ವಿವೇಕಧಾರೆ ಅಂಕಣ: ಸೇವೆ ಭಾವುಕತೆಯಲ್ಲ ಜೀವನ ವಿಧಾನ

Edit 1
Published on

ಸಮಾಜವಿರುವುದು ತನ್ನ ಸುಖಕ್ಕಾಗಿ ಎಂಬ ಮಾನವನ ಭ್ರಮೆ ನೆನ್ನೆ ಮೊನ್ನೆಯದಲ್ಲ. ಜಗತ್ತಿನ ಕಾಲಘಟ್ಟದಲ್ಲಿ ಆಗಮಿಸಿದ ಲೋಕಗುರುಗಳು ಮಾನವನನ್ನು ಈ ಭ್ರಮೆಯಿಂದ ಮುಕ್ತಗೊಳಿಸಲು ಅಹರ್ನಿಶಿ ಶ್ರಮಿಸಿದ್ದಾರೆ. ಆದರೆ ಸರ್ವರಿಗೂ ಈ ಸತ್ಯ ವೇದ್ಯವಾಗದು.

ಮಾನವನ ಸಮಗ್ರ ಜೀವಿತ ಅವಧಿಯನ್ನು ನಾಲ್ಕು ಹಂತಗಳಾಗಿ ವಿಂಗಡಿಸಿ ಅವುಗಳು ಒಂದನ್ನೊಂದು ಅವಲಂಬಿಸಿ ಅಂತಿಮವಾಗಿ ಜೀವನ ಸಾರ್ಥಕತೆಗೆ ಪೂರಕವಾದ ಸಂಹಿತೆಯನ್ನು ಸನಾತನ ಧರ್ಮವು ನಮಗಿತ್ತು ಹರಸಿದೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸಂನ್ಯಾಸಗಳೆಂಬ ನಾಲ್ಕು ಆಶ್ರಮಗಳಿಗೆ ದಿಕ್ಸೂಚಿಯಾಗುವಂತೆ ವೇದಗಳು ಸಂಹಿತ, ಬ್ರಾಹ್ಮಣ, ಆರಣ್ಯಕ ಹಾಗೂ ಉಪನಿಷತ್ತುಗಳ ಬೆಳಕಿನಿಂದ ಜೀವನವು ಭವ್ಯವಷ್ಟೇ ಅಲ್ಲ, ದಿವ್ಯವೂ ಆದರ್ಶಮಯವೂ ಆಗುವಂತೆ ದಾರಿ ತೋರಿವೆ. ಜಗತ್ತಿನಲ್ಲಿ ಸಾರ್ವಕಾಲಿಕ ಅದ್ಭುತ ಎಂದೆನಿಸಿದ ವಿಚಾರವೇನೆಂದರೆ ನಮ್ಮ ಅಭ್ಯುದಯದಲ್ಲಿ ಲೌಕಿಕ ಹಾಗೂ ಆಧ್ಯಾತ್ಮಿಕ ಆಯಾಮಗಳೆಂಬ ವಿಂಗಡಣೆಗಳಾಗಿದ್ದರೂ ಲೌಕಿಕ ಶಿಕ್ಷಣವು ಬಹಿರಂಗದಲ್ಲಿ ನಮಗೆ ಹಲವು ಕಟ್ಟುಪಾಡುಗಳನ್ನು ಹಾಗೂ ಲಕ್ಷ್ಮಣರೇಖೆಗಳನ್ನೆಳೆದಿದ್ದರೆ ಅಧ್ಯಾತ್ಮ ಶಿಕ್ಷಣವು ಪ್ರತಿಯೊಬ್ಬರಿಗೂ ಉದ್ಧಾರಕ್ಕೆ ಮುಕ್ತ ಅವಕಾಶವನ್ನಿತ್ತಿದೆಯಲ್ಲದೆ ಅವರವರ ಅಂತರಂಗವನ್ನೇ ಶುದ್ಧೀಕರಣದ ಕುಲುಮೆಯಾಗಿಸಿದೆ. ಇಂದ್ರಿಯಗ್ರಾಹ್ಯ ಸತ್ಯಗಳನ್ನಾಧರಿಸಿದ ಲೌಕಿಕ ಶಿಕ್ಷಣವು ಆಧ್ಯಾತ್ಮಿಕ ಜೀವನ ಹಾಗೂ ಆವಿಷ್ಕಾರಗಳನ್ನು ಅನುಮಾನಿಸಿದ್ದೇ ಹೆಚ್ಚು! ಆದರೆ ಆಧ್ಯಾತ್ಮಿಕ ತತ್ತ್ವಗಳು ಲೌಕಿಕ ವಿಚಾರಗಳನ್ನೆಂದೂ ನಿರ್ಲಕ್ಷಿಸದೆ, ಉಪೇಕ್ಷಿಸದೆ, ಅವನ್ನೇ ಪ್ರಾರಂಭವಾಗಿಸಿಕೊಂಡು ಮುನ್ನಡೆಯುವ ಆದರ್ಶಜೀವನದ ಸೂತ್ರದ ದೀಕ್ಷೆಯನ್ನಿತ್ತು ಭರವಸೆಯಿಂದ ಸಾಗುವಂತೆ ಪ್ರೇರೇಪಿಸಿವೆ. ಲೌಕಿಕ ಜ್ಞಾನವು ಸೀಮಿತತೆಯನ್ನು ತೋರಿದರೆ ಆಧ್ಯಾತ್ಮಿಕ ವಲಯವು “All Inclusive” ಆಗಿರುವುದು ಸುಳ್ಳಲ್ಲ.

ಮಾನವ ಬದುಕಿಗೆ ಸದಾಚಾರ ಸಂಪನ್ನತೆಯ ಅಗತ್ಯವನ್ನು ಎತ್ತಿ ಹಿಡಿಯುವ ಸಂಹಿತೆಯೇ ಧರ್ಮ. ಮೃಗತ್ವದ ಹಂತದಿಂದ ಮಾನವತ್ವದ ಹಂತದಲ್ಲಿ ಹಾದುಹೋಗಿ ದೈವತ್ವವನ್ನು ಸಾಧಿಸಲು ಮಾನವನು ಧರ್ವವಲಂಬಿ ಆಗಲೇಬೇಕು. ಮಲದಲ್ಲಿ ಒದ್ದಾಡುವ ಹುಳುಗಳೋಪಾದಿಯಲ್ಲಿ ಅತ್ಯಂತ ಕೆಳಹಂತದ ಸುಖಕ್ಕಾಗಿ ಹಾತೊರೆಯುವ ಜೀವಿಗಳನ್ನು ಉಪನಿಷತ್ತುಗಳು ಉದ್ಘೋಷಿಸಿದ ‘ಅಮೃತ ಪುತ್ರರೇ!’ ಎಂಬ ಅತ್ಯುನ್ನತ ಹಂತಕ್ಕೇರಿಸುವ ಹೋರಾಟದ ಜೀವನವನ್ನು ಧರ್ಮ ನಮಗೆ ಅನುಗ್ರಹಿಸಿದೆ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಹೇಳಿದ್ದು, ಮಾನವ ಸಮಾಜದಿಂದ ಧರ್ಮವನ್ನು ಬೇರ್ಪಡಿಸಿದರೆ ಕಡೆಗೆ ಉಳಿಯುವುದು ಮಾನವರೂಪದ ಮೃಗಗಳು ಮಾತ್ರ!

ವಿಶ್ವಾತ್ಮದ ಅದ್ಭುತ ಸ್ವರಮೇಳ ಎಂದೆನಿಸಿದ ಶ್ರೀರಾಮಕೃಷ್ಣ-ವಿವೇಕಾನಂದರು ಮಾನವನಿಗೆ ಮಾನವೀಯತೆಯ ಹಾಗೂ ಆಧ್ಯಾತ್ಮಿಕತೆಯ ಪವಿತ್ರ ಸ್ತರಗಳಲ್ಲಿ, ಲೌಕಿಕ ವಿಜ್ಞಾನದ ಆವಿಷ್ಕಾರಗಳ ಮೊದಲ್ಗೊಂಡು ಅಧ್ಯಾತ್ಮ ವಿಜ್ಞಾನದ ಆವಿಷ್ಕಾರವಾದ ಆತ್ಮಸಾಕ್ಷಾತ್ಕಾರದ ಹಂತದವರೆಗೆ ಅವನ ಅಪರಿಮಿತ ಸಾಧ್ಯತೆಗಳ ಅರಿವನ್ನಷ್ಟೇ ಮೂಡಿಸದೆ ಅದು ಜಗತ್ತಿನ ಹಿತಕ್ಕೂ ಹೇಗೆ ಬಳಕೆಯ ಬೆಳಕಾಗಬಲ್ಲದೆಂದು ಸಾಬೀತುಪಡಿಸಿದರು.

ರಾಮಕೃಷ್ಣ-ವಿವೇಕಾನಂದರು ಮಾನವ ಪ್ರಪಂಚಕ್ಕೆ ಮಾಡಿದ ಮಹದುಪಕಾರವೆಂದರೆ ಜಗತ್ತಿನ ಭೌತವಿಜ್ಞಾನಿಗಳು ಮಾನವನ ಉಪಯೋಗಕ್ಕೆ ಹತ್ತು ಹಲವು ಶಕ್ತಿಮೂಲಗಳನ್ನು ಆವಿಷ್ಕರಿಸಿ ಮಾನವನ ನಡುವಿನ ಭೌತಿಕ ಅಂತರವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿದ್ದರೂ ಶುಷ್ಕಗೊಂಡಿದ್ದ ಭಾವಪ್ರಪಂಚಕ್ಕೆ ಮಹತ್ತರ ಸ್ಥಾನವಿತ್ತು ಪ್ರತಿಯೊಬ್ಬ ವ್ಯಕ್ತಿಯು ವಿಶ್ವಾತ್ಮಭಾವದ ಅವಿಭಾಜ್ಯ ಅಂಗವೆಂಬ ಶ್ರೇಷ್ಠ ಸತ್ಯವನ್ನು ದಾರಿ ತೋರಿದ ಪರಿ. ಲೌಕಿಕ ಅಂತರವು ಕಡಿಮೆಯಾಗುವುದರೊಂದಿಗೆ ಮಾನವ ಸಂಬಂಧಗಳು ಕ್ಷೀಣಿಸುತ್ತಾ ಸಾಗಿದ ಆಘಾತಕಾರಿ ಬೆಳವಣಿಗೆಗೆ ಯಾವುದೇ ಲೌಕಿಕ ಜ್ಞಾನದ ಪರಿಹಾರವಿಲ್ಲವೆಂದರಲ್ಲದೆ ಅಧ್ಯಾತ್ಮಜ್ಞಾನವೊಂದೇ ಪರಿಹಾರವೆಂಬ ಸರ್ವಜನ ಹಿತಕಾರಿಯಾದ ಸಂದೇಶವನ್ನು ಸಾರಿದ ಮಹಾತ್ಮರಿವರು. ‘ನಿನ್ನ ನೆರೆಹೊರೆಯವರನ್ನು ನಿನ್ನಂತೆ ಪ್ರೀತಿಸು’ ಎಂಬ ಪ್ರವಾದಿಯ ದಿವ್ಯೋಕ್ತಿಯನ್ನು ಅವನ ಅನುಯಾಯಿಗಳೇ ನಿರ್ಲಕ್ಷಿಸಿ ಜಗತ್ತಿನ ಹತ್ತಾರು ರಾಷ್ಟ್ರಗಳ ಮುಗ್ಧಜನರ ಎದೆಯನ್ನು ಮೆಟ್ಟಿದ್ದ ಕಾಲದಲ್ಲಿ ‘ಈ ಜಗತ್ತನ್ನು ಕಣ್ಣು ತೆರೆದು ನೋಡು, ಇಲ್ಲ ಯಾರೂ ಪರಕೀಯರಲ್ಲ, ಜಗತ್ತನ್ನು ನಿನ್ನದಾಗಿಸಿಕೊ’ ಎಂಬ ದಿವ್ಯ ಸಂದೇಶ ಸಾರಿ ಜಗತ್ತಿನ ಇತಿಹಾಸದಲ್ಲಿ ಎಂದೆಂದೂ ಆತ್ಮಶಕ್ತಿಯು ಖಡ್ಗಶಕ್ತಿಯನ್ನು ಮಣಿಸಿದೆಯೆಂಬ ಸತ್ಯವನ್ನು ನವೀಕರಿಸಿದ್ದು ಸುಳ್ಳಲ್ಲ. ಅವರಾಡಿದ ಒಂದೊಂದು ಮಾತೂ ಉಪನಿಷತ್ತುಗಳ ಪ್ರತಿಧ್ವನಿಯೇ ಆಗಿದ್ದಿತು, ಜಗತ್ತಿನ ಸಮಸ್ತ ಮಾನವಕುಲದ ಪೋಷಣೆಗೆ, ಅಭ್ಯುದಯಕ್ಕೆ ವೇದೋಪನಿಷತ್ತಿನ ಪ್ರಭೆಯ ಅವಶ್ಯಕತೆಗೆ ಜಗತ್ತು ತಲೆದೂಗುವಂತೆ ಮಾಡಿದವರಿವರು.

ಕಾಳಿದಾಸನು ‘ರಘುವಂಶ’ ಕಾವ್ಯದಲ್ಲಿ ಧರ್ಮದ ಸ್ವರೂಪವನ್ನು ಮನೋಜ್ಞವಾಗಿ ವಿವರಿಸಿದ್ದು ಹೀಗೆ: ‘ಯಾರು ದಾನ ಮಾಡುವುದಕ್ಕಾಗಿ ಐಶ್ವರ್ಯವನ್ನು ಗಳಿಸುತ್ತಾರೆಯೊ, ಸತ್ಯ ನುಡಿಯಬೇಕೆಂಬ ನಿಷ್ಠೆಗೆ ಬದ್ಧರಾಗಿ ಮಿತಭಾಷಿಯಾಗುತ್ತಾರೆಯೋ, ಕೀರ್ತಿಗಾಗಿ ರಾಜ್ಯ ಜಯಿಸುತ್ತಾರೆಯೋ ಮತ್ತು ಸತ್ಸಂತಾನ ವೃದ್ಧಿಗಾಗಿ ವಿವಾಹವಾಗುತ್ತಾರೆಯೋ ಅವರುಗಳು ಧರ್ಮವನ್ನು ಮೀರಿದಂತಾಗುವುದಿಲ್ಲ’. ಇಲ್ಲಿ ದಾನ ಮಾಡುವ ಕ್ರಿಯೆ, ಸತ್ಯವಚನ, ಯೋಗ್ಯರೀತಿಯಲ್ಲಿ ಕೀರ್ತಿ ಸಂಪಾದನೆ ಹಾಗೂ ಧರ್ಮಸಮ್ಮತವಾದ ಕಾಮಗಳನ್ನು ಧರ್ಮ ಅನುಗ್ರಹಿಸುತ್ತದೆಯೆಂಬ ಭಾರತೀಯ ನಂಬಿಕೆ ಜಗತ್ತಿಗೇ ಚಿರಂತನ ಬೆಳಕಲ್ಲವೇ?

ಸ್ವಾಮಿ ವಿವೇಕಾನಂದರು ‘ತ್ಯಾಗ ಮತ್ತು ಸೇವೆಗಳು ಭಾರತದ ಅವಳಿ ಆದರ್ಶಗಳು. ದೇಶವನ್ನು ಈ ಎರಡೂ ಆದರ್ಶಗಳ ಪಥದಲ್ಲಿ ಅಭಿವೃದ್ಧಿಪಡಿಸಿದಷ್ಟೂ ಅಸಾಧಾರಣ ಪ್ರಗತಿ ಸಾಧಿಸುತ್ತದೆ’ ಎಂದಿದ್ದಾರೆ. ಮಾನವನ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಈ ಮಹಾಮೌಲ್ಯಗಳ ಶ್ರೇಷ್ಠ ಪರಿಣಾಮಗಳೇನೆಂಬುದನ್ನು ಜಗತ್ತು ದಾಖಲಿಸುತ್ತಾ ಸಾಗಿದೆ. ಇದರ ಆಮೂಲಾಗ್ರ ಪ್ರಭಾವವನ್ನು ತಿಳಿಯಲು ನಾವು ಸ್ವಲ್ಪ ಮಾನವಜೀವನವನ್ನು ಪರಾಮಶಿಸೋಣ.

‘ಜೀವನ ಬಯಸದೇ ಬಂದ ಭಾಗ್ಯ’ ಎಂದಿದ್ದಾರೆ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ. ಸಾಮಾನ್ಯ ವ್ಯಕ್ತಿ ವೈಯಕ್ತಿಕ ಸೌಖ್ಯಕ್ಕಾಗಿ ಹಾತೊರೆದರೆ ಸರ್ವರ ಸೌಖ್ಯಕ್ಕಾಗಿ ಹಾತೊರೆದು ಕಾರ್ಯಪ್ರವೃತ್ತನಾಗುವವನು ಮಹಾತ್ಮನೆನಿಸುತ್ತಾನೆ. ಈ ಮಾತನ್ನು ಸ್ವಾಮಿ ವಿವೇಕಾನಂದರ, ‘ಯಾರು ಇತರರಿಗಾಗಿ ಬದುಕುತ್ತಾರೆಯೋ ಅವರದೇ ಜೀವನ, ಉಳಿದವರು ಬದುಕಿದ್ದರೂ ಸತ್ತಂತೆ!’ ಎಂಬ ಮಾತು ಪುಷ್ಟಿಗೊಳಿಸಿದರೆ, ‘ವೈಯಕ್ತಿಕತೆಗಿಂತ ಹಿರಿದಾದ ಆಯಾಮದಲ್ಲಿ ಜೀವನವನ್ನು ರೂಪಿಸಿಕೊ’ ಎಂಬ ವಿಜ್ಞಾನಿ ಐನ್​ಸ್ಟೀನ್​ರ ಉಕ್ತಿಯು ಅದರ ಪ್ರತಿಧ್ವನಿಯೇ ಅಲ್ಲವೇ? ಬದುಕು ಮೇಲ್ಮುಖವಾಗಿರಬೇಕು, ಜೀವನಕ್ಕೆ ದೃಷ್ಟಿಕೋನ ಮುಖ್ಯ. ಆದರೆ ದೃಷ್ಟಿಕೋನದಲ್ಲಿ ಶ್ರೀಮಂತಿಕೆ ಅತಿಮುಖ್ಯ.

ನಾಗರಿಕ ಜಗತ್ತನ್ನು ಪರಾಂಬರಿಸಿದಾಗ ಮನುಷ್ಯ ಮಾನಸಿಕವಾಗಿ ದುರ್ಬಲನಾಗಲು ಪ್ರಧಾನವಾಗಿ ಮೂರು ಕಾರಣಗಳು ಸ್ಪಷ್ಟ. ಅವನ ಮನಸ್ಸಿನಲ್ಲಿ ಸದಾಕಾಲ ಹಕ್ಕು ಮತ್ತು ಕರ್ತವ್ಯಗಳ ನಡುವೆ ಘರ್ಷಣೆ ಮೊದಲನೆಯದಾದರೆ ಅವನ ಬೇಡಿಕೆ ಅಪೇಕ್ಷೆಗಳ ಪಟ್ಟಿ ಮತ್ತು ಸಾಧಿಸಿದ್ದರ ಪ್ರಮಾಣಗಳ ಅಂತರವೂ ಘರ್ಷಣೆಗೆ ಎಡೆಮಾಡಿಕೊಟ್ಟಿರುವುದು ಸುಳ್ಳಲ್ಲ, ಕಡೆಯದಾಗಿ ಅವನ ವೈಯಕ್ತಿಕ ಬೆಳವಣಿಗೆ ಹಾಗೂ ಸಾಮಾಜಿಕ ಬೆಳವಣಿಗೆಗಳ ನಡುವೆಯೂ ಘರ್ಷಣೆ ಏರ್ಪಟ್ಟಿದೆ! ಆದ್ದರಿಂದಲೇ ಮಾನಸಿಕ ಅಶಾಂತಿ ಕ್ಷಣಕ್ಷಣಕ್ಕೂ ವೃದ್ಧಿಸುತ್ತಾ ಸಾಗಿದೆ. ಇವುಗಳೊಂದಿಗೆ ಸೋಲಿನ ಭಯ ಹಾಗೂ ಇತರರ ಟೀಕೆಯ ಭಯಗಳೂ ಮನುಷ್ಯನ ನಿದ್ದೆಗೆಡಿಸುತ್ತಿವೆ!

ಪ್ರಪಂಚದಲ್ಲಿ ಬಲಶಾಲಿಗಳಾಗಿ ರೂಪುಗೊಳ್ಳುವುದು ಮಹತ್ತರ ವಿಷಯ ಎಂದೆನಿಸಿದರೂ ಗಳಿಸಿದ ಶಕ್ತಿಯನ್ನು ಸದುದ್ದೇಶಕ್ಕೆ ಬಳಸುವ ನಡವಳಿಕೆ ಮತ್ತೂ ಮಹತ್ತರವಲ್ಲವೇ? ಆದರೆ ರಸ್ಕಿನ್ ಹೇಳಿದಂತೆ, ‘ಇನ್ನೊಬ್ಬರಿಗಾಗಿ ದುಡಿಯಿರಿ, ಆದರೆ ಇನ್ನೊಬ್ಬರ ದುಡಿಮೆಗೆ ಕೈಚಾಚದಿರಿ’ ಎಂಬ ಮಾತೂ ನಾವು ಗಮನಿಸಲೇಬೇಕಾದ್ದು ಅಲ್ಲವೇ? ‘ಹಣವೆಂಬುದು ಕೇವಲ ಒಂದು ಸಾಧನವಷ್ಟೇ. ಇದು ನಾವಿಷ್ಟಪಟ್ಟಲ್ಲಿಗೆ ನಮ್ಮನ್ನು ಕೊಂಡೊಯ್ಯಬಹುದು, ಆದರೆ ನಮ್ಮನ್ನು ಚಾಲಕನ ಸ್ಥಾನದಲ್ಲಿ ಕೂರಿಸಲು ಹಣಕ್ಕೆ ಸಾಧ್ಯವಿಲ್ಲವಂತೆ’ ಎಂಬ ಲೋಕೋಕ್ತಿ ಅದೆಷ್ಟು ಅರ್ಥಗರ್ಭಿತ.

ಭಗವಾನ್ ಶ್ರೀರಾಮಕೃಷ್ಣರು ‘ಧನದ ಅಹಂಕಾರವನ್ನು ತೋರುವುದು ಒಳ್ಳೆಯದಲ್ಲ’ ಎಂದು ಎಚ್ಚರಿಸಿದ್ದಾರೆ. ಅವರು ಹೇಳುತ್ತಾರೆ: ‘ನೀನು ಧನಿಕ ಎಂದು ಹೇಳಿಕೊಳ್ಳುವುದಾದರೆ ನಿನಗಿಂತಲೂ ಹೆಚ್ಚಿನ ಧನಿಕರು, ಅವರಿಗಿಂತಲೂ ಹೆಚ್ಚಿನವರು ಇದ್ದೇ ಇರುತ್ತಾರೆ ಎಂಬುದನ್ನು ಮರೆಯಕೂಡದು. ಸಾಯಂಕಾಲವಾದ ನಂತರ ಮಿಳುಕುಹುಳು ಹಾರಾಡಲಾರಂಭಿಸಿದಾಗ ಅವು ಭಾವಿಸುತ್ತವೆ, ತಾವು ಈ ಜಗತ್ತಿಗೆ ಬೆಳಕು ಕೊಡುತ್ತಿರುವುದಾಗಿ. ಆದರೆ ನಕ್ಷತ್ರಗಳು ಉದಯಿಸಿದೊಡನೆ ಅವುಗಳ ಅಹಂಕಾರ ಚೂರ್ಣವಾಗುತ್ತದೆ. ಬಳಿಕ ನಕ್ಷತ್ರಗಳು ಭಾವಿಸುತ್ತವೆ, ತಾವು ಈ ಜಗತ್ತಿಗೆ ಬೆಳಕು ಕೊಡುತ್ತಿರುವ ಹಾಗೆ, ಆದರೆ ಚಂದ್ರೋದಯ ಆದೊಡನೆ ನಕ್ಷತ್ರಗಳು ಲಜ್ಜೆಯಿಂದ ಕಾಂತಿಹೀನವಾಗುತ್ತವೆ. ಆನಂತರ ಚಂದ್ರ ಭಾವಿಸುತ್ತಾನೆ, ತನ್ನ ಬೆಳಕಿನಿಂದ ಈ ಜಗತ್ತು ನಗುತ್ತಿದೆ, ತಾನು ಈ ಭೂಮಿಗೆ ಬೆಳಕು ಕೊಡುತ್ತಿದ್ದೇನೆ ಎಂಬುದಾಗಿ... ಬಳಿಕ ಪೂರ್ವದಿಗಂತ ಕೆಂಪೇರಲಾರಂಭಿಸುತ್ತದೆ, ಸೂರ್ಯ ಉದಯಿಸುತ್ತಾನೆ. ಚಂದ್ರ ಕಳೆಗುಂದಲಾರಂಭಿಸಿ ಸ್ವಲ್ಪ ಹೊತ್ತಾದ ನಂತರ ಆತ ಕಣ್ಣಿಗೇ ಕಾಣುವುದಿಲ್ಲ!’ ಮಾನವ ಕೇವಲ ಹಣವಂತನಾದರೆ ಸಾಲದು, ಶ್ರೀಮಂತನಾಗಿರಬೇಕು, ಏಕೆಂದರೆ ಹಣವಂತನ ಬಳಿ ಹಣವಷ್ಟೇ ಇದ್ದರೆ ಶ್ರೀಮಂತನ ಬಳಿ ಹಣ ಮತ್ತು ಹೃದಯವಂತಿಕೆಗಳೆರಡೂ ಇರುತ್ತವೆ ಎಂದಿದ್ದಾರೆ ಬ್ರಹ್ಮಲೀನ ಸ್ವಾಮಿ ಪುರುಷೋತ್ತಮಾನಂದಜೀ.

ಸಮಾಜವಿರುವುದು ತನ್ನ ಸುಖಕ್ಕಾಗಿ ಎಂಬ ಮಾನವನ ಭ್ರಮೆ ನೆನ್ನೆ ಮೊನ್ನೆಯದಲ್ಲ. ಜಗತ್ತಿನ ಕಾಲಘಟ್ಟದಲ್ಲಿ ಆಗಮಿಸಿದ ಲೋಕಗುರುಗಳು ಮಾನವನನ್ನು ಈ ಭ್ರಮೆಯಿಂದ ಮುಕ್ತಗೊಳಿಸಲು ಅಹರ್ನಿಶಿ ಶ್ರಮಿಸಿದ್ದಾರೆ. ಆದರೆ ಸರ್ವರಿಗೂ ಈ ಸತ್ಯ ವೇದ್ಯವಾಗದು!

ಸ್ವಾಮಿ ವಿವೇಕಾನಂದರು ಅಮೆರಿಕಾದ ಆಗರ್ಭ ಹಣವಂತನಾಗಿದ್ದ ಜಾನ್ ಡಿ.ರಾಕ್​ಫೆಲ್ಲರ್​ನನ್ನು ಸದ್ಗುಣ ಶ್ರೀಮಂತನನ್ನಾಗಿಸಿದ್ದು ಇತಿಹಾಸ. ಅವನಿಗೆ ಸ್ವಾಮೀಜಿ ತಿಳಿವಳಿಕೆ ಹೇಳಿದ್ದು ಹೀಗೆ: ‘ಸೇವೆ ಎಂಬುದು ಭಾವುಕತೆಯಲ್ಲ, ಬದಲಾಗಿ ಜೀವನ ವಿಧಾನ. ಸೇವೆ ಮಾಡುವುದರಿಂದ ನಾವೇ ಉದ್ಧಾರವಾಗುತ್ತೇವೆ. ಎಚ್ಚರ! ಸೇವಾರ್ಥಿಗೆ ತಾನೇ ಸೇವೆ ಮಾಡುತ್ತಿರುವೆನೆಂಬ ಅಹಂಕಾರ ಹಾನಿಕರ. ಸೇವೆ ಮಾಡುವವನು ಸೇವೆ ಪಡೆಯುವವನಿಗೆ ಋಣಿಯಾಗಿರಬೇಕು.’ ಸ್ವಾಮೀಜಿಯವರ ಈ ದಿವ್ಯ ಸಂದೇಶವು ರಾಕ್​ಫೆಲ್ಲರ್​ರನನ್ನು ಮಾನವ ಅಭ್ಯುದಯಕ್ಕಾಗಿ ಚಿಂತಿಸುವ ಮಹಿಮಾನ್ವಿತನನ್ನಾಗಿಸಿತು. ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಕುಸಿಯುತ್ತಿದ್ದ ಷಿಕಾಗೋ ವಿಶ್ವವಿದ್ಯಾನಿಲಯಕ್ಕೆ, ಅಮೆರಿಕದ ಕಪ್ಪುಜನಾಂಗದ ಶಿಕ್ಷಣಕ್ಕೆ, ವಿಜ್ಞಾನ ಸಂಶೋಧನಾ ಕ್ಷೇತ್ರಗಳ ಪುನರುಜ್ಜೀವನಕ್ಕೆ ಅವನು ದಾತಾರನಾದ, ಜಗತ್ತಿನ ಇತಿಹಾಸದಲ್ಲಿ ಸೇವಾನಕ್ಷತ್ರನಾದ.

ಸ್ವಾಮೀಜಿಯವರಿಂದ ಸೇವಾದೀಕ್ಷೆ ಪಡೆದ ಮಾರ್ಗರೆಟ್ ನೊಬೆಲ್ ಮುಂದೆ ನಿವೇದಿತೆ ಆಗಿ ಭಾರತದ ಕಣಕಣದಲ್ಲಿ ಅನುರಣಿತಳಾದಳು. ವಿವೇಕಾನಂದರಿಂದ ಪ್ರಜಾಪಾಲನೆಯ ದೀಕ್ಷೆ ಹೊತ್ತ ಖೇತ್ರಿಯ ರಾಜ ಅಜಿತ್​ಸಿಂಗ್ ತನ್ನ ಉತ್ತಮ ಆಡಳಿತದಲ್ಲಿ ಭೂಸುಧಾರಣಾ ನಿಯಮಗಳ ಆಚರಣೆ, ಅನಾಥರಿಗೆ ಆಶ್ರಯ ಯೋಜನೆಗಳು, ಪ್ರಕೃತಿ ವಿಕೋಪ ಸಮಯದಲ್ಲಿ ನಿರ್ವಹಿಸಿದ ಪರಿಹಾರ ಕಾರ್ಯಗಳ ಮೂಲಕ ಪ್ರಭಾವ ಬೀರಿ ವಿಕ್ಟೋರಿಯಾ ರಾಣಿಯಿಂದ ವಜ್ರಖಚಿತ ಖಡ್ಗವನ್ನು ಉಡುಗೊರೆಯಾಗಿ ಪಡೆದನಲ್ಲದೆ ವಿಶ್ವವಿಖ್ಯಾತರಾದ ಮ್ಯಾಕ್ಸ್​ಮುಲ್ಲರ್ ಹಾಗೂ ಆಟೋವನ್ ಬಿಸ್ಮಾರ್ಕರಿಂದ ಗೌರವಿಸಲ್ಪಟ್ಟ.

ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮಗಳು ಸಾಮೂಹಿಕ ಜವಾಬ್ದಾರಿಗಳೆನಿಸಿವೆ. ಆದರೂ ಜಗತ್ತಿನ ಇತಿಹಾಸವನ್ನು ರೂಪಿಸಿದವರು ಬಹುಸಂಖ್ಯಾತ ಸ್ವಾರ್ಥಿಗಳಲ್ಲ; ಬದಲಾಗಿ ಅಲ್ಪಸಂಖ್ಯೆಯ ಕ್ರಿಯಾಶೀಲ ನಿಃಸ್ವಾರ್ಥಿಗಳು! ಹೆಸರುಕೀರ್ತಿಗಾಗಿ ಸೇವಾಕ್ಷೇತ್ರದಲ್ಲಿ ಪದಾರ್ಪಣೆಗೊಂಡವರಲ್ಲಿ ಬಹುಸಂಖ್ಯಾತರು ಅಂತಿಮವಾಗಿ ಸೇವಾತತ್ತ್ವದ ಆಧ್ಯಾತ್ಮಿಕ ಧ್ಯೇಯೋದ್ದೇಶವನ್ನೇ ಮರೆತು ನಿಷ್ಕಿ›ಯರಾಗಿ ಹತಾಶರಾಗಿದ್ದೂ ಸುಳ್ಳಲ್ಲ. ಸ್ವಾಮಿ ವಿವೇಕಾನಂದರಿತ್ತ ಎಚ್ಚರಿಕೆಯ ಮಾತು ಮಂತ್ರವಾಗಬೇಕು: We must give our best in a situation; but we must not wait like a street begger for a little praise or glory or success. That beggar like attitude brings all the misery.

ನಿಜ! ಪ್ರಾರ್ಥಿಸುವ ತುಟಿಗಳು ಶ್ರಮಿಸುವ ಶರೀರ ಮನಸ್ಸುಗಳಿಗೆ ಸೇವೆಯ ಆಧ್ಯಾತ್ಮಿಕ ಆದರ್ಶವನ್ನು ಸದಾ ನೆನಪಿಸುತ್ತಿರುತ್ತವೆ. ಆದ್ದರಿಂದ ಸೇವೆಯು ಕೇವಲ ಭಾವುಕ ಪ್ರತಿಸ್ಪಂದನವಷ್ಟೇ ಆಗಬಾರದು, ಅದು ಜೀವನ, ಜೀವನಾದರ್ಶವೂ ಆಗಬೇಕಲ್ಲವೇ?

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net