಿಯಲ್ಲಿ ಶ್ರೀಶಂಕರ ಭಗವತ್ಪಾದರು ಮಹತ್ತರ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರ ಪಾಂಡಿತ್ಯಪೂರ್ಣ ಮಹಾನ್ ವ್ಯಕ್ತಿತ್ವವು ಲೋಕಮಾನ್ಯವಾಗಿದೆ. ಶಂಕರರ ಮಾತೃಪ್ರೇಮ, ಗುರುಭಕ್ತಿ ಹಾಗೂ ಶಿಷ್ಯರ ಬಗೆಗಿನ ವಾತ್ಸಲ್ಯ, ಭಕ್ತರ ಬಗೆಗಿನ ದಯಾರ್ದ್ರ ಹೃದಯ ಅಸಾಧಾರಣವಾದದ್ದು. ತಮ್ಮ ಕಾವ್ಯರಚನೆ, ವಿಮರ್ಶಕ ಶೈಲಿ, ಇವೇ ಮೊದಲಾದ ಶ್ರೇಷ್ಠ ಗುಣಗಳ ಮೂಲಕ ಅವರು ನಿಜಾರ್ಥದಲ್ಲಿ ಜಗದ್ಗುರು, ಲೋಕಗುರು ಎಂಬ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಅವರೊಬ್ಬ ದಾರ್ಶನಿಕ ಪ್ರವಾದಿ.

    ಅವತಾರವರಿಷ್ಠರೆಂದೇ ಗೌರವಿಸಲ್ಪಡುವ ಭಗವಾನ್ ಶ್ರೀರಾಮಕೃಷ್ಣರು, ‘ಲೋಕಶಿಕ್ಷಣ ನೀಡಲು ಜಗನ್ಮಾತೆ ಅನುಮತಿಸಬೇಕು. ಬೋಧಕರು ಅಸಂಖ್ಯಾತರಿರಬಹುದು. ಭೂಮಿ-ಆಕಾಶಗಳು ಒಂದಾಗುವಂತೆ ಅವರು ಗರ್ಜಿಸಲೂಬಹುದು, ಆದರೆ ಜಗನ್ಮಾತೆ ಲೈಸೆನ್ಸ್ ನೀಡದೆ ಲೋಕಶಿಕ್ಷಣ ಅಸಾಧ್ಯ. ಅವಳು ಶುಕದೇವನಿಗೆ, ನಾರದರಿಗೆ ಮತ್ತು ಶ್ರೀಶಂಕರಾಚಾರ್ಯರಿಗೆ ಲೈಸೆನ್ಸ್ ನೀಡಿದ್ದಳು. ಈಗ ನರೇಂದ್ರನಿಗೆ (ಭವಿಷ್ಯದ ಸ್ವಾಮಿ ವಿವೇಕಾನಂದರು) ಲೋಕಶಿಕ್ಷಣಕ್ಕೆ ಅನುಮತಿಸಿದ್ದಾಳೆ’ ಎಂದಿದ್ದಾರೆ. ಇಲ್ಲಿ ನಮಗೆ ಶ್ರೀಶಂಕರರ ಅವತರಣದ ದಿವ್ಯ ಉದ್ದೇಶ ಮನವರಿಕೆಯಾಗುತ್ತದೆ.

    ಶ್ರೀಶಂಕರರ ಜೀವಿತಾವಧಿ ಕೇವಲ ಮೂವತ್ತೆರಡು ವರ್ಷಗಳು. ಆದರೆ ಅದರಲ್ಲಿ ಯುಗಕ್ಕೆ ಬೆಳಕನ್ನಿತ್ತು ಮುನ್ನಡೆಸುವ ಶಕ್ತಿ, ಸತ್ತ್ವಗಳಿವೆ. ‘ಬದುಕಿನಲ್ಲಿ ಸಮಯವನ್ನು ಹಾಳು ಮಾಡದ ವ್ಯಕ್ತಿಯು ವರ್ಷಗಳ ದೃಷ್ಟಿಯಲ್ಲಿ ಕಿರಿಯನೆನಿಸಿದರೂ ತಾಸುಗಳ ದೃಷ್ಟಿಯಲ್ಲಿ ಹಿರಿಯನೆನಿಸುತ್ತಾನೆ’ ಎಂದಿದ್ದಾನೆ ಫ್ರಾನ್ಸಿಸ್ ಬೇಕನ್. ಅಲ್ಲದೆ, ಯಾವುದೇ ಕಾಲಘಟ್ಟದಲ್ಲಿ ಜಗತ್ತಿನ ಶ್ರೇಷ್ಠ ತತ್ತ್ವಜ್ಞಾನಿಗಳ ಹತ್ತು ಜನರ ಪಟ್ಟಿಯಲ್ಲಿ ಶ್ರೀಶಂಕರಾಚಾರ್ಯರಿಗೆ ಸಾರ್ವಕಾಲಿಕವಾಗಿ ಸ್ಥಾನವಿದೆ ಎಂದಿದ್ದಾರೆ ವಿಶ್ವವಿಖ್ಯಾತ ಚಿಂತಕರು.

    ಶಂಕರರ ವ್ಯಕ್ತಿತ್ವ: ಅವರೊಬ್ಬ ಶ್ರೇಷ್ಠ ಮನೋವಿಜ್ಞಾನಿ, ಸಮಾಜ ಸುಧಾರಕ. ತಮ್ಮ ಜೀವನದಲ್ಲಿ ಅದ್ವೈತ ಸಿದ್ಧಾಂತವನ್ನೇ ಅತ್ಯುನ್ನತ ಹಂತದಲ್ಲಿರಿಸಿ ವಿಶ್ಲೇಷಿಸಿದರೂ ಜನರ ಮನೋಧರ್ಮಕ್ಕೆ ತಕ್ಕಂತೆ ಆಧ್ಯಾತ್ಮಿಕ ಸಾಧನಾಪಥದ ಯಾವುದೇ ಹಂತಗಳನ್ನು ಉಪೇಕ್ಷಿಸದೆ ಸ್ವೀಕರಿಸಿ ಸ್ವಾನುಭವವಾಗಿಸಿಕೊಂಡು ಮುಂದುವರಿಯುವಂತೆ ಮಾರ್ಗದರ್ಶನವಿತ್ತ ಅವರು ಒಂದೆಡೆ ಬೌದ್ಧಿಕ ದಾರ್ಶನಿಕರಂತೆ ಕಂಡರೂ ಮತ್ತೊಂದೆಡೆ ಭಾವಪರವಶರಾಗಿ ಹಾಡುವ ಅಧ್ಯಾತ್ಮ ಭಕ್ತ!

    ಮನಸ್ಸಿನ ವೈವಿಧ್ಯಗಳ ಪೂರ್ಣ ಅರಿವಿದ್ದ ಅವರು, ‘ನಿರ್ಗಣಬ್ರಹ್ಮನನ್ನು ಪ್ರಾಪ್ತವಾಗಿಸಿಕೊಳ್ಳಲು ಸಗುಣಬ್ರಹ್ಮನ ಉಪಾಸನೆ ಅನಿವಾರ್ಯ ಸಾಧನೆ’ ಎಂದು ಸಾರಿದ್ದು ಒಂದೆಡೆಯಾದರೆ, ‘ಯಾರು ಬ್ರಹ್ಮಜ್ಞಾನಿಯೋ, ಅವನು ಬ್ರಾಹ್ಮಣನೇ ಆಗಿರಲಿ ಅಥವಾ ಚಂಡಾಲನೇ ಆಗಿರಲಿ ನನ್ನ ಪೂಜ್ಯ ಗುರು’ ಎಂದು ಸಾರಿದ ಮಹಾನುಭಾವರು. ಶೈವ, ವೈಷ್ಣವ, ಶಾಕ್ತ, ಸೌರ, ಕುಮಾರ ಮತ್ತು ಗಾಣಪತ್ಯ ಸಂಪ್ರದಾಯದ ದೇವರುಗಳ ಉಪಾಸನೆಗೆ ಒತ್ತುಕೊಟ್ಟು ಷಣ್ಮತಗಳನ್ನು ಪುನಃ ಪ್ರತಿಷ್ಠಾಪಿಸಿದ ಯತಿಶ್ರೇಷ್ಠರವರು. ಇದರಿಂದ ಜನರ ಧರ್ವಚರಣೆಯ ಬದುಕಿನಲ್ಲಿ ಯಾವುದೇ ಸಾಂಪ್ರದಾಯಿಕ ವೈರುಧ್ಯ, ವೈಮನಸ್ಸುಗಳಿಗೆ ಎಂದೂ ಅವರು ಎಡೆಮಾಡಿಕೊಡಲಿಲ್ಲ. ಇದಲ್ಲದೆ ಇತಿಹಾಸದಲ್ಲಿ ಅದಾಗಲೇ ನಷ್ಟವಾಗಿದ್ದ ಕೆಲವು ಅತ್ಯಮೂಲ್ಯ ಆಧ್ಯಾತ್ಮಿಕ ಗ್ರಂಥಗಳನ್ನು ಪುನಃ ಯೋಗ್ಯರೂಪದಲ್ಲಿ ಬರೆದು ಜಗತ್ತಿಗೆ ಅನುಗ್ರಹಿಸಿದ ಅವರ ಯುಗಪ್ರವರ್ತಕ ಪಾತ್ರವು ಅದ್ಭುತ. ‘ನಮ್ಮ ಬುದ್ಧಿಬಲ ಹಾಗೂ ಬಾಹುಬಲಗಳು ಧರ್ಮ ಪುರಸ್ಕೃತವಾಗಿರಲೇಬೇಕು’ ಎಂದು ಸಾರಿದ ಶ್ರೀಶಂಕರರು ಎಂದೂ ಪ್ರಮಾದಯುಕ್ತ ಆಶಾವಾದಕ್ಕಾಗಲೀ ಅಥವಾ ಭಾವೋದ್ರೇಕವನ್ನೇ ನೈಜಭಕ್ತಿಯೆಂದು ಬಿಂಬಿಸುವ ಭ್ರಮೆಗಾಗಲಿ ಕಿಂಚಿತ್ತೂ ಮನ್ನಣೆ ನೀಡಲಿಲ್ಲವೆಂಬುದು ಗಮನಾರ್ಹ.

    ಶಂಕರರ ಪೂರ್ವದಲ್ಲಿ: ವೈದಿಕ ಮಹರ್ಷಿಗಳು ಆಧ್ಯಾತ್ಮಿಕ ಜಗತ್ತಿಗೆ ನೀಡಿದ ಶ್ರೇಷ್ಠ ಸಂಪ್ರದಾಯವಾದ ಅದ್ವೈತತತ್ತ್ವ ನಮ್ಮ ಸನಾತನ ಪರಂಪರೆಯ ಉಪನಿಷತ್ತು ಮತ್ತು ಅನೇಕ ಸಂಹಿತೆಗಳ ಸೂಕ್ತಿಗಳಲ್ಲೂ ಮೂಡಿಬಂದಿರುವುದು ಅವರ ಪ್ರಾಚೀನತೆಯನ್ನು ತೋರುತ್ತದೆ. ಅಲ್ಲದೆ ಮಹಾಭಾರತವೇ ಮೊದಲಾದ ಗ್ರಂಥಗಳಲ್ಲಿಯೂ ಗೋಚರಿಸುವ ಅದ್ವೈತತತ್ತ್ವವು ಬೌದ್ಧರಲ್ಲಿಯೂ ಮಾಧ್ಯಮಿಕ ಮತ್ತು ಯೋಗಾಚಾರರೆಂಬ ಶ್ರೇಷ್ಠ ಪ್ರತಿಪಾದಕರ ಬರಹಗಳಲ್ಲಿ ಪ್ರತಿಬಿಂಬಿತವಾಗಿದೆ. ಇವರುಗಳು ಅದ್ವೈತಿಗಳೇ ಆಗಿದ್ದರಲ್ಲದೆ ಬುದ್ಧನೂ ‘ಅದ್ವಯವಾದಿ’ ಎಂಬ ಹೆಸರಿನಿಂದಲೂ ಗೌರವಿಸಲ್ಪಟ್ಟವನು. ವೈಯಾಕರಣರು, ಶಾಕ್ತರು ಮತ್ತು ಶೈವರೂ ಅದ್ವೈತವಾದವನ್ನು ಪೂರ್ಣ ಮನಸ್ಸಿನಿಂದ ಸಮ್ಮತಿಸುತ್ತ ಬಂದವರು.

    ಶ್ರೀಶಂಕರರ ಪೂರ್ವದಲ್ಲಿ ಮಂಡನಮಿಶ್ರರ ಬ್ರಹ್ಮಸಿದ್ಧಿ ಗ್ರಂಥ, ಸುಮಂತಭದ್ರನ ‘ದಿಗಂಬರ ಆಚಾರ್ಯ’, ಶಾಂತರಕ್ಷಿತನ ‘ತತ್ತ್ವಸಂಗ್ರಹ’, ಭವಭೂತಿಯ ‘ತತ್ತ್ವಸಿದ್ಧಾಂತ’, ಕುಮಾರಿಲಭಟ್ಟರ ‘ಶ್ಲೋಕವಾರ್ತಿಕ’ ಮೊದಲಾದ ಗ್ರಂಥಗಳಲ್ಲಿಯೂ ಅದ್ವೈತವಾದವು ಸ್ಪಷ್ಟವಾಗಿ ಪ್ರಸ್ತಾಪಿಸಲ್ಪಟ್ಟಿದೆ. ಅಲ್ಲದೆ ಆತ್ರೇಯ, ಭರ್ತಪ್ರಪಂಚ, ಭತೃಮಿತ್ರ, ಬ್ರಹ್ಮದತ್ತ, ಸುಂದರಪಾಂಡ್ಯ ಮತ್ತು ಭಗವಾನ್ ಉಪವರ್ಷರೇ ಮೊದಲಾದ ಗುರುಗಳು ಶ್ರೀಶಂಕರರಿಗೆ ಮೊದಲೇ ಅದ್ವೈತತ್ತ್ವದ ವ್ಯಾಖ್ಯಾನ ಮಾಡಿರುವುದು ಗಮನೀಯ.

    ವಿಶ್ವಗುರು ಶಂಕರ: ನಾನಾತ್ಮಕವಾದ ಈ ವಿಶ್ವವನ್ನು ಆಧಾರವಾಗಿ ಇರಿಸಿಕೊಂಡು ನಮ್ಮ ಋಷಿಗಳು ಏಕತ್ವದ ವಿದ್ಯಮಾನವನ್ನು ದರ್ಶಿಸಿದ್ದರು. ಇಂತಹ ಸನ್ನಿವೇಶದಲ್ಲಿ ಶ್ರೀ ಶಂಕರಾಚಾರ್ಯರು ಕೈಗೊಂಡ ಕಾರ್ಯವು ಅವರನ್ನೊಬ್ಬ ಯುಗಪ್ರವರ್ತಕ ಯತಿಯಾಗಿಸಿದೆ. ಶಂಕರರ ಜ್ಞಾನ ವೈದಿಕ ಧರ್ಮಗ್ರಂಥಗಳಿಗಷ್ಟೇ ಸೀಮಿತವಾಗಿರಲಿಲ್ಲ. ಪ್ರಸ್ಥಾನತ್ರಯಗಳಿಗಷ್ಟೇ ಅವರು ತಮ್ಮ ಭಾಷ್ಯ ಪ್ರಕ್ರಿಯೆಯನ್ನು ಸೀಮಿತವಾಗಿಸದೆ ಬೌದ್ಧ, ಜೈನ, ಪಾಂಚರಾತ್ರ, ಸಾಂಖ್ಯ, ನ್ಯಾಯ, ವೈಶೇಷಿಕ ಮತ್ತು ಮೀಮಾಂಸಗಳಲ್ಲೂ ತಮ್ಮ ಪ್ರಾಮಾಣಿಕ ಪ್ರೌಢಿಮೆಯನ್ನು ಮೆರೆದರು. ಬೌದ್ಧರ ಪವಿತ್ರ ಗ್ರಂಥಗಳಾದ ಧರ್ಮಕೀರ್ತಿ ಮತ್ತು ದಿಙನಾಗ- ಗ್ರಂಥಗಳ ಅಧ್ಯಯನ ಮಾಡಿದ್ದ ಶಂಕರರು ಇವುಗಳ ಆಧಾರದ ಮೇಲೆಯೇ ಬೌದ್ಧರಿಗೆ ಅವರ ಇತಿಮಿತಿಯನ್ನು ಮನವರಿಕೆ ಮಾಡಿಕೊಟ್ಟರು, ಅದ್ವೈತದ ಬೆಳಕನ್ನಿತ್ತರು. ಗಹನವಾದ ವಿಚಾರವೆಂದರೆ ತಮ್ಮ ತತ್ತ್ವಸಿದ್ಧಾಂತವನ್ನು ವಿರೋಧಿಸುವ ವ್ಯಕ್ತಿಗಳನ್ನೂ ಶ್ರೀಶಂಕರರು ಸಹಾನುಭೂತಿಯಿಂದ ಕಂಡು, ಅವರಿಗೆ ಸತ್ಯವನ್ನು ಮನವರಿಕೆ ಮಾಡಿಕೊಡುವಲ್ಲಿ ಹೃದಯವಂತಿಕೆ ಮೆರೆದಿದ್ದಾರೆ.

    ಪ್ರಸ್ಥಾನತ್ರಯಗಳಿಗೆ ವ್ಯಾಖ್ಯಾನ ಬರೆದ ಮೊದಲಿಗರೆನಿಸಿಕೊಂಡ ಶಂಕರರು ಅವುಗಳ ಗೂಡಾರ್ಥವನ್ನು ಸ್ಪಷ್ಟೀಕರಿಸಿ ವಿದ್ವಾಂಸರಲ್ಲಿ ಏಕಾಭಿಪ್ರಾಯವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಅಧ್ಯಾತ್ಮದ ಪುಣ್ಯಭೂಮಿ ಭಾರತದಲ್ಲಿ ಶಂಕರರು ಕೈಗೊಂಡ ಧಾರ್ವಿುಕ ಉತ್ಥಾನದ ಕಾರ್ಯವು ಊಹೆಗೆ ನಿಲುಕದ್ದು.

    ವೈದಿಕಧರ್ಮದ ಪುನರುತ್ಥಾನ ಮತ್ತು ಪ್ರಚಾರವನ್ನು ಯೋಗ್ಯವಾಗಿ ಕಾರ್ಯರೂಪಗೊಳಿಸಿದ ಶ್ರುತಿಧರ್ಮ ಕಾಮಧೇನು ಅವರು. ಧರ್ಮವು ಸಾಮಾನ್ಯರಿಗೂ ತಲುಪುವಂತಾಗಬೇಕು ಎಂಬ ಆಶಯದಿಂದ ಅದ್ಭುತ ಯೋಜನೆ ರೂಪಿಸಿದರು. ವೈದಿಕಧರ್ಮದ ಅಭ್ಯುದಯ, ಅಭ್ಯುತ್ಥಾನ ಮತ್ತು ಮಂಗಳಸಾಧನ ಕಾರ್ಯಗಳಿಗೆ ಅಧ್ಯಯನ ದೀಕ್ಷೆತೊಟ್ಟ, ಉಪಾಸನೆ ಮತ್ತು ನಿವೃತ್ತಿ ಮಾರ್ಗದ ಜೀವನಕ್ಕೆ ಅನುರಕ್ತರಾದ ವಿರಕ್ತರನ್ನು ಗುರುತಿಸಿದ ಶಂಕರರು ಅವರುಗಳ ಮೂಲಕ ಅವಿಚ್ಛಿನ್ನವಾಗಿ, ಲೋಕಕಲ್ಯಾಣಕ್ಕೆ ಅತ್ಯವಶ್ಯಕವಾದ, ಧರ್ಮಪ್ರಚಾರಕಾರ್ಯಕ್ಕೆ ಅವಶ್ಯಕವಾದ ಸಂನ್ಯಾಸಿಗಳ ಬದುಕನ್ನು ಸಂಘಬದ್ಧವಾಗಿಸಿದರು.

    ಭಾರತದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ, ಪ್ರತಿಯೊಂದು ಮಠಕ್ಕೂ ಯತಿಯನ್ನು ನೇಮಿಸಿ, ಒಂದೊಂದು ವೇದದ ಸಂರಕ್ಷಣೆ ಹಾಗೂ ಪ್ರಸರಣದ ಜವಾಬ್ದಾರಿಯಿತ್ತರು. ಶಂಕರರು ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯಾಗಿ ಬಳಸಲು ಬಲವಾಗಿ ಉತ್ತೇಜಿಸಿದರು. ಪೂರ್ವಕ್ಕೆ ಋಗ್ವೇದ ಆಧಾರಿತ ಗೋವರ್ಧನ ಮಠಕ್ಕೆ ಪೂಜ್ಯ ಶ್ರೀಪದ್ಮಪಾದರು, ದಕ್ಷಿಣಕ್ಕೆ ಯಜುರ್ವೇದ ಆಧಾರಿತ ಶೃಂಗೇರಿ ಮಠಕ್ಕೆ ಪೂಜ್ಯ ಶ್ರೀಸುರೇಶ್ವರಾಚಾರ್ಯರು, ಪಶ್ಚಿಮಕ್ಕೆ ಸಾಮವೇದ ಆಧಾರಿತ ಶ್ರೀ ಶಾರದಾಮಠಕ್ಕೆ ಪೂಜ್ಯ ಶ್ರೀಹಸ್ತಾಮಲಕರು ಮತ್ತು ಉತ್ತರಕ್ಕೆ ಅಥರ್ವವೇದ ಆಧಾರಿತ ಜ್ಯೋತಿರ್ಮಠಕ್ಕೆ ಪೂಜ್ಯ ಶ್ರೀತೋಟಕಾಚಾರ್ಯರು ನಿಯುಕ್ತರಾದರು.

    ಆಧ್ಯಾತ್ಮಿಕ ಕ್ಷೇತ್ರಕ್ಕೆ ಶ್ರೀಶಂಕರರು, ‘ತೀರ್ಥ, ಆಶ್ರಮ, ವನ, ಅರಣ್ಯ, ಗಿರಿ, ಪರ್ವತ, ಸಾಗರ, ಸರಸ್ವತೀ, ಭಾರತೀ ಮತ್ತು ಪುರೀ’ ಎಂಬ ಹೆಸರುಗಳಿಂದ ದಶನಾಮೀ ಸಂಪ್ರದಾಯವನ್ನು ಪರಿಚಯಿಸಿ ಸ್ವತಃ ತಾವೇ ಅವುಗಳಿಗೆ ಭೌತಿಕ ಕಲ್ಪನೆ ಹಾಗೂ ಆಧ್ಯಾತ್ಮಿಕ ವ್ಯಾಖ್ಯಾನ ನೀಡಿದ್ದಾರೆ.

    ಶ್ರೀಶಂಕರರು ಯತಿಗಳಿಗೆ ಹೀಗೆ ಹೇಳುತ್ತಾರೆ- ‘ನೀವು ಸದ್ಗುಣಶೀಲರು, ಪವಿತ್ರರು, ಜಿತೇಂದ್ರಿಯರಾಗಿರಬೇಕು. ಯೋಗಾಭ್ಯಾಸದಿಂದ ಶರೀರದ ಮತ್ತು ಯೋಗಾನುಷ್ಠಾನದಿಂದ ಅಂತರಂಗದ ಸುಸ್ಥಿತಿಯನ್ನು ಕಾಪಾಡಿಕೊಳ್ಳಬೇಕು. ಸರ್ವಶಾಸ್ತ್ರಗಳ ಪರಿಚಯ ಹಾಗೂ ವೇದಶಾಸ್ತ್ರಗಳಲ್ಲಿ ಪ್ರೌಢಿಮೆ ನಿಮ್ಮದಾಗಿರಬೇಕು. ಸದಾ ಜಾಗೃತರಾಗಿ ನಿಃಸ್ವಾರ್ಥ ಹಾಗೂ ವಿರಾಗಜೀವನವನ್ನು ಮೈಗೂಡಿಸಿಕೊಳ್ಳಬೇಕು. ಶಾಸ್ತ್ರಜ್ಞರಾಗಿ, ಪಾಪರಹಿತರಾಗಿ ಮತ್ತು ಬ್ರಹ್ಮನಿಷ್ಠರಾಗಿ ದೇಶದ ಅಭ್ಯುದಯಕ್ಕೆ ಅತ್ಯಂತ ಅನಿವಾರ್ಯವಾದ ವೇದಾಂತಧರ್ಮ ಪ್ರಚಾರಕ್ಕೆ ಸಂಚರಿಸುತ್ತಿರಬೇಕು. ವೇದಾಂತ ರಕ್ಷಣೆ ಹಾಗೂ ಪೋಷಣೆ, ಪ್ರಜೆಗಳಿಗೆ ಧಾರ್ವಿುಕ ಪ್ರೇರಣೆ ಹಾಗೂ ಮಾರ್ಗದರ್ಶನ ಮತ್ತು ಆಯಾ ದೇಶ, ಕಾಲಕ್ಕೆ ತಕ್ಕಂತೆ ಧಾರ್ವಿುಕ ವ್ಯವಸ್ಥೆಯ ನಿರ್ವಹಣೆ- ಇವು ನಿಮ್ಮ ಆದ್ಯ ಕರ್ತವ್ಯಗಳಾಗಿವೆ’ ಎಂದಿದ್ದಾರೆ.

    ಸಮಾಜಕ್ಕೆ ಹಿತೋಕ್ತಿ: ಸಮಾಜದ ಹಿತಕ್ಕೆ ವರ್ಣವ್ಯವಸ್ಥೆ ಮತ್ತು ವ್ಯಕ್ತಿಯ ಹಿತಕ್ಕೆ ಆಶ್ರಮವ್ಯವಸ್ಥೆಯನ್ನು ಶ್ರೀಶಂಕರರು ಒತ್ತಿ ಹೇಳಿದ್ದಾರೆ. ಮುಂದುವರಿದು, ‘ನಾಲ್ಕು ವರ್ಣದವರು ಪರಸ್ಪರ ಸ್ನೇಹ ಸಹಕಾರಭಾವದಿಂದ ಬದುಕಬೇಕು. ಬ್ರಾಹ್ಮಣರು ಕಾಮ ಮತ್ತು ಕ್ರೋಧ, ಕ್ಷತ್ರಿಯರು ದ್ವೇಷ ಮತ್ತು ಅಸೂಯೆ ಹಾಗೂ ವೈಶ್ಯರು ಲೋಭ ಮತ್ತು ಮೋಹದ ವಿಚಾರಗಳಿಗೆ ವಶರಾಗಬಾರದು. ಕುಟುಂಬದ ಮಕ್ಕಳಿಗೆ ಧರ್ಮರಕ್ಷಣೆ ಹಾಗೂ ದೇಶರಕ್ಷಣೆಯ ಆದರ್ಶದೀಕ್ಷೆ ನೀಡಬೇಕು. ಸೋಮಾರಿತನದಿಂದ ಧರ್ಮಗ್ಲಾನಿ ಶತಃಸಿದ್ಧ. ಯಾವುದೇ ಆಶ್ರಮದವರು ಮತ್ತು ವರ್ಣದವರು ಧರ್ಮಯುಕ್ತ ಜೀವನವನ್ನು ಉಪೇಕ್ಷಿಸಿದರೆ ಸಮಾಜದ ಸಮತೋಲನ ತಪ್ಪುತ್ತದೆ…’ ಎಂದಿದ್ದಾರೆ.

    ಭಕ್ತರಿಗೆ ಶರಣಾಗತಿ ಭಾವಕ್ಕೆ ಪ್ರೇರೇಪಿಸಿದ ಶ್ರೀಶಂಕರರು ತಾವೇ ರಚಿಸಿದ ದೇವರ ಸ್ತೋತ್ರಗಳಲ್ಲಿ, ‘ಹೇ ದೇವ, ಸಂಸಾರದುಃಖವೆಂಬ ಅಡವಿಯಲ್ಲಿರುವ ಅನಾಥ ನಾನು, ವಿಷಯಸುಖಗಳನ್ನು ನಾನು ಮರೀಚಿಕೆಯೆಂದು ತಿಳಿಯುವಲ್ಲಿ ವಿಫಲನಾದೆ, ಕಾಲವು ಜಗತ್ತನ್ನು ಭಕ್ಷಿಸುತ್ತಿದ್ದರೆ ಜೀವನವು ಮಿಂಚಿನ ಸಂಚಲನದಂತಾಗಿದೆ, ವಿಷಯಗಳೆಂಬ ವಿಷಸರ್ಪಗಳು ನನ್ನ ವಿವೇಕಜ್ಞಾನವನ್ನು ಹಾಳು ಮಾಡಿವೆ, ಬ್ರಹ್ಮಮಾರ್ಗಾನುಷ್ಠಾನಗೈಯದ, ಸಂಸಾರರೋಗದಿಂದ ಪೀಡಿತನಾದ ನನ್ನನ್ನು ರಕ್ಷಿಸು’ ಎಂದು ಪ್ರಾರ್ಥಿಸಿದ್ದಾರೆ.

    ‘ಸಂಸಾರಭಯನಿವಾರಕರಾದ ಗುರು ಶ್ರೀಗೋವಿಂದ ಭಗವತ್ಪಾದರ ಮತ್ತು ಪರಮಗುರು ಶ್ರೀಗೌಡಪಾದರ ಚರಣಗಳಿಗೆರಗಿ ನಮಿಸುತ್ತೇನೆ. ಜಗತ್ತಿನ ಎಲ್ಲ ವೇದಾಂತಗಳಿಗೂ, ವ್ಯಾಖ್ಯಾನಕಾರರಿಗೂ, ಗುರುಪರಂಪರೆಗೂ ಹಾಗೂ ಭಕ್ತ ಜಿಜ್ಞಾಸುಗಳ ಸಂಸಾರಭಯವನ್ನು ನಾಶಗೈದ ಪರಬ್ರಹ್ಮನಿಗೆ ನಮಿಸುವೆ’.

    ‘ಜಗನ್ಮಿಥ್ಯಾ ಎಂದು ಉಪೇಕ್ಷಿಸದೆ ವ್ಯಾವಹಾರಿಕ ಪ್ರಪಂಚದಲ್ಲಿ ಇರುವಷ್ಟು ಕಾಲವೂ ಅದಕ್ಕೆ ತಕ್ಕಂತೆ ವ್ಯವಹರಿಸಬೇಕು. ಜಗತ್ತಿನ ವ್ಯಾವಹಾರಿಕ ಪ್ರತಿಪಾದನೆಯ ವಿಷಯದಲ್ಲಿ ನಾವು ಆದರ್ಶವಾದಿಗಳಾಗಿ ಇರುವಷ್ಟೇ ಯಥಾರ್ಥವಾದಿಗಳೂ ಆಗಿರಬೇಕು’, ಎಂಬುದು ಲೋಕಕ್ಕೆ ಶಂಕರರ ಎಚ್ಚರಿಕೆ. ‘ಕರ್ಮವು ಚಿತ್ತಶುದ್ಧಿಗಷ್ಟೇ ಕಾರಣ, ಆತ್ಮಸಾಕ್ಷಾತ್ಕಾರಕ್ಕೆ ಅಲ್ಲ’ ಎಂದ ಶ್ರೀಶಂಕರರು ತಮ್ಮ ವ್ಯಕ್ತಿತ್ವದಲ್ಲಿ ಬುದ್ಧಿ ಹಾಗೂ ಹೃದಯಗಳಿಗೆ ಸಮಾನ ಸ್ಥಾನ ನೀಡಿದ್ದರು. ಭಾರತದಲ್ಲಿಂದು ಕಂಡು ಬರುವ ವೈದಿಕಧರ್ಮದ ಪ್ರತಿಷ್ಠೆ, ವೇದವಿಚಾರಗಳಲ್ಲಿನ ಶ್ರದ್ಧೆ, ಜ್ಞಾನ ಮತ್ತು ಆದರಗಳಿಗೆ ಶ್ರೀಶಂಕರರ ದಾರ್ಶನಿಕತ್ವ ಹಾಗೂ ದೂರದರ್ಶಿತ್ವಗಳೇ ಕಾರಣಗಳೆಂದು ಸಾಬೀತುಪಡಿಸುವಲ್ಲಿ ಇತಿಹಾಸ ಗೆದ್ದಿದೆ, ಅಲ್ಲವೆನ್ನುವಿರೇನು?

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts