ಕೈಹಿಡಿದ ಪುಷ್ಪ ಕೃಷಿ; ಉದ್ಯಮಿಯಾಗಿ ಬೆಳೆದ ಕುಶಲ್​ಕುಮಾರ್

Floriculture
Published on

| ಶೇಖರ್ ಸಂಕೋಡನಹಳ್ಳಿ ಅರಸೀಕೆರೆ

ಸಾಂಪ್ರದಾಯಿಕ ಕೃಷಿಯಿಂದ ನಿರೀಕ್ಷಿತ ಲಾಭ ದೊರೆಯದೆ ನಿರಾಸೆಗೊಂಡಿದ್ದ ಕೃಷಿಕ, ಇಸ್ರೇಲ್ ಮಾದರಿಯ ಪುಷ್ಪ ಕೃಷಿ ಆಯ್ದುಕೊಂಡು ಉದ್ಯಮಿಯಾಗಿಯೂ ಬೆಳೆದು ರಾಜ್ಯದ ಗಮನ ಸೆಳೆದಿದ್ದಾರೆ. ತಾಲೂಕಿನ ಗಂಡಸಿ ಹೋಬಳಿ ಲಾಳನಕೆರೆ ಗ್ರಾಮದ ಪ್ರಗತಿಪರ ಕೃಷಿಕ ಕುಶಲ್​ಕುಮಾರ್ (ಮೆಟ್ರೋಬಾಬು) ಹೂವು ಕೃಷಿ ಹಾಗೂ ಪುಷ್ಪೋದ್ಯಮ ಆಯ್ಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದ ರೈತ. ಇವರು ಭಿನ್ನ, ವಿಭಿನ್ನ ತಳಿಯ ಸೇವಂತಿಗೆ ಹೂವಿನ ಬೆಳೆ ಕುರಿತು ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದಾರೆ. 25 ಎಕರೆ ಭೂಮಿಯಲ್ಲಿ ಎರಡು ವರ್ಷಗಳ ಹಿಂದೆ ಹೂವು ಕೃಷಿ ಆಂಭಿಸುವ ಮೂಲಕ ಹಲವರಿಗೆ ಉತ್ತೇಜನ ನೀಡಿದ್ದು, ಜಿಲ್ಲೆಯ ಮೊದಲ ಮಾದರಿ ಕೃಷಿ ಆಧಾರಿತ ಉದ್ಯಮಿಯಾಗಿಯೂ ಹೊರಹೊಮ್ಮಿದ್ದಾರೆ.

ಜಮೀನಿನಲ್ಲಿ ಸೇವಂತಿಗೆ ಹೂವಿನ ಬಗೆಗಳಾದ ಕೇಸರಿ, ಕಲ್ಕತ್ತಾ ವೈಟ್, ಐಶ್ವರ್ಯಾ, ಸೆಂಟ್​ವೈಟ್, ಯಲ್ಲೋವೈಟ್ ಹಾಗೂ ಮಾರಿಗೋಲ್ಡ್ ತಳಿಯ 3.5 ಲಕ್ಷ ಸಸಿಗಳನ್ನು ನಾಟಿ ಮಾಡಿದ್ದಾರೆ. ಈ ಗಿಡಗಳ ಸಾಲುಗಳ ನಡುವಿನ ಜಾಗದಲ್ಲಿ ಕೆಂಪು, ಹಳದಿ ಸೇರಿ ಹಲವು ಬಣ್ಣಗಳ ಗುಲಾಬಿ ಗಿಡಗಳನ್ನು ಬೆಳೆಯಲಾಗುತ್ತಿದೆ. ಸಸಿಗಳ ನಡುವಿನ ಅಂತರ, ನೀರು ಪೂರೈಕೆ, ದಾರ ಕಟ್ಟುವುದು, ಗುಜ್ಜುಗಳ ಬಳಕೆ ಸೇರಿ ಎಲ್ಲ ಹಂತದಲ್ಲಿಯೂ ಇಸ್ರೇಲ್ ಮಾದರಿಯ ತಂತ್ರಜ್ಞಾನವನ್ನು ಮಾದರಿಯಾಗಿ ಬಳಕೆ ಮಾಡಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಸಸಿಯ ಬೆಲೆ 3ರಿಂದ 4 ರೂ. ಇದೆ. ಪ್ರತಿ ಎಕರೆಗೆ 18ರಿಂದ 20 ಸಾವಿರ ಸಸಿಗಳನ್ನು ನಾಟಿ ಮಾಡಬಹುದಾಗಿದೆ. ಹಸುವಿನ ಗಂಜಲ, ಸಗಣಿ, ಎರೆಹುಳು ಗೊಬ್ಬರ ಬೇವು ಹಾಗೂ ಹೊಂಗೆ ಹಿಂಡಿ ಸಮ್ಮಿಶ್ರಣದ ಜೀವಾಮೃತ ಬಳಕೆಯ ಮೂಲಕ ಶೇ.90 ಸಾವಯವ ಪದಾರ್ಥಗಳನ್ನು ಸಸಿಗಳ ಬೆಳವಣಿಗೆ ವೇಳೆ ಪೋಷಕಾಂಶದ ರೂಪದಲ್ಲಿ ನೀಡಲಾಗುತ್ತಿದೆ. ಮಳೆಗಾಲದ ವೇಳೆ ಅಗತ್ಯವಿದ್ದಲ್ಲಿ ಮಾತ್ರವೇ ರೋಗ ಹಾಗೂ ಕೀಟ ಬಾಧೆ ತಪ್ಪಿಸಲು ಕ್ರಿಮಿನಾಶಕ ಸಿಂಪಡಣೆ ಮಾಡುವ ಕ್ರಮ ಅನುಸರಿಸುತ್ತಿದ್ದಾರೆ. ಸಸಿ ನಾಟಿ ಮಾಡಿದ 30ರಿಂದ 40 ದಿನಗಳವರೆಗೆ ಅವುಗಳ ಬೆಳವಣಿಗೆ ವಿಳಂಬಗೊಳ್ಳದಂತೆ ಮಾಡಲು ನಿರಂತರ ಬೆಳಕಿನ ಅಗತ್ಯವಿದ್ದು, ಸೂರ್ಯಾಸ್ತಮಾನದ ನಂತರ ಇಡೀ ಜಮೀನಿನಲ್ಲಿ ನಿರಂತರವಾಗಿ ಎಲ್​ಇಡಿ ಬಲ್ಬ್​ಗಳು ಬೆಳಗುವ ವ್ಯವಸ್ಥೆ ಗಮನ ಸೆಳೆಯುತ್ತದೆ. ಇದಕ್ಕಾಗಿ 10 ಸಾವಿರ ಎಲ್​ಇಡಿ ಬಲ್ಬ್​ಗಳನ್ನು ಅಳವಡಿಸಿದ್ದಾರೆ.

ನಿತ್ಯ 3 ಟನ್ ಹೂ ಉತ್ಪಾದನೆ: ಬಿಹಾರ, ಉತ್ತರಪ್ರದೇಶ, ಪಶ್ಚಿಮಬಂಗಾಳ ಸೇರಿ ಹಲವು ರಾಜ್ಯಗಳ 20ಕ್ಕೂ ಹೆಚ್ಚು ಕುಟುಂಬಗಳು ಇವರ ಪುಷ್ಪೋದ್ಯಮ ಚಟುವಟಿಕೆಯಲ್ಲಿ ತೊಡಗಿದ್ದು, ಹೂದೋಟದಿಂದ ನಿತ್ಯ 2ರಿಂದ 3 ಟನ್ ಹೂವು ಕಟಾವು ಮಾಡಲಾಗುತ್ತಿದೆ. ಪ್ರತಿ ಟನ್​ಗೆ 80 ಸಾವಿರ ದಿಂದ 1 ಲಕ್ಷ ರೂ. ಬೆಲೆಯಿದ್ದು ಗೋವಾ, ತಮಿಳುನಾಡು, ಕೇರಳಗಳಿಂದಲೂ ಹೂವಿಗೆ ಭಾರಿ ಬೇಡಿಕೆಯಿದೆ. ಬೆಂಗಳೂರು, ಮೈಸೂರು, ತುಮಕೂರು ಸೇರಿ ಕೆಲ ಜಿಲ್ಲೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಮಾರುಕಟ್ಟೆ ವ್ಯವಸ್ಥೆ ಕಂಡುಕೊಂಡಿದ್ದಾರೆ.

ತೆಂಗು, ಆಲೂ, ದಾಳಿಂಬೆ, ಟೊಮ್ಯೊಟೊ, ಶುಂಠಿಯಂತಹ ವಾಣಿಜ್ಯ ಬೆಳೆಗಳಿಗೆ ಪರ್ಯಾಯವಾಗಿ ಆದಾಯ ತಂದುಕೊಡಬಲ್ಲ ಕೃಷಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಕಾರಣದಿಂದ ಪುಷ್ಪೋದ್ಯಮಕ್ಕೆ ಮುಂದಾಗಿದ್ದೇನೆ. ಈಗಾಗಲೆ ಸ್ಥಳೀಯ ಮಟ್ಟದಲ್ಲಿ ಹಲವು ರೈತರಿಗೆ ಮಾರ್ಗದರ್ಶನ ಮಾಡುವ ಜತೆಗೆ ಬೆಂಗಳೂರು, ಕೋಲಾರ ಸುತ್ತಮುತ್ತಲಿನ ರೈತರಿಗೂ ಪ್ರೇರಣೆ ನೀಡುತ್ತಿದ್ದೇನೆ. ಹೊಸ ತಳಿಯ ಸೇವಂತಿಗೆ ಬೆಳೆಯವ ಇಚ್ಛೆ ಹೊಂದಿರುವವರಿಗೆ ಎಲ್ಲ ರೀತಿಯ ನೆರವು ನೀಡಲಿದ್ದೇನೆ. | ಕುಶಲ್​ಕುಮಾರ್ (ಮೆಟ್ರೋಬಾಬು) ಪ್ರಗತಿಪರ ಕೃಷಿಕ

ಹೆಚ್ಚು ಸಂಬಳವಿದ್ದರೂ ಕೃಷಿ ಆಕರ್ಷಣೆ: ಎಂಬಿಎ ಪದವಿ ಪಡೆದಿದ್ದ ಕುಶಲ್​ಕುಮಾರ್ ಬೆಂಗಳೂರಿನಲ್ಲಿ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿ ತಿಂಗಳಿಗೆ ಒಂದೂವರೆ ಲಕ್ಷ ರೂ.ವರೆಗೆ ಸಂಬಳ ಪಡೆಯುತ್ತಿದ್ದರು. ಜತೆಗೆ ಪತ್ನಿ ಬಬಿತಾ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿದ್ದಾರೆ. ಹೀಗೆ ಕೈತುಂಬ ದುಡಿಮೆಯಿದ್ದರೂ ಕೃಷಿಯಿಂದ ಆಕರ್ಷಿತರಾಗಿ ಸ್ವಗ್ರಾಮಕ್ಕೆ ಮರಳಿ ತೋಟಗಾರಿಕೆ ಬೆಳೆಗಳನ್ನು ಬೆಳೆದು ಯಶಸ್ವಿ ಕೃಷಿಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net