

| ಬಸವರಾಜ ಶಿವಪ್ಪ ಗಿರಗಾಂವಿ
ಸಹಾಯಕ ಮಹಾಪ್ರಬಂಧಕರು
ಜಮಖಂಡಿ ಶುಗರ್ಸ್ ಲಿ. ಬಾಗಲಕೋಟೆ
ಹೆಚ್ಚುತ್ತಿರುವ ಖರ್ಚು, ಸಮಯದ ಅಭಾವ, ಕೂಲಿ ಕಾರ್ವಿುಕರ ಕೊರತೆ ಮತ್ತಿತರ ಕಾರಣಗಳಿಗೆ ಕೃಷಿ ಕ್ಷೇತ್ರದಲ್ಲಿ ನಿರಂತರವಾಗಿ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ವಿಶ್ವದೆಲ್ಲೆಡೆ ಕೃಷಿಯಿಂದ ಸ್ಥಿರವಾದ ಆದಾಯ ಪಡೆಯಲು ನವೀನ ತಂತ್ರಜ್ಞಾನ ಬಳಕೆಯೂ ಹೆಚ್ಚುತ್ತಿದೆ. ಕೃಷಿಯಲ್ಲಿ ತಂತ್ರಜ್ಞಾನಗಳ ಸಮರ್ಪಕ ಬಳಕೆಯಿಂದ ಇಸ್ರೇಲ್, ಚೀನಾ ಹಾಗೂ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಉತ್ತಮ ಸಾಧನೆ ಸಾಧ್ಯವಾಗಿದೆ. ಇಂತಹ ತಂತ್ರಜ್ಞಾನದ ಭಾಗವಾಗಿ ಭವಿಷ್ಯದಲ್ಲಿ ಡ್ರೋಣ್ ಬಳಕೆ ಸಹ ಕೃಷಿಯಲ್ಲಿ ಅನಿವಾರ್ಯವಾದರೆ ಅದು ಸೋಜಿಗ ಎನಿಸದು. 1984ರಿಂದ 2004ರವರೆಗೆ ಹಲವಾರು ದೇಶಗಳು ಸೂಕ್ಷ್ಮ ಸ್ಥಳಗಳಲ್ಲಿ ಮಾನವರಹಿತವಾಗಿ ವೈರಿಗಳ ಚಲನ-ವಲನ ಗುರುತಿಸಲು ರಕ್ಷಣಾ ಕ್ಷೇತ್ರದಲ್ಲಿ ಈ ಡ್ರೋಣ್ ತಂತ್ರಜ್ಞಾನವನ್ನು ಬಳಸುತ್ತಿದ್ದವು.
ದಿನದಿಂದ ದಿನಕ್ಕೆ ಡ್ರೋಣ್ ತಂತ್ರಜ್ಞಾನ ವ್ಯಾಪಕವಾಗುತ್ತಿದ್ದು, ಎಲ್ಲ ಕ್ಷೇತ್ರಗಳಿಗೂ ಡ್ರೋಣ್ ಕಾಲಿಡುತ್ತಿದೆ. ಕೃಷಿ ಕ್ಷೇತ್ರದಲ್ಲೂ ಇದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದಲ್ಲಿ ಕೃಷಿಗೆ ಪೂರಕವಾದ ನೈಸರ್ಗಿಕ ಸಂಪನ್ಮೂಲಗಳು ಸಾಕಷ್ಟಿದ್ದರೂ, ಆಕಸ್ಮಿಕವಾಗಿ ಸಂಭವಿಸುತ್ತಿರುವ ಹವಾಮಾನದ ವೈಪರೀತ್ಯ ಹಾಗೂ ನೈಸರ್ಗಿಕ ವಿಕೋಪಗಳಿಂದ ರೋಗ ಹಾಗೂ ಕೀಟಗಳ ಬಾಧೆಯು ಉಲ್ಭಣಗೊಳ್ಳುತ್ತದೆ. ಇದರಿಂದಾಗಿ ಬೆಳೆಯ ಆರೋಗ್ಯಕರ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕುಸಿತವಾಗುವುದು ಸರ್ವೆಸಾಮಾನ್ಯ. ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ರೋಗ ಹಾಗೂ ಕೀಟಗಳ ಬಾಧೆಯನ್ನು ಸಮಯಾನುಸಾರ ತಜ್ಞರ ಶಿಫಾರಸ್ಸಿನಂತೆ ಹತೋಟಿ ಮಾಡುವುದು ಅತ್ಯವಶ್ಯ. ಫಸಲನ್ನು ಪರಿಣಾಮಕಾರಿ ನಿರ್ವಹಣೆ ಮಾಡಿ ಅಧಿಕ ಇಳುವರಿ ಪಡೆಯಲು ಈ ಡ್ರೋಣ್ ತಂತ್ರಜ್ಞಾನ ಬಹಳ ಸಹಕಾರಿಯಾಗಿದೆ.
ಜಪಾನ್ನಲ್ಲಿ ಮೊದಲು ಬಳಕೆ: 1987ರಲ್ಲಿ ವಿಶ್ವದಲ್ಲಿಯೇ ಜಪಾನ್ ಕೃಷಿ ಕ್ಷೇತ್ರದಲ್ಲಿ ಯಮಹಾ ಕಂಪನಿಯ ಡ್ರೋಣ್ ತಂತ್ರಜ್ಞಾನವನ್ನು ಮೊದಲು ಬಳಕೆ ಮಾಡಿತು. ಭಾರತದಲ್ಲಿ ಬೆಂಗಳೂರಿನ ಅನ್ವ್ಯಾನ್ಡ್ ಆಂಡ್ ಏರ್ಬೋರ್ನ್ ಪ್ರೈವೇಟ್ ಲಿ. ಸಂಸ್ಥೆ 2019ರಿಂದ ಈ ಡ್ರೋಣ್ ಉತ್ಪಾದನೆ ಮಾಡುತ್ತಿದೆ.
ಡ್ರೋಣ್ಗಳ ಸಾಮರ್ಥ್ಯ: ನ್ಯಾನೋ-250 ಗ್ರಾಂ, ಮೈಕ್ರೋ-2 ಕಿ.ಗ್ರಾಂ, ಸ್ಮಾಲ್(ಸಣ್ಣ)-25 ಕಿ.ಗ್ರಾಂ, ಮೀಡಿಯಮ್ (ಮಧ್ಯಮ)-150 ಕಿ.ಗ್ರಾಂ, ಲಾರ್ಜ್ (ದೊಡ್ಡ)-500 ಕಿ. ಗ್ರಾಮ್ ಇರುತ್ತದೆ.
ಕಬ್ಬು ಬೆಳೆಯಲ್ಲಿ ಉಪಯೋಗ: ಇಂದಿನ ದಿನಮಾನದಲ್ಲಿ ಕಬ್ಬು ಬೆಳೆಯು ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ನಿಗಾ ವಹಿಸಬೇಕಾದ ಬೆಳೆಯಾಗಿ ಪರಿವರ್ತನೆಯಾಗಿದೆ. ಬಿಳಿ ಉಣ್ಣೆ ಹೇನು, ಕಾಂಡಕೊರಕ, ಬಿಳಿನೊಣ ಸೇರಿದಂತೆ ಹಲವಾರು ಕೀಟ ಹಾಗೂ ರೋಗಗಳು ಕಬ್ಬು ಬೆಳೆಗೆ ತೀವ್ರವಾಗಿ ಬಾಧಿಸಿ ಇಳುವರಿ ಕುಂಠಿತಗೊಳಿಸುತ್ತಿವೆ. ದೇಶದಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಾರ್ಖಾನೆಗಳ ಸಮರ್ಪಕ ಹಾಗೂ ತೃಪ್ತಿದಾಯಕ ಕಾರ್ಯನಿರ್ವಹಣೆಗಾಗಿ ಹೇರಳವಾದ ಕಬ್ಬಿನ ಉತ್ಪಾದನೆಯು ಅವಶ್ಯವಿದೆ. ಈಗಾಗಲೆ ಕಬ್ಬು ಬೆಳೆಯ ಕ್ಷೇತ್ರವು ಸೀಮಿತಗೊಂಡಿರುವುದರಿಂದ ಕ್ಷೇತ್ರವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಇದರ ಬದಲಾಗಿ ಲಭ್ಯವಿರುವ ಕಬ್ಬು ಬೆಳೆಯ ಕ್ಷೇತ್ರದಲ್ಲಿ ಡ್ರೋಣ್ನಂತಹ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಆರೋಗ್ಯವಂತವಾಗಿ ಬೆಳೆಸಿ ಅದರಲ್ಲಿರುವ ಕಬ್ಬನ್ನು ಎತ್ತರವಾಗಿಸಬೇಕಾಗಿದೆ ಅಂದರೆ ಲಭ್ಯವಿದ್ದ ಕ್ಷೇತ್ರದಲ್ಲಿ ಎಕರೆವಾರು ತಲಾ ಉತ್ಪನ್ನ ಹೆಚ್ಚಿಸಬೇಕಾಗಿದೆ.
ಸಹಾಯಧನಕ್ಕೆ ಬೇಡಿಕೆ: ಡ್ರೋಣ್ ಬೆಲೆಯು ಅಂದಾಜು 7.5 ಲಕ್ಷದಿಂದ ಪ್ರಾರಂಭವಾಗುತ್ತದೆ. ಡ್ರೋಣ್ ತಯಾರಕರು ಕೃಷಿ ಕೆಲಸಕ್ಕಾಗಿ ಡ್ರೋಣ್ ಖರೀದಿಸಲು ಸಹಾಯಧನ ಕೊಡಬೇಕೆಂದು ಸರ್ಕಾರಕ್ಕೆ ವಿನಂತಿಸಿಕೊಂಡಿದ್ದಾರೆ. ಆದರೆ ಸರಕಾರದಿಂದ ಇನ್ನುವರೆಗೆ ಯಾವುದೆ ಪ್ರತ್ಯುತ್ತರ ಬಂದಿರುವುದಿಲ್ಲ.