ಆತ್ಮನಿರ್ಭರತೆ ನೀಗಿಸುತ್ತೆ ಸರ್ವಶಕ್ತಿಗಳ ಕೊರತೆ

PM Modi
Published on

ಜನರಲ್ಲಿ ಆತ್ಮವಿಶ್ವಾಸ ಮೂಡಿಸಿ ಸ್ವಾಭಿಮಾನವನ್ನು ಊರ್ಜಿತಗೊಳಿಸಿ ಸ್ವಾವಲಂಬಿಗಳಾಗಿಸುವ ಈ ಕಾರ್ಯ ಸ್ವಾತಂತ್ರ್ಯದ ನಂತರ ನಮ್ಮನ್ನಾಳಿದ ಬಹುತೇಕ ಜನರಿಗೆ ಹೊಳೆಯಲಿಲ್ಲವೋ? ಜಾಣಕಿವುಡರಾಗಿದ್ದರೋ? ಉತ್ತರ ಪತ್ತೆ ಹಚ್ಚಲು ನಿಘಂಟು ಬೇಕೆ?

ಭಾರತ! ಏನದ್ಭುತ ಈ ಹೆಸರು! ಜಗತ್ತಿನಲ್ಲೇ ಅತ್ಯಂತ ಪ್ರಾಚೀನ ಇತಿಹಾಸವನ್ನು ದಾಖಲಿಸಿದ ಈ ನಮ್ಮ ದೇಶ ಮಾನವಸಂಕುಲದ ಅಭ್ಯುದಯಕ್ಕಾಗಿ ಅನಾದಿಕಾಲದಿಂದಲೂ ನೆರವೇರಿಸುತ್ತ ಬಂದ ಜೀವನ ಶಿಕ್ಷಣ ಕುರಿತಾದ ಸಂಶೋಧನೆಗಳು ಅಸಂಖ್ಯಾತ ಮತ್ತು ಅವಿಸ್ಮರಣೀಯ. ತಮ್ಮ ಉಳಿವು ಮತ್ತು ಉದ್ಧಾರಕ್ಕೆ ಖಡ್ಗಶಕ್ತಿಯ ಏಕೈಕ ಅವಲಂಬನೆಯನ್ನು ಆಧರಿಸಿದ ಹತ್ತು ಹಲವು ನಾಗರಿಕತೆಗಳು ಪ್ರಾರಂಭದ ಹಂತದಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾದವು ಎಂದೆನಿಸಿದರೂ ಆನಂತರ ಪತನದ ಹಾದಿಯಲ್ಲಿ ಸಾಗಿದ್ದಲ್ಲದೆ ಕಾಲಗರ್ಭದಲ್ಲಿ ಕಣ್ಮರೆಯಾದದ್ದು ಇತಿಹಾಸದ ದುರಂತವೇ ಸರಿ. ಸಾಮಾನ್ಯ ಮನಸ್ಸುಗಳೂ ಮಹಾನ್ ಚೇತನಗಳಾಗಲು ಸಾಧ್ಯವೆಂಬ ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುತ್ತ ಬಂದ ನಮ್ಮ ಭಾರತರಾಷ್ಟ್ರ, ಇತಿಹಾಸದ ಕಾಲಘಟ್ಟದಲ್ಲಿ ಉಗ್ರ ಪ್ರತಿಭಟನೆಗಳನ್ನು ಎದುರಿಸಿದರೂ ಮನುಷ್ಯನ ಪತನಕ್ಕೆ ನೂರು ಮಾರ್ಗಗಳಿದ್ದರೆ ಉತ್ಥಾನಕ್ಕೆ ಕೆಲವೇ ಮಾರ್ಗಗಳಿವೆ ಎಂಬುದನ್ನು ಸಾಬೀತುಪಡಿಸುತ್ತ ಸಾಗಿ, ಆತ್ಮಶಕ್ತಿಯು ಖಡ್ಗಶಕ್ತಿಯನ್ನು ಎಂದೆಂದೂ ಮಣಿಸುತ್ತದೆ ಎಂಬ ಶುದ್ಧ-ಸಾತ್ವಿಕ-ಶಾಶ್ವತ ಆದರ್ಶವನ್ನು ಮುನ್ನೆಲೆಯಲ್ಲಿ ಇರಿಸಿತು. ಸಮಾಜಗಳು ಮತ್ತು ನಾಗರಿಕತೆಗಳನ್ನು ವಿಶ್ವದೃಷ್ಟಿ ಇಲ್ಲದ ಬುಡಕಟ್ಟು ನಂಬಿಕೆಗಳು ರಕ್ಷಿಸಲು ಸಾಧ್ಯವೇ ಇಲ್ಲವೆಂಬ ಅದ್ಭುತ ಸತ್ಯವನ್ನು ಜಗತ್ತಿಗೆ ಪರಿಚಯಿಸಿದ ಭವ್ಯ ಪರಂಪರೆ ನಮ್ಮ ಭಾರತದ್ದು!

ಹೆತ್ತ ತಾಯಿ ಮತ್ತು ಜನ್ಮಸ್ಥಳಗಳು ಸ್ವರ್ಗಕ್ಕಿಂತಲೂ ಮೌಲ್ಯಾಧಿಕ್ಯವನ್ನು ಸಾಧಿಸಿದ ತತ್ತ್ವ ಅನುಷ್ಠಾನದ ಭಾರತವು ಸ್ವಧರ್ಮವನ್ನು ಅಡಿಪಾಯವಾಗಿ ಇರಿಸಿಕೊಂಡು ಜಗತ್ತಿನ ದಶದಿಕ್ಕುಗಳಿಂದ ಹರಿದು ಬರುವ ಯಾವುದೇ ಶ್ರೇಷ್ಠ ಸಂದೇಶವನ್ನು ತನ್ನ ಧ್ಯೇಯಾದರ್ಶಗಳಲ್ಲಿ ಹಾಲಿನಲ್ಲಿ ಜೇನು ಬೆರೆಸಿದಂತೆ ಲೀನವಾಗಿಸಿಕೊಂಡು ಸಮರ್ಪಕವಾಗಿ, ಸಮರ್ಥವಾಗಿ ಮುಂದೆ ಸಾಗುತ್ತಿರುವುದು ಸುಳ್ಳಲ್ಲ. ಇದೆಲ್ಲದರ ನಡುವೆ ಇಡೀ ಜಗತ್ತಿನ ಒಳಿತಿಗಾಗಿ ಪ್ರಾರ್ಥಿಸುತ್ತ ಕಾರ್ಯಪ್ರವೃತ್ತವಾದ ಭಾರತ ಇಂದು ಜಗತ್ತಿನ ಯಾವುದೇ ರಾಷ್ಟ್ರದೊಂದಿಗೆ ಭಾವನಾತ್ಮಕ ದೃಷ್ಟಿಯಲ್ಲಿ universal blood group (O)ನ ಜವಾಬ್ದಾರಿಯುತ ಮಂಗಳಕರ ಸ್ಥಾನವನ್ನು ಅಲಂಕರಿಸಿರುವುದು ಸುಸ್ಪಷ್ಟ. ಇದನ್ನೂ ಓದಿ:ವಿವೇಕಧಾರೆ ಅಂಕಣ: ಸೇವೆ ಭಾವುಕತೆಯಲ್ಲ ಜೀವನ ವಿಧಾನ

ಇತಿಹಾಸದ ಸಹಸ್ರವರ್ಷಗಳ ಸುದೀರ್ಘ ಪಯಣದಲ್ಲಿ ಭಾರತೀಯ ಜೀವನಾದರ್ಶಗಳನ್ನು ನುಚ್ಚುನೂರುಗೈಯಲು ಪ್ರಯತ್ನಿಸಿದ ನಾಗರಿಕತೆಗಳು ಹಲವು, ನಿಜ! ಇತಿಹಾಸದಲ್ಲಿ ಭಾರತವೂ ನಲುಗಿದೆ, ಹಿಂಸೆ ಅನುಭವಿಸಿದೆ, ಅನುಭವಿಸುತ್ತಲೂ ಸಾಗಿದೆ. ಆದರೆ ಪರಕೀಯರ ಆಳ್ವಿಕೆಯ ದಿನಗಳಲ್ಲೂ ಭಾರತೀಯರಲ್ಲದ, ಭಾರತದ ಬಗ್ಗೆ ಪೂರ್ವಾಗ್ರಹವಿಲ್ಲದೆ ತಿಳಿವಳಿಕೆ ಇದ್ದ ಹತ್ತು ಹಲವು ವಿವೇಕಾಧಾರಿತ ವಿಚಾರವಂತರು ಉದ್ಗರಿಸಿದ ಮಾತುಗಳು ಇತಿಹಾಸದಲ್ಲಿ ದಾಖಲಾಗಿವೆ.

ಇತಿಹಾಸಜ್ಞ ವಿಲ್ ಡ್ಯೂರೆಂಟ್, ‘ಮಾನವರ ಮನಸ್ಸುಗಳನ್ನು ಉನ್ನತ ಉದಾತ್ತ ಚಿಂತನೆಗಳಿಂದ ಮುದಗೊಳಿಸುವ ಹಾಗೂ ಚಾರಿತ್ರ್ಯಶಕ್ತಿಯನ್ನು ವೃದ್ಧಿಗೊಳಿಸುವ ಪ್ರಕ್ರಿಯೆ ಜಗತ್ತಿನ ಇನ್ಯಾವುದೇ ಕ್ರಾಂತಿಗಳಿಗಿಂತ ಹಿರಿದು; ಇಂತಹ ಮಾನವನಿರ್ವಣ ಕ್ರಾಂತಿಗಳ ಅನುಷ್ಠಾನವಂತರು ತತ್ತ್ವಜ್ಞಾನಿಗಳು ಮತ್ತು ಸಂತರು’ ಎಂದು ಉದ್ಗರಿಸಿದರೆ, ಮಾರ್ಕ್​ಟ್ವೇನ್, ‘ಭಾರತವು ಮಾನವ ನಾಗರಿಕತೆಯ ತೊಟ್ಟಿಲು, ಇತಿಹಾಸಗಳ ತಾಯಿ, ಅದ್ಭುತಗಳ ಅಜ್ಜಿ ಮತ್ತು ಸಂಪ್ರದಾಯಗಳ ಮುತ್ತಜ್ಜಿ...’ ಎಂದು ವಿನಮ್ರವಾಗಿ ನುಡಿದಿದ್ದಾನೆ. ಚೀನಾದ ಹೂ ಶಿನ್, ‘ತಾನು ಜಗತ್ತಿಗೆ ಅನುಗ್ರಹಿಸಿದ ಬೌದ್ಧ ಚಿಂತನೆಗಳ ಸಹಾಯದಿಂದ ಭಾರತ ಯಾವುದೇ ಶಸ್ತ್ರಸಜ್ಜಿತ ಒಬ್ಬನೇ ಸೈನಿಕನನ್ನು ಮುಂದಿರಿಸದೆ ಚೀನಾರಾಷ್ಟ್ರವನ್ನು ಎರಡು ಸಾವಿರ ವರ್ಷಗಳ ಕಾಲ ಭಾವನಾತ್ಮಕವಾಗಿ ಮುನ್ನಡೆಸಿದೆ’ ಎಂದಿದ್ದಾನೆ. ಇಂದು ಚೀನಾ ಭಾರತದೊಂದಿಗೆ ಅಷ್ಟು ಆತ್ಮೀಯವಾಗಿ ವ್ಯವಹರಿಸುತ್ತಿಲ್ಲವಲ್ಲ ಏಕೆ ಎಂಬ ಪ್ರಶ್ನೆ ಮುಂದಾದರೆ ಚೀನಾರಾಷ್ಟ್ರ ಬೌದ್ಧ ಮತದ ಆದರ್ಶಗಳನ್ನು ಗಾಳಿಗೆ ತೂರಿ ಬಹಳ ದಿನಗಳೇ ಆದವು ಎಂಬುದೇ ವಿವೇಕದ ಉತ್ತರ!

ವಿವೇಕವಾಣಿ: ಭಾರತದ ಸಾವಿರ ವರ್ಷಗಳ ಇತಿಹಾಸವನ್ನು ಯಾವುದೇ ಪೂರ್ವಗ್ರಹವಿಲ್ಲದೆ ತನ್ನ ಋಷಿಗಣ್ಣಿನಿಂದ ಅರಿತ ಸ್ವಾಮಿ ವಿವೇಕಾನಂದರು ನೀಡಿದ ತೀರ್ವನವಿದು, ‘ಭಾರತ ನಾಶವಾಗಬಾರದು, ಅದು ಅದರ ಒಳಿತಿಗಾಗಷ್ಟೇ ಅಲ್ಲ; ಜಗತ್ತಿನ ಉಳಿವಿಗೆ ಭಾರತದ ಉಳಿವು ಅತ್ಯವಶ್ಯಕ ಮತ್ತು ಅನಿವಾರ್ಯ! ಇಲ್ಲಿ ಭಾರತವನ್ನು ಕೇವಲ ರಾಜಕೀಯ ದೃಷ್ಟಿಯಿಂದ ಬ್ರಿಟಿಷರ ಶೃಂಖಲೆಯಿಂದ ಬಿಡುಗಡೆಗೊಳಿಸಬೇಕೆಂದು ಅರ್ಥವಲ್ಲ, ಭಾರತವು ಅನಾದಿಕಾಲದಿಂದ ಪ್ರತಿಪಾದಿಸುತ್ತ ಬಂದಿರುವ ಸನಾತನ ಮೌಲ್ಯಗಳು ವಿಶ್ವಸಂದೇಶದ ಪುನರುಜ್ಜೀವನ ಹಾಗೂ ವಿಶ್ವದಾದ್ಯಂತ ಅವುಗಳ ಸಮರ್ಪಕ ಪ್ರಸರಣದ ಕಾರ್ಯ! ಇದನ್ನೂ ಓದಿ: ಕರುಣೆ ಬೇಡ, ಶಿಕ್ಷೆ ಎದುರಿಸಲು ಸಿದ್ಧ: ‘ಅಪರಾಧಿ’ ವಕೀಲ ಪ್ರಶಾಂತ್‌ ಭೂಷಣ್‌ ಹೇಳಿಕೆ

ಭಾರತವನ್ನಾಳಿದ ಹಿಂದೂ ಅರಸರು ತಾವು ನಿರ್ವಿುಸಿದ ದೇವಾಲಯಗಳಿಂದ ಗುರ್ತಿಸಲ್ಪಟ್ಟರೆ, ಮುಸಲ್ಮಾನ ರಾಜರು ತಾವು ಕಟ್ಟಿದ ಅರಮನೆಗಳಿಂದ ಖ್ಯಾತರಾದರೆ, ಆಂಗ್ಲರ ಆಡಳಿತ ಹೆಂಡದ ಬಾಟಲಿಗಳ ಬೆಟ್ಟಗಳನ್ನೇ ಬಿಟ್ಟು ಹೋಯಿತು. ಶಿಕ್ಷಣವನ್ನು ಸಾಕ್ಷರ ಕಲಿಕೆಯ ಹಂತಕ್ಕೆ ಮೌಲ್ಯದ ಪತನಕ್ಕೆ ಹಾದಿ ಮಾಡಿಕೊಟ್ಟಿತು. ಭಾರತೀಯರಿಗೆ ನಿನ್ನ ತಂದೆ ಮೂರ್ಖ, ನಿನ್ನಜ್ಜ ಮಾನಸಿಕ ಅಸ್ವಸ್ಥ, ನಿನ್ನ ಶಿಕ್ಷಕ ಮೋಸಗಾರ ಹಾಗೂ ನಿಮ್ಮ ಪವಿತ್ರ ಗ್ರಂಥಗಳೆಲ್ಲ ಸುಳ್ಳಿನ ಕಂತೆಗಳೆಂದು ಬಿಂಬಿಸಿ ಇಂತಹ ಆಂಗ್ಲಶಿಕ್ಷಣ ವ್ಯವಸ್ಥೆಯಿಂದ ಒಡಮೂಡಿದ ಯುವಕನೊಬ್ಬ ನಕಾರಾತ್ಮಕ ಆಲೋಚನೆಗಳ ಸ್ವದೇಶ ದ್ವೇಷಿಯಾಗಿ ರೂಪುಗೊಂಡಿದ್ದೇ ಹೆಚ್ಚು. ಆದ್ದರಿಂದ ನಾನು ಹೇಳಿದ್ದು, ಬಡವರಿಗೆ ಬೆಳಕು ಕೊಡಿ, ಶ್ರೀಮಂತರಿಗೆ ಹೆಚ್ಚು ಬೆಳಕು ಕೊಡಿ; ಅವಿದ್ಯಾವಂತನಿಗೆ ಬೆಳಕು ಕೊಡಿ, ವಿದ್ಯಾವಂತನಿಗೆ ಹೆಚ್ಚು ಬೆಳಕು ಕೊಡಿ...’ ಎಂದು ಸಾರಿದ್ದಾರೆ.

‘ಸರ್ವಂ ಪರವಶಂ ದುಃಖಮ್ ಸರ್ವಾತ್ಮವಶಂ ಸುಖಂ’ ಎಂಬ ಋಷಿವಾಕ್ಯಾಧಾರಿತ ಭಾರತೀಯ ಚಿಂತನೆಯನ್ನು ಮುಂದಿರಿಸಿಕೊಂಡು, ‘ಭಾರತೀಯರೇ, ನಿಮ್ಮ ಉದ್ಧಾರಕ್ಕೆ ಇರುವ ಶ್ರೇಷ್ಠ ಅವಶ್ಯಕತೆಯೆಂದರೆ, ನೀವು ಉಪನಿಷತ್ತುಗಳಿಗೆ ಹಿಂದಿರುಗಿರಿ. ಸನಾತನ ಧರ್ಮ ನಿರ್ದೇಶಿಸಿದಂತೆ ನಿಮ್ಮಗಳ ಬದುಕಿಗೆ ಸ್ವರೂಪವನ್ನು ದೊರಕಿಸಿಕೊಳ್ಳಿ. ಇತಿಹಾಸ ಅರಿಯದಿದ್ದಾಗ ಇತಿಹಾಸ ನಿರ್ವಿುಸುವ ಮಾತುಂಟೇ? ಉಪನಿಷತ್ತುಗಳು ಪ್ರತಿಯೊಂದು ಪುಟದಲ್ಲೂ ಪ್ರತಿಪಾದಿಸುವ ‘ನಿರ್ಭಯತೆ’ ನಿಮ್ಮ ಧ್ಯೇಯಾದರ್ಶ ಆಗಲಿ...’ ಎಂದು ಎಚ್ಚರಿಸಿದರು. ‘I feel confident that the tradition of the past is also the wave of the future’ ಎಂಬ ಆರ್ನಾಲ್ಡ್ ಟಾಯ್ನಬಿ ಮಾತು ವಿವೇಕಾನಂದರ ಉಕ್ತಿಗೆ ಅದೆಷ್ಟು ಹತ್ತಿರ ಎಂದೆನಿಸದಿರದು!

ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಪ್ರತಿಪಾದಿಸಿರುವ ಆತ್ಮನಿರ್ಭರ ಭಾರತದ ಶ್ರೇಷ್ಠ ಪರಿಕಲ್ಪನೆಯು ಪ್ರಸ್ತುತ ದೇಶದ ಜನರಿಗೆ ‘Redefining India; Reeducate the educates!’ ಎಂಬಂತಿದೆ. ಜನರಲ್ಲಿ ಆತ್ಮವಿಶ್ವಾಸ ಮೂಡಿಸಿ ಸ್ವಾಭಿಮಾನವನ್ನು ಊರ್ಜಿತಗೊಳಿಸಿ ಸ್ವಾವಲಂಬಿಗಳಾಗಿಸುವ ಈ ಕಾರ್ಯ ಸ್ವಾತಂತ್ರ್ಯದ ನಂತರ ನಮ್ಮನ್ನಾಳಿದ ಬಹುತೇಕ ಜನರಿಗೆ ಹೊಳೆಯಲಿಲ್ಲವೋ? ಜಾಣಕಿವುಡರಾಗಿದ್ದರೋ? ಉತ್ತರ ಪತ್ತೆ ಹಚ್ಚಲು ನಿಘಂಟು ಬೇಕೆ? ಇಂದಿಗೂ ಯೋಗ್ಯತೆ ಎಂದರೇನು? ಎಂಬುದನ್ನೇ ಪರಿಚಯಿಸದ, ಕೇವಲ ಯೋಗ್ಯತಾಪತ್ರಗಳನ್ನಷ್ಟೇ ವಿತರಿಸುತ್ತ ತನ್ನ ಕರ್ತವ್ಯ ಮುಗಿಯಿತೆಂಬ ಧನ್ಯತೆಯಲ್ಲಿ ಬೀಗುತ್ತಿರುವ, ನಿಂತ ನೀರಾಗಿ ನಾರುತ್ತಿರುವ ನಮ್ಮ ದೇಶದ ವಿಶ್ವವಿದ್ಯಾಲಯಗಳು CLASS ಆಗಬೇಕಿದ್ದ ಪದವೀಧರರನ್ನು MASS ಆಗಿ ರೂಪಿಸುತ್ತ ಸಾಗಿರುವ ದೃಶ್ಯ ವಿಷಾದಕರ. ಇದನ್ನೂ ಓದಿ: ಗಾಯಕ ಎಸ್​​​.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ

ಮಹಾಭಾರತದಲ್ಲಿ ಯುದ್ಧಭೂಮಿಯಿಂದ ನಿರ್ಗಮಿಸಲೆತ್ನಿಸಿದ್ದ ಅರ್ಜುನನ್ನು ಶ್ರೀಕೃಷ್ಣ, ‘ಅರ್ಜುನ, ಈ ನಿನ್ನ ಹೃದಯದೌರ್ಬಲ್ಯದಿಂದ ಹೊರ ಬಾ, ಈ ನಿನ್ನ ನಡವಳಿಕೆ ಷಂಡತನವೇ ಸರಿ!’ ಎಂದೇ ಎಚ್ಚರಿಸಿದ್ದ. ಇಂದಿನ ಅಸಂಖ್ಯಾತ ಯುವಜನರು ಜೀವನಾದರ್ಶಗಳ ಅರಿಯದೇ, ಜೀವನ ಹೋರಾಟಕ್ಕೆ ಒಲ್ಲದೇ ಕಾರ್ಯವಾಸಿ ಕತ್ತೆಕಾಲು ಹಿಡಿಯುವ ಚಮತ್ಕಾರದಲ್ಲಿ, ‘ಮದುವೆ ಆಗುವವರೆಗೆ ಅಪ್ಪನ ದುಡ್ಡು, ಮದುವೆ ಆದ ನಂತರ ಮಾವನ ದುಡ್ಡು’ ಎಂಬ ಆತ್ಮವಂಚಕ ದುರ್ಬಲ ವಿಚಾರಕ್ಕೆ ಬಲಿಯಾಗುತ್ತಿದ್ದು, ಹೊರಮುಖವಾಗಿ ಸ್ತ್ರೀ ಅಥವಾ ಪುರುಷರಂತೆ ಕಂಡರೂ ಸ್ವಭಾವದಲ್ಲಿ ಅರ್ಜುನನನ್ನು ಅಂದಿನ ಅಸಹ್ಯ ಸ್ಥಿತಿಯನ್ನೇ ಬಿಂಬಿಸುತ್ತಿಲ್ಲವೇ? ಇದೆಂತಹ ಹೀನ ಅಸ್ತಿತ್ವ ಅಲ್ಲವೇ? ಎಲ್ಲದಕ್ಕೂ ಕೈಚಾಚುವ ದರಿದ್ರಸ್ಥಿತಿಗೆ ನಮ್ಮ ಯುವಜನತೆ ಬಲಿಯಾಗಬೇಕೆ?

ರಾಮಾಯಣ ಸೌರಭ: ಶ್ರೀರಾಮನು ಭರತನಿಗೆ ಹೇಳಿದ ಹದಿನಾಲ್ಕು ರಾಜದೋಷಗಳಿಂದ ನಮ್ಮ ಪ್ರಜಾಸತ್ತಾತ್ಮಕ ಆಡಳಿತಗಾರರು ಮುಕ್ತರಾದಾಗ ಆತ್ಮನಿರ್ಭರ ತತ್ತ್ವ ಅವರ ವ್ಯಕ್ತಿತ್ವದಲ್ಲಿ ವಿಜೃಂಭಿಸುತ್ತದೆ. ಅವುಗಳೆಂದರೆ, ನಾಸ್ತಿಕತೆ, ಸುಳ್ಳು, ಸಿಟ್ಟು, ಅಸಮಾಧಾನ, ಸೋಮಾರಿತನ, ನಿಧಾನವಾಗಿ ತಡೆದು ಕೆಲಸ ಮಾಡುವುದು, ಪ್ರಾಜ್ಞ ಸಜ್ಜನರೊಂದಿಗೆ ಸೇರದೇ ಇರುವುದು, ಪಂಚೇಂದ್ರಿಯಗಳಿಗೆ ಅಧೀನರಾಗಿ ಇಂದ್ರಿಯ ಚಾಪಲ್ಯದಲ್ಲೇ ಮುಳುಗುವುದು, ಯಾರೊಡನೆಯೂ ಸಮಾಲೋಚಿಸದೆ ಏಕಪಕ್ಷೀಯವಾದ ನಿರ್ಧಾರ, ಅನುಭವವಿಲ್ಲದವರೊಂದಿಗೆ ಮಂತ್ರಾಲೋಚನೆ, ನಿಶ್ಚಯಿಸಿದ ಕಾರ್ಯವನ್ನು ಆರಂಭಿಸದೇ ಇರುವುದು, ಮಂತ್ರಾಲೋಚನೆಯನ್ನು ರಹಸ್ಯವಾಗಿ ಕಾಪಾಡದಿರುವುದು, ಮಂಗಳಕರವಾದ ಶುಭಕಾರ್ಯಗಳನ್ನು ಮಾಡದೇ ಇರುವುದು ಮತ್ತು ಎಲ್ಲ ಶತ್ರುಗಳ ಮೇಲೂ ಏಕಕಾಲದಲ್ಲಿ ಯುದ್ಧಾರಂಭ.

ಸರ್ಕಾರವು ಈ ದೋಷಗಳಿಂದ ಮುಕ್ತವಾಗಿ, ನೈತಿಕ ಮೌಲ್ಯಗಳ ನೆಲೆಗಟ್ಟಿನಲ್ಲಿ ಆಡಳಿತ ನಡೆಸದಿದ್ದರೆ, ಪ್ರಜೆಗಳಲ್ಲಿ ನ್ಯಾಯ-ನೀತಿಗಳ ನಡವಳಿಕೆ ಕಾಣುವುದು ಭ್ರಮೆ ಆಗುವುದಿಲ್ಲವೇ? ‘ಯಥಾ ರಾಜಾ ತಥಾ ಪ್ರಜಾಃ’ ಎಂಬ ಮಾತು ಎಂದೆಂದಿಗೂ ಸತ್ಯ. ಹಿಂದೆ ರಾಜರಿದ್ದರು, ಈಗ ಸರ್ಕಾರ ಇದೆ. ‘ಜೀವನದಲ್ಲಿ ಉನ್ನತ ವಿಚಾರಗಳ ಬಗೆಗಿನ ಹಸಿವು ಅತ್ಯಗತ್ಯ. ಕೆಲಸ ಕಲಿತರಷ್ಟೇ ಸಾಲದು, ಅದನ್ನು ಪ್ರೀತಿಯಿಂದ ನಿರ್ವಹಿಸಬೇಕು’. ‘ಅಳತೆ ಇಲ್ಲದಿದ್ದರೆ ಔಷಧವೂ ವಿಷವಾಗುತ್ತದೆ’ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತುಗಳು ರಾಮಾಯಣದ ನುಡಿಗಳ ಪ್ರತಿಧ್ವನಿಯೇ ಅಲ್ಲವೇ?

ಗೀತಸೌರಭ: ಭಗವದ್ಗೀತೆಯು, ‘ಆತ್ಮಸಾಕ್ಷಿಯು ಸಾಕ್ಷಾತ್ ಭಗವಂತ, ಅದು ಅಂತರಂಗಧ್ವನಿಯೂ ಹೌದು, ವೀರನಾದವನು ತನ್ನ ಜೀವನವನ್ನಾದರೂ ಸಂಕಷ್ಟಗಳಿಗೆ ಒತ್ತೆ ಇಡುತ್ತಾನೆಯೇ ಹೊರತು ಆತ್ಮಸಾಕ್ಷಿಯನ್ನಲ್ಲ..’ ಇವೇ ಮೊದಲಾದ ಅದ್ಭುತ ವಿಚಾರಗಳನ್ನು ಬೋಧಿಸುತ್ತದೆ. ಅವ್ಯಯವಾದ ಈ ವಿಚಾರಗಳು ಸಾಮಾನ್ಯನನ್ನು ಮೊದಲ್ಗೊಂಡು ಭಗವಾನ್ (ಭಗವಂತನೆಂದೂ ಅರ್ಥೈಸಿಕೊಳ್ಳಬಹುದು) ರವರೆಗೂ ಅನ್ವಯಿಸುವಂಥವು. ಮೋಕ್ಷಶಾಸ್ತ್ರವೆನಿಸಿದ್ದ ಭಗವದ್ಗೀತೆ ಜೀವಶಾಸ್ತ್ರವೂ ಆಗಿದ್ದು ಡಿವಿಜಿ ಹೇಳುವಂತೆ ಮಾನವನಿಗೆ ಜೀವನದಲ್ಲಿ ಗೌರವ, ಕರ್ತವ್ಯದಲ್ಲಿ ಉತ್ಸಾಹ, ಆಪತ್ಕಾಲದಲ್ಲಿ ಧೈರ್ಯ ಮತ್ತು ಸಂಶಯ ಮೂಡುವ ಸನ್ನಿವೇಶಗಳಲ್ಲಿ ನೆಮ್ಮದಿ ನೀಡುವ ನಂಬಿಕೆಯಾಗಿ ನೆರವಾಗುತ್ತದೆ.

ಆಧುನಿಕ ಮನಶ್ಯಾಸ್ತ್ರ: ರಾಮಾಯಣ-ಮಹಾಭಾರತಗಳು ನಿಶ್ಚಿತವಾಗಿ ಪ್ರತಿಪಾದಿಸುವಂತೆ ಯಾವುದೇ ವ್ಯಕ್ತಿ ಯಶಸ್ಸನ್ನು ಸಾಧಿಸಬೇಕಾದಲ್ಲಿ ಅವನಲ್ಲಿ ಈ ಗುಣಸ್ವಭಾವಗಳಿರಲೇಬೇಕು. ಅವುಗಳೆಂದರೆ, ವಾಸ್ತವಿಕತೆಗೆ ತನ್ನನ್ನು ತೆರೆದಿಟ್ಟುಕೊಳ್ಳಬೇಕು, ತನ್ನ ಗೌರವಕ್ಕೆ ಧಕ್ಕೆ ಆಗದಂತೆ ಇತರರನ್ನು ಗೌರವಿಸಬೇಕು, ಸ್ವಾರ್ಥಕ್ಕೆ ಪ್ರಾತಿನಿಧ್ಯ ನೀಡುವುದಕ್ಕಿಂತ ಸಮಸ್ಯೆಗೆ ಪರಿಹಾರ ಪತ್ತೆಹಚ್ಚಲು ಪ್ರಯತ್ನಿಸಬೇಕು, ಸ್ವ-ಇಚ್ಛೆ ಹಾಗೂ ಸ್ವ-ಪ್ರೇರಣೆಯಿಂದ ಕಾರ್ಯ ನಿರ್ವಹಿಸಬೇಕು, ಕೆಲಸದಲ್ಲಿ ಸೃಜನಾತ್ಮಕತೆ ಅಗತ್ಯ, ಜನಸಂದಣಿಯಲ್ಲಿದ್ದಂತೆ ಏಕಾಂತವಾಸವನ್ನು ಆಸ್ವಾದಿಸುವಂತೆ ಇರಬೇಕು, ಸಾಮಾಜಿಕ ಒತ್ತಡಗಳೆಷ್ಟೇ ಇದ್ದರೂ ಮಣಿಯಬಾರದು, ಸಹಮಾನವರೊಡನೆ ಆತ್ಮೀಯ ಸಂಬಂಧವನ್ನು ಮಧುರವಾಗಿ ರೂಪಿಸಿಕೊಳ್ಳಬೇಕು. ಕಲಿಯಲೇಬೇಕಾದ್ದನ್ನು ಕಿರಿಕಿರಿ ಇಲ್ಲದೆ ಹಿರಿ-ಕಿರಿಯರಿಂದ ಕಲಿಯಲೇಬೇಕು ಮತ್ತು ದೈವಿಕ ಅನುಭವವನ್ನು ಆಸ್ವಾದಿಸುವ ನಡವಳಿಕೆಗಳು.

ಕರ್ಮನಿಷ್ಠನನ್ನು ಸಮುದ್ರಕ್ಕೆ ಎಸೆದರೆ, ಅವನು ಮೀನುಗಳನ್ನು ಬಾಯಲ್ಲಿ ಕಚ್ಚಿಕೊಂಡು, ತೋಳುಗಳಲ್ಲಿಯೂ ಹಿಡಿದುಕೊಂಡು ದಡಕ್ಕೆ ಮರಳುತ್ತಾನಂತೆ! ನಾವು ನಿಜಾರ್ಥದಲ್ಲಿ ಮನುಷ್ಯರಾದಾಗ ಮಾತ್ರ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಮೊದಲಾದವು ನಮ್ಮ ಮಡಿಲಿಗೆರಗುತ್ತವೆ! ವಿವೇಕಾನಂದರು ಹೇಳುತ್ತಾರೆ: 'It is tremendous error to feel helplessness. Do not seek help from anyone, we are our own help. If we cannot help ourselves, there is no one to help us'.

‘ನಿನ್ನ ಉದ್ಧಾರ ನಿನ್ನ ಕೈಯಲ್ಲೇ ಇದೆ. ನಿನ್ನ ಏಳ್ಗೆಯ ಶಿಲ್ಪಿ ನೀನೇ’ ಎಂಬ ಭಾರತೀಯ ಪ್ರಾಚೀನ ಮೌಲ್ಯಗಳನ್ನೇ ಆತ್ಮನಿರ್ಭರ ತತ್ತ್ವದಲ್ಲಿ ಕಾಣುತ್ತೇವೆ. ನಾವು ನಮ್ಮ ಆಲೋಚನೆಗಳನ್ನು ನಿಯಂತ್ರಿಸೋಣ, ಅವುಗಳ ಮೇಲೆ ಪ್ರಭುತ್ವ ಸಾಧಿಸೋಣ, ನಮಗೆ ನಾವೇ ಶಿಷ್ಯ, ಶಿಕ್ಷಕ, ತರಬೇತುದಾರ, ನಿಯಮಪಾಲಕರಾದಾಗ ಆತ್ಮಸಂಯಮ ಸಾಧಿಸಿದಂತಾಗುತ್ತದೆ. ಆಗ ಆತ್ಮನಿರ್ಭರತೆ ಸಾಕಾರಗೊಳ್ಳುತ್ತದೆ!

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net